ವಾಷಿಂಗ್ಟನ್ (ಎಎಫ್‌ಪಿ): ಇಲ್ಲಿಯ ನೌಕಾಪಡೆಗೆ ಸೇರಿದ ಬಿಗಿ ಭದ್ರತೆಯ ಹಡಗುಕಟ್ಟೆಯಲ್ಲಿ ಸೋಮವಾರ ಬೆಳಿಗ್ಗೆ 8.20ರ ಹೊತ್ತಿಗೆ (ಭಾರತೀಯ ಕಾಲಮಾನ ಸಂಜೆ 6.30) ಮೂವರು ಅಪರಿಚಿತ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ ಕಾರಣ ಇಬ್ಬರು ಭದ್ರತಾ ಸಿಬ್ಬಂದಿ ಸೇರಿ ಕನಿಷ್ಠ 12 ಮಂದಿ ಸತ್ತಿದ್ದಾರೆ.
ದುಷ್ಕೃತ್ಯಕ್ಕೆ ಕಾರಣರಾದ ಬಂದೂಕುಧಾರಿಯೊಬ್ಬನನ್ನು ಗುಂಡಿಟ್ಟು ಕೊಲ್ಲಲಾಗಿದೆ. ಪರಾರಿಯಾಗಿರುವ ಇಬ್ಬರಿಗಾಗಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದು ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಘಟನೆ ನಡೆದ ಸ್ಥಳವು ಶ್ವೇತಭವನದಿಂದ ಐದು ಕಿಮೀಗೂ ಕಡಿಮೆ ದೂರದಲ್ಲಿದ್ದು ದುಷ್ಕರ್ಮಿಗಳು ಮಿಲಿಟರಿ ಪಡೆಯವರು ಧರಿಸುವ ರೀತಿಯ ಸಮವಸ್ತ್ರ ಧರಿಸಿದ್ದರು ಎನ್ನಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಮುಖ್ಯಸ್ಥೆ ಕ್ಯಾಥಿ ಲಾನಿಯರ್ ಅವರು, ಬಂದೂಕುಧಾರಿಯೊಬ್ಬ ಸಾವಿಗೀಡಾಗಿದ್ದಾನೆ. ಒಬ್ಬ ಕಪ್ಪು ವರ್ಣೀಯ, ಮತ್ತೊಬ್ಬ ಬಿಳಿ ವರ್ಣೀಯನಿಗಾಗಿ ಹುಡುಕಾಟ ನಡೆಸಲಾಗಿದೆ. ದಾಳಿಯ ಉದ್ದೇಶ ಏನೆಂದು ಗೊತ್ತಾಗಿಲ್ಲ ಎಂದಿದ್ದಾರೆ.
‘ಈ ಇಬ್ಬರು ಆದಿವಾಸಿಗಳೇ ಅಥವಾ ಮಿಲಿಟರಿ ಸಿಬ್ಬಂದಿಯೇ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ಅವರು ಮಿಲಿಟರಿ ಶೈಲಿಯ ಸಮವಸ್ತ್ರ ಧರಿಸಿದ್ದರು ಎಂದಷ್ಟೆ ತಿಳಿದು ಬಂದಿದೆ’ ಎಂದು ತಿಳಿಸಿದ್ದಾರೆ.
ಹತ್ಯೆಗೀಡಾದ ಬಂದೂಕುಧಾರಿಯು (50) ಈ ಹಿಂದೆ ನೌಕಪಡೆಯ ನೌಕರನಾಗಿದ್ದು ಆತನ ಉದ್ಯೋಗದ ಸ್ಥಾನಮಾನ ‘ಇತ್ತೀಚೆಗಷ್ಟೆ ಬದಲಾಗಿತ್ತು’ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ದಾಳಿ ಬಳಿಕ ನೌಕಾ ಪಡೆಯ ಪ್ರಧಾನ ಹಡಗುಕಟ್ಟೆಯನ್ನು ನೂರಾರು ಪೊಲೀಸರು ಮತ್ತು ನೌಕಾಪಡೆಯ ಸಿಬ್ಬಂದಿ ಸುತ್ತುವರಿದ್ದಾರೆ. ಅಮೆರಿಕ ನೌಕಾಪಡೆಗೆ ಅಗತ್ಯವಿರುವ ಹಡಗು, ಜಲಾಂತರ್ಗಾಮಿಗಳ ಖರೀದಿ, ನಿರ್ಮಾಣ, ನಿರ್ವಹಣೆ ಕಾರ್ಯಗಳ ಉಸ್ತುವಾರಿ ಇಲ್ಲಿ ನಡೆಯುತ್ತದೆ.