ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿ ಉತ್ಸವ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ದಿವ್ಯ ಒಳಮನದ ಮನೆ, ನಮ್ಮ ಪುನಶ್ಚೇತನದ ಗಣಿ. ಪರಂಪರೆಯ ಭಂಡಾರ. ಸಂಸ್ಕೃತಿಯ ನೆಲೆಯೇ ಗುಡಿ. ಅದು ನಮ್ಮ ಧಾರ್ಮಿಕ ಪರಂಪರೆಯ ಕುರುಹು. ಅದರ ಬೆಳಕಿನಲ್ಲಿಯೇ ಶುಕ್ರವಾರದಿಂದ ಮಾರ್ಚ್ 19ರ ವರೆಗೂ ಪ್ರತಿ ವಾರಾಂತ್ಯ ನಗರದ 21 ದೇವಾಲಯಗಳಲ್ಲಿ ‘ಗುಡಿಯ ಸಂಭ್ರಮ’ ಉತ್ಸವ ನಡೆಯಲಿದೆ.

ಇದರ ಅಂಗವಾಗಿ ನಾಡಿನ ಸೌಂದರ್ಯ ಪ್ರಜ್ಞೆ ಬಿಂಬಿಸುವ ಜಾನಪದ, ಬುಡಕಟ್ಟು ಜನಾಂಗಗಳ ಅಲಂಕಾರದಿಂದ ಅಪೂರ್ವ ವಾಸ್ತುಶಿಲ್ಪದ ಗುಡಿಗಳನ್ನು ಸಿಂಗರಿಸಲಾಗುತ್ತದೆ. ಗುಡಿಗಳಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಕಲೆ, ದಾಸರ ಪದ, ಬೊಂಬೆಯಾಟ ಮತ್ತು ಹರಿಕಥೆ ಮುಂತಾದವುಗಳು ಶ್ರವಣಸುಖ ನೀಡಲಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾವಿದರು, ನಾಗರಿಕ ಹಾಗೂ ಭಕ್ತ ಸಮುದಾಯಗಳ ಸ್ಥಳೀಯ ಪ್ರತಿಭೆಗಳೂ ಸೇರಿದಂತೆ ಸುಮಾರು 200 ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೃಷ್ಟಿಯ ಸಮಸ್ತದಲ್ಲೂ ದಿವ್ಯ ಅನುಭೂತಿ. ಶತಮಾನಗಳಿಂದ ಕಾಲದ ಪಲ್ಲಟಗಳನ್ನು ಅನುಭವಿಸಿ ನಮ್ಮವರೆಗೂ ಹರಿದುಬಂದ ‘ನಮ್ಮ’ ಸಂಸ್ಕೃತಿ, ಕಿವಿದುಂಬುವ ಮಂತ್ರಘೋಷ, ಪ್ರವಚನ, ಕಣ್ಣಿಗೆ ತಂಪೆರೆಯುವ ದರ್ಶನ- ಪ್ರದರ್ಶನ ಕಲೆ, ಆಧ್ಯಾತ್ಮ ಆನಂದದ ಅಲೆ ಆವರಿಸಿಕೊಳ್ಳಲಿದೆ.

ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಜ್ಞಾನಕೇಂದ್ರದ ಮೂಲನಿವಾಸ ದೇವಳ. ಸರ್ವಾಂತರ್ಯಾಮಿಯ ನೆಲೆಗೆ ಪ್ರತಿಯೊಬ್ಬರಿಗೂ ಪ್ರವೇಶ. ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನ, ನಂದೀತೀರ್ಥ ದೇವಸ್ಥಾನ, ವಿ.ವಿ.ಪುರಂನ ಲಕ್ಷ್ಮೀ ವೆಂಕಟರಮಣ ಸ್ವಾಮಿ, ದೊಮ್ಮಲೂರಿನ ಶ್ರೀದೇವಿ ಭೂದೇವಿ ಸಮೇತ ಚೊಕ್ಕನಾಥ ಸ್ವಾಮಿ, ಬಸವನಗುಡಿಯ ದೊಡ್ಡ ಬಸವಣ್ಣ, ಗವಿಪುರಂ ಮತ್ತು ಹನುಮಂತನಗರದ ಗುಡ್ಡದ ಆಂಜನೇಯ, ಕೋಟೆ ಪ್ರಸನ್ನ ವೆಂಕಟರಮಣಸ್ವಾಮಿ ಮುಂತಾದ ದೇವಸ್ಥಾನಗಳಲ್ಲೆಲ್ಲ ಮಾರ್ಚ್19ರ ವರೆಗಿನ ಶುಕ್ರವಾರ, ಶನಿವಾರ, ಭಾನುವಾರದ ಸಂಜೆಗಳು ಸಂಗೀತ, ಸಾಹಿತ್ಯ, ಸಂಸ್ಕೃತಿಯ ಪರಿಮಳದ ಗಂಧ ಧೂಪ ಪಸರಿಸಲಿವೆ.

ಮುಜರಾಯಿ ಇಲಾಖೆ, ಬಿಬಿಎಂಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಡು ಮಲ್ಲೇಶ್ವರ ಗೆಳೆಯರ ಬಳಗದ ನೆರವು, ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಹೆರಿಟೇಜ್ (ಲಾಭರಹಿತ ಪಾರಂಪರಿಕ ಸಂಸ್ಕೃತಿ ಸೇವಾ ಸಮಿತಿಯ ಸಲಹಾ ಮಂಡಳಿ) ಸಂಸ್ಥೆ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದೆ.

ಉದ್ದೇಶ
ಗುಡಿಗಳೆಲ್ಲ ನಮ್ಮ ಕಲೆ- ಸಂಸ್ಕೃತಿಯ ಕಲಿಕೆ, ಪ್ರದರ್ಶನದ ಕೇಂದ್ರಗಳಂತಿದ್ದವು. ಈಗ ಕಲೆಗೂ ಗುಡಿಗಳಿಗೂ ಅಂತರ ಹೆಚ್ಚಿ ಒಂದಕ್ಕೊಂದು ಸಂಬಂಧವಿಲ್ಲದಂತಾಗಿದೆ. ನಮ್ಮ ಪರಂಪರೆಯ ಪ್ರತೀಕವೆಂಬ ಭಾವವೂ ಅಭಿಮಾನವೂ ಇಲ್ಲದಂತಾಗಿ ಅವುಗಳ ಸ್ವಚ್ಛತೆ, ನಿರ್ವಹಣೆ, ಸಂರಕ್ಷಣೆಯ ಕಾಳಜಿಯೂ ಸುತ್ತಮುತ್ತಲಿನವರಲ್ಲಿ ಕಂಡುಬರುತ್ತಿಲ್ಲ. ಸಾವಿರ ವರ್ಷಗಳಷ್ಟು ಹಳೆಯ ದೊಮ್ಮಲೂರಿನ ದೇವಸ್ಥಾನದ ವಿಶೇಷ ಎಷ್ಟು ಜನ ಬೆಂಗಳೂರಿಗರಿಗೆ ಗೊತ್ತಿದೆ? ಇದೆಲ್ಲದರ ಅರಿವು ಮೂಡಿಸುವ ಉದ್ದೇಶದಿಂದಲೇ ಮೊದಲ ಬಾರಿಗೆ ನಗರದಲ್ಲಿ ‘ಗುಡಿ ಉತ್ಸವ’ ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ‘ಹೆರಿಟೇಜ್’ನ ನಿರ್ದೇಶಕಿ- ಕಾರ್ಯದರ್ಶಿ ವಿಜಯಲಕ್ಷ್ಮಿ ವಿಜಯಕುಮಾರ್.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT