ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಾತ್ಮಕ ಉನ್ನತ ಶಿಕ್ಷಣ: ಹೊಸ ಸಾಧ್ಯತೆ, ಸವಾಲುಗಳು

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ಎರಡು ದಶಕಗಳಲ್ಲಿ ಭಾರತದ ಉನ್ನತ ಶಿಕ್ಷಣ ಅಗಾಧವಾದ ಬೆಳವಣಿಗೆ ಕಂಡಿದೆ. ಚೀನಾ ಮತ್ತು ಅಮೆರಿಕಾ ಬಿಟ್ಟರೆ ಭಾರತದಲ್ಲಿ ಜಗತ್ತಿನಲ್ಲೇ ಹೆಚ್ಚಾಗಿ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ವರ್ಷಕ್ಕೆ ಶೇಕಡಾ 8.5 ವಿದ್ಯಾರ್ಥಿಗಳು ಇಂದು ವಿವಿಧ ರೀತಿಯ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ.

ಸುಮಾರು 380 ವಿವಿಗಳು (ವಿಶ್ವವಿದ್ಯಾಲಯಗಳು), 23 ಸಾವಿರ ವಿವಿಧ ಪದವಿ ಕಾಲೇಜುಗಳು, 80-100 ಸ್ವಾಯತ್ತ ವಿವಿಗಳು, 140-150 ಉನ್ನತ ಸಂಶೋಧನಾ ಸಂಸ್ಥೆಗಳು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿವೆ.

ಆದರೂ ಉನ್ನತ ಶಿಕ್ಷಣಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ, ಇಂದು ಖಾಸಗಿ ಶಿಕ್ಷಣ ವ್ಯವಸ್ಥೆ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇಲ್ಲಿ ಯಾವುದೇ ಗುಣಮಟ್ಟಕ್ಕೆ ಆದ್ಯತೆ ಇಲ್ಲ.
 
ಸರ್ಕಾರದ ದ್ವಂದ್ವ ನಿಲುವು, ರಾಜಕೀಯ ಇಚ್ಛಾಶಕ್ತಿಯ ಕೊರತೆ , ಜೊತೆಗೆ ಹಲವಾರು ರಾಜಕಾರಣಿಗಳು ಖಾಸಗಿ ಶಿಕ್ಷಣಕ್ಷೇತ್ರದಲ್ಲಿ ಹೂಡಿರುವ ಬಂಡವಾಳ (ಕಪ್ಪು ಹಣ)ದಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೇಳಹೆಸರಿಲ್ಲದಂತಾಗಿ ಹಣ ಮಾಡುವ ಪ್ರವೃತ್ತಿಯೇ ಹೆಚ್ಚಾಗಿದೆ.
 
ಸುಮಾರು 70 ಸಾವಿರ ಕೋಟಿ ಹಣ ಇಂದು ಖಾಸಗಿಯವರು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೂಡಿದ್ದಾರೆ ಎಂದರೆ ತಪ್ಪಿಲ್ಲ. ಕೈಯಲ್ಲಿ ಹಲವು ಲಕ್ಷ ಹಣ ಇದ್ದರೆ ಯಾರು ಬೇಕಾದರೂ ಇಂದು ದೇಶದಲ್ಲಿ ಒಂದು ಖಾಸಗಿ ವಿವಿಯನ್ನು ತೆರೆಯಬಹುದು.
 
ಅದರ ಮೂಲಕ ಆ ವ್ಯಕ್ತಿ ಇನ್ನೂ ಹಲವು ಕೋಟಿಗಳನ್ನು ಗಳಿಸಬಹುದು. ಮುಂದೊಂದು ದಿನ ಪ್ರಾಥಮಿಕ ಶಾಲೆಗಳಿಗಿಂತ ವಿ.ವಿಗಳ ಸಂಖ್ಯೆಯೇ ಹೆಚ್ಚಿದರೂ ಆಶ್ಚರ್ಯವಿಲ್ಲ. ಜಿಲ್ಲೆಗೊಂದು, ತಾಲ್ಲೂಕಿಗೊಂದು ವಿ.ವಿಗಳು ಬರುವ ದಿನ ಸಹ ದೂರವಿಲ್ಲ.

ಭಾರತದ ಉನ್ನತ ಶಿಕ್ಷಣ ಇಂದು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಣದ ಖಾಸಗೀಕರಣ, ನುರಿತ ಅಧ್ಯಾಪಕರ ಕೊರತೆ, ಅವೈಜ್ಞಾನಿಕ ರೀತಿಯ ಬೋಧನಾ ವಿಧಾನ, ಕುಂಠಿತ ಸಂಶೋಧನಾ ಗುಣಮಟ್ಟ, ಕೃತಿಚೌರ್ಯ, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗಿರುವುದು, ಕೆಲವೊಮ್ಮೆ ತುಂಬಿ ತುಳುಕುವ ತರಗತಿಗಳು, ಶಿಕ್ಷಣ ಕ್ಷೇತ್ರಕ್ಕೆ ರಾಜಕೀಯದ ಪ್ರವೇಶ, ಉನ್ನತ ಶಿಕ್ಷಣಕ್ಕೆ ಸರ್ಕಾರದ ಅನುದಾನದ ಕೊರತೆ, ಖಾಸಗಿ ಶಿಕ್ಷಣ ಕ್ಷೇತ್ರದ ಮೇಲೆ ಸರ್ಕಾರದ ಹಿಡಿತ ಇಲ್ಲದೇ ಇರುವುದು, ಪೋಷಕರ ಅತಿಯಾದ ನಿರೀಕ್ಷೆ, ಉದ್ಯೋಗದ ಭರವಸೆ ಇಲ್ಲದಿರುವುದು, ನಿರ್ದಿಷ್ಟ ನಿಯಂತ್ರಣ ಮತ್ತು ಮೌಲ್ಯಮಾಪನ ವ್ಯವಸ್ಥೆ ಇಲ್ಲದೇ ಇರುವುದು ಇತ್ಯಾದಿ.

ಆರ್ಥಿಕ ಸುಧಾರಣೆಯ ಅಂಗವಾಗಿ,  ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಅನುದಾನವನ್ನೂ 1990ರಿಂದ ಕೇಂದ್ರ ಸರ್ಕಾರ ನಿಧಾನವಾಗಿ ಕಡಿಮೆ ಮಾಡುತ್ತಿದೆ. 1990ರಿಂದ 2003ರವರೆಗೆ ಸುಮಾರು ಶೇ. 25ರಷ್ಟು ಅನುದಾನ ಉನ್ನತ ಶಿಕ್ಷಣಕ್ಕೆ ಕಡಿಮೆಯಾಗಿದೆ. ಇದರಿಂದ ಉನ್ನತ ಶಿಕ್ಷಣದ ಗುಣಮಟ್ಟ ಪಾತಾಳ ತಲುಪಿದೆ. ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡು ಕಾರ‌್ಯನಿರ್ವಹಿಸುತ್ತಿವೆ.

ವಿದ್ಯಾರ್ಥಿಗಳ ಶುಲ್ಕ ಸಂಗ್ರಹಣೆ ಕಡಿಮೆಯಾಗುತ್ತಿದೆ. ಸರ್ಕಾರದ ಹಣದ ಹೆಚ್ಚಿನ ಭಾಗ ವೇತನ ಭತ್ಯೆಗೆ ಖರ್ಚಾಗುತ್ತಿದೆ. ಅಭಿವೃದ್ಧಿಗೆ ಹಣ ಸಾಲುತ್ತಿಲ್ಲ. ಈ ಎಲ್ಲಾ ಕಾರಣದಿಂದ ಉದ್ಯೋಗ ಮಾರುಕಟ್ಟೆ ಬೇಡುವ ಪ್ರತಿಭಾವಂತ, ಜಾಣ್ಮೆಯ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಭಾರತದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಇಂದು ಸಾಧ್ಯವಾಗುತ್ತಿಲ್ಲ.

ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಸಾಲ ಯೋಜನೆಯನ್ನು 2000-2001 ರಿಂದ ಜಾರಿಗೆ ತರಲಾಯಿತು. ಆದರೆ ಇಂದೂ ಸಹ ಅಷ್ಟು ಸುಲಭವಾಗಿ ಈ ಸಾಲ ವಿದ್ಯಾರ್ಥಿಗಳಿಗೆ ದೊರಕುತ್ತಿಲ್ಲ.
 
ಹಿಂದುಳಿದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಸಾಲದ ವಿಚಾರದಲ್ಲಿ ಕೆಲವು ರಿಯಾಯಿತಿ ಇರಬೇಕೆಂಬ ಬೇಡಿಕೆಗೆ ಇನ್ನೂ ಮನ್ನಣೆ ದೊರಕಿಲ್ಲ. ಇದರಿಂದ ಉನ್ನತ ಶಿಕ್ಷಣ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂತಹ ಸಾಲ ನೀಡಿಕೆಯ್ಲ್ಲಲಿ ಬಡ ವಿದ್ಯಾರ್ಥಿಗಳಿಗೆ ಹಲವು ರಿಯಾಯಿತಿ ನೀಡಲಾಗಿದೆ.

ಸರ್ಕಾರದ ಜವಾಬ್ದಾರಿ
ಉನ್ನತ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ದೊರಕಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಸರ್ಕಾರದ ಬಿಗಿಯಾದ ನಿಯಂತ್ರಣ ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆಯನ್ನು ಹೆಚ್ಚಿಸುವುದರ ಬದಲಾಗಿ ಸರಬರಾಜು ಬೇಡಿಕೆಯಲ್ಲಿ ಅಸಮಾನತೆ ಉಂಟಾಗಿ ಒಂದು ರೀತಿಯ ಕೃತಕ ಕೊರತೆಯನ್ನು ಮಾರುಕಟ್ಟೆಯಲ್ಲಿ ಉಂಟು ಮಾಡುತ್ತಿದೆ ಎಂಬುದು ಇನ್ನೂ ಹಲವು ತಜ್ಞರ ವಾದ. ಇನ್ನೂ ಕೆಲವರು ಇಂದು ನಿಯಂತ್ರಣ ಪ್ರಕ್ರಿಯೆಯು ಸಂಪೂರ್ಣವಾಗಿ ರಾಜಕೀಯವಾಗಿದೆ.
 
ಇಂದು ಅತಿ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳು ಅಥವಾ ಕಾರ್ಪೊರೇಟ್ ವರ್ಗದ ಹಿಡಿತದಲ್ಲಿದೆ. ಆದ್ದರಿಂದ ಸರ್ಕಾರಗಳು ಎಷ್ಟೇ ಬಿಗಿಯಾದ ನಿಯಮಗಳನ್ನು ಜಾರಿಗೆ ತಂದರೂ ಅವುಗಳನ್ನು ಅನುಸರಿಸುವ ಗೋಜಿಗೆ ಹೋಗುವುದಿಲ್ಲ.
 
ಮತ್ತು ಕನಿಷ್ಠ ಮಾರ್ಗದರ್ಶಿ ಸೂತ್ರಗಳ ಪಾಲನೆಯನ್ನು ಖಾತ್ರಿ ಪಡಿಸಿಕೊಳ್ಳುವ ಜವಾಬ್ದಾರಿಯನ್ನು ಸಹಾ ಸರ್ಕಾರಗಳು ಇತ್ತೀಚೆಗೆ ನಿಭಾಯಿಸದಿರುವುದು ತುರ್ತಾಗಿ ಯೋಚಿಸಬೇಕಾದ ವಿಚಾರ ಎನ್ನುತ್ತಾರೆ.

ಆದುದರಿಂದ ನಿಯಂತ್ರಣ ಅಥವಾ ನಿಯಮಗಳು ಮುಖ್ಯವಾಗಿ ಅವಶ್ಯಕತೆ, ಪ್ರಸ್ತುತತೆ, ಪ್ರಾಯೋಗಿಕ ಆಚರಣೆ ನಿರ್ಬಂಧ ಮತ್ತು ಮಾರುಕಟ್ಟೆಯ ಬೇಡಿಕೆಯಂತಹ ರಚನಾತ್ಮಕ ವಿಚಾರಗಳನ್ನು ಹೊಂದಿರಬೇಕಾದ ಅವಶ್ಯಕತೆ ಇದೆ.

 ಉನ್ನತ ಶಿಕ್ಷಣವನ್ನು ಬೇಡಿಕೆಗೆ ಅನುಗುಣವಾಗಿ ನೀಡುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು, ಕಳೆದ ಕೆಲವು ದಶಕಗಳಿಂದ ಉನ್ನತ ಶಿಕ್ಷಣವನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನ ಆಗುತ್ತಿಲ್ಲ. ಜೊತೆಗೆ ಮಾನ್ಯತಾ ಪ್ರಕ್ರಿಯೆಯು ಒಂದು ಶ್ರಮದಾಯಕ ಅಧಿಕಾರಿಶಾಹಿ ಪ್ರಕ್ರಿಯೆಯಾಗಿ ಇಂದಿಗೂ ಉಳಿದಿದೆ.

ಕೇವಲ `ನ್ಯಾಕ್~ನಂತಹ ಸಂಸ್ಥೆಗಳಿಂದ ರಾತ್ರೋರಾತ್ರಿ ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆ ತರಲು ಸಾಧ್ಯವಿಲ್ಲ. ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆಯನ್ನು ಕಾಪಾಡಲು ವಿಕೇಂದ್ರೀಕರಣವನ್ನು ಜಾರಿಗೆ ತರಬೇಕೆಂಬುದು ತಜ್ಞರ ಅಭಿಪ್ರಾಯ.
 
ಉನ್ನತ ಶಿಕ್ಷಣದ ನಿರ್ವಹಣೆ 

ಭಾರತದಲ್ಲಿ ಇಂದು ಸಾವಿರಾರು ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ ಅವೈಜ್ಞಾನಿಕ ನಿರ್ವಹಣೆಯಿಂದ ಅವುಗಳ ಕಾರ್ಯಕ್ಷಮತೆ ಕುಂಠಿತಗೊಂಡಿದೆ. ಸ್ವಾತಂತ್ರ್ಯ ಪೂರ್ವ ನಿರ್ವಹಣ ವ್ಯವಸ್ಥೆಯನ್ನೇ ಅವುಗಳು ನೆಚ್ಚಿಕೊಂಡಿವೆ.
 
ಸಮಾಜದ ಬೇಡಿಕೆ ಸ್ವರೂಪ ಬದಲಾದಂತೆ ಇವುಗಳು ಸಹ ಬದಲಾಗಬೇಕಾದ ಅವಶ್ಯಕತೆ ಇದೆ. ಡಬ್ಲ್ಯು.ಟಿ.ಓ. ಒಪ್ಪಂದದ ನಂತರ ಭಾರತದ ಪ್ರತಿಭೆಗಳಿಗೆ ವಿಶ್ವದಾದ್ಯಂತ ಅತ್ಯುನ್ನತ ಮನ್ನಣೆ ದೊರಕುತ್ತಿದೆ. ಅಷ್ಟೇ ಮಟ್ಟದಲ್ಲಿ ಉನ್ನತ ಶಿಕ್ಷಣದಲ್ಲಿ ವಿಶ್ವದಾದ್ಯಂತ ಸ್ಪರ್ಧಾತ್ಮಕತೆ ಸಹ ಹೆಚ್ಚಾಗುತ್ತಿದೆ.

ಆದುದರಿಂದ ಭಾರತ ಸಹ ತನ್ನ ಮಾನವ ಸಂಪನ್ಮೂಲವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪುನರ್‌ರೂಪಿಸಬೇಕಾಗಿದೆ. ಭಾರತ ಮಾದರಿಯ ಉನ್ನತ ಶಿಕ್ಷಣವನ್ನು ವಿದೇಶಗಳಿಗೆ ರಫ್ತು ಮಾಡಬೇಕಾಗಿದೆ. ದೇಶದಲ್ಲಿ ಲಭ್ಯವಿರುವ ವಿ.ವಿಗಳು ಸಂಶೋಧನಾ ವ್ಯವಸ್ಥೆಯನ್ನು ಪುನರ್‌ರೂಪಿಸಬೇಕಾಗಿದೆ. 

 ಸಾರ್ವಜನಿಕ - ಖಾಸಗಿ ತತ್ವವನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಇದರಿಂದ ವಿಶೇಷ ವಿವಿಗಳು, ಖಾಸಗಿ ವಿವಿಗಳು, ಸ್ವಾಯತ್ತ ವಿವಿಗಳಿಂದ ಸಹ ಉನ್ನತ ಶಿಕ್ಷಣ ಕ್ಷೇತ್ರ ವಿಸ್ತಾರಗೊಳ್ಳುವ ಸಾಧ್ಯತೆ ಇರುತ್ತದೆ.

ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿ ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಿ ನಿಧಿಯ ಶೇಕಡಾ 2ರಷ್ಟನ್ನು ಇದಕ್ಕೆ ಬಳಕೆ ಮಾಡಿಕೊಳ್ಳುವುದರ ಬಗ್ಗೆ ಸರ್ಕಾರದ ತೀರ್ಮಾನ ಈ ನಿಟ್ಟಿನಲ್ಲಿ ತುಂಬಾ ಸಹಕಾರಿಯಾಗಿದೆ. ಇದರ ಮೂಲಕ ದೇಶದ ಅಸಂಖ್ಯಾತ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ದೊರಕಲು ನೆರವಾಗುತ್ತದೆ.

ದೇಶದ ಸಂಪನ್ಮೂಲ ಬಳಸಿ ಉನ್ನತ ಸ್ಥಾನ ಪಡೆದ  ಪ್ರತಿಭೆಗಳಿಂದ ವಿಶೇಷ ತೆರಿಗೆ ಸಂಗ್ರಹಿಸುವ ಯೋಜನೆಯ ಸಾಧಕ - ಬಾಧಕಗಳ ಬಗ್ಗೆ ಚಿಂತಿಸಬೇಕಾಗಿದೆ. ದೇಶದ ಕೈಗಾರಿಕಾ ರಂಗ ಸಹ ಉನ್ನತ ಶಿಕ್ಷಣದ ಗುಣಾತ್ಮಕತೆಗೆ ಕೈಜೋಡಿಸುವ ಅಗತ್ಯ ಇದೆ.
 
ನಿರ್ದಿಷ್ಟ ವಿಶೇಷತೆ ಹೊಂದಿರುವ ಉನ್ನತ ಸಂಶೋಧನೆ ಸಂಸ್ಥೆಗಳನ್ನು  ಸಾಧಿಸುವತ್ತ ಕೈಗಾರಿಕಾ ರಂಗಕ್ಕೆ ಉತ್ತೇಜನ ನೀಡಬೇಕಾಗಿದೆ. ಖಾಸಗಿ ರಂಗಕ್ಕೆ ಆಸಕ್ತಿ ಇಲ್ಲದಿರುವ ಕ್ಷೇತ್ರಗಳಲ್ಲಿ ಸರ್ಕಾರ ಬಂಡವಾಳ ಹೂಡಲೇಬೇಕು. ಸಮತೋಲಿತ ಪ್ರತಿಭಾ ಬೆಳವಣಿಗೆಗೆ ಇದು ತೀರಾ ಅವಶ್ಯ. 

 ಹೊಸ ವಿವಿಗಳ ಆರಂಭಕ್ಕಿಂತ ಈಗಾಗಲೇ ಇರುವ ವಿವಿಗಳಿಗೆ ಸಾಕಷ್ಟು ಧನ ಸಹಾಯದ ಅಗತ್ಯ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬರುವ ಪಿಎಚ್.ಡಿ. ಪದವಿಗಳು ಗುಣಾತ್ಮಕತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.
 
ಸಾರ್ವಜನಿಕ- ಖಾಸಗಿ ಸಹಭಾಗಿತ್ವ, ಉನ್ನತ ಶಿಕ್ಷಣದ ವೈಜ್ಞಾನಿಕ ನಿರ್ವಹಣೆ, ಉನ್ನತ ಶಿಕ್ಷಣದ ಲಭ್ಯತೆ ಮತ್ತು ಸಮಾನತೆ, ಉನ್ನತ ಶಿಕ್ಷಣದ ರಫ್ತು ಮತ್ತು ಸುಸ್ಥಿರ ಉನ್ನತ ಶಿಕ್ಷಣ ಗುಣಾತ್ಮಕತೆಗೆ ನೀತಿ ನಿಯಮಗಳ ನಿರೂಪಣೆ - ಈ ಎಲ್ಲಾ ವಿಷಯಗಳಿಗೂ ಸರ್ಕಾರ ತ್ವರಿತ ಗಮನ ಮತ್ತು ಆದ್ಯತೆ ನೀಡಬೇಕಾಗುತ್ತದೆ.

ನಿರ್ಣಾಯಕ ಯೋಜನೆ ಮತ್ತು ನೀತಿ ನಿರೂಪಣೆಯನ್ನು ನಿರ್ಧರಿಸಲು ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿರಬೇಕು. ಐ.ಎ.ಎಸ್. ಮಾದರಿಯಲ್ಲಿ ಭಾರತ ಉನ್ನತ ಶಿಕ್ಷಣ ಸೇವೆಯನ್ನು ಆರಂಭಿಸಲು ಚಿಂತಿಸಬೇಕು.
 
ಅಭಿವೃದ್ಧಿಯ ವೇಗಕ್ಕೆ ಹೊಂದುವಂತೆ ಹೊಸ ಮಾನವ ಸಂಪನ್ಮೂಲ ಅಭಿವೃದ್ಧಿ ನೀತಿಯ ಅವಶ್ಯಕತೆ ಇದೆ. ಇದರಿಂದ ನಿರಂತರವಾಗಿ ಹೊಸ ಪ್ರತಿಭೆಗಳು  ಐಚ್ಛಿಕ ವೃತ್ತಿಯನ್ನು ಆಯ್ದುಕೊಳ್ಳಲು ಸಹಾಯವಾಗುತ್ತದೆ. ಉತ್ತಮ ಸಾಧನೆ ತೋರುವ ಶೈಕ್ಷಣಿಕ ಸಂಸ್ಥೆಗಳಿಗೆ ತ್ವರಿತವಾಗಿ ಸ್ವಾಯತ್ತತೆ ನೀಡಬೇಕಾಗುತ್ತದೆ.

ವಿ.ವಿಗಳಿಗೆ ಹೊಸ ರೀತಿಯ ಹಣಕಾಸಿನ ನಿರ್ವಹಣಾ ಯೋಜನೆಯನ್ನು ರೂಪಿಸಬೇಕಿದೆ. ವಿ.ವಿಗಳಲ್ಲಿನ ವಿವಿಧ ಶೈಕ್ಷಣಿಕ, ಆಡಳಿತ, ಹಣಕಾಸು ಮಂಡಳಿಗಳಲ್ಲಿ ಅತ್ಯುನ್ನತ ಪಾರದರ್ಶಕತೆಯ ಅವಶ್ಯಕತೆ ಇದೆ.
 
ವಿಶ್ವವಿದ್ಯಾಲಯಗಳಿಗೆ ರಾಜಕೀಯ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಗ್ರಾಮೀಣ, ನಗರ ಮತ್ತು ಲಿಂಗ ಭೇದದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಉನ್ನತ ಶಿಕ್ಷಣದ ನೀತಿ ನಿಯಮಾವಳಿಗಳನ್ನು ರೂಪಿಸಬೇಕು.
 
ಬೇರೆ ಇಲಾಖೆಗೆ ಸೇರಿದ ಅಧಿಕಾರಿಗಳನ್ನು ಕುಲಪತಿ ಅಥವಾ ಕುಲಸಚಿವರನ್ನಾಗಿ ನೇಮಿಸುವುದು ತೀರಾ ಅವೈಜ್ಞಾನಿಕ. ದೇಶಿ ಮಾದರಿಯ ಸಂಶೋಧನೆ ಮತ್ತು ಬೋಧನೆಗಳಿಗೆ ಒತ್ತು ನೀಡಬೇಕು. ರಾಜ್ಯ ಸರ್ಕಾರಗಳು ತನ್ನ ವಿ.ವಿಗಳಿಗೆ  ಸಾಕಷ್ಟು ಹಣಕಾಸು ನೆರವು ನೀಡಬೇಕು.
 
ಜೊತೆಗೆ ವಿ.ವಿಗಳು ಸಾಧ್ಯವಾದಷ್ಟು ತಮ್ಮ ಆದಾಯದ ಮೂಲವನ್ನು ತಾವೇ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆಡಳಿತಾತ್ಮಕ ವೆಚ್ಚವನ್ನು ಸಾಧ್ಯವಾದಷ್ಟು ತಗ್ಗಿಸಬೇಕು. ರಾಷ್ಟ್ರದಾದ್ಯಂತ ಒಂದೇ ರೀತಿಯ ಪಠ್ಯಕ್ರಮ, ಶೈಕ್ಷಣಿಕ ವೇಳಾಪಟ್ಟಿ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಅನುಸರಿಸಬೇಕು.
 
ಶಿಕ್ಷಕರು ಸಹ ಸಾಧ್ಯವಾದಷ್ಟು ತಮ್ಮ ಜ್ಞಾನವನ್ನು ಉತ್ತಮೀಕರಿಸಿಕೊಳ್ಳಬೇಕು. ಹೆಸರುವಾಸಿ ವಿದೇಶಿ ವಿ.ವಿಗಳೊಂದಿಗೆ ಶೈಕ್ಷಣಿಕ ಒಪ್ಪಂದಗಳು ತೀರಾ ಅವಶ್ಯಕ. ಆನ್‌ಲೈನ್ ಶಿಕ್ಷಣ ನೀಡುವುದರ ಬಗ್ಗೆ ವಿ.ವಿಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳು ಯೋಚಿಸಬೇಕು.
 
ಒಂದು ವಿವಿ ಅಥವಾ ಸಂಸ್ಥೆಯಿಂದ ಮತ್ತೊಂದು ವಿ.ವಿ. ಅಥವಾ ಸಂಸ್ಥೆ ಶಿಕ್ಷಕರನ್ನು ನಿಯೋಜನೆ ಮೇಲೆ ಕಳಿಸುವ ವ್ಯವಸ್ಥೆಯನ್ನು ತರಬೇಕಿದೆ. ತಮ್ಮ ಸಂಶೋಧನೆ ಮತ್ತು ಇತರೆ ಚಟುವಟಿಕೆಗಳನ್ನು ಸಮಾಜಕ್ಕೆ ತಿಳಿಸಲು ಪ್ರತಿ ಉನ್ನತ ಶಿಕ್ಷಣ ಸಂಸ್ಥೆಯು ಪ್ರಸಾರಾಂಗ ವ್ಯವಸ್ಥೆಯನ್ನು ಹೊಂದಿರಬೇಕು.

ಸಾಧ್ಯವಾದಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಾಯೋಜಿತ ಯೋಜನೆಗಳು ಮತ್ತು ಪೇಟೆಂಟ್‌ಗಳನ್ನು ಪಡೆಯಲು ಯತ್ನಿಸಬೇಕು. ಪ್ರತಿ ಸಂಸ್ಥೆಗಳು ಸುಧಾರಿತ ತಂತ್ರಜ್ಞಾನವನ್ನು ಬಳಸಬೇಕು. ದೂರಶಿಕ್ಷಣ ವ್ಯವಸ್ಥೆಗೆ ಪ್ರತ್ಯೇಕ ಕಾಯಕಲ್ಪದ ಅಗತ್ಯವಿದೆ.

ಅತಿಥಿ, ಗುತ್ತಿಗೆ ಮತ್ತು ಖಾಸಗಿ ವಿ.ವಿಗಳಲ್ಲಿನ  ಶಿಕ್ಷಕರ ವೇತನ ಮತ್ತು ಇತರೆ ಸೌಲಭ್ಯಗಳ ಬಗ್ಗೆ ತೀವ್ರ ಮತ್ತು ತ್ವರಿತ ಸುಧಾರಣೆಯ ಅಗತ್ಯವಿದೆ. ಸಾಧ್ಯವಾದಷ್ಟು ಸ್ಥಳೀಯ ಅವಶ್ಯಕತೆ ಮತ್ತು ಮಾರುಕಟ್ಟೆ ಬೇಡಿಕೆ ಆಧಾರಿತ ಕೋರ್ಸ್‌ಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಹಮ್ಮಿಕೊಳ್ಳಬೇಕು.

ಗುಣಾತ್ಮಕತೆಯ ಭರವಸೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಸೆಣಸಬೇಕಾದರೆ ನಾವು ಅತ್ಯುನ್ನತ ಮಟ್ಟದ ಗುಣಾತ್ಮಕತೆಗೆ ಗಮನ ನೀಡಬೇಕಿದೆ. ಸಮಂಜಸವಾದ ಮೌಲ್ಯಮಾಪನ ಮತ್ತು ಅಕ್ರಿಡೇಷನ್ ವ್ಯವಸ್ಥೆಯನ್ನು ಪುನರ್‌ರೂಪಿಸಬೇಕಿದೆ.

 
ಇಂದು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಜ್ಞಾನದ ನಿರ್ವಹಣೆ ಎಂದು ಪರಿಗಣಿಸಬೇಕಿದೆ. ಕ್ರೋಢೀಕೃತ ವಿಧಾನ, ಬಹುಶಾಸ್ತ್ರೀಯ ಪಠ್ಯಕ್ರಮ ಮತ್ತು ಖಾಸಗಿ ಕ್ಷೇತ್ರಗಳೊಂದಿಗೆ ಸಂಪರ್ಕ ಜಾಲವನ್ನು ಬೆಳೆಸುವುದರ ಬಗ್ಗೆ ಉನ್ನತ ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕಾಗಿದೆ.

ವಿಶ್ವವಿದ್ಯಾಲಯಗಳು ಜ್ಞಾನಾಧಾರಿತ ಕೇಂದ್ರಗಳಾಗಬೇಕಿದೆ. ದೇಶಿ ತಂತ್ರಜ್ಞಾನಕ್ಕೆ ಮಹತ್ವ ನೀಡಬೇಕಾಗಿದೆ. ಜ್ಞಾನ ಮತ್ತು ಕೌಶಲ ಎರಡನ್ನೂ ಒಟ್ಟಿಗೆ ನೀಡುವ ಅರ್ಥಪೂರ್ಣ ಪಠ್ಯಕ್ರಮದ ಅಗತ್ಯತೆ ಇದೆ.

 ` ನ್ಯಾಕ್~ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಉನ್ನತ ಶಿಕ್ಷಣ ವ್ಯವಸ್ಥೆ ಕ್ರಮೇಣ ಸುಧಾರಣೆ ಕಾಣುವ ಸಾಧ್ಯತೆ ಹೆಚ್ಚು. ಬಹುಶಾಸ್ತ್ರೀಯ, ಅಂತರ್‌ಶಿಸ್ತಿನ ವಿಷಯಗಳಲ್ಲಿನ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ಬೇಕಿದೆ.
 
ಮುಖ್ಯವಾಗಿ ಸಮಾಜವಿಜ್ಞಾನ ಕಲಿಕೆ, ಬೋಧನೆ ಮತ್ತು ಸಂಶೋಧನೆಯ ವಿಧಾನವನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಕೇವಲ ಸಾಮರ್ಥ್ಯ ಮತ್ತು ಸಾಧನೆಯ ಆಧಾರದ ಮೇಲೆ ಬಡ್ತಿ ನೀಡಬೇಕಾಗಿದೆ. ಬಡ್ತಿ ನೀಡುವಿಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯ ಅಗತ್ಯವಿದೆ.

ಸಾಮಾಜಿಕ -ಆರ್ಥಿಕ ಅಸಮಾನತೆ, ಸಾಂಸ್ಕೃತಿಕ ಭಿನ್ನತೆ, ವೈವಿಧ್ಯ- ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಗುಣಾತ್ಮಕ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರಕುವಂತೆ ಮಾಡುವುದು ಇಂದಿನ ತುರ್ತು ಅಗತ್ಯವಷ್ಟೇ ಅಲ್ಲ, ಸವಾಲೂ ಕೂಡ ಹೌದು.
 
ಆದುದರಿಂದ ಅಂತರ್‌ಶಾಸ್ತ್ರೀಯ, ಬಹುಶಾಸ್ತ್ರೀಯ ಮತ್ತು ವಿಷಯಶಾಸ್ತ್ರೀಯ ನಿರ್ದೇಶಿತ ಆಧಾರದ ಮೇಲೆ ಸ್ಥಳಿಯ, ಪ್ರಾದೇಶಿಕ, ರಾಷ್ಟ್ರೀಯ  ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣದ ಗುರಿ ಮತ್ತು ಉದ್ದೇಶಗಳನ್ನು ಕಾಲಕಾಲಕ್ಕೆ ಪುನರ್ ರೂಪಿಸಬೇಕಿದೆ.

ಹಣವಂತರಿಗೆ ಮಾತ್ರ ಸೀಮಿತವಾಗಿದ್ದ ಉನ್ನತ ಶಿಕ್ಷಣದ ಅವಕಾಶವು ಇಂದು ಭಾರತದ ಪ್ರತಿ ವಿದ್ಯಾರ್ಥಿಗೂ ದೊರಕುವಂತಾಗಿದೆ. ಭಾರತದ ಉನ್ನತ ಶಿಕ್ಷಣದ ಬೆಳವಣಿಗೆ ಕಂಡು ಅಮೆರಿಕ ಕೂಡ ಹೆದರುವಂತೆ ಆಗಿದೆ. ಈ ಮಾನವ ಸಂಪನ್ಮೂಲವನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಸಬೇಕಿದೆ.
 
ಉನ್ನತ ಶಿಕ್ಷಣದಲ್ಲಿ ನಮ್ಮ ಸಾಧನೆ ದೇಶದ ಆರ್ಥಿಕ ಬೆಳವಣಿಗೆಯ ಮೇಲೂ ಆಗಾಧ ಪರಿಣಾಮ ಬೀರಲಿದೆ. ದೇಶದ ವೈಜ್ಞಾನಿಕ ರಂಗದಲ್ಲಿ ನೂತನ ಆವಿಷ್ಕಾರಗಳಿಂದ ದೇಶದ ಪ್ರತಿಷ್ಠೆ ಮತ್ತು ಕೀರ್ತಿ ಹೆಚ್ಚಲಿದೆ.
 
ಇದು ಕೋಟಿ ಕೋಟಿ ಮನುಕುಲಕ್ಕೆ ಅಗಾಧವಾದ ಒಳಿತನ್ನು ಉಂಟುಮಾಡುತ್ತದೆ. ಇದೇ ಉನ್ನತ ಶಿಕ್ಷಣದ ಧ್ಯೇಯವಾಗಬೇಕು ಮತ್ತು ಮಾನವೀಯ ಮೌಲ್ಯಗಳು ಉನ್ನತ ಶಿಕ್ಷಣದ ಗುರಿಗಳನ್ನು ನಿರ್ದೇಶಿಸುವಂತಿರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT