ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಪ್ರವಾಸೋದ್ಯಮಕ್ಕೆ ಹೊಸ ರಂಗು

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್ ಸರ್ಕಾರ ರಾಜ್ಯದ ಪ್ರವಾಸಿ ತಾಣಗಳನ್ನು ಜಾಗತಿಕವಾಗಿ ಪರಿಚಯಿಸುವ ಸಲುವಾಗಿ ಹಮ್ಮಿಕೊಂಡಿದ್ದ `ಗುಜರಾತ್ ಟ್ರಾವಲ್ ಮಾರ್ಟ್~ (ಜಿಟಿಎಂ) ಎರಡನೇ ಆವೃತ್ತಿಯ ಸಮಾವೇಶವು ಶನಿವಾರ ಸಮಾರೋಪಗೊಂಡಿತು.

ರಾಜಧಾನಿ ಗಾಂಧಿನಗರದಲ್ಲಿರುವ ಮಹಾತ್ಮ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ಜಿಟಿಎಂ ಸಮಾವೇಶದಲ್ಲಿ ದೇಶ- ವಿದೇಶಗಳ ನೂರಾರು ಪ್ರವಾಸೋದ್ಯಮ ಪ್ರವರ್ತಕರು ಭಾಗವಹಿಸಿದ್ದರು. ಸುಮಾರು 50 ಪ್ರದರ್ಶನ ಮಳಿಗೆಗಳು ಇಲ್ಲಿ ನೆಲೆಗೊಂಡಿದ್ದವು.

  ರಾಷ್ಟ್ರದ 18 ರಾಜ್ಯಗಳಿಂದ 200ಕ್ಕೂ ಹೆಚ್ಚು ಪ್ರವಾಸೋದ್ಯಮ ಪ್ರವರ್ತಕರು, ಏಜೆಂಟ್‌ಗಳು, ಹೊಟೇಲ್ ಉದ್ದಿಮೆದಾರರು ಈ ಸಮಾವೇಶಕ್ಕೆ ಆಮಿಸಿದ್ದರು. ಕೇರಳ, ಗೋವಾ, ದೆಹಲಿ, ಕೇಂದ್ರಾಡಳಿತ ಪ್ರದೇಶಗಳಾದ ಡಿಯು ಹಾಗೂ ಲಕ್ಷ  ದ್ವೀಪಗಳು ತಮ್ಮ ತಮ್ಮ ಪ್ರವಾಸಿ ತಾಣಗಳನ್ನು ಪರಿಚಯಿಸಲು ಮಳಿಗೆಗಳನ್ನು ತೆರೆದಿದ್ದವು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಆಯಾಮವಾಗಿರುವ ಆರೋಗ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕದ ನಾರಾಯಣ ಹೃದಯಾಲಯ ಮತ್ತು ಮಣಿಪಾಲ್ ಆಸ್ಪತ್ರೆಗಳು ಪ್ರದರ್ಶನ ಮಳಿಗೆಗಳನ್ನು ಅಲ್ಲಿ ಸ್ಥಾಪಿಸಿದ್ದವು.

 ಆಸ್ಟ್ರೇಲಿಯಾ, ಬಲ್ಗೇರಿಯಾ, ಜರ್ಮನಿ, ಗ್ರೀಸ್, ರಷ್ಯಾ, ಪೋರ್ಚುಗಲ್, ನೆದರ್‌ಲೆಂಡ್ಸ್, ಥಾಯ್ಲೆಂಡ್, ಸ್ವೀಡನ್, ಬ್ರಿಟನ್, ಯುಎಇ, ಜಿಂಬಾಬ್ವೆ, ಮೆಕ್ಸಿಕೊ, ಇಟಲಿ, ಜಪಾನ್, ದಕ್ಷಿಣ ಆಫ್ರಿಕಾ, ಪೋಲೆಂಡ್ ಸೇರಿ 32 ದೇಶಗಳ 90 ಪ್ರವಾಸೋದ್ಯಮ ಪ್ರವರ್ತಕರು ಮೇಳದಲ್ಲಿ ಭಾಗವಹಿಸ್ದ್ದಿದು ವಿಶೇಷ.

ಬುಧವಾರ ಚಾಲನೆಗೊಂಡ ಜಿಟಿಎಂ ಸಮಾವೇಶಕ್ಕೆ ಗುಜರಾತ್ ಪ್ರವಾಸೋದ್ಯಮ ನಿಗಮದ ಆಯುಕ್ತ ಸಂಜಯ್ ಕೌಲ್ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಪುಲ್ ಮಿತ್ರಾ ಮಾತನಾಡಿ, `ಕಳೆದ ವರ್ಷ ನಡೆದ ಜಿಟಿಎಂ ಮೊದಲ ಆವೃತ್ತಿ ಯಶಸ್ವಿಯಾದ ಮೇಲೆ ಸಾಸನ್ ಗಿರ್ (ಏಷ್ಯಾದಲ್ಲೇ ಅತಿ ದೊಡ್ಡ ಸಿಂಹಧಾಮ) ವನ್ಯಜೀವಿ ಧಾಮದ ಸುತ್ತಮುತ್ತ ಭೂಮಿ ಬೆಲೆ ಎಂಟು ಪಟ್ಟು ಹೆಚ್ಚಳ ಆಗಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥದಲ್ಲಿ ಈ ಹಿಂದೆ 36 ಹೊಟೇಲ್‌ಗಳಲ್ಲಿದ್ದವು, ಈಗ 42ಕ್ಕೆ ಏರಿದೆ~ ಎಂದರು.

`ಪ್ರವಾಸೋದ್ಯಮ ಅಭಿವೃದ್ಧಿಯಿಂದಾಗಿ ರಾಜ್ಯದಲ್ಲಿ ನಾನಾ ರೀತಿಯ ಅಭಿವೃದ್ಧಿ ಕಂಡಿದೆ. ಕಚ್ ಜಿಲ್ಲೆಯಲ್ಲಿ ಕರಕುಶಲ ಕಲೆಯನ್ನೇ ನಂಬಿಕೊಂಡಿರುವ ಮೂಲ ನಿವಾಸಿಗಳ ಅನೇಕ ಗ್ರಾಮಗಳಿವೆ. ಇಂತಹ ಒಂದು ಗ್ರಾಮದಲ್ಲಿ ಕಳೆದ ವರ್ಷ 11 ಹೆಣ್ಣು ಮಕ್ಕಳನ್ನು ಪಟ್ಟಣ ಪ್ರದೇಶಗಳಲ್ಲಿ ನೆಲೆಸಿರುವ ವರರಿಗೆ ಕೊಟ್ಟು ಮದುವೆ ಮಾಡಲಾಗಿದೆ. ಇದು ಸಾಧ್ಯವಾಗಿದ್ದು ಪ್ರವಾಸೋದ್ಯಮದಿಂದ ಎಂದು ಈ ಮೂಲ ನಿವಾಸಿಗಳು ಹೇಳಿಕೊಂಡಿದ್ದು ನನಗೆ ಅತೀವ ಖುಷಿ ನೀಡಿತು~ ಎಂದರು.


ಜಿಟಿಎಂ ಸಮಾವೇಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನಸೆಳೆಯುವಂತಹ ದೇಶೀಯ ಸೊಗಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೆವಾಸಿ (ಬಂಜಾರ) ಬುಡಕಟ್ಟಿನವರು ನಡೆಸಿಕೊಟ್ಟ ಕುಣಿತವು ನಿಧಾನ ಗತಿಯ ವಾದ್ಯ ಮೇಳದಿಂದ ಆರಂಭವಾಗಿ ಕ್ರಮೇಣ ಜೋರು ಪಡೆದು ಪ್ರೇಕ್ಷಕರನ್ನು ರಂಜಿಸಿತು.

ಜುನಾಗಡ ಪ್ರದೇಶದಲ್ಲಿರುವ ಸಿದ್ಧಿ ಬುಡಕಟ್ಟು ಜನಾಂಗದವರು ನಡೆಸಿಕೊಟ್ಟ ವಾದ್ಯಗಳ ಹಿಮ್ಮೇಳದ ನೃತ್ಯ ಮೇಳವು ದಕ್ಷಿಣ ಆಫ್ರಿಕಾದ ಮೂಲ ನಿವಾಸಿಗಳ ಕಲೆಯನ್ನು ಹೋಲುತಿತ್ತು. ನಂತರ ಗುಜರಾತ್ ಪ್ರಾದೇಶಿಕ ನೃತ್ಯ ಶೈಲಿಯಾದ ದಾಂಡಿಯಾ ರಾಸ್ ಮತ್ತು ಗರ್ಭಾ ನೃತ್ಯಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT