ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಯ ಜಲವಿದ್ಯುತ್ ಯೋಜನೆ ಕೈಬಿಡಲು ತಜ್ಞರ ಶಿಫಾರಸು

Last Updated 25 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಗುಂಡ್ಯ ಹಾಗೂ ಕೇರಳದ ಅದಿರಪಿಳ್ಳಿ ಜಲವಿದ್ಯುತ್ ವಿದ್ಯುತ್ ಯೋಜನೆಗಳನ್ನು ಕೈಬಿಡುವಂತೆ ಪಶ್ಚಿಮ ಘಟ್ಟ ಪರಿಸರ ಸಮಿತಿ ಮಾಡಿರುವ ಶಿಫಾರಸುಗಳನ್ನು ಪರಿಸರ ಸಚಿವಾಲಯ ತಿರಸ್ಕರಿಸಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಖ್ಯಾತ ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿ, ಗುಂಡ್ಯದಲ್ಲಿ 200 ಮೆಗಾವಾಟ್ ಹಾಗೂ ಕೇರಳದಲ್ಲಿ 163 ಮೆಗಾವಾಟ್ ಜಲವಿದ್ಯುತ್ ಉತ್ಪಾದಿಸುವ ಯೋಜನೆ ಕೈಬಿಡುವಂತೆ ಸಲಹೆ ನೀಡಿತ್ತು. ಈ ಯೋಜನೆಗಳಿಗೆ ಪರಿಸರವಾದಿಗಳು ಹಾಗೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಗಾಡ್ಗೀಳ್ ಸಮಿತಿ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ ಪರಿಸರ ಸಚಿವಾಲಯ, ಈ ವರದಿಯನ್ನು ತಾನು ಒಪ್ಪಿಕೊಂಡಿಲ್ಲ ಎಂದು ಹೇಳಿದೆ. ವರದಿಯನ್ನು ಮತ್ತಷ್ಟು ಅಧ್ಯಯನ ಮಾಡುತ್ತಿದ್ದು, ವರದಿಯ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದೂ ತಿಳಿಸಿದೆ.

ಈ ವರದಿಯನ್ನು ಬಹಿರಂಗಪಡಿಸುವಂತೆ ದೆಹಲಿ ಹೈಕೋರ್ಟ್ ಹಾಗೂ ಕೇಂದ್ರ ಮಾಹಿತಿ ಆಯೋಗ ಪರಿಸರ ಸಚಿವಾಲಯಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ, ವರದಿ ಸಲ್ಲಿಕೆಯಾದ ಒಂಬತ್ತು ತಿಂಗಳ ನಂತರ ಅದನ್ನು ಈಗ ಅದನ್ನು ಬಹಿರಂಗಪಡಿಸಲಾಗುತ್ತಿದೆ.

ಆರು ರಾಜ್ಯಗಳ 44 ಜಿಲ್ಲೆಗಳಲ್ಲಿ ವ್ಯಾಪಿಸಿರುವ ವಿಶ್ವದ ಅತ್ಯಂತ ಸೂಕ್ಷ್ಮ ಜೀವತಾಣಗಳಲ್ಲಿ ಒಂದಾಗಿರುವ ಪಶ್ಚಿಮಘಟ್ಟದಲ್ಲಿನ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿಗಾ ಮತ್ತು ನಿಯಂತ್ರಣ ಇಡಲು ಶಾಸನಬದ್ಧ ಅಧಿಕಾರವಿರುವ ಪ್ರಾಧಿಕಾರವೊಂದನ್ನು ಸ್ಥಾಪಿಸುವಂತೆಯೂ ಗಾಡ್ಗೀಳ್ ಸಮಿತಿ ಶಿಫಾರಸು ಮಾಡಿದೆ.

1986ರ ಪರಿಸರ ಸಂರಕ್ಷಣಾ ಕಾಯ್ದೆ ಅಡಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರಗಳ ಸಹಯೋಗದಲ್ಲಿ ಈ ಪ್ರಾಧಿಕಾರ ಸ್ಥಾಪಿಸಬೇಕಿದ್ದು, ಅದರಲ್ಲಿ 24 ಸದಸ್ಯರು ಇರುತ್ತಾರೆ.  ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಅದರ ಅಧ್ಯಕ್ಷತೆ ವಹಿಸಲಿದ್ದಾರೆ.  ಪ್ರಸ್ತುತ ಪರಿಸರ ಸಚಿವಾಲಯ ನೇಮಿಸಿರುವ ಉನ್ನತ ಮಟ್ಟದ ನಿಗಾ ಸಮಿತಿ ಸೂಕ್ಷ್ಮ ಪರಿಸರವಿರುವ ಪ್ರದೇಶಗಳ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತದೆ.

`ಈ ನಿಗಾ ಸಮಿತಿಗಳಿಗೆ ನಿಯಂತ್ರಣದ ಅಧಿಕಾರ ಇಲ್ಲ. ಆರ್ಥಿಕ ಹಾಗೂ ಮಾನವ ಸಂಪನ್ಮೂಲವೂ ಇಲ್ಲ. ಕೆಲ ಸಂದರ್ಭಗಳಲ್ಲಿ ಹಲವಾರು ವರ್ಷಗಳ ಕಾಲ ಈ ಸಮಿತಿಯೇ ಅಸ್ತಿತ್ವದಲ್ಲಿ ಇರುವುದಿಲ್ಲ~ ಎಂದು ಗಾಡ್ಗೀಳ್ ಸಮಿತಿ ಹೇಳಿದೆ.

ಪರಿಸರವಾದಿಗಳು, ವಿಜ್ಞಾನಿಗಳು, ನಾಗರಿಕ ಸಂಘಟನೆಗಳ ಪ್ರತಿನಿಧಿಗಳು, ಬುಡಕಟ್ಟು ಸಮುದಾಯಗಳು, ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿಗಳು, ಯೋಜನಾ ಆಯೋಗ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಈ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ.

ಒಮ್ಮೆ ಈ ಪ್ರಾಧಿಕಾರ ರಚನೆಯಾದ ಮೇಲೆ ಅದು ಯಾವುದೇ ಕೈಗಾರಿಕೆಗಳ ಸ್ಥಳ, ಅದಕ್ಕಾಗಿ ಬಳಕೆಯಾಗುವ ಭೂಮಿ ಇತ್ಯಾದಿಗಳ ಬಗ್ಗೆ ತೀರ್ಮಾನ ಕೈಗೊಳ್ಳಬಹುದಾಗಿದೆ. ಸೂಕ್ಷ್ಮ ಪರಿಸರದ ಪ್ರದೇಶಗಳಲ್ಲಿ ಜಲಾಶಯಗಳನ್ನು ನಿರ್ಮಿಸಬೇಕೇ ಅಥವಾ ಬೇಡವೇ ಎಂಬಂತಹ ವಿಚಾರಗಳ ಕುರಿತೂ ಈ ಪ್ರಾಧಿಕಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.

ಪರಿಸರ ಸಮಿತಿ ಮಾಡಿರುವ ವರ್ಗೀಕರಣದ ಪ್ರಕಾರ ಕರ್ನಾಟಕದ ಇಪ್ಪತ್ತಾರು ತಾಲ್ಲೂಕುಗಳು ಸೂಕ್ಷ್ಮ ಪರಿಸರ ವಲಯ-1ರ ವ್ಯಾಪ್ತಿಯಲ್ಲಿ, ಐದು ತಾಲ್ಲೂಕುಗಳು ವಲಯ-2ರ ವ್ಯಾಪ್ತಿಯಲ್ಲಿ ಹಾಗೂ ಹತ್ತು ತಾಲ್ಲೂಕುಗಳು ವಲಯ-3ರ ವ್ಯಾಪ್ತಿಯಲ್ಲಿ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT