ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿ ಕೈಗಾರಿಕೆಗೆ ವಿಪತ್ತು ತಂದ ಯಂತ್ರ

Last Updated 25 ಜನವರಿ 2011, 9:45 IST
ಅಕ್ಷರ ಗಾತ್ರ

ಸಾಗರ: ಮನುಷ್ಯ ಯಂತ್ರಗಳ ಗುಲಾಮ ಆಗಿರುವುದರಿಂದ ನೇಕಾರಿಕೆ ಹಾಗೂ ಗುಡಿ ಕೈಗಾರಿಕೆಗಳಿಗೆ ವಿಪತ್ತು ಎದುರಾಗಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ವಿಷಾದಿಸಿದರು. ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ಭಾನುವಾರ ಮುಕ್ತಾಯಗೊಂಡ ಚರಕ ಉತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, ಜಾಗತೀಕರಣದಿಂದ ಮೂಲೆಗುಂಪಾಗಿರುವ ಗುಡಿ ಕೈಗಾರಿಕೆಗಳಿಗೆ ಪುನಃಶ್ಚೇತನ ನೀಡುವ ಅಗತ್ಯವಿದೆ ಎಂದರು.

ಹೆಣ್ಣು ಮಕ್ಕಳ ಕೃತ್ವತ್ವ ಶಕ್ತಿಯಿಂದಲೇ ನಮ್ಮ ನಾಡಿನ ಅಂತಃಸತ್ವ ಇನ್ನೂ ಉಳಿದಿರುವುದು. ಒಳ್ಳೆಯ ಗಂಡಂದಿರು ಅಂತ ಯಾರಾದರೂ ಇದ್ದರೆ ಅದಕ್ಕೆ ಅವರ ಹೆಂಡತಿಯರೇ ಕಾರಣ. ಗಂಡಸರಲ್ಲಿ ಉಳಿತಾಯ ಮನೋಭಾವ ಬೆಳೆದಿರುವುದು ಮಹಿಳೆಯರಿಂದಲೇ, ಚರಕ ಸಂಸ್ಥೆಯ ಯಶಸ್ಸಿನ ಹಿಂದೆ ಕೂಡ ಹೆಣ್ಣು ಮಕ್ಕಳ ಶ್ರಮ ಅಡಗಿದೆ ಎಂದು ಹೇಳಿದರು.

ಸರ್ಕಾರಕ್ಕೆ ಕೈಕಸುಬುಗಳನ್ನೇ ಆಧರಿಸಿರುವ ನೇಕಾರಿಕೆ, ಕುಂಬಾರಿಕೆ ಮುಂತಾದ ಸಣ್ಣ ಕೈಗಾರಿಕೆಗಳನ್ನು ಉಳಿಸುವ ಇಚ್ಛಾಶಕ್ತಿ ಇರುವಂತೆ ಕಾಣುತ್ತಿಲ್ಲ. ಭಾಗ್ಯಲಕ್ಷ್ಮೀ ಯೋಜನೆ ಅಡಿ ಮಹಿಳೆಯರಿಗೆ ಹಂಚಲು ಗುಜರಾತ್‌ನಿಂದ ಸೀರೆ ಖರೀದಿಸುವ ಬದಲು ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ನೇಕಾರರಿಂದಲೇ ಖರೀದಿಸಬಹುದಿತ್ತು.

ಇಂತಹ ಸಣ್ಣ ವಿಷಯಗಳು ಸರ್ಕಾರಕ್ಕೆ ಹೊಳೆಯದೇ ಇರುವುದು ವಿಷಾದದ ಸಂಗತಿ ಎಂದರು.ಸಮಾರೋಪ ಭಾಷಣ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಈ ಬಾರಿಯ ಚರಕ ಉತ್ಸವವನ್ನು ರವೀಂದ್ರನಾಥ ಟಾಗೋರ್‌ರ 150ನೇ ಜಯಂತುತ್ಸವದ ನೆನಪಿನಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಏಕೆಂದರೆ ಗ್ರಾಮೀಣ ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಟಾಗೋರರು ಮಾಡಿದ ಪ್ರಯೋಗದ ಮಾದರಿ ಚರಕ ಸಂಸ್ಥೆಯ ರೂಪದಲ್ಲಿ ಯಶಸ್ಸು ಕಂಡಿದೆ ಎಂದು ಹೇಳಿದರು.

ಕಾಯಕದ ಮಹತ್ವವನ್ನು ತಿಳಿಸುವ ಜತೆಗೆ ಸದಭಿರುಚಿಯನ್ನು ಬೆಳೆಸುವ ಚರಕ ಸಂಸ್ಥೆಯ ಸಂಯೋಜನೆ ಅಪರೂಪದ ಯೋಚನೆಯಾಗಿದೆ. ತನ್ಮೂಲಕ ಈ ಭಾಗದ ಹಳ್ಳಿಯ ಬಡವರಿಗೆ ಅವಕಾಶದ ಬಾಗಿಲು ತೆರೆದಂತಾಗಿದೆ. ಇಂತಹ ಅವಕಾಶ ಎಲ್ಲಾ ಹಳ್ಳಿಗಳಿಗೂ ದೊರೆಯುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಚರಕ ಸಂಸ್ಥೆ ಪ್ರತಿವರ್ಷ ವಿತರಿಸುವ ‘ಕಾಯಕ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹೊಲಿಗೆ ವಿಭಾಗದಲ್ಲಿ ನಾಗಶ್ರೀ ವರದಾಮೂಲ, ಸುಜಾತಾ ಭೀಮನಕೋಣೆ, ಕೈಮಗ್ಗ ವಿಭಾಗದಲ್ಲಿ ವನಜಾಕ್ಷಿ ಮುಂಡಿಗೇಸರ, ಇತರ ವಿಭಾಗದಲ್ಲಿ ಎಂ. ನಾಗರತ್ನಾ, ಗುಂಪು ಪ್ರಶಸ್ತಿ ವಿಭಾಗದಲ್ಲಿ ಸತೀಶ್, ಧರ್ಮ, ರಾಘು, ಸಂದೀಪ್ ಪ್ರಶಸ್ತಿ ಸ್ವೀಕರಿಸಿದರು.

ಚರಕ ಸಂಸ್ಥೆಯ ಅಧ್ಯಕ್ಷೆ ನಾಗರತ್ನಾ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯ ಸಂಗೀತ ಮತ್ತು ನಾಟಕ ವಿಭಾಗದ ಮಾಜಿ ನಿರ್ದೇಶಕ ಕೃಷ್ಣಮೂರ್ತಿ ಹಾಜರಿದ್ದರು. ಸುಜಾತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಹಾಲಕ್ಷ್ಮೀ ಸ್ವಾಗತಿಸಿದರು. ದೇವಕಿ ವಂದಿಸಿದರು. ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT