ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸಲುರಹಿತ ಜಿಲ್ಲೆ ಪರಿವರ್ತನೆಗೆ ಸಂಕಲ್ಪ

Last Updated 17 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

ಹರಪನಹಳ್ಳಿ: ದಾವಣಗೆರೆ ಜಿಲ್ಲೆಯನ್ನು ಗುಡಿಸಲುರಹಿತ ಜಿಲ್ಲೆಯಾಗಿ ಪರಿವರ್ತಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಜಿಲ್ಲೆ ಎಂಬ ಹೆಗ್ಗಳಿಕೆಗೆ ಹೊಸರೂಪ ನೀಡುವುದು ನಮ್ಮ ಮುಂದಿರುವ ಗುರಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಆಶಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಿರೇಮೇಗಳಗೇರಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಸತಿರಹಿತ ಜನಸಾಮಾನ್ಯರ ಬದುಕು ಹಸನುಗೊಳಿಸುವ ಹಾಗೂ ತಲೆಯ ಮೇಲೊಂದು ಸೂರು ಒದಗಿಸುವ ಮೂಲಕ ಅವರ  ನೆಮ್ಮದಿಯ ಬದುಕಿಗೆ ಬಿಜೆಪಿ ಸರ್ಕಾರ ಸಹಾಯಹಸ್ತ ಚಾಚಿದೆ. ಗುಡಿಸಲು ವಾಸವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮೂಲಕ ಗುಡಿಸಲುರಹಿತ ಜಿಲ್ಲೆಯನ್ನಾಗಿ ರೂಪಿಸಲು 38 ಸಾವಿರ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ  ಹರಪನಹಳ್ಳಿ ತಾಲ್ಲೂಕಿನಗೆ 5ಸಾವಿರ ಮನೆಗಳು ಮಂಜೂರಾಗಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ್ಙ 3 ಸಾವಿರ ಕೋಟಿ  ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಬಯಲುಸೀಮೆಯ ಈ ಭಾಗದ ರೈತರ ಜೀವನಾಡಿಯಾಗಬಲ್ಲ ಉದ್ದೇಶಿತ ಗರ್ಭಗುಡಿ ಬ್ಯಾರೇಜ್ ಯೋಜನೆಯ ಕಾಮಗಾರಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸಬೇಕೆಂಬುದು ತಮ್ಮ ಹಾಗೂ ಶಾಸಕ ಕರುಣಾಕರರೆಡ್ಡಿ ಅವರ ಕನಸಾಗಿದ್ದು, ಈಗಾಗಲೇ ಜಲಸಂಪನ್ಮೂಲ ಇಲಾಖೆಯಿಂದ ಮಂಜೂರಾತಿ ದೊರಕಿದೆ.

ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತುಕೊಳ್ಳಲಾಗುವುದು. ಜತೆಗೆ, ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೆರೆಗಳು ಮಳೆಯ ಜೂಜಾಟದಿಂದ ಸೊರಗಿ ಹೋಗಿವೆ. ಅವುಗಳಿಗೆ ಜೀವತುಂಬುವ ನಿಟ್ಟಿನಲ್ಲಿ ತುಂಗಭದ್ರಾ ನದಿಯ ನೀರು ತುಂಬಿಸುವ ಯೋಜನೆಯ ಪ್ರಕ್ರಿಯೆಯೂ ಚಾಲ್ತಿಯಲ್ಲಿದ್ದು, ಶೀಘ್ರದಲ್ಲಿಯೇ ಮಂಜೂರಾತಿ ದೊರಕುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಾಗೂ ಅವರ ಕುಟುಂಬಗಳ ಆರ್ಥಿಕ ಪುನಃಶ್ಚೇತನಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಹಿಂದಿನ ಸರ್ಕಾರಗಳು ಕೇವಲ ್ಙ 800 ಕೋಟಿಗಳ ಅನುದಾನ ನೀಡುತ್ತಿದ್ದವು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಮಾಜ ಕಲ್ಯಾಣ ಇಲಾಖೆಗೆ ಸುಮಾರು ್ಙ 4,200 ಕೋಟಿ ಬಿಡುಗಡೆ ಮಾಡಿ, ಪರಿಶಿಷ್ಟ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದರು.

ಪಂಚಾಯತ್ ವ್ಯಾಪ್ತಿಯ ಚಿಕ್ಕಮೇಗಳಗೇರಿ, ವಡ್ಡಿನಹಳ್ಳಿ ಗ್ರಾಮಕ್ಕೆ ತಲಾ ್ಙ 3ಲಕ್ಷ, ಪೋತಲಕಟ್ಟೆ ಗ್ರಾಮಕ್ಕೆ ್ಙ 2ಲಕ್ಷ ಹಾಗೂ ಹಿರೇಮೇಗಳಗೇರಿ ಗ್ರಾಮಕ್ಕೆ ್ಙ 5ಲಕ್ಷ  ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಅವರು, ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಿ ಎಂದು ಸೂಚಿಸಿದರು.

 ತಾ.ಪಂ. ಸದಸ್ಯೆ ಹನುಮಕ್ಕಾ, ಗ್ರಾ.ಪಂ. ಅಧ್ಯಕ್ಷ ಮಂಜಣ್ಣ, ಮುಖಂಡರಾದ ಆರುಂಡಿ ನಾಗರಾಜ್, ಮಹಾಬಲೇಶ್ವರಗೌಡ, ಗಿರಿರಾಜರೆಡ್ಡಿ, ಡಾ.ರಮೇಶ್‌ಕುಮಾರ್, ತಾ.ಪಂ. ಮಾಜಿ ಉಪಾಧ್ಯಕ್ಷ ಎಸ್. ಹನುಮಂತಪ್ಪ, ಗ್ರಾಮಸ್ಥರಾದ ನಾಗಪ್ಪ, ಮಲ್ಲಜ್ಜರ ನಾಗಪ್ಪ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT