ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ 1220 ಕೋಟಿ

Last Updated 4 ಡಿಸೆಂಬರ್ 2013, 8:24 IST
ಅಕ್ಷರ ಗಾತ್ರ

ಸುವರ್ಣ ಸೌಧ (ಬೆಳಗಾವಿ): ರಾಜ್ಯದಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಪಟ್ಟು ಗುತ್ತಿಗೆದಾರರಿಗೆ ಲೋಕೋಪ ಯೋಗಿ ಇಲಾಖೆ ನೀಡಬೇಕಾಗಿರುವ ಬಾಕಿ ಮೊತ್ತ ೧೨೨೦ ಕೋಟಿ ರೂಪಾಯಿ!

ಈ ವರ್ಷದ ಅಕ್ಟೋಬರ್ ೩೧ರ ಮುಕ್ತಾಯದ ವೇಳೆ ವಿವಿಧ ಲೆಕ್ಕ ಶೀರ್ಷಿಕೆಗಳ ಅಡಿ ಒಟ್ಟು ೧೨೨೦೯೦.೯೪ ಲಕ್ಷ ರೂಪಾಯಿ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ಬಿಜೆಪಿಯ ಗಣೇಶ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಸಚಿವರು ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಡಿ ಸಾಕಷ್ಟು ಅನುದಾನ ಇರುವ ಕಾರಣ ಯಾವುದೇ ಬಿಲ್ ಬಾಕಿ ಇಲ್ಲ. ರಸ್ತೆ ಮತ್ತು ಸೇತುವೆ ಕಾಮಗಾರಿಗಳ ಬಿಲ್ ಮಾತ್ರ ಪಾವತಿ ಯಾಗದೆ ಉಳಿದಿದೆ ಎಂದು ಹೇಳಿದ್ದಾರೆ.

ಬಾಕಿ ಇರುವ ಬಿಲ್ ಪಾವತಿ ಮಾಡಲು ಪೂರಕ ಅಂದಾಜಿನಲ್ಲಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ಬಿಡುಗಡೆ ಮಾಡುವ ಮೊತ್ತವನ್ನು ಆಯಾ ವಿಭಾಗ ಹಾಗೂ ಉಪ ವಿಭಾಗಗಳಲ್ಲಿ ಪ್ರೋರೇಟಾ ಆಧಾರದಲ್ಲಿ ಜೇಷ್ಠತೆಗೆ ಅನುಗುಣ ವಾಗಿ ಪಾವತಿಸಲಾಗುವುದು ಎಂದರು.

ಮಾರ್ಚ್ ಒಳಗೆ ಜಿಲ್ಲಾ  ರಸ್ತೆ ದುರಸ್ತಿ
ಮಳೆಯಿಂದಾಗಿ ಹಾಳಾಗಿರುವ ಜಿಲ್ಲಾ ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಮುಂದಿನ ವರ್ಷದ ಮಾರ್ಚ್ ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಮಹದೇವಪ್ಪ ತಿಳಿಸಿದ್ದಾರೆ.

ಅಲ್ಲಮ ಪ್ರಭು ಪಾಟೀಲ ಅವರು ಕೇಳಿದ ಪ್ರಶ್ನೆಗೆ ಮಂಗಳವಾರ ನೀಡಿರುವ ಲಿಖಿತ ಉತ್ತರದಲ್ಲಿ ಈ ಸಾಲಿನಲ್ಲಿ ಒಟ್ಟು ೩೦೫೪ ಜಿಲ್ಲಾ  ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು  ಹೇಳಿದ್ದಾರೆ. ಮಳೆಗಾಲ ಪೂರ್ವ ನಿರ್ವಹಣಾ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು  ಮುಂಗಾರು ನಂತರ ಉಳಿದ ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಆರಂಭಿಸಲಾಗುವುದು. ಇದಕ್ಕಾಗಿ ಅಂದಾಜು ಪತ್ರ ತಯಾರಿಸಿ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾತ್ಕಾಲಿಕ ಸೇತುವೆಗೆ ಹಣ: ಭಾಗಶಃ ಕುಸಿದಿರುವ ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ೬೩ರ ತೊರಣಗಲ್ಲು ಬಳಿಯ ತುಂಗಭದ್ರಾ ಬಲದಂಡೆ ನಾಲೆ ಸೇತುವೆಯ ಬದಲಿಗೆ ನಿರ್ಮಿಸಲಿರುವ ತಾತ್ಕಾಲಿಕ ಸೇತುವೆಗೆ ೩.೫ ಕೋಟಿ ರೂಪಾಯಿ ತೆಗೆದಿರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ.

ಮೃತ್ಯುಂಜಯ ಜಿನಗಾ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ಹೊಸಪೇಟೆಯಿಂದ ಆಂಧ್ರ ಗಡಿವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುತ್ತಿದ್ದು ಈ ಯೋಜನೆಯಡಿ ಸೇತುವೆ ಮರು ನಿರ್ಮಾಣ ಆಗಲಿದೆ ಎಂದು ತಿಳಿಸಿದ್ದಾರೆ.

ಈ ಸೇತುವೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಇದ್ದು ಕೇಂದ್ರ ಭೂ ಸಾರಿಗೆ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿ ಗಳು ಪ್ರಸ್ತಾವ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕೈಗಾರಿಕೋದ್ಯಮಿಗಳ ಸಹಕಾರದಿಂದ ಕುಸಿದಿರುವ ಭಾಗವನ್ನು ದುರಸ್ತಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ೧೨೭.೪೫ ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT