ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಸರ್ಕಲ್ನಲ್ಲಿ ಜೀವಕ್ಕೆ ಗಂಡಾಂತರ!

Last Updated 23 ಜನವರಿ 2012, 8:45 IST
ಅಕ್ಷರ ಗಾತ್ರ

ದಾವಣಗೆರೆ: ಕಿಲ್ಲರ್ ಖಾಸಗಿ ಬಸ್ಸೊಂದು ತಿರುವು ತೆಗೆದುಕೊಳ್ಳುವ ನೆಪದಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ... ನೆಲಕ್ಕೆ ಬಿದ್ದ ಆ ಮಹಿಳೆಯ ಪ್ರಾಣಪಕ್ಷಿ ಕ್ಷಣಮಾತ್ರದಲ್ಲಿ ಹಾರಿ ಹೋಗಿದೆ... ಗೃಹಪ್ರವೇಶದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದ ಪತಿಗೆ ಕರೆ ಹೋಗಿದೆ...

ಮನೆಯಲ್ಲಿ ಆಟವಾಡುತ್ತಿದ್ದ ಎಂಟು ವರ್ಷದ ಕಂದನ ಕಿವಿಗೆ ಅಮ್ಮನ ಸಾವಿನ ಸುದ್ದಿ ಸಿಡಿಲಿನಂತೆ ಬಂದೆರಗಿದೆ... ಸಂಬಂಧಿಕರ ಮೊಬೈಲುಗಳಲ್ಲಿ ಸಂಕಟ ಹೊತ್ತ ಸಂದೇಶಗಳ ಸಂಚಲನವಾಗಿದೆ... ಸುದ್ದಿ ತಿಳಿದ, ಸಂದೇಶ ಓದಿದ ಎಲ್ಲರ ಹೃದಯಗಳಲ್ಲೂ ನಡುಕದ ಅನುಭವ... ಸಿಜಿ ಆಸ್ಪತ್ರೆಯ ಶವಾಗಾರದ ಮುಂದೆ ದುಃಖತಪ್ತ ಮನಸ್ಸುಗಳ ರೋದನ ಮುಗಿಲು ಮುಟ್ಟಿತ್ತು...

ಭಾನುವಾರ ನಡೆದ ಈ ಘಟನೆಗೆ ಕಾರಣವಾದದ್ದು ವಿನಾಯಕ ಖಾಸಗಿ ಬಸ್. ಕಳೆದ ವರ್ಷ ಇದೇ ಬಸ್ ವೇಗವಾಗಿ ಬಂದು ಕರ್ತವ್ಯದಲ್ಲಿದ್ದ ಸಿಪಿಐ ಎಂ.ಸಿ. ದಶರಥಮೂರ್ತಿ ಅವರಿದ್ದ ಜೀಪಿಗೆ ಡಿಕ್ಕಿ ಹೊಡೆದು ಅವರನ್ನು ಗಾಯಗೊಳಿಸಿತ್ತು. ಅದಕ್ಕೂ ಹಿಂದೆ ಗಾಂಧಿವೃತ್ತದಲ್ಲಿ ನಾಡಹಬ್ಬದ ಮೆರವಣಿಗೆ ಬರುತ್ತಿರುವಾಗ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಿದ್ದರೂ ಇದೇ ಬಸ್ ಸಿಗ್ನಲ್ ಉಲ್ಲಂಘಿಸಿ ವೇಗವಾಗಿ ಮುನ್ನುಗ್ಗಿತು. ಇಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಒಬ್ಬರು ಕೂದಲೆಳೆ ಅಂತರದಲ್ಲಿ ಪಾರಾದರು.

ಈ ಎರಡೂ ಪ್ರಕರಣಗಳನ್ನು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು. ಹಾಗಿದ್ದರೂ ಸಿಟಿಬಸ್‌ಗಳ ಚೆಲ್ಲಾಟಕ್ಕೆ ಕಡಿವಾಣ ಬಿದ್ದಿಲ್ಲ. ಇಂತಹ ಹೃದಯ ಹಿಂಡುವ ಅನೇಕ ಅವಘಡಗಳು ನಗರದಲ್ಲಿ ನಡೆಯುತ್ತಲೇ ಇವೆ. ಗುಂಡಿ ಸರ್ಕಲ್‌ನಂತಹ ಗಂಡಾಂತಕಾರಿ ಸ್ಥಳಗಳಲ್ಲಿ ಅಪಘಾತ ತಪ್ಪಿಸುವ ವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ಚಿಂತಿಸಬೇಕಿದೆ.

ನಗರದ ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಜಯದೇವ ವೃತ್ತ, ಅರುಣ ಥಿಯೇಟರ್ ಮುಂಭಾಗದಲ್ಲಿ ಹೊರತುಪಡಿಸಿದರೆ ಮತ್ತೆಲ್ಲೂ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿಲ್ಲ. ನಗರದಲ್ಲಿ ದಟ್ಟ ಜನಸಂದಣಿ ಇರುವ ವೃತ್ತಗಳಲ್ಲಿ `ಗುಂಡಿ ಸರ್ಕಲ್~ ಪ್ರಮುಖವಾಗಿದೆ. ವಿದ್ಯಾನಗರ-ವಿನೋಬ ನಗರ ಮತ್ತು ವಿದ್ಯಾರ್ಥಿ ಭವನ-ಶಾಮನೂರು ರಸ್ತೆ ಸಂಪರ್ಕಕ್ಕೆ ಇದು ಕೇಂದ್ರ ಬಿಂದು.

ಜನಸಂದಣಿ ಸಂಚರಿಸುವ ಇಲ್ಲಿ ಅಡೆತಡೆಯಿಲ್ಲದೇ ವಾಹನಗಳು ಮುನ್ನುಗ್ಗುತ್ತವೆ. ಗುರಿಮುಟ್ಟಲು ಶರವೇಗದಲ್ಲಿ ಹೊರಟ ಬಾಣಗಳಂತೆ ಡೆಂಟಲ್ ಮತ್ತು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ತರಹೇವಾರಿ ಬೈಕ್, ಸ್ಕೂಟರ್‌ಗಳು ಭರ್ ಎನ್ನುವ ಶಬ್ದ ಹೊರಡಿಸುತ್ತವೆ. ಅವುಗಳ ಜತೆಗೆ, ನಗರದಲ್ಲಿ ಸಂಚರಿಸುತ್ತಿರುವ ಖಾಸಗಿ ಬಸ್‌ಗಳ ಅಜಾಗರೂಕ ಸಂಚಾರ ಕೂಡ ಹಿರಿಯ ನಾಗರಿಕ, ಮಹಿಳೆಯರ ಜೀವವೇ ಬಾಯಿಗೆ ಬಂದಂತಾಗಿ ಹ್ಯಾಂಡಲ್ ಹಿಡಿದ ಕೈಗಳು ನಡುಗುತ್ತವೆ. ಎಚ್ಚರ ತಪ್ಪಿದರೆ ಸಾವು ಖಚಿತ.

ಇದೇ ರೀತಿಯಲ್ಲಿ ನಗರದ ಅಶೋಕ ಥಿಯೇಟರ್ ರೈಲ್ವೆಗೇಟ್, ಎಲೆಬೇತೂರು ಸಂಪರ್ಕಿಸುವ ಶೇಖರಪ್ಪ ಬಡಾವಣೆಯ ರೈಲ್ವೆ ಕೆಳ ಸೇತುವೆ, ಪಾಲಿಕೆ ಮುಂಭಾಗದ ಕೆಳಸೇತುವೆ, ಕೋರ್ಟ್ ಕ್ರಾಸಿಂಗ್, ಗಡಿಯಾರ ಕಂಬದ ಬಳಿ ವಿಆರ್‌ಎಲ್ ರಸ್ತೆ, ಚಾಮರಾಜ ಪೇಟೆ, ಕಾಯಿಪೇಟೆ, ಶಿವಪ್ಪಯ್ಯ ಸರ್ಕಲ್ ಇತ್ಯಾದಿ ಕಡೆಗಳಲ್ಲಿ ಸಿಗ್ನಲ್ ಅಳವಡಿಸದೇ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಿ ಕೈ ತೊಳೆದುಕೊಂಡಿದೆ.

ನಗರದಲ್ಲಿ ದ್ವಿಚಕ್ರ, ತ್ರಿಚಕ್ರ ಇತ್ಯಾದಿ ವಾಹನಗಳು ಸಂಚರಿಸುವಾಗ 30 ಕಿ.ಮೀ. ವೇಗಮಿತಿ ಮೀರಬಾರದು ಎಂಬುದಾಗಿ ಮೋಟಾರ್ ನಿಯಂತ್ರಣ ಕಾಯ್ದೆ ಹೇಳುತ್ತದೆ. ಆದರೆ, ಬಿರುಗಾಳಿಯೋಪಾದಿಯಲ್ಲಿ ಸಂಚರಿಸುವ ಕಿಲ್ಲರ್ ವಾಹನಗಳ ವೇಗವನ್ನು ನಿಯಂತ್ರಿಸಿ, ಶಿಸ್ತುಬದ್ಧ ಸಂಚಾರಕ್ಕೆ ಪೊಲೀಸರು ಮುಂದಾಗಬೇಕಿದೆ ಎನ್ನುತ್ತಾರೆ ಫ್ಯೂಚರ್ ದಾವಣಗೆರೆ ಅಕಾಡೆಮಿ ಅಧ್ಯಕ್ಷ ಬಿ.ಎಸ್. ರಾಘವೇಂದ್ರ.

ಗುಂಡಿ ಸರ್ಕಲ್ ಸುತ್ತಮುತ್ತ: 2011ನೇ ಸಾಲಿನಲ್ಲಿ ಡೆಂಟಲ್ ಕಾಲೇಜಿನ ಎದುರು ಸಂಭವಿಸಿದ ಅಪಘಾತದಲ್ಲಿ -2, ಸಿಜಿ ಆಸ್ಪತ್ರೆ ಬಳಿ-1, ಲಕ್ಷ್ಮೀ ಫ್ಲೋರ್‌ಮಿಲ್ ಬಳಿ-1, ಯುಡಿಬಿಟಿ ಕಾಲೇಜು ಎದುರು-2 ಎಂಜಿನಿಯರಿಂಗ್ ಕಾಲೇಜು ಬಳಿ-1 ಹೀಗೆ ಸಾವುಗಳ ಸರಮಾಲೆ ಘಟಿಸಿವೆ. ಭಾನುವಾರ ನಡೆದ ಅಪಘಾತ ಪೊಲೀಸರ ದೃಷ್ಟಿಯಲ್ಲಿ ಸಾವಿನ ಲೆಕ್ಕಕ್ಕೆ ಮತ್ತೊಂದು ಸೇರ್ಪಡೆ ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT