ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಕಾ ನಿಷೇಧಕ್ಕೆ ಒಕ್ಕೊರಲ ಆಗ್ರಹ

Last Updated 1 ಜೂನ್ 2013, 12:37 IST
ಅಕ್ಷರ ಗಾತ್ರ

ಮೈಸೂರು: ನಗರದ ವಿವಿಧ ಸಂಘ-ಸಂಸ್ಥೆ, ಆಸ್ಪತ್ರೆ, ನರ್ಸಿಂಗ್ ಕಾಲೇಜುಗಳು ಶುಕ್ರವಾರ ವಿಶ್ವ ತಂಬಾಕುರಹಿತ ದಿನಾಚರಣೆ ಆಚರಿಸಿದವು. ಬೈಕ್  ಜಾಥಾ, ಸಮಾರಂಭಗಳ ಮೂಲಕ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಾಮಿ ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ (ವಿ-ಲೀಡ್) ಹಾಗೂ ತಂಬಾಕು ವಿರೋಧಿ ವೇದಿಕೆ ವತಿಯಿಂದ ತಂಬಾಕುರಹಿತ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾ ನಡೆಯಿತು. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಅರಸು ರಸ್ತೆ, ಧನ್ವಂತರಿ ರಸ್ತೆ, ದಿವಾನ್ಸ್ ರಸ್ತೆಯ ಮೂಲಕ ಜೆ.ಕೆ. ಮೈದಾನ ಸೇರಿತು. ವಿವಿಧ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು `ತಂಬಾಕು ಸೇವಿಸದೆ ಮಾದರಿ ವ್ಯಕ್ತಿಗಳಾಗಿ', `ಹದಿಹರೆಯದಲ್ಲಿ ತಂಬಾಕು ಸೇವನೆ ಅಪಾಯಕಾರಿ' ಭಿತ್ತಿಫಲಕ ಹಿಡಿದು ಜಾಗೃತಿ ಮೂಡಿಸಿದರು. ಮೆರವಣಿಗೆಯೊಂದಿಗೆ ಸಾಗಿದ `ಸಿಗರೇಟ್' ಪ್ರತಿಕೃತಿ ಹೊಗೆರಹಿತ ಧೂಮಪಾನದ ಅಪಾಯಗಳನ್ನು ಸಾರಿತು.

ಗುಟ್ಕಾ ನಿಷೇಧಕ್ಕೆ ಒತ್ತಾಯ:
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಆರ್. ಬಾಲಸುಬ್ರಹ್ಮಣ್ಯಂ, `ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಗುಟ್ಕಾ ನಿಷೇಧ ಮಾಡುವ ಕುರಿತು ಸರ್ಕಾರ ಪದೇ ಪದೇ ಹೇಳಿಕೆ ನೀಡುತ್ತಿದೆ. ಆದರೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ಹಿಂದೇಟು ಹಾಕುತ್ತಿದೆ. ಈ ಬಾರಿಯಾದರೂ ಗುಟ್ಕಾ ನಿಷೇಧದ ಘೋಷಣೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ಪ್ರದರ್ಶಿಸಬೇಕು' ಎಂದು ಒತ್ತಾಯಿಸಿದರು.

`ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕಿಂತ ಅದರಿಂದ ಬರುವ ರೋಗಗಳಿಗೆ ಹೆಚ್ಚು ಹಣ ಖರ್ಚಾಗುತ್ತಿದೆ. ಧೂಮಪಾನ, ಗುಟ್ಕಾ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುವ ರೋಗಿಗಳಿಗೆ ಸರ್ಕಾರದ ಬೊಕ್ಕಸದಿಂದ ಹಣ ಖರ್ಚು ಮಾಡುವ ಪರಿಸ್ಥಿತಿ ಇದೆ. ಇದನ್ನು ಅರಿತು ಸರ್ಕಾರ ತಂಬಾಕು ಉತ್ಪನ್ನಗಳನ್ನು ನಿಷೇಧಿಸಬೇಕು. ಸರ್ಕಾರಿ ನೌಕರರು ದುಶ್ಚಟಗಳ ದಾಸರಾಗುವುದನ್ನು ಬಿಡಬೇಕು' ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಮಾತನಾಡಿ, `ಸರ್ಕಾರ 1987ರಿಂದ ತಂಬಾಕುರಹಿತ ದಿನಾಚರಣೆಯನ್ನು ಅಚರಿಸಲಾಗುತ್ತಿದೆ. ದೇಶದ 19 ರಾಜ್ಯಗಳಲ್ಲಿ ಈಗಾಗಲೇ ಗುಟ್ಕಾ ನಿಷೇಧಿಸಲಾಗಿದೆ. ಕರ್ನಾಟಕದಲ್ಲೂ ಇದನ್ನು ಜಾರಿಗೆ ತಂದರೆ ತಂಬಾಕು ಸೇವನೆಯಿಂದ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಲಿದೆ' ಎಂದರು.

ಜಾಗೃತಿ ಜಾಥಾ: ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆ, ರೋಟರಿ ಮೈಸೂರು ಸಂಸ್ಥೆಯ ವತಿಯಿಂದ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಲಾಯಿತು. ಭಾರತೀಯ ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ. ಶರತ್‌ಕುಮಾರ್ ಜಾಥಾಕ್ಕೆ ಚಾಲನೆ ನೀಡಿದರು.
ಇರ್ವಿನ್ ರಸ್ತೆಯ ಭಾರತ್ ಡಯಾಗ್ನೋಸ್ಟಿಕ್ ಸೆಂಟರ್ ಬಳಿಯಿಂದ ಹೊರಟ ಜಾಥಾ ಅಶೋಕ ರಸ್ತೆಯ ಮೂಲಕ ಅರಮನೆಯ ಎದುರಿನ ಚಾಮರಾಜೇಂದ್ರ ವೃತ್ತ ತಲುಪಿತು. ವಿನಾಯಕ ಜ್ಞಾನ ವಿದ್ಯಾಶಾಲಾ, ಬಿಜಿಎಸ್ ಆಸ್ಪತ್ರೆ, ಗೋಪಾಲಗೌಡ ಶಾಂತವೇರಿ ನರ್ಸಿಂಗ್ ಹೋಮ್, ಸಿಎಸ್‌ಐ ಆಸ್ಪತ್ರೆಯ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯ ವೈದ್ಯಕೀಯ ಮುಖ್ಯಸ್ಥ ಡಾ.ಎಂ.ಎಸ್. ವಿಶ್ವೇಶ್ವರ್, ಬಿ.ಎಸ್. ರವಿಕುಮಾರ್ ಹಾಜರಿದ್ದರು.

ಬೈಕ್ ಜಾಥಾ: ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ನಗರದಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ರ‌್ಯಾಲಿ ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಅರಿವು ಮೂಡಿಸಲಾಯಿತು. ಬಸುದೇವ ಸೋಮಾನಿ ಕಾಲೇಜಿನ ಪ್ರಾಧ್ಯಾಪಕ ವಿಜಯಕುಮಾರ್ ರ‌್ಯಾಲಿಗೆ ಚಾಲನೆ ನೀಡಿದರು. ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್, ಪಾಲಿಕೆ ಸದಸ್ಯರಾದ ಸ್ವಾಮಿ, ಮಹದೇವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT