ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಗಲಭೆ ವಿಡಿಯೊ ಪ್ರೇರಣೆ-ಹೆಡ್ಲಿ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭಾರತದ ವಿರುದ್ಧ ಜಿಹಾದ್ ನಡೆಸಲು ಹೆಡ್ಲಿಯನ್ನು ಉತ್ತೇಜಿಸುವ ಸಲುವಾಗಿ ಲಷ್ಕರ್ ಎ ತೊಯ್ಬಾ ಸಂಘಟನೆಯು ಗುಜರಾತ್ ಕೋಮು ಗಲಭೆ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಡಿಯೊ ತುಣುಕುಗಳನ್ನು ಆತನಿಗೆ ತೋರಿಸಿತ್ತು.

ತನಗೆ ಎಲ್‌ಇಟಿ ತರಬೇತಿ ನೀಡುವ ವೇಳೆ ಭಾರತದ ವಿರುದ್ಧ ಜಿಹಾದ್ ನಡೆಸಲು ಪ್ರೇರಣೆ ನೀಡಲು ಗುಜರಾತ್ ಗಲಭೆ ವೇಳೆ ಜನರು ಓಡುವ, ಮನೆಗಳನ್ನು ಸುಟ್ಟುಹಾಕುವ ದೃಶ್ಯಾವಳಿಗಳನ್ನು ಮುಜಾಫರಬಾದ್‌ನಲ್ಲಿನ ಎಲ್‌ಇಟಿ ಪ್ರಧಾನ ಕಚೇರಿಗೆ ತೆರಳಿದ್ದಾಗ ತೋರಿಸಲಾಗಿತ್ತು.

ಗುಜರಾತ್ ಮುಸ್ಲಿಮರು ಸಹಾಯಕ್ಕಾಗಿ ಲಷ್ಕರ್ ಮುಖ್ಯಸ್ಥರಿಗೆ ನೂರಾರು ಪತ್ರಗಳನ್ನೂ ಬರೆದಿದ್ದರು. ತರಬೇತಿ ವೇಳೆ ಗುಜರಾತ್ ದಂಗೆ ಹಲವಾರು ಬಾರಿ ಚರ್ಚೆಗೆ ಬಂದಿತ್ತು. ಗಲಭೆ ವೇಳೆ ಮುಂಬೈನಿಂದ ಗುಜರಾತ್‌ಗೆ ತೆರಳಿದ್ದ ವಿಎಚ್‌ಪಿ ಮುಖಂಡ ಬಾಬಾ ಬಜರಂಗಿ ಅವರ ಸಂದರ್ಶನದ ತುಣುಕುಗಳನ್ನು ಗುಪ್ತ ಕ್ಯಾಮೆರಾದಲ್ಲಿ ಸೆರೆ ಹಿಡಿದು ತೋರಿಸಲಾಗಿತ್ತು.

ಅದರಲ್ಲಿ ಆತ ಅನೇಕ ಮಹಿಳೆಯರನ್ನು ಹತ್ಯೆ ಮಾಡಿದ್ದಾಗಿ ಹಾಗೂ ಮನೆಗಳನ್ನು ಸುಟ್ಟು ಹಾಕಿದ್ದಾಗಿ ಹೇಳಿಕೊಂಡಿದ್ದ. ಅದು `ಯೂ ಟ್ಯೂಬ್~ನಲ್ಲಿಯೂ ಲಭ್ಯವಿದ್ದು, ತನಗೆ ಸಿ.ಡಿ ಮೂಲಕ ತೋರಿಸಿ ಭಾರತದ ವಿರುದ್ಧ ದ್ವೇಷ ಮೂಡಿಸಿದ್ದಾಗಿ ಹೆಡ್ಲಿ ತಿಳಿಸಿದ್ದಾನೆ.

ಅಲ್ಲದೆ ಭಾರತದಲ್ಲಿ ಮುಸ್ಲಿಮರ ವಿರುದ್ಧ ವಿವಿಧ ಸ್ಥಳಗಳಲ್ಲಿ ವಿವಿಧ ಅವಧಿಗಳಲ್ಲಿ ನಡೆದ ದಾಳಿಗಳ ವಿಡಿಯೊಗಳನ್ನು ಎಲ್‌ಇಟಿ ಮುಖಂಡರು ಮತ್ತು ಜಕಿಉರ್ ರೆಹಮಾನ್, ಸಾಜಿದ್ ಮಿರ್ ಹಾಗೂ ಮುಜಾಮ್ ಸೇರಿದಂತೆ ಅನೇಕ ಪ್ರಮುಖ ಉಗ್ರರ ಜೊತೆಗೂಡಿ ಹಲವು ವಾರ ವೀಕ್ಷಿಸಿದ್ದಾಗಿ ಹೆಡ್ಲಿ ಬಹಿರಂಗಪಡಿಸಿದ್ದಾನೆ.

ಹೆಡ್ಲಿಯೇ ಪ್ರಮುಖ ಸಾಕ್ಷಿ: ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಶಂಕಿತ ಉಗ್ರ ಡೇವಿಡ್ ಹೆಡ್ಲಿಯನ್ನು ಅಲ್‌ಖೈದಾ ಮುಖ್ಯಸ್ಥ ಇಲ್ಯಾಸ್ ಕಾಶ್ಮೀರಿ ಮತ್ತು ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಸಾಜಿದ್ ಮಿರ್ ಅವರ ವಿರುದ್ಧ ಪ್ರಮುಖ ಸಾಕ್ಷಿಯನ್ನಾಗಿ ಅಮೆರಿಕ ಬಳಸಿಕೊಳ್ಳಲಿದೆ.

ಮುಂಬೈ ದಾಳಿಯ ಪ್ರಮುಖ ರೂವಾರಿಗಳಾದ ಕಾಶ್ಮೀರಿ ಮತ್ತು ಸಾಜಿದ್ ಮಿರ್ ಸೇರಿದಂತೆ ಪ್ರಮುಖ ಸಂಚುದಾರರ ವಿರುದ್ಧದ ಡೆನ್ಮಾರ್ಕ್ ಮೇಲಿನ ದಾಳಿ ಸಂಚು ಆರೋಪ ಸೇರಿದಂತೆ ಇತರ ಪ್ರಕರಣಗಳು ವಿಚಾರಣೆಗೆ ಬಂದಲ್ಲಿ ಹೆಡ್ಲಿಯನ್ನು ಮುಖ್ಯ ಸಾಕ್ಷಿಯನ್ನಾಗಿ ಪರಿಗಣಿಸಲಾಗುವುದು ಎಂದು ಅಮೆರಿಕದ ಅಟಾರ್ನಿ ಪ್ಯಾಟ್ರಿಕ್ ಫಿಟ್ಜ್‌ಗೆರಾಲ್ಡ್ ತಿಳಿಸಿರುವುದಾಗಿ ಪ್ರೊಪಬ್ಲಿಕಾ ವೆಬ್‌ಸೈಟ್ ವರದಿ ಮಾಡಿದೆ.

ಷಿಕಾಗೊ ಕೋರ್ಟ್‌ನಲ್ಲಿ ಫೆಡರಲ್ ಪ್ರಾಸಿಕ್ಯೂಟರ್‌ಗಳು ಸಲ್ಲಿಸಿರುವ ಆರೋಪಪಟ್ಟಿಯಲ್ಲಿರುವ ಪಾಕ್ ಮೂಲದ ಆರು ಮಂದಿಯನ್ನು ಪ್ರತಿವಾದಿಗಳನ್ನಾಗಿಸಿಕೊಳ್ಳುವುದಾಗಿ ಪ್ಯಾಟ್ರಿಕ್ ಹೇಳಿದ್ದಾರೆ.

ಇಕ್ಬಾಲ್ ಪ್ರಸ್ತಾವದ ರಾಜಕೀಯ ಸೂಕ್ಷ್ಮತೆ: ಹೆಡ್ಲಿಯನ್ನು ಈ ಕಾರ್ಯಕ್ಕೆ ಸಿದ್ಧಗೊಳಿಸಿದ ಮತ್ತು ದಾಳಿಯ ರೂಪುರೇಷೆ ಸಿದ್ಧಪಡಿಸಿದ ಐಎಸ್‌ಐನ ಮೇಜರ್ ಇಕ್ಬಾಲ್ ಮೇಲಿನ ಆರೋಪ ರಾಜಕೀಯವಾಗಿ ಸೂಕ್ಷ್ಮವಾಗಿರುವುದರಿಂದ ಅದರ ವಿವರ ಕುರಿತು ಚರ್ಚಿಸಲು ಅವರು ನಿರಾಕರಿಸಿದ್ದಾರೆ.

`ಮುಂಬೈ ದಾಳಿ ಮತ್ತು ಡೆನ್ಮಾರ್ಕ್‌ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ ಪ್ರಮುಖ ಆರೋಪಿಗಳಾದ ಇಲ್ಯಾಸ್ ಕಾಶ್ಮೀರಿ, ಮೇಜರ್ ಇಕ್ಬಾಲ್, ಸಾಜಿದ್ ಮಿರ್, ಅಬ್ದುರ್ ರೆಹಮಾನ್ ಸೈಯದ್ ಮತ್ತಿತರರನ್ನು ವಿಚಾರಣೆಗೆ ಒಳಪಡಿಸಲಿದ್ದೇವೆ ಎಂಬ ಭರವಸೆಯಿದೆ. ಈ ನಿಟ್ಟಿನಲ್ಲಿ ಒಂದೇ ಸಮಯದಲ್ಲಿ ಹೆಜ್ಜೆ ಇರಿಸಬೇಕಿದೆ~ ಎಂದು ಪ್ಯಾಟ್ರಿಕ್ ಹೇಳಿದ್ದಾರೆ.

ಹೆಡ್ಲಿಯ ವಿಚಾರಣೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ಅವರು `ಆತ ಭಾರತದಲ್ಲಿ ದಾಳಿ ನಡೆಸಲು ಗುರುತಿಸಿದ್ದ 34 ಸ್ಥಳಗಳ ವಿವರಗಳನ್ನೂ ನೀಡಿದ್ದಾನೆ~ ಎಂದರು.`ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಹ ಆರೋಪಿ ತಹಾವುರ್ ರಾಣಾ ವಿರುದ್ಧ ಸೂಕ್ತ ಸಾಕ್ಷ್ಯ ದೊರಕದ ಕಾರಣ ಆತ ಅನುಮಾನದ ಲಾಭ ಪಡೆದುಕೊಂಡಿದ್ದಾನೆ.
 
ಆದರೆ ಡೆನ್ಮಾರ್ಕ್ ದಾಳಿಯ ಸಂಚಿನಲ್ಲಿ ಆತ ನೇರವಾಗಿ ಭಾಗಿಯಾಗಿರುವುದಕ್ಕೆ ಇ ಮೇಲ್ ಹಾಗೂ ದೂರವಾಣಿ ಸಂಭಾಷಣೆಗಳು ಪುರಾವೆ ಒದಗಿಸಿವೆ. ಹೆಡ್ಲಿಯ ಸಾಕ್ಷಿಯಲ್ಲದೆಯೂ ಇದಕ್ಕೆ ಸಾಕಷ್ಟು ದಾಖಲೆಗಳಿವೆ. ಆದರೆ ನ್ಯಾಯಾಧೀಶರು ಸ್ವಾಭಾವಿಕ ಪುರಾವೆಗಳಿಗೆ ಒತ್ತು ನೀಡುತ್ತಾರೆ~ ಎಂದು ರಾಣಾ ಮೇಲಿನ ಆರೋಪಗಳನ್ನು ಖುಲಾಸೆಗೊಳಿಸಿದ ಕುರಿತು ನಿರಾಸೆ ವ್ಯಕ್ತಪಡಿಸಿದರು.

ಅಮೆರಿಕದ ದೂರವಾಣಿ ಸಂಖ್ಯೆ ಬಳಕೆ

ಐಎಸ್‌ಐನ ಮೇಜರ್ ಇಕ್ಬಾಲ್ ಭಾರತದಲ್ಲಿ ದಾಳಿ ನಡೆಸಲು ಉದ್ದೇಶಿಸಿರುವ ಸ್ಥಳಗಳ ಸರ್ವೇಕ್ಷಣೆ ನಡೆಸುತ್ತಿದ್ದ ಹೆಡ್ಲಿಯೊಂದಿಗೆ ಮಾತುಕತೆ ನಡೆಸಲು ಅಮೆರಿಕದ ಸೆಲ್ ಫೋನ್ ಸಂಖ್ಯೆಯನ್ನು ಬಳಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಭಾರತದ ಗೂಢಚಾರ ಸಂಸ್ಥೆಗಳ ಕಣ್ತಪ್ಪಿಸಿ ಮಾತನಾಡಲು ಇಕ್ಬಾಲ್ ತಾನು ಭಾರತಕ್ಕೆ ತೆರಳುವ ಮುನ್ನವೇ ನ್ಯೂಯಾರ್ಕ್‌ನ 646 ರಿಂದ ಪ್ರಾರಂಭವಾಗುವ ದೂರವಾಣಿ ಸಂಖ್ಯೆಯನ್ನು ನೀಡಿದ್ದನು. ಇದರಿಂದ ಯಾವುದೇ ಅಡೆತಡೆಯಿಲ್ಲದೆ ಭಾರತದಿಂದ ಆತನೊಂದಿಗೆ ಸಂಪರ್ಕವಿರಿಸಿಕೊಳ್ಳಲು ಸಾಧ್ಯವಾಗಿತ್ತು ಎಂದು ಹೆಡ್ಲಿ ಷಿಕಾಗೊ ಕೋರ್ಟ್‌ಗೆ ತಿಳಿಸಿದ್ದಾನೆ.

ಭಾರತ ಮತ್ತು ಪಾಕ್ ದೇಶಗಳ ನಡುವೆ ನಡೆಯುವ ದೂರವಾಣಿ ಸಂಭಾಷಣೆಗಳನ್ನು ಗುಪ್ತಚರ ಇಲಾಖೆಗಳು ಆಲಿಸುವ ಸಾಧ್ಯತೆ ಇರುವುದರಿಂದ ಈ ವ್ಯವಸ್ಥೆ ಮಾಡಲಾಗಿತ್ತು. ಭಾರತದಲ್ಲಿ ಪ್ರಯಾಣಿಸುವ ವೇಳೆ ಈ ದೂರವಾಣಿ ಸಂಖ್ಯೆಯನ್ನು ಬಳಸಿಕೊಳ್ಳುವಂತೆ ಇಕ್ಬಾಲ್ ಸೂಚಿಸಿದ್ದನು.

2008ರಲ್ಲಿ ಪಾಕ್‌ಗೆ ಹಿಂದಿರುಗಿದ್ದ ಹೆಡ್ಲಿ ಐಎಸ್‌ಐ ಮತ್ತು ಎಲ್‌ಇಟಿ ಮುಖ್ಯಸ್ಥರನ್ನು ಭೇಟಿ ಮಾಡಿ ತನ್ನ ಸರ್ವೇಕ್ಷಣೆಯ ವಿವರಗಳನ್ನು ಸಲ್ಲಿಸಿದ್ದನು. ಭಾರತಕ್ಕೆ ಪ್ರವೇಶಿಸುವ ಮಾರ್ಗದ ಕುರಿತು ಹೆಡ್ಲಿ ಆಯ್ಕೆಯನ್ನು ಒಪ್ಪಿಕೊಂಡಿದ್ದ ಇಕ್ಬಾಲ್ ಪರ್ಯಾಯ ಮಾರ್ಗದ ಬಗ್ಗೆಯೂ ಕೇಳಿದ್ದ.
 
ಮೀನುಗಾರಿಕೆಯ ದೋಣಿಯೊಂದನ್ನು ಸಮುದ್ರದಲ್ಲಿ ತೆಗೆದುಕೊಂಡು ಹೋಗಿ ಬಳಿಕ ಅದನ್ನು ಭಾರತೀಯ ದೋಣಿಗೆ ಬದಲಿಸಿ ಮುಂಬೈಗೆ ತೆರಳುವುದು ಆತನ ಯೋಜನೆಯಾಗಿತ್ತು. ಇದರ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಇಕ್ಬಾಲ್ ಸೂಚಿಸಿದ್ದ.

ಆದರೆ ಸಮುದ್ರದಲ್ಲಿ ನೂರಾರು ಮೈಲಿ ದೋಣಿ ನಡೆಸಬೇಕಿದ್ದು, ಭಾರತದ ಗಡಿಯೊಳಗೆ ಪ್ರವೇಶಿಸಲು ವಿದೇಶಿಯರಿಗೆ ವಿಶೇಷ ಅನುಮತಿ ಬೇಕಿದ್ದರಿಂದ ಅದು ಅಸಾಧ್ಯ ಎಂದು ಆತನಿಗೆ ಮನವರಿಕೆ ಮಾಡಿದ್ದಾಗಿ ಹೆಡ್ಲಿ ಹೇಳಿದ್ದಾನೆ.

ಮುಂಬೈ ನಗರದ ಬೀದಿಗೆ ಸಮೀಪದಲ್ಲಿಯೇ ಇದ್ದರೂ ಸಮುದ್ರ ತೀರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸದ ಕಾರಣ ದೋಣಿಯನ್ನು ಆ ತೀರದಲ್ಲಿಯೇ ನಿಲ್ಲಿಸುವುದು ಸುರಕ್ಷಿತವಾಗಿತ್ತು. ಅಲ್ಲದೆ ಟ್ಯಾಕ್ಸಿ ನಿಲ್ದಾಣವೂ ಹತ್ತಿರವಿದ್ದುದರಿಂದ ಅಂದುಕೊಂಡದ್ದನ್ನು ಸುಲಭವಾಗಿ ಸಾಧಿಸಬಹುದು ಎಂಬುದು ಲೆಕ್ಕಾಚಾರವಾಗಿತ್ತು ಎಂದು ಹೆಡ್ಲಿ ಬಹಿರಂಗಪಡಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT