ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಪ್ತಚರ ಇಲಾಖೆಗೆ ಹೈಕೋರ್ಟ್ ನೋಟಿಸ್

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆಯು ಯಾವುದೇ ಕಾಯ್ದೆ ಅಡಿ ರಚನೆಗೊಂಡಿಲ್ಲದ ಹಿನ್ನೆಲೆಯಲ್ಲಿ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುತ್ತಿದ್ದು, ಈ ಕುರಿತು ಸೂಕ್ತ ಕ್ರಮಕ್ಕೆ ಗೃಹ ಸಚಿವಾಲಯಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವಾಲಯಕ್ಕೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಸೋಮವಾರ ಆದೇಶಿಸಿದೆ.

ಸಿಬಿಐ, ಗಡಿ ಭದ್ರತಾ ಪಡೆ ಸೇರಿದಂತೆ ಎಲ್ಲ ತನಿಖಾ ದಳಗಳು ಹಾಗೂ ಭದ್ರತಾ ಪಡೆಗಳು ಸಂಬಂಧಿತ ಕಾಯ್ದೆ ಅಡಿ ರಚಿತವಾಗಿವೆ. ಇವುಗಳು ಶಾಸನಬದ್ಧವಾಗಿ ರೂಪಿತಗೊಂಡಿವೆ. ಆದರೆ ಗುಪ್ತಚರ ಇಲಾಖೆ ಇದರಿಂದ ಹೊರತಾಗಿದೆ ಎನ್ನುವುದು ಅರ್ಜಿದಾರರ ಆರೋಪ. ಮುಂಬೈನಲ್ಲಿ 26/11ರಂದು ನಡೆದ ದಾಳಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ಅವರು, ಇಲಾಖೆಯ ವೈಫಲ್ಯವೇ ಇಂತಹ ಘಟನೆ ಸಂಭವಿಸಲು ಕಾರಣ ಎಂದಿದ್ದಾರೆ. ವಿಚಾರಣೆಯನ್ನು ಮುಂದೂಡಲಾಗಿದೆ.

ವಿಚಾರಣೆ ಮುಂದೂಡಿಕೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಅಳಿಯ ಸೋಹನ್‌ಕುಮಾರ್ ಅವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.

ಸೋಮವಾರ ಸುಮಾರು 2 ಗಂಟೆಗಳ ಕಾಲ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರು ವಾದವನ್ನು ಆಲಿಸಿದರು. ಬಾಷಾ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯರು, `ಭೂಹಗರಣದ ವಿಚಾರಣೆಗೆ ತಡೆ ಕೋರುವಂತೆ ಸೋಹನ್‌ಕುಮಾರ್ ಅವರು ಅರ್ಜಿ ಸಲ್ಲಿಸಲು ಅವರಿಗೆ ನ್ಯಾಯಸಮ್ಮತ ಅಧಿಕಾರವಿಲ್ಲ. ಯಾವುದೇ ಪ್ರಕರಣದಲ್ಲಿ ಆರೋಪಿಯಾದ ಪಕ್ಷದಲ್ಲಿ ಮಾತ್ರ ಅಂಥವರು ತಡೆ ಕೋರಬಹುದು. ಆದರೆ ಸೋಹನ್‌ಕುಮಾರ್ ಅವರನ್ನು ಆರೋಪಿ ಎಂದು ಕೋರ್ಟ್ ಹೇಳಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT