ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿಯ ದೊಡ್ಡ ಮನೆ

Last Updated 24 ಡಿಸೆಂಬರ್ 2010, 6:45 IST
ಅಕ್ಷರ ಗಾತ್ರ

‘ನನಗೆ ಹಿಂದಿನ ಸಿನಿಮಾಗಳು ನೆನಪಾಗುತ್ತಿವೆ’ ಹಾಸ್ಯನಟ ಶರಣ್ ಭಾವುಕರಾಗಿ ಹೇಳಿದರು. ಪಕ್ಕದಲ್ಲಿ  ಕುಳಿತಿದ್ದ ರಂಗಾಯಣ ರಘು ‘ಹೌದು, ನಿಜವಾದ ಸಿನಿಮಾ ಅಂದ್ರೆ ಅದೇನೆ’ ಎಂದು ಪಕ್ಕವಾದ್ಯ ನುಡಿಸಿದರು. ಹೀಗೆ ಶರಣ್ ಮತ್ತು ರಂಗಾಯಣ ರಘು ಹಳೆಯ ಸಿನಿಮಾಗಳ ಗುಣಗಾನ ಮಾಡುತ್ತಿದ್ದರೆ ನಾಯಕ ವಿಜಯ್, ನಾಯಕಿ ರಮ್ಯಾ, ನಿರ್ದೇಶಕ ಪ್ರೀತಂಗುಬ್ಬಿ, ಕ್ಯಾಮರಾಮನ್ ಕೃಷ್ಣ ಅವರನ್ನೇ ನೋಡುತ್ತ ಕುಳಿತಿದ್ದರು.

ಪುಟ್ಟ ಚರ್ಚೆಗೆ ಚಾವಡಿ ಕಟ್ಟೆಯಾಗಿದ್ದುದು ‘ಜಾನಿ-ಮೇರಾ ನಾಮ್ ಪ್ರೇಮ್ ಮೇರಾ ಕಾಂ’ ಚಿತ್ರದ ಸೆಟ್.ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಎದುರಿಗೆ ಸಂಧ್ಯಾರಾಗ ಕಲಾ ದೇಗುಲ ಸ್ಟುಡಿಯೋ ತಲೆಎತ್ತಿದೆ. ಈ ಸ್ಟುಡಿಯೋದಲ್ಲಿ ಜಾನಿ ಚಿತ್ರೀಕರಣ ನಡೆಯುತ್ತಿದೆ. ಡಿ.17ರ ಶುಕ್ರವಾರ ಚಿತ್ರತಂಡ ಮಧ್ಯಾಹ್ನ ಊಟದ ಬಿಡುವಿನಲ್ಲಿ ಸೆಟ್‌ನಲ್ಲಿ ಮಾತಿಗೆ ಕುಳಿತಿತ್ತು.

ಶರಣ್ ಮತ್ತು ರಂಗಾಯಣ ರಘುವಿಗೆ ಹಿಂದಿನ ಸಿನಿಮಾ ನೆನಪು ಬರಲು ಕಾರಣ ಜಾನಿ ಚಿತ್ರಕ್ಕಾಗಿ ನಿರ್ಮಿಸಿರುವ ಬೃಹತ್ ಸೆಟ್. ಒಂದೂವರೆ ಎಕರೆ ಪ್ರದೇಶದಲ್ಲಿ ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಗಾಂಧಿ ಕಾಲೋನಿ ಸೃಷ್ಟಿಸಿದ್ದಾರೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗ ಬದುಕುವ ಗಾಂಧಿ ಕಾಲೋನಿಯಲ್ಲಿ ಕೈಪಂಪ್ ಇರುವ ಕೊಳವೆ ಬಾವಿ, ಹಾಲಪ್ಪ ಕ್ಲಿನಿಕ್, ಗಡಿಯಾರ ಗೋಪುರ, ಪಿವಿಆರ್ ಮಲ್ಟಿಫ್ಲೆಕ್ಸ್, ಅತ್ಯಾಧುನಿಕ ಶೋ ರೂಂಗಳಿವೆ.

ಹಾಗೆಯೇ ಜಾನಿ ಸೇವಾ ಸಮಿತಿಯೂ ಇದೆ.ಸ್ಯಾಂಡಲ್‌ವುಡ್ ಇತ್ತೀಚಿನ ವರ್ಷಗಳಲ್ಲಿ ಇಂತಹ ಬೃಹತ್ ಸೆಟ್ ಹಾಕಿದ್ದೇ ಅಪರೂಪ. 80ರ ದಶಕದವರೆಗೂ ಸಿನಿಮಾ ಹೆಚ್ಚಾಗಿ ಸ್ಟುಡಿಯೋಗಳ ಫ್ಲೋರ್‌ನಲ್ಲಿಯೇ ತಯಾರಾಗುತ್ತಿದ್ದವು. ಆನಂತರದಲ್ಲಿ ಚಿತ್ರ ನಿರ್ಮಾಣ ಸ್ಟುಡಿಯೋದಿಂದ ಹೊರಕ್ಕೆ ಬಂದಿತು.ಹಲವಾರು ಸಮಸ್ಯೆಗಳಿಂದ ಮತ್ತೆ ಸ್ಟುಡಿಯೋ ಹಾದಿ ಹಿಡಿದೆ. ಈ ಕಾರಣಕ್ಕಾಗಿಯೇ ಶರಣ್, ರಂಗಾಯಣ ರಘು ಹಿಂದಿನ ಸಿನಿಮಾಗಳನ್ನು ನೆನಪಿಸಿಕೊಂಡಿದ್ದು. 

ಜಾನಿ ಶೂಟಿಂಗ್ ಶೇ.80ರಷ್ಟು ಇದೇ ಸೆಟ್‌ನಲ್ಲಿ ನಡೆಯಲಿದೆ. ಇದೇ ಕಾಲೋನಿಯಲ್ಲಿ ಜಾನಿ ವಾಸವಿರುತ್ತಾನೆ. ಇಲ್ಲಿಗೆ ಎನ್‌ಆರ್‌ಐ ರಮ್ಯಾ ಬರುತ್ತಾಳೆ.ಆನಂತರ ನಡೆಯುವುದೆಲ್ಲ ತಮಾಷೆ, ಪ್ರೀತಿ, ಹೊಡೆದಾಟ. ನಿರ್ಮಾಪಕ ಜಯಣ್ಣ ಆರಂಭದಲ್ಲಿ, ‘ಇಷ್ಟೊಂದು ದೊಡ್ಡ ಸೆಟ್ ಬೇಕಾ’ ಅಂತ ಕೇಳಿದ್ದರಂತೆ. ‘ಬೇಕೇ ಬೇಕು’ ಎಂದಮೇಲೆ ಒಪ್ಪಿಕೊಂಡರು ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದರು.

ವಿಜಯ್, ರಮ್ಯಾ ಮೊದಲ ಬಾರಿಗೆ ಜಾನಿಯಲ್ಲಿ ಜೊತೆಯಾಗಿದ್ದಾರೆ. ‘ರಮ್ಯಾ ಜೊತೆ ಅಭಿನಯಿಸಲು ಖುಷಿಯಾಗಿದೆ. ನನಗೆ ಬಣ್ಣ ಬಳಿದು ಆಕೆ ಮುಂದೆ ನಿಲ್ಲಿಸಿದ್ದಾರೆ’ ಎಂದು ವಿಜಯ್ ತಮ್ಮನ್ನು ತಾವೇ ಗೇಲಿ ಮಾಡಿಕೊಂಡರು. ರಮ್ಯಾಗೆ ಕೂಡ ವಿಜಯ್ ಜೊತೆಯಾಗಿರುವುದು ಸಕತ್ ಖುಷಿಯಾಗಿದೆ.

‘ಸೆಟ್ ಕೃತಕ ಅನಿಸುವುದಿಲ್ಲವೇ’ ಎನ್ನುವ ಪತ್ರಕರ್ತರ ತಕರಾರನ್ನು ಛಾಯಾಗ್ರಹಕ ಕೃಷ್ಣ ಒಪ್ಪಲಿಲ್ಲ.‘ಸೆಟ್‌ಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡುತ್ತೇವೆ. ತೆರೆಮೇಲೆ ನೋಡುವಾಗ ಸಹಜವಾಗಿಯೇ ಕಾಣಿಸುತ್ತದೆ. ಸೆಟ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ನಮ್ಮ ಶೆಡ್ಯೂಲ್‌ಗಿಂತ ಮೂರು ದಿನ ಮುಂದೆ ಇದ್ದೇವೆ’ ಎಂದವರು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT