ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುದ್ದಲಿ, ಸಲಿಕೆಗಳೊಂದಿಗೆ ಕೂಲಿಕಾರರ ಮುತ್ತಿಗೆ

Last Updated 21 ಜೂನ್ 2012, 8:25 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಜಲಾನಯನ ಇಲಾಖೆಯಿಂದ ರೈತರ ಜಮೀನುಗಳಲ್ಲಿ ನಡೆಸಲಾಗುತ್ತಿರುವ ಬದು ನಿರ್ಮಾಣ ಕಾಮಗಾರಿಯಲ್ಲಿ ಜೆಸಿಬಿ ಯಂತ್ರಗಳ ಬದಲಾಗಿ ರೈತ ಕೂಲಿ ಕಾರ್ಮಿಕರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕಿನ ಕಡ್ಲಬಾಳು ಗ್ರಾಮದ ಕೂಲಿಕಾರರು ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸಲಿಕೆ- ಗುದ್ದಲಿಗಳೊಂದಿಗೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ವಿನೂತನವಾಗಿ ಪ್ರತಿಭಟಿಸಿದರು.

ಪಟ್ಟಣದ ಈಶ್ವರ ದೇವಸ್ಥಾನದ ಆವರಣದಿಂದ ಹೊರಟ 100ಕ್ಕೂ ಹೆಚ್ಚು ಕೂಲಿಕಾರರು ಇಲಾಖೆಯ ಅಧಿಕಾರಿಗಳಾದ ಹೇಮಣ್ಣ, ಚಂದ್ರಶೇಖರ್ ಹಾಗೂ ಮಹಾದೇವ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ರ‌್ಯಾಲಿಯ ಮೂಲಕ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಕೂಲಿ ನೀಡುವಂತೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಕಾರ್ಯದರ್ಶಿ ರಂಗಪ್ಪ ದಾಸರ್ ಮಾತನಾಡಿ, ಬದು ನಿರ್ಮಾಣ ಕಾಮಗಾರಿಯಲ್ಲಿ ಯಂತ್ರಗಳ ಬಳಕೆ ಬೇಡ ಎಂದು ಕೂಲಿಕಾರರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಮಣಿದ ಇಲಾಖೆ ಗ್ರಾಮದ ಕೂಲಿಕಾರರಿಗೆ ಎರಡು ವಾರ ಕೆಲಸ ನೀಡಿ ಇದ್ದಕ್ಕಿದ್ದಂತೆ ಕೆಲಸಕ್ಕೆ ಬರಬೇಡಿ ಎಂದು ಹೇಳುವ ಮೂಲಕ ಕೂಲಿಕಾರರನ್ನು ಒಕ್ಕಲೆಬ್ಬಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದು ಕಿಡಿ ಕಾರಿದರು.

ಸರಕಾರದ ಆದೇಶದಂತೆ ತಾಲ್ಲೂಕಿನ 22 ಸಾವಿರ ಎಕರೆ ಜಮೀನಿನಲ್ಲಿ ಬದು ನಿರ್ಮಾಣಕ್ಕೆ ಇಲಾಖೆ ಕ್ರಮ ಕೈಗೊಂಡಿದೆ. ಕಡ್ಲಬಾಳು ಸಹಿತ ಚಿಂತ್ರಪಳ್ಳಿ ಮತ್ತು ಬನ್ನಿಕಲ್ಲು ಗ್ರಾ.ಪಂ. ವ್ಯಾಪ್ತಿಯ ಜಮೀನುಗಳ ಬದು ನಿರ್ಮಾಣಕ್ಕೆ ರೂ.7.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, ಕೂಲಿಕಾರರ ಬದಲಾಗಿ ಜೆಸಿಬಿ ಯಂತ್ರಗಳ ಮೂಲಕ ಕಾಮಗಾರಿ ಪೂರೈಸಿ ಅನುದಾನ ಲೂಟಿ ಹೊಡೆಯುವ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿದರು.

ಬದು ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಸರಕಾರದ ಕೋಟಿಗಟ್ಟಲೇ ಅನುದಾನ ಅಧಿಕಾರಿಗಳ ಜೇಬಿನ ಪಾಲಾಗುತ್ತಿದೆ. ಕಾಮಗಾರಿಯ ಅನುಷ್ಠಾನದಲ್ಲಿ ಪಾರದರ್ಶಕತೆ ಇಲ್ಲ ಎಂದು ದೂರಿದ ಅವರು, ಇಡೀ ಕಾಮಗಾರಿಯ ಸಮಗ್ರ ಕ್ರಿಯಾ ಯೋಜನೆಯ ಸಮೇತ ತಾಲ್ಲೂಕು ಜಲಾನಯನ ಅಧಿಕಾರಿಯನ್ನು ಸ್ಥಳಕ್ಕೆ ಕರೆ ತರುವಂತೆ ಪಟ್ಟು ಹಿಡಿದರು.

ಖಾಲಿ ಕೈ ಬೀಸುತ್ತ ಸ್ಥಳಕ್ಕೆ ಧಾವಿಸಿದ ಅಧಿಕಾರಿ ಶೇಖ್ರಪ್ಪರನ್ನು ಕಂಡು ಕುಪಿತರಾದ ಪ್ರತಿಭಟನೆಕಾರರು ಬರಗಾಲದಲ್ಲಿ ಯಂತ್ರಗಳ ಮೂಲಕ ಯಾವುದೆ ಕಾಮಗಾರಿ ನಡೆಸಬಾರದು ಎಂಬ ಸರಕಾರದ ಆದೇಶ ಗಾಳಿಗೆ ತೂರುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಕೂಲಿ ಕೆಲಸ ನೀಡುವ ಕುರಿತಂತೆ ಸ್ಪಷ್ಟವಾಗಿ ಉತ್ತರಿಸದ ಅಧಿಕಾರಿಯ ವೈಖರಿ ಕಂಡು ಮಧ್ಯ ಪ್ರವೇಶಿಸಿದ ಸಿಪಿಐ ಹುಲ್ಲಣ್ಣನವರ್ ಕೂಲಿಕಾರರಿಗೆ ಕೆಲಸ ನೀಡುವ ಮನಸ್ಸಿದೆಯಾ ಎಂದು ಪ್ರಶ್ನಿಸಿದರು.
ಮೇಲಧಿಕಾರಿಗಳೊಂದಿಗೆ ಕೂಡಲೇ ಮಾತನಾಡಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಶೇಖ್ರಪ್ಪ ಅವರು ಜಿಲ್ಲಾ ಜಲಾನಯನ ಇಲಾಖೆಯ ಅಧಿಕಾರಿ ಮತ್ತು ತಹಸೀಲ್ದಾರ್ ನಾಗರಾಜ ಭಟ್‌ರೊಂದಿಗೆ ಚರ್ಚೆ ನಡೆಸಿ, ಕೂಲಿಕಾರರಿಗೆ ಕೆಲಸ ನೀಡುವ ಜೊತೆಗೆ ಚೆಕ್ ಮೂಲಕ ಕೂಲಿ ಹಣ ಪಾವತಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಸಂಘದ ಮುಖಂಡರಾದ ಮಲ್ಲಿಕಾರ್ಜುನ ಕೊಟಗಿ, ಓ.ತಿಂದಪ್ಪ, ಪಿ.ಸಣ್ಣ ದುರುಗಪ್ಪ, ಸಿ.ಹನಮಂತ, ಟಿ.ರೇವಣ್ಣ, ಕೆ.ರಾಮಪ್ಪ, ಸಿ.ಬಸವರಾಜ್ ಹಾಗೂ ಹಡಪದ ಕೊಟ್ರೇಶ್ ಮತ್ತು ವೈ.ಮಹೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಗ್ರಾಮದ 100ಕ್ಕೂ ಹೆಚ್ಚು ಕೂಲಿಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT