ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿನ ಚಕಮಕಿ: ಅರಣ್ಯ ರಕ್ಷಕನಿಗೆ ಗಾಯ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹುಣಸೂರು: ರಾಷ್ಟ್ರೀಯ ಉದ್ಯಾನ ನಾಗರಹೊಳೆಯ ವೀರನಹೊಸಹಳ್ಳಿ ವಲಯದಲ್ಲಿ ಶುಕ್ರವಾರ ಮಧ್ಯರಾತ್ರಿ ಕಾಡುಗಳ್ಳರ ಮತ್ತು ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು ಒಬ್ಬ ಅರಣ್ಯ ರಕ್ಷಕ  ಗುಂಡು ತಗುಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೀರನಹೊಸಹಳ್ಳಿ 4ರ `ರಂಗೋಲಿ ಕಂಡಿ~ ಪ್ರದೇಶದಲ್ಲಿ ಮೂರು ಸುತ್ತು ಗುಂಡಿನ ಶಬ್ದ ಕೇಳುತ್ತಿದ್ದಂತೆ ರಾತ್ರಿ ಪಾಳಿಯಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ  ಪರಿಶೀಲಿಸಿದರು. ಏಕಾಏಕಿ ಬೇಟೆಯಾಡಿದ ಜಿಂಕೆಯೊಂದಿಗೆ ಎದುರಾದ ಕಾಡುಗಳ್ಳರು-ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು. ಇದರಿಂದ  ಹೆದರಿದ ಕಾಡುಗಳ್ಳರು ಬೇಟೆಯಾಡಿದ ಜಿಂಕೆಯನ್ನು ಸ್ಥಳದಲ್ಲೇ ಬಿಟ್ಟು ಕತ್ತಲೆಯಲ್ಲಿ ಕಣ್ಮರೆಯಾದರು.

ಘಟನೆಯಲ್ಲಿ ಹುಣಸೂರು ತಾಲ್ಲೂಕಿನ ಹಳೆಪುರದ ನಿವಾಸಿ ಅರಣ್ಯ ರಕ್ಷಕ ಸಿದ್ದರಾಜು (30) ಬಲ ಪಕ್ಕೆಗೆ ಗುಂಡು ತಗುಲಿ ಗಾಯಗೊಂಡರು. ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಿದ್ದರಾಜುನನ್ನು ದಾಖಲು ಮಾಡಲಾಯಿತು.

ಸಾವಿನಿಂದ ಪಾರು: ರಾತ್ರಿ ಪಾಳಿಯಲ್ಲಿದ್ದ ಅರಣ್ಯ ಸಿಬ್ಬಂದಿ ಕಾಡುಗಳ್ಳರನ್ನು ಹಿಡಿಯುವ ಹುಮ್ಮಸ್ಸಿನಲ್ಲಿ ತೆರಳಿದರಾದರೂ ದುಷ್ಕರ್ಮಿಗಳು ಇವರ ಮೇಲೆ ಗುಂಡಿನ ಸುರಿಮಳೆಗರೆದರು. ಸಿಬ್ಬಂದಿಗೆ ಗುಂಡು ನಿರೋಧಕ ರಕ್ಷಾ ಕವಚ ಇಲ್ಲದ ಕಾರಣ ಸಿದ್ದರಾಜು ಗಾಯಗೊಂಡರು. ವಲಯ ಪಾಲಕ ಮಹೇಶ್, ಅರಣ್ಯ ರಕ್ಷಕರಾದ ಕೆ.ಎಸ್.ಮಂಜು, ಗಣೇಶ್, ಶಿವಲಿಂಗಯ್ಯ, ಮಹಂತೇಶ್, ಚಂದ್ರೇಶ್ ಮತ್ತು ಜೀಪ್ ಚಾಲಕ ಮಂಜು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.  

ಹುಣಸೂರು ಉಪ ವಿಭಾಗದ ಡಿವೈಎಸ್ಪಿ ಮುತ್ತುಸ್ವಾಮಿ ನಾಯ್ಡು, ಅರಣ್ಯ ಇಲಾಖೆ ಡಿಸಿಎಫ್ ವಿಜಯರಂಜನ್‌ಸಿಂಗ್, ಎಸಿಎಫ್ ಬೆಳ್ಳಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಪೊಲೀಸ್ ಎಸ್‌ಐ ಉದಯರವಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರು ವರದಿ: `ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಗುಂಡಿನ ಶಬ್ದ ಕೇಳಿದಾಗ ಹತ್ತಿರ ತೆರಳಿದೆವು. ಬೇಟೆಯಾಡಿದ ಜಿಂಕೆಯೊಂದಿಗೆ ಹಠಾತ್ತನೆ ಎದುರಾದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದರು. ನಾವೂ ಸಹ ಅವರ ಮೇಲೆ ಗುಂಡು ಹಾರಿಸಿದೆವು. ಆದರೆ ನನ್ನ ಬಲಪಕ್ಕೆಗೆ ಗುಂಡು ತಗುಲಿದ್ದರಿಂದ ಅವರನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಹತ್ತಿರದ ಹಾಡಿ ಇಲ್ಲವೆ ಊರಿಗೆ ಸೇರಿದವರೇ ಈ ಕೃತ್ಯ ಎಸಗಿರಬಹುದು~ ಎಂದು ಕೆ.ಆರ್. ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರಣ್ಯ ರಕ್ಷಕ ಸಿದ್ದರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT