ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟಕ್ಕೆ ಆದ್ಯತೆ: ಎಂಜಿನಿಯರ್‌ಗಳಿಗೆ ಸಲಹೆ

Last Updated 16 ಸೆಪ್ಟೆಂಬರ್ 2011, 4:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚಿರುವ ಅನೈತಿಕ ಸ್ಪರ್ಧೆಯಿಂದ ಕಟ್ಟಡದ ಗುಣಮಟ್ಟಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ ಎಂದು ವಿಷಾದಿಸಿದ ಕೆಎಲ್‌ಇ ತಾಂತ್ರಿಕ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶರದ್ ಜೋಶಿ, ಎಂಜಿನಿಯರ್‌ಗಳು ಯಾವುದೇ ಕಾರಣಕ್ಕೂ ಪ್ರಾಮಾಣಿಕತೆ ಹಾಗೂ ನೈತಿಕತೆಯನ್ನು ಬಿಟ್ಟು ನಡೆಯಬಾರದು ಎಂದು ಕಿವಿಮಾತು ಹೇಳಿದರು.

ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ಗಳ ಸಂಸ್ಥೆ (ಎಸಿಸಿಇ)ಯ ಹುಬ್ಬಳ್ಳಿ ಘಟಕ ಗುರುವಾರ ಏರ್ಪಡಿಸಿದ್ದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
`ಉದ್ದಿಮೆ ಹಾಗೂ ಎಂಜಿನಿಯರಿಂಗ್ ಶಿಕ್ಷಣದ ನಡುವಿನ ಬಿರುಕು ಹೆಚ್ಚಾಗಿದೆ.

ಪ್ರತಿವರ್ಷ ಸಾವಿರ, ಸಾವಿರ ಸಂಖ್ಯೆಯಲ್ಲಿ ಎಂಜಿನಿಯರ್‌ಗಳು ಹೊರಬರುತ್ತಿರುವುದರಿಂದ ಅನೈತಿಕ ಪೈಪೋಟಿ ಈ ಕ್ಷೇತ್ರದಲ್ಲೂ ಕಾಣಿಸಿಕೊಂಡಿದೆ~ ಎಂದು ಅವರು ವಿಷಾದಿಸಿದರು. `ನಮ್ಮ ಗುರಿಗಳೇನು, ಮುಂದಿರುವ ಸವಾಲುಗಳು ಯಾವವು, ದೇಶ ನಮ್ಮಿಂದ ಏನನ್ನು ಅಪೇಕ್ಷಿಸುತ್ತದೆ ಎಂಬ ವಿಷಯವಾಗಿ ಅಂತರ್ಮುಖಿಯಾಗಿ ಯೋಚಿಸಲು ಇದು ಸಕಾಲ~ ಎಂದು ಅವರು ಅಭಿಪ್ರಾಯಪಟ್ಟರು.

ರಾಜಕೀಯ ಹಸ್ತಕ್ಷೇಪ, ಸಮಾಜ ವಿರೋಧಿ ಶಕ್ತಿಗಳ ಒತ್ತಡ, ನೈಸರ್ಗಿಕ ವಿಕೋಪಗಳು ಎಂಜಿನಿಯರ್‌ಗಳಿಗೆ ದೊಡ್ಡ ಸವಾಲುಗಳಾಗಿವೆ. ಇವುಗಳನ್ನೆಲ್ಲ ಮೆಟ್ಟಿನಿಂತು ಜನ ಬಯಸಿದಂತಹ ತಂತ್ರಜ್ಞಾನವನ್ನು ಧಾರೆ ಎರೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

`ಆಳವಾದ ಜ್ಞಾನವನ್ನು ಸಂಪಾದಿಸುವುದು, ಸದಾ ಅಪ್‌ಡೇಟ್ ಆಗುವುದು, ಹೊಸ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ಪ್ರಾಮಾಣಿಕ ವ್ಯಕ್ತಿತ್ವ ಹೊಂದುವುದು ಹಾಗೂ ಒಗ್ಗಟ್ಟಾಗಿ ಇರುವ ಮೂಲಕ ಎಂಜಿನಿಯರ್‌ಗಳು ಎಲ್ಲ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿದೆ~ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವಿಎಸ್‌ವಿ ಪ್ರಸಾದ್, `ಕಪ್ಪು ಮಣ್ಣಿನಲ್ಲಿ ಸುಭದ್ರ ಕಟ್ಟಡ ಕಟ್ಟುವಂತಹ ತಂತ್ರಜ್ಞಾನ ಬಂದಿದ್ದು, ಎಂಜಿನಿಯರ್‌ಗಳು ಅಂತಹ ತಾಂತ್ರಿಕತೆಯನ್ನು ಬಳಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

ಅಲ್ಟ್ರಾಟೆಕ್ ಸಿಮೆಂಟ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿದರು. ಎಸಿಸಿಇ ಅಧ್ಯಕ್ಷ ಬಿ.ಪ್ರೇಮಚಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. `ಬಿಲ್ಡಿಂಗ್ ಮಟಿರಿಯಲ್ ಡೈರೆಕ್ಟರಿ-2011ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಎಂಜಿನಿಯರ್‌ಗಳಾದ ಪ್ರೊ.ಎ.ಎಂ. ಅಣ್ಣಿಗೇರಿ, ಶಬ್ಬೀರ್ ಹುಲ್ಲೂರು, ದೀಪಕ ದೇಸಾಯಿ, ಎಂ.ಎನ್. ಈಟಿ ಅವರನ್ನು ಸನ್ಮಾನಿಸಲಾಯಿತು.ಎಂ.ಎ.ಕಾಥೇವಾಡಿ, ಎಸ್.ವಿ. ಪಾಟೀಲ, ಅಶೋಕ ಬಸವಾ, ಸುರೇಶ ಕಿರೇಸೂರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT