ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ, ದೂಳಿನಿಂದ ಆರೋಗ್ಯ ಹಾಳು

Last Updated 6 ಡಿಸೆಂಬರ್ 2012, 6:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬರೀ ಗುಂಡಿಗಳೇ ತುಂಬಿದ ರಸ್ತೆ. ಅದರ ಮಧ್ಯೆ ಚಲ್ಲಿದ ಜಲ್ಲಿಕಲ್ಲುಗಳು. ಹೊಗೆಯಂತೆ ಆವರಿಸುವ ದೂಳು. ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ನಾವು ಮೂಗು ಮುಚ್ಚಿಕೊಂಡು ನಡೆಯುವುದೇ ಹೆಚ್ಚು. ಆದರೆ ಹದಗೆಟ್ಟ ರಸ್ತೆಯಿಂದ ನಮ್ಮ ಆರೋಗ್ಯವೂ ಹದಗೆಡುವುದು ಮಾತ್ರವಲ್ಲ, ದೀರ್ಘಕಾಲೀನ ಸಮಸ್ಯೆಗಳೂ ಕಾಡಲಿವೆ ಎಂದು ಎಚ್ಚರಿಸುತ್ತಾರೆ ವೈದ್ಯರು.

ವಾಣಿಜ್ಯ ನಗರಿಯ ಬಹುತೇಕ ರಸ್ತೆಗಳ ಪರಿಸ್ಥಿತಿ ಹೀನಾಯವಾಗಿದ್ದು, ಇಲ್ಲಿನವರೇ ಮುಖ್ಯಮಂತ್ರಿಯಾದರೂ ರಸ್ತೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ. ಮತ್ತೊಂದೆಡೆ ಒಳಚರಂಡಿಗಾಗಿ ಅಗೆಯಲಾಗಿರುವ ರಸ್ತೆಗಳನ್ನು ಡಾಂಬರೀಕರಣ ಮಾಡದ ಪರಿಣಾಮ ಇಡೀ ಊರು ದೂಳುಮಯವಾಗುತ್ತಿದೆ. ಇದರೊಟ್ಟಿಗೆ ಜನರು ಕಾಯಿಲೆಯಿಂದ ನರಳುವುದು ಹೆಚ್ಚಾಗುತ್ತಿದೆ.

ಕಮರಿಪೇಟೆ ಪೊಲೀಸ್ ನಿಲ್ದಾಣದ ಮುಂಭಾಗದಿಂದ ಆರಂಭವಾಗಿ ವಿಕಾಸನಗರ, ಹೊಸೂರು, ಶಿರೂರ ಪಾರ್ಕ್ ಮಾರ್ಗವಾಗಿ ಉಣಕಲ್ ತಲುಪುವ ಬೈಪಾಸ್ ರಸ್ತೆಯ ಆಸುಪಾಸಿನಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಮಾತನಾಡಿಸಿದರೆ ಅವರು ದೂಳಿನಿಂದಾಗಿ ತಮ್ಮ ಆರೋಗ್ಯದ ಮೇಲಾಗುತ್ತಿರುವ ಕೆಡಕುಗಳ ಪಟ್ಟಿಯನ್ನು ನೀಡುತ್ತಾರೆ. ಕೆಮ್ಮು, ನೆಗಡಿ, ಕಫ ಸಮಸ್ಯೆಗಳು ಇಲ್ಲಿ ಸಾಮಾನ್ಯವಾಗಿದ್ದರೆ, ಕೆಲವರಿಗೆ ಆಗಾಗ್ಗೆ ವಾಂತಿ-ಭೇದಿ ಕಾಣಿಸಿಕೊಳ್ಳುವುದು ಇದೆ. ರಸ್ತೆಯಲ್ಲಿನ ದೂಳು ಉಸಿರಾಡುವ ಗಾಳಿಯ ಜೊತೆಗೆ ಮನೆಯಲ್ಲಿನ ಕುಡಿಯುವ ನೀರು, ತೆರೆದಿಟ್ಟ ಆಹಾರವನ್ನೂ ಸೇರುತ್ತಿರುವ ಪರಿಣಾಮ ಜನ ಆಸ್ಪತ್ರೆಗೆ ಹೆಚ್ಚೆಚ್ಚು ಅಲೆದಾಡುವಂತಾಗಿದೆ.

`ಮಾಲಿನ್ಯ ಹಾಗೂ ದೂಳಿನಿಂದಾಗಿ ಸಾಮಾನ್ಯವಾಗಿ ಕೆಮ್ಮು, ನೆಗಡಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ತಲೆಕೂದಲು ಉದುರುವುದು, ಕಣ್ಣಿಗೆ ಹಾನಿ ಕೂಡ ಆಗುತ್ತದೆ. ಇಂತಹ ಪರಿಸರ ಹಾಗೆಯೇ ಮುಂದುವರಿದಲ್ಲಿ ದೀರ್ಘಕಾಲೀನ ಸಮಸ್ಯೆಗಳು ಉಂಟಾಗಬಹುದು. ಅದರಲ್ಲೂ ಅಸ್ತಮದಿಂದ ಬಳಲುತ್ತಿರುವವರಿಗೆ ನರಕಯಾತನೆಯಾಗುತ್ತದೆ' ಎನ್ನುತ್ತಾರೆ ಕಿಮ್ಸ ಪ್ರಾಚಾರ್ಯ ಡಾ. ಹಂಗರಗ.

ತಿಮ್ಮಸಾಗರ ಗುಡಿ ರಸ್ತೆಯ ಕೊನೆಯಲ್ಲಿರುವ ಡಾ. ಸಿಂಧೂರ ಆಸ್ಪತ್ರೆ ಸಹ ಈ ದೂಳಿನ ಹಾವಳಿಗೆ ಮಂಕಾಗಿದೆ.
`ಕಳೆದ ಕೆಲವು ವರ್ಷಗಳಿಂದ ಇಲ್ಲಿಗೆ ಬರುವ ರೋಗಿಗಳ ಪೈಕಿ ಅಲರ್ಜಿ, ಗಂಟಲು, ಮೂಗು ಹಾಗೂ ಚರ್ಮದ ತೊಂದರೆಯಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಮಾಲಿನ್ಯ ಹಾಗೂ ದೂಳು ಸಹ ಈ ಪರಿಸ್ಥಿತಿಗೆ ಕಾರಣ' ಎನ್ನುತ್ತಾರೆ ಸಿಂಧೂರ ಆಸ್ಪತ್ರೆಯ ಡಾ. ಮೃತ್ಯುಂಜಯ ಸಿಂಧೂರ.

ನಗರದ ಪ್ರತಿ ಐದು ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ಉಸಿರಾಟದ ತೊಂದರೆ, ಕೆಮ್ಮು ಮೊದಲಾದ ಸಮಸ್ಯೆಗಳು ಕಾಡುತ್ತಿವೆ. ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಈ ಭಾಗದಲ್ಲಿ ಹೆಚ್ಚು ಓಡಾಡುತ್ತಾರೆ. ಈ ಸಂದರ್ಭ ವಾಹನಗಳ ಸಂಚಾರದಿಂದ ದೂಳು ಆವರಿಸುವುದರಿಂದ ಅದನ್ನೇ ಉಸಿರಾಡುತ್ತಾರೆ. ಹೀಗಾಗಿ ಇಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.   

ವ್ಯಾಪಾರಕ್ಕೂ ಹೊಡೆತ
ಚರಂಡಿಯ ಸಲುವಾಗಿ ಈ ರಸ್ತೆ ಅಗೆದು ಮುಚ್ಚಿದ ಮೇಲೆ ನಿತ್ಯ ದೂಳಿನ ಸ್ನಾನವಾಗುವ ಕಾರಣ ರಸ್ತೆ ಅಕ್ಕಪಕ್ಕದಲ್ಲಿನ ಹೋಟೆಲ್‌ಗಳು, ಫುಟ್‌ಪಾತ್‌ನಲ್ಲಿ ತಿನಿಸುಗಳ ಮಾರಾಟಕ್ಕೆ ಹೊಡೆತ ಬಿದ್ದಿದೆ. ದೂಳು ಆಹಾರ ಸೇರುವ ಕಾರಣ ಹೆಚ್ಚು ಮಂದಿ ಇಲ್ಲಿ ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಹೋಟೆಲ್, ಬೇಕರಿ ತಿನಿಸುಗಳ ಮಾರಾಟ ಕಡಿಮೆಯಾಗುತ್ತಿರುವುದಾಗಿ ವ್ಯಾಪಾರಿಗಳು ದೂರುತ್ತಾರೆ.

ಸ್ವಚ್ಛತೆಗೆ ಅಡ್ಡಿ
ಸ್ವಚ್ಛತೆ ಇಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಆಸ್ಪತ್ರೆಯೊಂದಕ್ಕೆ ದಂಡ ವಿಧಿಸಲಾಗಿತ್ತು. ಈ ಬೈಪಾಸ್ ರಸ್ತೆಯ ಆಸುಪಾಸಿನಲ್ಲೇ ಹೊಸೂರು ಆಸ್ಪತ್ರೆ, ಶಕುಂತಲಾ ಆಸ್ಪತ್ರೆ, ಸಿಂಧೂರ ಆಸ್ಪತ್ರೆ ಹಾಗೂ ನಾಲ್ಕಾರು ಕ್ಲಿನಿಕ್‌ಗಳು ಇವೆ. ಇಂತಹ ಕಡೆ ಸ್ವಚ್ಛ ಪರಿಸರ ಅವಶ್ಯ. ಆದರೆ ಹದಗೆಟ್ಟ ರಸ್ತೆ ಹಾಗೂ ದೂಳಿನ ಕಾರಣ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡುವುದು ಕಷ್ಟವಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ಕೆಸರು ನಿಲ್ಲುವುದರಿಂದ ರಾಡಿ ಆಸ್ಪತ್ರೆಯನ್ನು ತುಂಬುತ್ತದೆ. ಬಿಸಿಲಿನ ದಿನಗಳಲ್ಲಿ ದೂರು ಆವರಿಸುತ್ತದೆ. ಹೀಗಿರುವಾಗ ಸ್ವಚ್ಛತೆ ಕಾಪಾಡುವುದು ಹೇಗೆ ಎನ್ನುವುದು ಆಸ್ಪತ್ರೆ ನಿರ್ವಹಕರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT