ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ

Last Updated 2 ಜುಲೈ 2013, 4:52 IST
ಅಕ್ಷರ ಗಾತ್ರ

ಜಗಳೂರು: `ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ತೀವ್ರ ಪೈಪೋಟಿ ಎದುರಾಗಿದ್ದು, ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳು ಒತ್ತು ನೀಡಬೇಕು' ಎಂದು ಶಾಸಕ ಎಚ್.ಪಿ.ರಾಜೇಶ್ ಸಲಹೆ ನೀಡಿದರು.

ಸೋಮವಾರ ಅವರು ಪಟ್ಟಣದ ಸಂತೆಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ರಾಜ್ಯ ಸರ್ಕಾರ ಶಿಕ್ಷಕರ ಕೊರತೆ ಇರುವ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕದ ಬಗ್ಗೆ ಕ್ರಮ ಕೈಗೊಂಡಿದ್ದು, ಶೀಘ್ರವೇ ಎಲ್ಲಾ ಶಾಲೆಗಳಿಗೆ ಶಿಕ್ಷಕರ ನೇಮಕವಾಗಲಿದೆ.

ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವರ್ಗ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಗಿಡಮರಗಳನ್ನು ಬೆಳೆಸುವ ಮೂಲಕ ಶಾಲೆಯ ಸೌಂದರ್ಯ ವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಕೇಂದ್ರ ಸರ್ಕಾರ ಶಿಕ್ಷಣಕ್ಕಾಗಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಶಿಕ್ಷಣ ಇಲಾಖೆ ಸಮರ್ಪಕವಾಗಿ ಅನುದಾನ ಬಳಸಿಕೊಂಡು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಾತ್ಮಕವಾಗಿ ರೂಪಿಸಬೇಕಿದೆ ಎಂದರು.

2012-13ನೇ ಸಾಲಿನಲ್ಲಿ ತಾಲ್ಲೂಕಿಗೆ 10 ಹೆಚ್ಚುವರಿ ಸರ್ಕಾರಿ ಶಾಲಾ ಕಟ್ಟಡಗಳು ಮಂಜೂರಾಗಿದ್ದು, ಬಹುತೇಕ  ಕಾಮಗಾರಿಗಳು  ಪೂರ್ಣಗೊಂಡಿವೆ. ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿದ್ದಪ್ಪ ಹೇಳಿದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ಚಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಕರಿಯಪ್ಪ, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ್ ಬಾಬು, ಮುಖ್ಯ ಶಿಕ್ಷಕಿ ಯಶೋಧಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT