ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡುಕಲ್ಲು ಜಾಗದೊಳು ಹೂ ಹಣ್ಣಿನ ಘಮಲು!

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಇವರು ಎಂಜಿನಿಯರ್. ವಿವಾಹದ ಸಂದರ್ಭದಲ್ಲಿ ಮಾವನಿಂದ ಬಳುವಳಿಯಾಗಿ ಬಂದದ್ದು ಗುಂಡುಕಲ್ಲುಗಳ ರಾಶಿಯಿರುವ ಜಮೀನು. ಆದರೆ ಆ ಕಲ್ಲುಗಳ ನಡುವೆ ಇವತ್ತು ಹಲವಾರು ಹಣ್ಣುಗಳು ಸುವಾಸನೆ ಬೀರುತ್ತಿವೆ. ಅದೂ ಅತ್ಯಂತ ಕಡಿಮೆ ಖರ್ಚಿನಲ್ಲಿ, ಶೂನ್ಯ ಬಂಡವಾಳದಲ್ಲಿ!

ಇಂಥದ್ದೊಂದು ಚಮತ್ಕಾರ ಮಾಡಿ ತೋರಿಸಿರುವುದು ಬಾಗಲಕೋಟೆ ಜಿಲ್ಲೆಯ ಹುನಗುಂದದ ಚಂದ್ರಶೇಖರ ಬಳ್ಳೊಳ್ಳಿ. ಇದು ಸಾಧ್ಯವಾದದ್ದು ನೈಸರ್ಗಿಕ ಕೃಷಿಯಿಂದ. ಇದರ ಫಲವಾಗಿ ಇಂದು ಇವರ ಸುಮಾರು ಏಳು ಎಕರೆ ಜಮೀನಿನಲ್ಲಿ ಜಂಬುಕೇಸರಿ, ಬೇನಿಷ್ ತಳಿ ಮಾವು, ಪಪ್ಪಾಯ ಎಲ್ಲವೂ ನಗೆಬೀರಿವೆ. ಎರಡೂವರೆ ವರ್ಷದ ಮಾವಿನ ಗಿಡಗಳೂ ಫಲ ನೀಡಿವೆ.

ಬಳ್ಳೊಳ್ಳಿ ಅವರ ತೋಟದಲ್ಲಿ ಕಾಣುವ ಪ್ರಮುಖ ಅಂಶವೆಂದರೆ ಹೊದಿಕೆ (ಮಲ್ಚಿಂಗ್). ಅದು ಅವರ ತೋಟದಲ್ಲಿ ಚಮತ್ಕಾರ ಮಾಡಿದೆ. ಜೊತೆಗೆ ಜೀವಾಮೃತ ಎಂಬ ಅಮೃತಧಾರೆಯನ್ನು ಗಿಡಗಳ ಬುಡಕ್ಕೆ ಹನಿ ನೀರಾವರಿ ಮೂಲಕ ನೀಡುವುದಲ್ಲದೇ ಮಳೆಗಾಲದಲ್ಲಿ ಹೊದಿಕೆ ಮೇಲೆ ಚಿಮುಕಿಸುತ್ತಿದ್ದಾರೆ. ಕಲ್ಲುಮುಳ್ಳು, ಗಿಡಗಂಟಿಗಳು, ಒಣ, ಹಸಿ ಕಸ ಕಾಲಿಡಲು ಜಾಗವಿಲ್ಲದಷ್ಟು ಕೃಷಿ ತ್ಯಾಜ್ಯ ನೆಲಕ್ಕೆ ಆವರಿಸಿರುವುದರಿಂದ ತೋಟಕ್ಕಿಂತ ಅದನ್ನು ನೈಸರ್ಗಿಕ ಕಾಡು ಎಂದರೇನೆ ಹೆಚ್ಚು ಸೂಕ್ತ.

ಹೀಗಾಯ್ತು ಪ್ರೇರಣೆ
`ಮೊದಲಿನಿಂದಲೂ ನನಗೆ ಕೃಷಿಯ ನಂಟು. ಒಮ್ಮೆ ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. `ಭೂತಾಯಿಗೆ ರಾಸಾಯನಿಕ ಗೊಬ್ಬರ ಹಾಕಿದರೆ ಹೆತ್ತಮ್ಮನಿಗೆ ವಿಷ ಉಣಿಸಿದಂತೆ' ಎಂದು ಅವರು ಹೇಳಿದ ಮಾತು ಮನದಲ್ಲಿ ಉಳಿದುಬಿಟ್ಟಿತು. ಇದೇ ಮುಂದೆ ನೈಸರ್ಗಿಕ ಕೃಷಿಗೆ  ಪ್ರೇರಣೆಯಾಯಿತು. ವಿಷಮುಕ್ತ ನೆಲದಲ್ಲಿ ಹಸಿರು ಕಾಣಬೇಕೆಂಬ ಬಯಕೆಯ ಬೀಜ ಮೊಳೆತದ್ದೇ ಅಲ್ಲಿ. ಜೊತೆಗೆ ನಿವೃತ್ತ ಕೃಷಿ ಅಧಿಕಾರಿ ಶಂಕರಣ್ಣ ದೊಡ್ಡಣ್ಣವರ, ಮಾವ ರುದ್ರಪ್ಪ ಅಕ್ಕಿ ಅವರ ಸಲಹೆಯೂ ಇದೆ' ಎನ್ನುತ್ತಾರೆ.

`ಕಸ ಕಡ್ಡಿಗಳದ್ದೇ ಇಲ್ಲಿ ಕಾರುಬಾರು. ಅದಕ್ಕೆ ಕೆಲವರು `ಏನ್ರಿ ಇದು ಎಂಜಿನಿಯರ್ ಆಗಿ ತ್ವಾಟಾನ ಇಷ್ಟು ಹೊಲ್ಸು ಇಟ್ಟೀರಲ್ಲಾ' ಎಂದು ಛೇಡಿಸಿದ್ದಾರೆ. ಆದರೆ ಈ ತ್ಯಾಜ್ಯ ಇಡೀ ಹೊಲವನ್ನೇ ಫಲವತ್ತಾಗಿಸಿದೆ. ಸದಾ ತೇವಾಂಶವನ್ನು ಹಿಡಿದಿಟ್ಟು ಗಿಡಗಳಿಗೆ ಅನುಕೂಲ ಒದಗಿಸುತ್ತಿವೆ. ಒಳಸುರಿಗಳ ಅವಶ್ಯಕತೆ ಇಲ್ಲದೆಯೇ ಕೇವಲ ಜೀವಾಮೃತ ಎಲ್ಲ ರೀತಿಯ ಲಘು ಪೋಷಕಾಂಶಗಳನ್ನು ಒದಗಿಸುತ್ತಿದೆ' ಎನ್ನುತ್ತಾರೆ ಚಂದ್ರಶೇಖರ್.

ತೋಟದಲ್ಲಿ ಕಂಡದ್ದು
ಮಳೆಗಾಲದಲ್ಲಿ ಜೀವಂತ ಹೊದಿಕೆ (ಲೈವ್ ಮಲ್ಚಿಂಗ್)ಯಾದರೆ ಬೇಸಿಗೆಯಲ್ಲಿ ಒಣಗಿದ ಹೊದಿಕೆ. ಕಳೆದ ಮಳೆಗಾಲದಲ್ಲಿ ಮಾವು, ಪಪ್ಪಾಯದ ಮಧ್ಯೆ ಇರುವ ಜಾಗದಲ್ಲಿ ಒಣ ಮುಚ್ಚಿಗೆ ಮೇಲೆ ಜೀವಾಮೃತ ಚಿಮುಕಿಸಿ, ಕುಂಬಳ, ವೆಲ್ವೆಟ್ ಬೀನ್ಸ್, ಅಲಸಂದೆ ಮತ್ತಿತರೆ ಬಳ್ಳಿಗಳ ಬೀಜಗಳನ್ನು ಹಾಕಿದ್ದರು. ಕೆಲ ತಿಂಗಳ ನಂತರ ಅಲ್ಲಿ ಕಾಲಿಡುವುದಕ್ಕೂ ಜಾಗವಿಲ್ಲ, ಅಷ್ಟೇ ಹೆದರಿಕೆ ಸಹ. ಹೊದಿಕೆಯ ಬುಡದಲ್ಲಿ ಎರೆಹುಳುಗಳೇ ತುಂಬಿದ್ದವು. ನೆಲದ ತುಂಬೆಲ್ಲ ರಂಧ್ರಗಳಿದ್ದರೆ ಮೇಲೆಲ್ಲಾ ಚಹಪುಡಿಯಂಥ ಹಿಕ್ಕೆಗಳು.

ಬೆಳೆಗಳಿಗೆ ಕೀಟ ತಗುಲಿದಾಗ ಇವರು ಗಿಡಗಳ ಮೇಲೆ ಪ್ರಯೋಗಿಸುವುದು ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ, ನೀಮಾಸ್ತ್ರ, ಜೊತೆಗೆ ಹುಳಿ ಮಜ್ಜಿಗೆ ಮತ್ತು ಜೀವಾಮೃತ. ಜೀವಾಮೃತ ಶಿಲೀಂಧ್ರ ನಾಶಕ, ಕೀಟನಾಶಕ, ಶಕ್ತಿವರ್ಧಕ. ಅಷ್ಟೇ ಅಲ್ಲ, ಭೂಮಿಯ ಫಲವತ್ತತೆ ಮತ್ತು ಮಣ್ಣಿನಲ್ಲಿನ ಜೀವಕಣಗಳನ್ನು ಹೆಚ್ಚಿಸುತ್ತದೆ, ಒಂದು ರೀತಿಯ ನೈಸರ್ಗಿಕ ಹಾರ್ಮೋನು ಎನ್ನುತ್ತಾರೆ ಬಳ್ಳೊಳ್ಳಿ. ಜೀವಾಮೃತವನ್ನು ಹನಿ ನೀರಾವರಿ ಮೂಲಕವೂ ಒದಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ ಇವರು.

ಕಸ ಅಪ್ಯಾಯಮಾನ
ಸಾಮಾನ್ಯವಾಗಿ ಅಕ್ಕಪಕ್ಕದವರು, ಪರಿಚಯಸ್ಥರ ಹೊಲಗದ್ದೆಗಳಿಗೆ ಹೋದಾಗ ಬೇರೆಯವರ ದೃಷ್ಟಿ ತೋಟದತ್ತ ನೆಟ್ಟರೆ ಚಂದ್ರಶೇಖರ್ ಮಾತ್ರ ಕಸವಾಗಿ ಬಿದ್ದ ಕೃಷಿ ತ್ಯಾಜ್ಯದ ಮೇಲೆ ಕಣ್ಣು ನೆಟ್ಟಿರುತ್ತಾರೆ. ಬಾಳೆ, ಕಬ್ಬು, ತಂಬಾಕಿನ ತ್ಯಾಜ್ಯ ಇವರ ತೋಟಕ್ಕೆ ರವಾನೆಯಾಗುತ್ತದೆ. ಬೇರೆಯವರಿಗೆ ಅದು ಕಸವಾದರೆ ಇವರ ಪಾಲಿಗೆ `ರಸ' ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೇರೆಯವರ ಕಾರಿನಲ್ಲಿ ಸುಗಂಧ ದ್ರವ್ಯದ ವಾಸನೆ ಇದ್ದರೆ ಬಳ್ಳೊಳ್ಳಿ ಅವರ ಕಾರಿನಲ್ಲಿ ಮಾತ್ರ ದೇಸಿ ಆಕಳುಗಳ ಗಂಜಲಗಳ ಘಾಟು. ತಮ್ಮಲ್ಲಿ ಮೂರ್ನಾಲ್ಕು ದೇಸಿ ಆಕಳುಗಳಿದ್ದರೂ ಕೆಲ ಬಾರಿ ಗಂಜಲದ ಕೊರತೆ ಎದುರಾಗುತ್ತದೆ. ಹಾಗಾಗಿ ಗಂಗಾವತಿಯ ಚನ್ನಬಸವಸ್ವಾಮಿ ಮಠದಲ್ಲಿ ಸಾಕಿರುವ ದೇಸಿ ಆಕಳುಗಳ ಗಂಜಲವನ್ನು ಕ್ಯಾನುಗಳಲ್ಲಿ ಸಂಗ್ರಹಿಸಿ ತಂದು ಪರಿಸರಸ್ನೇಹಿ, ಪರಿಣಾಮಕಾರಿ ಕ್ರಿಮಿನಾಶಕವಾಗುವ ಅಗ್ನಿಅಸ್ತ್ರ, ಜೀವಾಮೃತಕ್ಕೆ ಬಳಸಿಕೊಳ್ಳುತ್ತಾರೆ.

ಪ್ರತಿ ಶನಿವಾರ ಗಂಗಾವತಿಯ ಕೋಟೆ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಾರೆ. ಸ್ವಾಮಿಕಾರ್ಯದ ಜೊತೆಗೆ ಸ್ವಕಾರ್ಯ ಇದು! ಭಕ್ತರು ಒಡೆಯುವ ತೆಂಗಿನ ಕಾಯಿ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ಕಂಡು ಅದರ ಸದ್ಬಳಕೆ ಮಾಡಿಕೊಂಡಿದ್ದಾರೆ. ಪ್ರತಿಬಾರಿ ಕನಿಷ್ಠ 20 ಲೀಟರ್ ತೆಂಗಿನ ನೀರು ತಂದು 200 ಲೀಟರ್ ನೀರಿಗೆ ಬೆರೆಸುತ್ತಾರೆ. ಫಲ ಬಿಟ್ಟ ಮಾವು, ಪಪ್ಪಾಯಿಗೆ ಇವುಗಳ ಸಿಂಪಡಣೆ. ಇದರಿಂದ ಕಾಯಿಗಳ ಗಾತ್ರವೂ ಹೆಚ್ಚಾಗುತ್ತದೆ. ಇದು ಒಂದು ರೀತಿಯಲ್ಲಿ ಗಿಡಗಳಿಗೆ ಗ್ಲೂಕೋಸ್ ನೀಡಿದಂತೆ ಎಂಬುದು ಅವರ ಮಾತು. 20 ಗುಂಟೆಯಲ್ಲಿನ ಕುಂಬಳ 20 ಸಾವಿರ ರೂಪಾಯಿ ಆದಾಯ ತಂದಿದೆ. ಅಲ್ಲದೇ ಕಾಯಿ ಭಾರಕ್ಕೆ ನುಗ್ಗೆ ಗಿಡಗಳೇ ಮುರಿದು ಬಿದ್ದಿದ್ದವು ಎಂದು ಕೆಲಸಗಾರ ಶರಣಪ್ಪ ಕಲಮಂಗಿ ವಿವರಿಸುತ್ತಾರೆ.

ಉಂಡೆ ಮಹಿಮೆ
ಇವರ ತೋಟದ ಮನೆ ಹೊಕ್ಕಾಗ ಗೋಣಿ ಚೀಲದಲ್ಲಿನ ಬೊಗಸೆ ಗಾತ್ರದ ಉಂಡೆಗಳು ಗಮನ ಸೆಳೆಯುತ್ತವೆ. ಅವು ಘನಬೀಜಾಮೃತದ ಸಗಣಿ ಉಂಡೆಗಳು. ಬೇಕಾದಾಗ ಪುಡಿ ಮಾಡಿ ಗಿಡಗಳಿಗೆ ಹಾಕುತ್ತಾರೆ. ತೋಟಕ್ಕೆ ಬಂದ ಮಾವ ಗಲಗಲಿ ನಾಗಪ್ಪ `ನಮ್ಮ ನಿಂಬಿ ಗಿಡಾ ಕಾಯಿ ಬಿಡವೊಲ್ವು ನೋಡೊ ಅಳಿಯ` ಎಂದರಂತೆ. ಈ ಉಂಡೆಗಳನ್ನು ಕೈಗಿಟ್ಟ ಬಳ್ಳೊಳ್ಳಿ, ಗಿಡಗಳ ಬುಡಕ್ಕೆ ಪುಡಿಮಾಡಿ ಹಾಕುವಂತೆ ಹೇಳಿದ್ದಾರೆ. ನಂತರ ಗಿಡದಲ್ಲಿ ಆದ ಪವಾಡ ನೋಡಿ ಮಾವ ಬೆರಗಾದರು ಎಂದು ಚಂದ್ರಶೇಖರ ನೆನಪಿಸಿಕೊಳ್ಳುತ್ತಾರೆ.

ಕಣ್ಣಿಗೆ ಮುದನೀಡದಿದ್ದರೂ ಭೂಮಿಗೆ ಅಮೃತ ಉಣಿಸುವ ಚಂದ್ರಶೇಖರ ಅವರ ತೋಟಕ್ಕೆ ಮುಂಜಾನೆ ಅಥವಾ ಇಳಿ ಹೊತ್ತಿನಲ್ಲಿ ಕಾಲಿಟ್ಟಾಗ ಹಕ್ಕಿಗಳ ಕಲರವ. ವಿವಿಧ ಹಕ್ಕಿಗಳ ಕಲರವ, ಗೌಜು ಗದ್ದಲ ಕೇಳಿದರೆ ಪುಳಕವಾಗುತ್ತದೆ. ಮಾವು, ಪಪ್ಪಾಯ ಹಣ್ಣು ಕುಕ್ಕುತ್ತವೆ, ಹುಳುಹುಪ್ಪಡಿ ಚಪ್ಪರಿಸುತ್ತವೆ. ಅಷ್ಟೇ ಅಲ್ಲ ಇಲಿ, ಹುಳುಗಳಿಗೆ ಹಾವುಗಳು ಹೊಂಚು ಹಾಕಿರುತ್ತವೆ' ಎನ್ನುತ್ತಾರೆ ಚಂದ್ರು. ಒಟ್ಟಾರೆ ಯಾಂತ್ರಿಕ ಬದುಕಿನಿಂದ ಕಂಗೆಟ್ಟ ಮನಸ್ಸು ಮುದಗೊಳ್ಳುವುದಕ್ಕೆ ಏನೆಲ್ಲಾ ಬೇಕೋ ಅದೆಲ್ಲವೂ ಇಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT