ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪುಗಾರಿಕೆಯೇ ಮುಳ್ಳು- ಕಾಂಗ್ರೆಸ್ ಆತ್ಮಾವಲೋಕನ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪಕ್ಷದೊಳಗಿನ ಭಿನ್ನಾಭಿಪ್ರಾಯ, ಗುಂಪುಗಾರಿಕೆಗೆ ಮೊದಲು ಕಡಿವಾಣ ಹಾಕಬೇಕು. ನಂತರ ಚುನಾವಣಾ ಸಿದ್ಧತೆಗೆ ತೊಡಗಬೇಕು. ಗುಂಪುಗಾರಿಕೆ ನಿಯಂತ್ರಿಸದೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ~- ಇದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮುಖಂಡರಾದ ಸಿದ್ದರಾಮಯ್ಯ, ಮೋಟಮ್ಮ, ಧರ್ಮಸಿಂಗ್, ಎಂ.ವಿ.ರಾಜಶೇಖರನ್, ಜಾಫರ್ ಷರೀಫ್, ಸಿ.ಎಂ. ಇಬ್ರಾಹಿಂ, ಡಿ.ಕೆ. ಶಿವಕುಮಾರ್ ಶನಿವಾರ ಒಂದೇ ವೇದಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ.

ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಪಕ್ಷದ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಬಹುತೇಕ ನಾಯಕರು, `ಹತ್ತು ವರ್ಷಗಳಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಿಂದ ವಂಚಿತವಾಗಲು ಗುಂಪುಗಾರಿಕೆಯೇ ಕಾರಣ~ ಎಂದು ನೇರವಾಗಿ ಹೇಳಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸಂಸದ ಧರ್ಮಸಿಂಗ್, `ಒಳಜಗಳದಿಂದ ಬಿಜೆಪಿ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ನಾವು ಕಾಂಗ್ರೆಸ್‌ನಲ್ಲಿ ಒಡಕನ್ನು ಸರಿಪಡಿಸಬೇಕು. ಏಕತೆ ಇದ್ದರೆ ಜಯ ದೊರೆಯುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯರಾದ ಎಂ.ವಿ.ರಾಜಶೇಖರನ್, ಮೋಟಮ್ಮ ಇದಕ್ಕೆ ದನಿಗೂಡಿಸಿದರು.

ಕೆ.ಎಚ್.ಮುನಿಯಪ್ಪ ಮಾತನಾಡಿ, `ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ನಾನು, ನನ್ನವರು ಎಂಬುದನ್ನು ಮರೆತು ಮುಖಂಡರು ಕೆಲಸ ಮಾಡಬೇಕು~ ಎಂದು ಹೇಳಿದರು.

ಉದ್ಘಾಟನಾ ಭಾಷಣ ಮಾಡಿದ ಎಸ್.ಎಂ.ಕೃಷ್ಣ, `ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಕಾರ್ಯಕರ್ತರೇ ವಿಫಲವಾದ ಕಾರಣ 2004ರ ಚುನಾವಣೆಯಲ್ಲಿ ಸೋತೆವು. ಈಗ ಒಟ್ಟಿಗೆ ಸಾಗುವ ಮೂಲಕ ಪಕ್ಷದ ಋಣವನ್ನು ತೀರಿಸಲು ಪ್ರಯತ್ನಿಸಬೇಕು~ ಎಂದು ಕರೆ ನೀಡಿದರು.

ದಿಲ್ಲಿಯಿಂದ ಗಲ್ಲಿವರೆಗೆ: ಭಿನ್ನಾಭಿಪ್ರಾಯಕ್ಕೆ ಮದ್ದು ಹುಡುಕದೇ ಚುನಾವಣಾ ಸಿದ್ಧತೆಗೆ ಕೈಹಾಕುವುದು ವ್ಯರ್ಥ ಕಸರತ್ತು ಎಂದು ನೇರವಾಗಿ ಹೇಳಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, `ದಿಲ್ಲಿಯಲ್ಲಿ ಆರಂಭವಾದ ಭಿನ್ನಾಭಿಪ್ರಾಯ ಗ್ರಾಮಗಳವರೆಗೂ ಪಸರಿಸಿದೆ.
 
ನಾಲ್ಕು ಕಂದಾಯ ವಿಭಾಗಗಳ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವರು ಮೊದಲು ಈ ಸಮಸ್ಯೆಗೆ ಪರಿಹಾರ ದೊರಕಿಸಬೇಕು. ಈವರೆಗೂ ಆಗಿರುವ ತಪ್ಪುಗಳಿಗೆ ಹೊಣೆ ಯಾರು ಎಂದು ಹುಡುಕುತ್ತಾ ಕಾಲ ಕಳೆಯುವುದು ಬೇಡ. ಎಲ್ಲ ಕಾರ್ಯಕರ್ತರನ್ನೂ ಒಗ್ಗೂಡಿಸುವ ಕೆಲಸಕ್ಕೆ ಆದ್ಯತೆ ದೊರೆಯಲಿ. ಈ ಬೆಳವಣಿಗೆಯನ್ನು ವಿರೋಧಿಸುವವರನ್ನು ಪಕ್ಷದಿಂದ ಹೊರಹಾಕಿದರೂ ಚಿಂತೆ ಇಲ್ಲ~ ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಲ್ಲರ ಅಭಿಪ್ರಾಯವನ್ನೂ ಸಮರ್ಥಿಸುವ ಧಾಟಿಯಲ್ಲಿ ಮಾತನಾಡಿದರು. `2008ರ ಚುನಾವಣೆಯಲ್ಲಿ ನಮ್ಮಿಂದ ತಪ್ಪುಗಳಾಗಿವೆ. ಹೀಗಾಗಿಯೇ 30ಕ್ಕೂ ಹೆಚ್ಚು ಮಾಜಿ ಸಚಿವರು ಸೋತರು. ರಾಜ್ಯಮಟ್ಟದಿಂದ ಬ್ಲಾಕ್‌ಗಳವರೆಗೂ ಆಗಿರುವ ತಪ್ಪುಗಳು ಇದಕ್ಕೆ ಕಾರಣ.

ಮುಖ್ಯಮಂತ್ರಿ, ಮಂತ್ರಿ ಆಗೋದೇ ಮುಖ್ಯವಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಗುರಿ ಆಗಬೇಕು. ಪಕ್ಷಕ್ಕೆ ದ್ರೋಹ ಮಾಡಿ, ಮಾರಾಟದ ವಸ್ತುಗಳಾಗಬೇಡಿ~ ಎಂದು ಮುಖಂಡರಿಗೆ ಮನವಿ ಮಾಡಿದರು.

ಮನ್ವಂತರಕ್ಕೆ ಕರೆ
ಹತ್ತು ವರ್ಷಗಳಿಂದ ರಾಜ್ಯದಲ್ಲಿ ವನವಾಸದಲ್ಲಿರುವ ಕಾಂಗ್ರೆಸ್ ಪಾಲಿಗೆ ಹೊಸ ಮನ್ವಂತರ ಆರಂಭವಾಗಬೇಕು. ಅದು ಬೆಂಗಳೂರಿನ ವಿಭಾಗ ಮಟ್ಟದ ಸಮಾವೇಶದಿಂದಲೇ ಆರಂಭವಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಕರೆ ನೀಡಿದರು.

`ಬಿಜೆಪಿ ಸರ್ಕಾರವನ್ನು ಕೆಟ್ಟ ಕ್ರಿಕೆಟ್ ತಂಡಕ್ಕೆ ಹೋಲಿಸಬಹುದು. ಕ್ಯಾಪ್ಟನ್ ಸಮೇತ 11 ಜನರು ಪೆವಿಲಿಯನ್‌ಗೆ ಮರಳಿದ್ದಾರೆ. ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸುಮ್ಮನೆ ಬ್ಯಾಟ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅವರ ಬಳಿ ಓಡುವವರೇ ಇಲ್ಲ~ ಎಂದು ಕೃಷ್ಣ ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT