ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟ ಎತ್ತರಿಸಿ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸುವ ಅಗತ್ಯ ಸದ್ಯಕ್ಕಿಲ್ಲ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌. ಮಹೇಶಪ್ಪ ಹೇಳಿರುವುದು ಒಳ್ಳೆಯ ಬೆಳವಣಿಗೆ.

ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರತೀ ವರ್ಷ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾಲೇಜು­ಗಳನ್ನು ಆರಂಭಿಸುವುದು ಬೇಡ ಎನ್ನುವುದು ಕುಲಪತಿಯವರ ನಿಲುವು. ಅವರ ಕಾಳಜಿ ಮೆಚ್ಚುವಂಥದ್ದೇ.

ಒಂದೆರಡು ದಶಕಗಳ ಹಿಂದೆ ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಭಾರೀ ಪೈಪೋಟಿ ಇತ್ತು. ಹೊರ ರಾಜ್ಯಗಳ ವಿದ್ಯಾರ್ಥಿಗಳು ಕೈಯಲ್ಲಿ ಹಣದ ಚೀಲ ಹಿಡಿದು ಪ್ರವೇಶ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳು ಈ ಪರಿಸ್ಥಿತಿಯ ಲಾಭ ಪಡೆಯಲು ಪೈಪೋಟಿಗಿಳಿದವು. ಅದರ ಪರಿಣಾಮ ಎನ್ನುವಂತೆ ರಾಜ್ಯ ಉದ್ದಗಲದಲ್ಲಿ ಎಂಜಿನಿಯರಿಂಗ್‌ ಕಾಲೇಜು­ಗಳು ತಲೆ ಎತ್ತಿದವು.

ಈಗ ಪರಿಸ್ಥಿತಿ ಬದಲಾಗಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಎಂಜಿನಿಯರಿಂಗ್‌ ಕಾಲೇಜುಗಳು ಆರಂಭವಾಗಿವೆ. ಈಗ ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬರ. ಇಂತಹ ಸಂದರ್ಭದಲ್ಲಿ ಹೊಸ ಕಾಲೇಜುಗಳನ್ನು ಆರಂಭಿಸಿದರೆ ಪ್ರಯೋಜನವಿಲ್ಲ. ಈ ಬೆಳವಣಿಗೆಯ ಅರಿವಿದ್ದರೂ ಪ್ರತಿಷ್ಠೆಗಾಗಿ ಹೊಸ ಕಾಲೇಜು ಆರಂಭಿಸಲು ಕೆಲವು ಶಿಕ್ಷಣ ಸಂಸ್ಥೆಗಳು ಮುಂದೆ ಬರಬಹುದು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅದಕ್ಕೆ ಅವಕಾಶ ಕೊಡಬಾರದು. ಹೊಸ ಕಾಲೇಜುಗಳಿಗೆ ಅನುಮತಿ ಕೊಡುವ ಪ್ರಕ್ರಿಯೆಯನ್ನು ಐದು ವರ್ಷ ಸ್ಥಗಿತಗೊಳಿಸಬೇಕು ಎಂಬ ಮಹೇಶಪ್ಪ ಅವರ ಒತ್ತಾಯದಲ್ಲಿ ಹುರುಳಿದೆ. ಎಐಸಿಟಿಇ, ಪರಿಸ್ಥಿತಿ ಯನ್ನು ಅರ್ಥ ಮಾಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

ಡೊನೇಷನ್‌ ಆಸೆಗೆ ಎಂಜಿನಿಯರಿಂಗ್‌ ಕಾಲೇಜುಗಳನ್ನು ತೆರೆದು ವ್ಯಾಪಾ ರದಂತೆ ಅವನ್ನು ನಿರ್ವಹಿಸುತ್ತಿರುವ ಸಂಸ್ಥೆಗಳು ಹಾಗೂ ಪ್ರಭಾವಿಗಳು ರಾಜ್ಯದಲ್ಲಿದ್ದಾರೆ. ಎಕರೆಗಟ್ಟಲೆ  ಜಮೀನು ಆಸೆಗೆ ಕಾಲೇಜು ತೆರೆದವ ರಿದ್ದಾರೆ.  ಅನೇಕ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಅರ್ಹ ಬೋಧಕರೂ ಇಲ್ಲ. ಹೆಸರಿಗಷ್ಟೇ ಎಂಜಿನಿಯರಿಂಗ್‌ ಕಾಲೇಜುಗಳು! ಇಂತಹ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಗೋಳನ್ನು ಕೇಳುವವರಿಲ್ಲ. ಈ ಕಾಲೇಜುಗಳಿಂದ ಹೊರಬರುವ ಪದವೀಧರರಿಂದ ದೇಶ ಏನನ್ನು  ನಿರೀಕ್ಷಿಸಲು ಸಾಧ್ಯ?

ಈ ಅತಂತ್ರದ ವ್ಯವಸ್ಥೆ ಬದಲಾಗಬೇಕು. ಅದು ಹೇಳಿದಷ್ಟು ಸುಲಭದ ಕೆಲಸ ಅಲ್ಲ. ಹೊಸ ಕಾಲೇಜುಗಳಿಗೆ ಅನುಮತಿ ನೀಡುವುದಷ್ಟೇ ಎಐಸಿಟಿಇ ಜವಾಬ್ದಾರಿ ಅಲ್ಲ. ಎಲ್ಲಾ ಕಾಲೇಜುಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು ಕೂಡ ಅದರ ಕೆಲ ಸವೇ. ಬದಲಾದ ಕಾಲಮಾನಕ್ಕೆ ತಕ್ಕಂತೆ ಎಂಜಿನಿಯರಿಂಗ್‌ ಕಾಲೇಜುಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಮೂಲ ಸೌಲಭ್ಯ ಗ­ಳಿಲ್ಲದ ಕಾಲೇಜುಗಳನ್ನು ಗುರುತಿಸಿ ಸಮಯ ಮಿತಿಯಲ್ಲಿ ಕೊರತೆ ತುಂಬಿ ಕೊಳ್ಳುವಂತೆ ಸೂಚಿಸಬೇಕು. ಆನಂತರವೂ ಪರಿಸ್ಥಿತಿ ಬದಲಾಗದಿದ್ದರೆ ಅವು ಗಳ ಮಾನ್ಯತೆಯನ್ನೇ ರದ್ದುಗೊಳಿಸಬೇಕು. ಈ ನಿಟ್ಟಿನಲ್ಲಿ ಎಐಸಿಟಿಇ ಕಠಿಣ ನಿಲುವು ತಾಳಬೇಕು. ಅದಕ್ಕೆ ಸರ್ಕಾರ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ಒತ್ತಾಸೆಯಾಗಿ ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT