ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗಳಲೆ ಜಾತ್ರೆಗೆ 3 ಸಾವಿರ ಜಾನುವಾರು

Last Updated 8 ಫೆಬ್ರುವರಿ 2012, 8:35 IST
ಅಕ್ಷರ ಗಾತ್ರ

ಶನಿವಾರಸಂತೆ: ಬುಧವಾರ ತೆರೆ ಬೀಳಲಿರುವ ಗುಡುಗಳಲೆಯ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವಕ್ಕೆ ಸುಮಾರು ಮೂರು ಸಾವಿರ ಜಾನುವಾರುಗಳು ಬಂದಿವೆ.

ಕಳೆದ 14 ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಜಾನುವಾರಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.  ಆದರೆ ಜಾನುವಾರು ಕೊಳ್ಳುವವರ ಉತ್ಸಾಹ ಕಡಿಮೆಯಾಗಿಲ್ಲ.
ಜೋಡಿ ಎತ್ತುಗಳು 20 ಸಾವಿರ ರೂಪಾಯಿಯಿಂದ 65 ಸಾವಿರ ರೂಪಾಯಿಯವರೆಗೆ ಬೆಲೆ ಪಡೆದುಕೊಂಡಿವೆ.

ಜಾತ್ರೆಯಲ್ಲಿ ಜನರ ಓಡಾಟವೂ ಅಧಿಕವಾಗಿದೆ. ಹೋಟೆಲ್ ಮತ್ತಿತರ ವ್ಯಾಪಾರ ಮಳಿಗೆಗಳಿಗೂ ಭರ್ಜರಿ ವ್ಯಾಪಾರವಾಗುತ್ತಿದೆ. ಪ್ರತಿದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿದ್ಯಾಸಂಸ್ಥೆಗಳು ನೀಡಿದ ಮನೋರಂಜನಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟಗಳು ಜನರ ದಂಡು ಹೆಚ್ಚಾಗಲು ಕಾರಣವಾಯಿತು.

ಈ ಸಲದ ಜಾತ್ರೆಗೆ ಹಾಸನ ಜಿಲ್ಲೆಯ ಅರಕಲಗೂಡು ಮತ್ತಿತರೆಡೆಗಳಿಂದ ಹಾಗೂ ಸಕಲೇಶಪುರ ತಾಲ್ಲೂಕಿನಿಂದಲೂ ರಾಸುಗಳು ಬಂದಿವೆ. ಅರಕಲಗೂಡು ತಾಲ್ಲೂಕಿನ ಇಟಾಪಟ್ಟಣದ ರೈತರಾದ ತಮ್ಮಣ್ಣಿ ಹಾಗೂ ಶಿವಣ್ಣ ಜಾತ್ರೆಯಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ತಂದಿರುವ 65 ಸಾವಿರ ರೂಪಾಯಿ ಬೆಲೆ ಬಾಳುವ 6 ಹಲ್ಲುಗಳ 5 ವರ್ಷದ ಜೊತೆ ರಾಸುಗಳೇ ಜಾತ್ರೆಯಲ್ಲಿ ಅತ್ಯಧಿಕ ಬೆಲೆ ಬಾಳುವ ರಾಸುಗಳಾಗಿವೆ. ಸುಂದರವಾದ ರಾಸುಗಳು ಜನಮನ ಸೆಳೆದಿವೆ. ಹೊಸೂರು ಗ್ರಾಮ ಪಂಚಾಯಿತಿಯ ಸುಂಡುವಳ್ಳಿ ಗ್ರಾಮದ ರೈತ ಎಸ್.ಪಿ.ಜಯಪ್ಪ ಸಹ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ತಂದಿರುವ 36 ಸಾವಿರ ರೂಪಾಯಿ ಬೆಲೆ ಬಾಳುವ ಹಲ್ಲುಗಳೇ ಮೂಡದ 8 ತಿಂಗಳ ಅಪರೂಪದ ಉತ್ತಮ ತಳಿಯ ಜೊತೆ ಹೋರಿಕರುಗಳು ಅತ್ಯಂತ ಚಿಕ್ಕವಾಗಿದ್ದು ಜನರನ್ನು ಬಹಳವಾಗಿ ಆಕರ್ಷಿಸುತ್ತಿವೆ.

`ಜಾತ್ರಾ ಮೈದಾನದಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಬಿಸಿಲು ಜಾಸ್ತಿ. ದೂರದೂರದಿಂದ ರೈತರು ರಾಸುಗಳನ್ನು ಜಾತ್ರೆಗೆ ಕರೆತರುತ್ತಾರೆ. ಅಸಲು ಗಿಟ್ಟುವುದಿಲ್ಲ.ಬಹುಮಾನಕ್ಕೆ ಉತ್ತಮ ತಳಿಯ ಜಾನುವಾರುಗಳನ್ನು ಗುರುತಿಸುವುದಿಲ್ಲ.

ಪ್ರಶಸ್ತಿಪತ್ರದೊಂದಿಗೆ ಯೋಗ್ಯ ಬಹುಮಾನಗಳನ್ನು ಕೊಟ್ಟರೆ ರೈತರು ಬರುತ್ತಾರೆ. ಹೆಸರಿಗೆ ತಕ್ಕಂತೆ ಉತ್ತಮ ಜಾನುವಾರುಗಳಿಗೆ ಬೆಲೆ ಸಿಕ್ಕದಿದ್ದರೆ ಜಾನುವಾರುಗಳ ಜಾತ್ರೆ ಎಂಬ ಹೆಸರಿಗೆ ಅರ್ಥವಿಲ್ಲ~ ಎನ್ನುತ್ತಾರೆ ರೈತರಾದ ಯೋಗೇಶ್, ಸದಾಶಿವ, ಶಾಂತಮಲ್ಲಪ್ಪ ರಾಜಪ್ಪ ಮತ್ತಿತರರು.

ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 15 ದಿನಗಳ ಕಾಲ ಈ ಜಾತ್ರೆ ನಡೆಯುತ್ತಿದ್ದು; ವಿವಿಧ ಮನೋರಂಜನಾ ಪ್ರದರ್ಶನಗಳು, ವೈವಿಧ್ಯಮಯ ತಿಂಡಿ ತಿನಿಸುಗಳ ಮಳಿಗೆಗಳು, ಸರ-ಬಳೆ ಇತ್ಯಾದಿ ಶೃಂಗಾರ ಸಾಧನಗಳ ಅಂಗಡಿಗಳು ಮಕ್ಕಳು ಮಹಿಳೆಯರನ್ನು ಬಹಳ ಆಕರ್ಷಿಸಿದವು. ಜಾತ್ರಾ ಮೈದಾನದ 2 ದೇವಾಲಯಗಳು ಜಾತ್ರಾ ಸಮಯದಲ್ಲಿ ಮಾತ್ರ ದೀಪ ಬೆಳಗುತ್ತವೆ.

ಇಲ್ಲಿಯ ಮೂಲಸೌಲಭ್ಯಗಳ ಬಗ್ಗೆ ಜನಪ್ರತಿನಿಧಿಗಳಿಂದ ಇಲ್ಲಿಯವರೆಗೆ ಕೇವಲ ಭರವಸೆಗಳು ಮಾತ್ರ ಸಿಕ್ಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT