ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡೇಕೇರಿ ಜನರ ಅರಣ್ಯರೋದನ

Last Updated 4 ಜುಲೈ 2012, 8:15 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಗುಡ್ಡೇ ಕೇರಿ ಗ್ರಾಮ ಮೂಲ ಸೌಲಭ್ಯದಿಂದ ವಂಚಿತವಾಗಿದೆ.

ಗ್ರಾಮದಲ್ಲಿ 30 ಕುಟುಂಬ ವಾಸವಾಗಿವೆ. ಸೌಕರ್ಯ ಸಿಗದೆ ಇಲ್ಲಿನ ಜನರು ನಾಗರಿಕ ಬದುಕಿನಿಂದ ಹೊರಗಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿದ್ದರು ಇವರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಆದರೆ, ಇಂದಿಗೂ ಪುನರ್ವಸತಿ ಸೌಲಭ್ಯ ಕಲ್ಪಿಸಿಲ್ಲ.

ಕುಡಿಯುವ ನೀರಿಗಾಗಿ ಗ್ರಾಮದಲ್ಲಿರುವ ಏಕೈಕ ಕೈಪಂಪ್ ಅನ್ನು ಅವಲಂಬಿಸಿದ್ದಾರೆ. ಜನ- ಜಾನುವಾರು ಕುಡಿಯುವ ನೀರಿಗಾಗಿ ಈ ಉಪ್ಪು ನೀರನ್ನೇ ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಿರುನೀರು ಸರಬರಾಜು ಯೋಜನೆ ಯಡಿ ಕೊಳವೆಬಾವಿ ಕೊರೆಯಿಸಿ 3 ತೊಂಬೆ ಅಳವಡಿಸಲಾಗಿದೆ. ಆದರೆ, ಎರಡು ವರ್ಷಗಳಿಂದಲೂ ಸಂಪರ್ಕ ಕಲ್ಪಿಸಿಲ್ಲ.

ಈ ಹಿಂದೆ ಸಮಗ್ರ ಗಿರಿಜನ ಉಪ ಯೋಜನೆಯಡಿ ನಿರ್ಮಿಸಿದ್ದ ಮನೆಗಳ ಹೆಂಚುಗಳು ಒಡೆದಿವೆ. ತೀರುಗಳು ಬಾಗಿದ್ದು, ಕಿಟಕಿ ಹಾಗೂ ಬಾಗಿಲು ಮುರಿದು ಹೋಗಿವೆ. ಆದರೆ, ಪುನರ್ವಸತಿ ಪ್ಯಾಕೇಜ್‌ನಡಿ ಸುಸಜ್ಜಿತ ವಾದ ಮನೆ ನಿರ್ಮಿಸಿ ಕೊಟ್ಟಿಲ್ಲ. ಪ್ರಸ್ತುತ ಶಿಥಿಲಗೊಂಡಿರುವ ಮನೆಗಳ ್ಲಲಿಯೇ ಜನರು ಸಂಕಷ್ಟದ ಜೀವನ ಸಾಗಿಸುವಂತಾಗಿದೆ.

2010-11ನೇ ಸಾಲಿನಲ್ಲಿ ಜೇನು ಕುರುಬ ವಿಶೇಷ ಯೋಜನೆಯಡಿ ಗ್ರಾಮದ ಶಿವಮ್ಮ, ನಾಗಮ್ಮ, ಬಸಮ್ಮ, ಬೆಳ್ಳಮ್ಮ ಮತ್ತು ಮಹದೇವಮ್ಮ ಎಂಬುವರಿಗೆ ಮನೆ ನಿರ್ಮಿಸಿಕೊಡಲು ಚಾಲನೆ ನೀಡಲಾಯಿತು. ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.

ಗ್ರಾಮಕ್ಕೆ ಯಲಚಟ್ಟಿ ಮುಖ್ಯರಸ್ತೆ ಯಿಂದ 2 ಕಿ.ಮೀ. ದೂರ ಸಾಗಬೇಕು. ಸೂಕ್ತ ಸಾರಿಗೆ ಸೌಲಭ್ಯವೂ ಇಲ್ಲ. ತುರ್ತು ಸ್ಥಿತಿಯಲ್ಲಿ ಕಾಲ್ನಡಿಗೆಯಲ್ಲಿಯೇ ದಿನನಿತ್ಯದ ಅಗತ್ಯತೆ ಪೂರೈಸಲು ದೂರದ ಊರುಗಳಿಗೆ ಹೋಗಬೇಕಿದೆ.

`ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಜನರಿಗೆ ಕೆಲಸ ನೀಡುತ್ತಿಲ್ಲ. ಕೆಲವರು ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಬೆಂಕಿ ರೇಖೆ ನಿರ್ಮಾಣ, ಗಿಡ ಕತ್ತರಿಸುವ ಕೆಲಸ ಮಾಡುತ್ತಾರೆ. ಅಕ್ಕಪಕ್ಕದ ಊರಿನ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವಂತಾಗಿದೆ. ಹೈನುಗಾರಿಕೆ ಗೊತ್ತಿಲ್ಲ. ಕೃಷಿ ಮಾಡಲು ಸ್ವಂತ ಜಮೀನು ಇಲ್ಲ. ಕಿರುಅರಣ್ಯ ಉತ್ಪನ್ನ ಸಂಗ್ರಹಿಸಿ ಮಾರಾಟ ಮಾಡುವುದರಿಂದ ಬರುವ ಹಣದಲ್ಲಿ ಪಡಿತರ ಪದಾರ್ಥ ಪಡೆದು ಜೀವನ ಸಾಗಿಸಬೇಕಿದೆ~ ಎನ್ನುತ್ತಾರೆ ಗ್ರಾಮಸ್ಥ ಮಹಾದೇವಪ್ಪ.

ಗ್ರಾಮದ ಮಕ್ಕಳು ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ಇಲ್ಲಿನ ಚಿಣ್ಣರಿಗೆ ಅನುಕೂಲ ಕಲ್ಪಿಸಲು ಎನ್‌ಇಆರ್‌ಡಿ ಸಂಸ್ಥೆಯಿಂದ ತೆರೆದಿದ್ದ ಶಿಶುಪಾಲನಾ ಕೇಂದ್ರ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿಲ್ಲ. ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆಯಲು ಮಂಗಲ ಗ್ರಾಮಕ್ಕೆ ಹೋಗಬೇಕಿದೆ. ಕಾಡಂಚಿನ ಗ್ರಾಮವಾಗಿರುವುದರಿಂದ ವನ್ಯಜೀವಿಗಳ ಉಪಟಳವೂ ಹೆಚ್ಚು. ಹೀಗಾಗಿ, ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅವರಿಗೆ ಪ್ರಾಥಮಿಕ ಶಿಕ್ಷಣ ಮರೀಚಿಕೆಯಾಗಿದೆ.

ಗ್ರಾಮವು ನಾಗರಿಕ ಸೌಲಭ್ಯದಿಂದ ದೂರ ಉಳಿದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT