ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಮ್ಮಗೋಳ ಜಾದೂ

Last Updated 10 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಈ ಊರಲ್ಲಿ ವರ್ಷಾನುಗಟ್ಟಲೇ ವಿದ್ಯುತ್ ಶುಲ್ಕ ಪಾವತಿಸದ ಕುಟುಂಬಗಳಿದ್ದವು. ಕೆಲವು ಮನೆಗಳ ವಿದ್ಯುತ್ ಶುಲ್ಕ ಎಷ್ಟು ಬಾಕಿ ಇತ್ತೆಂದರೆ ಆ ಮನೆಯನ್ನು ಮಾರಿದರೂ ತೀರದಷ್ಟು! ವಿದ್ಯುತ್ ಸಂಪರ್ಕ ಕಡಿತ­ಗೊಳಿಸಿದರೂ ಸಮೀಪದ ವಿದ್ಯುತ್ ಕಂಬದ ತಂತಿಯಿಂದ ಮತ್ತೆ ವಿದ್ಯುತ್ ಪಡೆಯುವಲ್ಲಿ ಈ ಊರವರು ಯಶಸ್ವಿಯಾಗು­ತ್ತಿದ್ದರು.

ಒಂದು ಹಂತದಲ್ಲಿ ಕರೆಂಟ್ ಬಿಲ್ ಸಂಗ್ರಹಿಸಲು ಈ ಊರಿಗೆ ಬರುವ ಧೈರ್ಯ ಯಾರಿಗೂ ಇರಲಿಲ್ಲ ಎಂಬಂಥ ವಾತಾವರಣ ಇತ್ತು. ನೀರಿಗಾಗಿ ಜಗಳವಾಡುವ, ಸಮೀಪದ ಹಳ್ಳದ ಒರತೆಯಿಂದ ನೀರನ್ನು ಕೆರೆದು ಕೆರೆದು ತುಂಬಿಕೊಂಡು ಬರುವ ಚಿತ್ರ ಸಾಮಾನ್ಯವಾಗಿತ್ತು. ವರ್ಷದ ಎಲ್ಲಾ ಕಾಲದಲ್ಲೂ ರಾಡಿಯಾದ ರಸ್ತೆಗಳಲ್ಲೇ ಓಡಾಡಬೇಕಿತ್ತು.

ಅಂಥ ಊರು ಕಳೆದ ವರ್ಷ ಕೇಂದ್ರ ಸರ್ಕಾರದ ರಾಷ್ಟ್ರೀಯ ಗೌರವ ಗ್ರಾಮಸಭಾ ಪ್ರಶಸ್ತಿಯನ್ನು ಪಡೆದುಕೊಂಡು ಬೀಗು­ತ್ತಿದೆ. ಅದು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಗುಮ್ಮಗೋಳ. ಈಗ ಗುಮ್ಮಗೋಳದಲ್ಲಿ ಯಾರೂ ವಿದ್ಯುತ್ ಶುಲ್ಕದ ಬಾಕಿಯನ್ನು ಇಟ್ಟುಕೊಂಡಿಲ್ಲ. ರಸ್ತೆಗಳು ಸ್ವಚ್ಛವಾಗಿವೆ. ಮನೆ ಬಾಗಿಲಿಗೇ ಶುದ್ಧ ಕುಡಿಯುವ ನೀರು ಪೂರೈಕೆ­ಯಾಗುತ್ತದೆ. ಊರಿನ ಬೀದಿ ದೀಪಗಳೆಲ್ಲವೂ ಸೌರಶಕ್ತಿಯಿಂದ ಬೆಳಗುತ್ತವೆ!

ಗುಮ್ಮಗೋಳ ಬದಲಾದ ಪರಿ ಬೆರಗು ಹುಟ್ಟಿಸುತ್ತದೆ. ತಾಲ್ಲೂಕಿನ ಗುಮ್ಮಗೋಳ ಮತ್ತು ಬ್ಯಾಲ್ಯಾಳ ಎಂಬ ಎರಡು ಗ್ರಾಮಗಳ ವ್ಯಾಪ್ತಿಯ ಗುಮ್ಮಗೋಳ ಗ್ರಾಮ ಪಂಚಾಯಿತಿ ಸುಮಾರು ನಾಲ್ಕು ಸಾವಿರ ಜನಸಂಖ್ಯೆಯನ್ನು ಹೊಂದಿದೆ.  ಇಲ್ಲಿಯ೧೧ ಜನ ಸದಸ್ಯರ ಗ್ರಾಮ ಪಂಚಾಯಿತಿಯಲ್ಲಿ ಆರು ಜನ ಪುರುಷರು, ಐವರು ಮಹಿಳೆಯರು. ಈ ಪಂಚಾಯಿತಿಯ ಪ್ರಮುಖ ಸಾಧನೆ ಎಂದರೆ ಎರಡೂ ಗ್ರಾಮದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು. ಈಗ ಗುಮ್ಮಗೋಳ ಜಿಲ್ಲೆಯಲ್ಲಿ ಎದ್ದು ಕಾಣುವಂಥ ಗ್ರಾಮವಾಗಿದೆ.

ಹಳ್ಳಿಯ ಓಣಿಗಳಲ್ಲಿ ಕಸದ ತೊಟ್ಟಿಗಳು
ಈ ಗ್ರಾಮದಲ್ಲಿ ಓಣಿಗಳನ್ನು ಗುರುತಿಸುವುದು ಹೀಗೆ: ೭ನೇ ಪ್ಲಾಟ್ ಮುಖ್ಯರಸ್ತೆ, ೮ನೇ ಪ್ಲಾಟ್ ಮುಖ್ಯರಸ್ತೆ, ೯ನೇ ಪ್ಲಾಟ್ ಮುಖ್ಯರಸ್ತೆ ....ಡಾ.ಪಾಟೀಲ ಪುಟ್ಟಪ್ಪ ಮಾರ್ಗ, ಡಾ. ಶಿವರಾಮ ಕಾರಂತ ಮಾರ್ಗ, ಡಾ. ಕುವೆಂಪು ಮಾರ್ಗ... ಹೀಗೆ ಮಾರ್ಗ ಫಲಕಗಳೂ ಇಲ್ಲಿವೆ. ಪ್ರತಿ ಓಣಿಯಲ್ಲಿ ಕಸ ಸಂಗ್ರಹಣೆಗಾಗಿ ತೊಟ್ಟಿಗಳಿವೆ. ನೆದರ್‌ಲೆಂಡ್ ಹಾಗೂ ರಾಜೀವ್‌ಗಾಂಧಿ ಸಬ್‌ಮಿಶನ್ ಯೋಜನೆಯಡಿ ಎರಡೂ ಗ್ರಾಮಗಳ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆ.

ಬ್ಯಾಲ್ಯಾಳದಲ್ಲಿಯಂತೂ ನೀರಿಗೆ ಮೀಟರ್ ಅಳವಡಿಕೆಯೂ ಆಗಿದೆ. ಗುಮ್ಮಗೋಳಕ್ಕೆ  ಇಷ್ಟೇ ನೀರು ಸಾಕಾಗುವುದಿಲ್ಲವೆಂದು ಮಲಪ್ರಭಾ ಬಲದಂಡೆ ಕಾಲುವೆಯಿಂದ ಊರಿನ ಕೆರೆಗೆ ನೀರನ್ನು ತುಂಬಿಸುವ ಕಾಮಗಾರಿಯೂ ಆರಂಭವಾಗುತ್ತಿದೆ. ಕೆರೆ ತುಂಬಿದರೆ ಮೊರಬ, ತೆಲಿಮೊರಬ ಹಾಗೂ ಗುಮ್ಮಗೋಳ ಗ್ರಾಮದ ಎಲ್ಲರೂ ನಿರಾಳರಾಗುತ್ತಾರೆ. ಈ ನೀರು ಬಂದರೆ ‘ನೀರಿನ ಪರ್ಲುಗ ಪೂರಾ ಹರದಂಗ’ ಎನ್ನುತ್ತಾರೆ ಗ್ರಾಮಸ್ಥರು.

ಯೋಜನೆಗಳ ಉಸ್ತುವಾರಿ ಹಾಗೂ ನಿರ್ವಹಣೆಗೆ ಆಯಾ ವಾರ್ಡಿನಲ್ಲಿನ ನೀರು ಮತ್ತು ನೈರ್ಮಲ್ಯ ಸಮಿತಿ ರಚನೆಯಾಗಿದೆ. ಈ ಸಮಿತಿಯ ಉಸ್ತುವಾರಿಯಲ್ಲಿಯೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಘನತ್ಯಾಜ್ಯ ವಿಲೇವಾರಿಗೆ ಕಾಂಪೋಸ್ಟ್ ಯಾರ್ಡ್ ಸ್ಥಾಪಿಸಲಾಗಿದೆ. ಅಲ್ಲಿಯೇ ಎರೆಹುಳು ಗೊಬ್ಬರ ತಯಾರಿಕೆಗೆ ಸಿದ್ಧತೆಯೂ ನಡೆದಿದೆ. ಎರೆ ಹುಳು ಗೊಬ್ಬರ ತಯಾರಿಸುವ ಬಗ್ಗೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಹೋಗುವ ಬಗ್ಗೆಯೂ ಇಲ್ಲಿಯ ಗ್ರಾ. ಪಂ. ಸದಸ್ಯರು ಯೋಚಿಸುತ್ತಿದ್ದಾರೆ.

ಗ್ರಾಮದ ಓಣಿಗಳಲ್ಲಿ ಇಟ್ಟ ತೊಟ್ಟಿಗಳಲ್ಲಿ ಸಂಗ್ರಹವಾದ ಕಸವನ್ನು ಸಾಗಿಸಲು ದೂಡುಗಾಡಿಗಳಲ್ಲದೇ ಪಂಚಾಯಿತಿಯೇ ಒಂದು ಪುಟ್ಟ ವಾಹನವನ್ನು ಖರೀದಿಸಿದೆ. ಅದಕ್ಕಾಗಿ ಮೂವರು ಸಿಬ್ಬಂದಿ ಬೆಳಗಿನ ಜಾವ ದುಡಿಯುತ್ತಾರೆ. ಚಕ್ಕಡಿಗಳು ಇಲ್ಲವೆನ್ನುವಷ್ಟು ಅಪರೂಪವಾಗಿರುವ ಈ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗಳದೇ ಪ್ರಾಬಲ್ಯ. ಪಂಚಾಯಿತಿಯೂ ಬರುವ ದಿನಗಳಲ್ಲಿ ಟ್ರ್ಯಾಕ್ಟರ್ ಖರೀದಿಸಬೇಕೆಂದು ಯೋಚಿಸುತ್ತಿದೆ.

ನೀರು ಮತ್ತು ನೈರ್ಮಲ್ಯ ಸಮಿತಿಯ ಗುಮಾಸ್ತ ಮತ್ತು ಕಸ ಸಂಗ್ರಹಿಸುವ ವಾಹನದ ಡ್ರೈವರ್ ಎರಡೂ ಆಗಿ ಕೆಲಸ ಮಾಡುತ್ತಿರುವ ಶಂಕರ ದೇಸಾಯಿ ಅವರ ಪ್ರಕಾರ ಇಲ್ಲಿನ ಜನರ ಸಹಭಾಗಿತ್ವವೇ ದೊಡ್ಡದು. ಸಮಿತಿಯಲ್ಲಿ ಚುನಾಯಿತ ಸದಸ್ಯರಿದ್ದರೂ ಖಜಾಂಚಿ ಮಾತ್ರ ಊರಿನ ಯಾರೋ ಒಬ್ಬರು ಆಗಿರುತ್ತಾರೆ. ಇದರಿಂದ ಜನಪ್ರತಿನಿಧಿಗಳ ಹಾಗೂ ಜನರ ಇಬ್ಬರ ಜವಾಬ್ದಾರಿಯೂ ಹೆಚ್ಚುತ್ತದೆ ಎನ್ನುತ್ತಾರೆ ಅವರು. ಈ ಸಮಿತಿಯ ಕಾರ್ಯ ನಿರ್ವಹಣೆಗಾಗಿಯೇ ಪ್ರತ್ಯೇಕ ಕಟ್ಟಡವಿದ್ದು, ನೀರು ಶುದ್ಧೀಕರಣ ಘಟಕವೂ ಇಲ್ಲಿಯೇ ಇದೆ. ಗ್ರಾಮ ಲೆಕ್ಕಾಧಿಕಾರಿ ಹಾಗೂ ಕೃಷಿ ಸಹಾಯಕರಿಗಾಗಿ ಪ್ರತ್ಯೇಕ ಕಚೇರಿ ಕಟ್ಟಡವಿದೆ.

ನೀರಿಗೆ ಕರ ಎಂದಾಗ ದಿಗಿಲು ಬಿದ್ದರು!
ಒರತೆ, ಹಳ್ಳದಿಂದ ನೀರು ತರುತ್ತಿದ್ದವರ ಮನೆ ಬಾಗಿಲಿಗೆ ನೀರು ಕೊಟ್ಟು, ನೀರಿಗೆ ಕರ ಕೊಡಬೇಕು ಎಂದಾಗ ಊರವರಿಗೆ ಒಮ್ಮೆಗೇ ದಿಗಿಲಾಗಿತ್ತಂತೆ! ತಿಂಗಳಿಗೆ ಹತ್ತು ರೂಪಾಯಿ ಕೊಡಬೇಕಲ್ಲ? ಆದರೆ ಇದೀಗ ಅವರೇ  ತಿಂಗಳಿಗೆ ೩೦ರಿಂದ ೪೦ ರೂಪಾಯಿವರೆಗೆ ನೀರಿನ ಕರ ಕೊಡುತ್ತಾರೆ. ಸ್ವಯಂ­ಪ್ರೇರಣೆ­ಯಿಂದ ಊರಿನ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರತಿ ತಿಂಗಳು ಪಡಿತರ ವ್ಯವಸ್ಥೆಯ ಮೂಲಕ ಆಹಾರ ಧಾನ್ಯ ವಿತರಣೆ ನಡೆಯುವಾಗ ಕರ ವಸೂಲಾತಿಯೂ ನಡೆಯುತ್ತದೆ. ಒಂದೆಡೆ ಕರ ಸಂಗ್ರಹಣೆ ನಡೆದರೆ ಅದರ ಮುಂದಿನ ಹಂತ ಪಡಿತರ ಧಾನ್ಯ ಪಡೆಯುವುದು. ಹೀಗಾಗಿ ಗ್ರಾಮದಲ್ಲಿ ಶೇ ೧೦೦ರಷ್ಟು ಕರ ವಸೂಲಾತಿ ಆಗುತ್ತಿದೆ. ಇತ್ತ  ಕರ ಪಾವತಿಯಾದರೆ, ಅತ್ತ ರೇಷನ್ ವಿತರಣೆ! ಆರಂಭದಲ್ಲಿ ತುಸು ಕಷ್ಟವಾದರೂ ಜನರು ಬರುಬರುತ್ತ ಈ ವ್ಯವಸ್ಥೆಗೆ ಹೊಂದಿ­ಕೊಂಡರು. ಈಗ ಅವರೇ ಸ್ವಯಂ ಪ್ರೇರಿತರಾಗಿ ಕರ ಕಟ್ಟುತ್ತಾರೆ ಎನ್ನುತ್ತಾರೆ ಗ್ರಾ.ಪಂ. ಉಪಾಧ್ಯಕ್ಷ ಭೀಮಪ್ಪ ಹೆಬ್ಬಳ್ಳಿ.

ಶೌಚಾಲಯ–ಸ್ಮಶಾನ
ಈಗಾಗಲೇ ಶೇ ೮೦ರಷ್ಟು ಜನರು ಶೌಚಾಲಯಗಳನ್ನು ಬಳಸುತ್ತಿದ್ದು, ಇನ್ನುಳಿದವರಿಗೆ ಶೌಚಾಲಯ ಬಳಸಲು ಮನವೊಲಿಸಲಾಗುತ್ತಿದೆ. ಇನ್ನು 263 ಶೌಚಾಲಯಗಳ ನಿರ್ಮಾಣವಾಗಬೇಕಿದ್ದು, ಅದಕ್ಕೆ ಬೇಕಾದ ರಿಂಗ್‌ಗಳನ್ನು ಸ್ಥಳೀಯವಾಗಿಯೇ ತಯಾರಿಸಲಾಗುತ್ತಿದೆ
ನಿರ್ಗತಿಕರಿಗೆ ಶೌಚಾಲಯ: ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ವ್ಯವಸ್ಥೆಯಡಿ ಒಟ್ಟು ೧೦ ಶೌಚಾಲಯಗಳಿವೆ.

 ಗ್ರಾಮದ ಪ್ರತಿ ಮನೆಯವರೂ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಆಯ್ದ ೨೦ ಕಡುಬಡವರಿಗೆ, ನಿರ್ಗತಿಕರಿಗೆ ಈ ಸಾಮೂಹಿಕ ಶೌಚಾಲಯದ ಕೊಠಡಿಗಳನ್ನು ಹಂಚಿಕೆ ಮಾಡಲು ಪಂಚಾಯಿತಿ ನಿರ್ಧರಿಸಿದೆ. ತೋಡಿದ ಹಳ್ಳದಂತಾಗಿದ್ದ ಸ್ಮಶಾನದ ಜಾಗವನ್ನು ಸಮತಟ್ಟು ಮಾಡಲಾಗಿದೆ. ಗುಮ್ಮಗೋಳ ಭೇಟಿಗೆ ಹೋದಾಗ ಸ್ಮಶಾನದಲ್ಲಿ (ಶಾಂತಿಧಾಮ) ಗಿಡಗಳನ್ನು ನೆಡುವ ಕೆಲಸ ನಡೆಯುತ್ತಿತ್ತು. ಅಂತ್ಯಕ್ರಿಯೆಗಾಗಿ ಬಂದವರಿಗೆ ನೀರು, ನೆರಳು ಸಿಗಲಿ ಎಂದು ಅಲ್ಲಿ ನೀರಿನ ವ್ಯವಸ್ಥೆಯನ್ನೂ ಮಾಡಲಾ­ಗುತ್ತಿದೆ. ಗ್ರಾಮದ ಬಸ್ ನಿಲ್ದಾಣದ ಬಳಿಯೇ ಗ್ರಾಮ ಪಂಚಾಯಿತಿಯು ವಾಣಿಜ್ಯ ಮಳಿಗೆಯನ್ನು ನಿರ್ಮಿಸಿದ್ದು, ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಅವುಗಳನ್ನು ಬಾಡಿಗೆಗೆ ನೀಡಲಾಗಿದೆ.

ಹೆಚ್ಚಿತು ಶಿಸ್ತು–ಊರ ಬಗ್ಗೆ ಪ್ರೀತಿ
ಪ್ಲಾಸ್ಟಿಕ್ ಕಸ, ಕೂದಲು, ಗಾಜು, ದನದ ಸಗಣಿ, ಬೂದಿ ಎಲ್ಲವನ್ನೂ ತಿಪ್ಪೆಗೆ ಸುರಿಯುವ ಇಲ್ಲವೇ ರಸ್ತೆಯ ಬದಿಗೆ ಸುರಿ­ಯುವ ಪರಿಪಾಠ ಇಲ್ಲಿ ನಿಂತಿದ್ದು, ಜನರು ಕಸವನ್ನು ಓಣಿಯ ತುದಿಯಲ್ಲಿರುವ ಕಸದ ತೊಟ್ಟಿಗೇ ಸುರಿಯುತ್ತಾರೆ. ಈ ಶಿಸ್ತು ತಮ್ಮಲ್ಲಿ ಬಂದದ್ದು ಹೇಗೆಂದು ಬೆರಗಾಗುತ್ತಾರೆ.

2004ರಿಂದ ಇಲ್ಲಿಯವರೆಗೂ ಗ್ರಾಮ ಪಂಚಾಯಿತಿ ಸದಸ್ಯರು ಅವಿರೋಧವಾಗಿಯೇ ಆಯ್ಕೆಯಾ­ಗಿದ್ದಾರೆ. ಇತ್ತೀಚೆಗೆ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯು­ತ್ತಿದ್ದು, ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಮಾತ್ರ ಅವಿರೋಧ­ವಾಗಿಯೇ ನಡೆದಿದೆ. ಇಂಥ ಹತ್ತು ಹಲವಾರು ವಿನೂತನ ಪ್ರಯೋಗಗಳನ್ನು ಮಾಡಿ, ಅದರಲ್ಲಿ ಯಶಸ್ಸನ್ನೂ ಕಂಡಿರುವ ಗುಮ್ಮಗೋಳ ಗ್ರಾ.ಪಂ. 2007–08ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರಕ್ಕೆ, 2011–12ರಲ್ಲಿ ‘ಪಂಚಾಯತ್ ಎಂಪವರ್‌­ಮೆಂಟ್ ಆಂಡ್‌ ಅಕೌಂಟೆ­ಬಿಲಿಟಿ ಸ್ಕೀಮ್’ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.

ಕಸದಿಂದ ಗೊಬ್ಬರ ತಯಾರಿಸಲು ಊರ ಹೊರಗೆ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಈಗಲ್ಲದಿದ್ದರೂ ಇನ್ನೊಂದು ವರ್ಷಕ್ಕಾದರೂ ಅದರ ಪೂರ್ಣ ಪ್ರಮಾಣದ ಬಳಕೆಯಾಗ­ಬಹುದು ಎನ್ನುತ್ತಾರೆ ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ವಾಲಿ, ಕಾಯದರ್ಶಿ ಪ್ರವೀಣ ಶಿಂಗ್ರಿ. ಗ್ರಾಮದಲ್ಲಿ ಏನು ಮಾಡ­ಬೇಕಾಗಿದೆಯೋ ಅದರ ಬಗ್ಗೆ ಮೊದಲು ಮಾನಸಿಕ ವಾತಾವರಣ ನಿರ್ಮಾಣ ಮಾಡಬೇಕು ಎನ್ನುತ್ತಾರೆ ಬದಲಾವ­ಣೆಯ ರೂವಾರಿ ಪಿಡಿಒ ಜಗದೀಶ ಹಡಪದ.

ಪಂಚಾಯಿತಿಯ ಮಾಜಿ ಸದಸ್ಯರು ಪ್ರತಿ ಸಭೆಗೂ ಹಾಜರಾಗಿ ಇವರೆಲ್ಲರಿಗೆ ಸಲಹೆ–ಮಾರ್ಗದರ್ಶನ ನೀಡುತ್ತಾರೆ. ಪಂಚಾಯಿತಿಯ ಮಾಜಿ ಸದಸ್ಯರು ಪ್ರತಿ ಸಭೆಗೂ ಹಾಜರಾಗಿ ಮಾರ್ಗದರ್ಶನ ಮಾಡುತ್ತಾರೆ.  ತಮ್ಮದೇ ಪಂಚಾಯಿತಿಯ ಅಭಿವೃದ್ಧಿ ಕಾರ್ಯ­ಗಳಲ್ಲಿ ಊರವರೆಲ್ಲ ಸಕ್ರಿಯರಾಗಿ ಭಾಗಿಯಾಗುತ್ತಾರೆ; ‘ನಮ್ಮೂರು... ಬದ್ಲಾಗೇತ್ರೀ...’ ಎನ್ನುತ್ತಾರೆ.

ಪ್ಲಾಸ್ಟಿಕ್ ಸೌಧ
ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಊರಿನಲ್ಲೊಂದು ಪ್ಲಾಸ್ಟಿಕ್ ಸೌಧ ತಲೆ ಎತ್ತಿದೆ.  ಶಾಲಾ ಮಕ್ಕಳು ‘ಶ್ರಮದಾನ’ ಅವಧಿಯಲ್ಲಿ ಊರಲ್ಲಿನ ಪ್ಲಾಸ್ಟಿಕ್ ಹಾಳೆಗಳನ್ನು, ತ್ಯಾಜ್ಯವನ್ನು ಆಯ್ದು ಈ ಪ್ಲಾಸ್ಟಿಕ್ ಸೌಧಕ್ಕೆ ಸುರಿಯುತ್ತಿದ್ದಾರೆ. ಈ ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ವಿಚಾರ ನಡೆದಿದ್ದು, ಈ ಅಭಿಯಾನದಲ್ಲಿ ಮಕ್ಕಳೊಂದಿಗೆ ಊರವರೂ ಶ್ರಮದಾನ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಗುಮ್ಮಗೋಳ­ದಲ್ಲಿ ಜಾದೂ ಸಂಭವಿಸಿದೆ. ನಗರಗಳಲ್ಲಿಯೂ ಕಾಣ ಸಿಗದಂಥ ಕಸ ನಿರ್ವಹಣಾ ವ್ಯವಸ್ಥೆ ಇಲ್ಲಿದೆ. ಕರ ಸಂಗ್ರಹ ಶೇಕಡಾ ನೂರಕ್ಕೆ ನೂರರಷ್ಟಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಇದನ್ನೆಲ್ಲಾ ಸಾಧಿಸಿದ್ದೇ ಒಂದು ಮಾಂತ್ರಿಕ ವಾಸ್ತವ.
–ವಿಶಾಲಾಕ್ಷಿ ಅಕ್ಕಿ

ಸೌರಶಕ್ತಿಯ ಬೆಳಕು
ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡ ಕಟ್ಟಿಕೊಂಡಿರುವ ಪಂಚಾಯಿತಿ ಕಟ್ಟಡ ಅತ್ಯಾಧುನಿಕವಾಗಿದ್ದು, ಇಡೀ ಊರಿಗೆ ಕಳಸವಿಟ್ಟಂತೆ ಕಾಣುತ್ತದೆ. ಊರಿನ ಬೀದಿ ದೀಪಗಳ ಜೊತೆಗೆ ಪಂಚಾಯಿತಿ ಕಟ್ಟಡವೂ ಸೌರಶಕ್ತಿಯಿಂದಲೇ ಬೆಳಕು ಕಾಣುತ್ತದೆ. ಪಂಚಾಯಿತಿ ಕಚೇರಿಯ ಆವರಣದಲ್ಲಿ ಗ್ರಾಮಸಭೆ ಕಟ್ಟೆ ಇದೆ.

ಮುಂದಿನ ದಿನಗಳಲ್ಲಿ ಇಡೀ ಊರಿಗೇ ಸೌರಶಕ್ತಿಯ ಬೆಳಕು ಸಿಗಬೇಕು ಎನ್ನುವುದು ಸದ್ಯದ ಯೋಜನೆ. ಈ ಬೀದಿದೀಪಗಳ ನಿರ್ವಹಣೆಗೇ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳ­ಲಾಗಿದೆ.  ಅಚ್ಚುಕಟ್ಟಾದ ನಾಲ್ಕು ಅಂಗನವಾಡಿ ಕೇಂದ್ರಗಳಿವೆ. ತಲಾಟಿ, ಕೃಷಿ ಸಹಾಯಕರಿಗೆಂದೇ ಪ್ರತ್ಯೇಕ ಕಟ್ಟಡವನ್ನು ಪಂಚಾಯಿತಿ ಕಟ್ಟಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT