ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಮ್ಮಳಾಪುರದ ಗೌರಮ್ಮ: ಈ ಗುಡಿಯಲ್ಲಿ ವರ್ಷಕ್ಕೆ ತಿಂಗಳಷ್ಟೇ ಪೂಜೆ !

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಆನೇಕಲ್: ಸಾಮಾನ್ಯವಾಗಿ ದೇವಾಲಯಗಳಲ್ಲಿ ನಿತ್ಯಪೂಜೆ, ಕೆಲವೊಮ್ಮೆ ವಾರಕ್ಕೊಮ್ಮೆ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಆದರೆ ಅಪರೂಪವೆಂಬಂತೆ ವರ್ಷದ ಒಂದು ತಿಂಗಳು ಮಾತ್ರ ಪೂಜೆ ಪುನಸ್ಕಾರಗಳು ನಡೆಯುವ ದೇವಾಲಯವು ಪಟ್ಟಣಕ್ಕೆ ಸಮೀಪದ ಗುಮ್ಮಳಾಪುರದಲ್ಲಿದೆ.

ವರ್ಷದಲ್ಲಿ ಒಂದು ತಿಂಗಳು ಮಾತ್ರ ತೆರೆದಿರುವ ಗುಮ್ಮಳಾಪುರದ ಗೌರಮ್ಮನ ಗುಡಿಯು ತಿಂಗಳಿನಲ್ಲಿ ಭರಪೂರ ಭಕ್ತರನ್ನು ಆಕರ್ಷಿಸುವ ದೇವಾಲಯವಾಗಿದೆ. ಗೌರಿ ಗಣೇಶ ಹಬ್ಬದಿಂದ ಒಂದು ತಿಂಗಳು ದೇವಾಲಯವು ಭಕ್ತರಿಗಾಗಿ ತೆರೆದಿರುತ್ತದೆ. ನಂತರ ದೇವಿಯ ದರ್ಶನ ಮಾಡಬೇಕಾದರೆ ಒಂದು ವರ್ಷ ಕಾಯಬೇಕು.

ಭೂಕೈಲಾಸವೆಂದು ಕರೆಯಲಾಗುವ ಗುಮ್ಮಳಾಪುರಕ್ಕೆ ಗೌರಮ್ಮನನ್ನು ಕೈಲಾಸದಿಂದ ತವರು ಮನೆಗೆ ಕರೆತರುವಂತೆ ಸಾಂಪ್ರದಾಯಿಕ ವಿಧಾನದಿಂದ ಕರೆತಂದು ಗೌರಿ-ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂದು ತಿಂಗಳು ತವರು ಮನೆಯ ಆತಿಥ್ಯ ನೀಡಿ ಮತ್ತೆ ಗೌರಿಯನ್ನು ಕೈಲಾಸಕ್ಕೆ ಕಳುಹಿಸಿಕೊಡುವ ಪದ್ಧತಿಯನ್ನು ಪುರಾತನ ಕಾಲದಿಂದ ಗ್ರಾಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ಗುಮ್ಮಳಾಪುರದ ಹಿರೇಮಠದಲ್ಲಿಯೇ ಗೌರಮ್ಮನ ಕೆರೆಯಿಂದ ತರಲಾದ ಮಣ್ಣಿನಿಂದ ಮೂರ್ತಿಯನ್ನು ತಿದ್ದಿ, ನಂತರ ಗೌರಿ ಹಬ್ಬದ ದಿನ ಗೌರಿಯನ್ನು ಚತುರ್ದಶಿಯ ದಿನ ವಿನಾಯಕನ ವಿಗ್ರಹಗಳನ್ನು ಗೌರಮ್ಮನ ಗುಡಿಯಲ್ಲಿ ಪ್ರತಿಷ್ಠಾಪಿಸಿ ಮಹಾಲಯ ಅಮಾವಾಸ್ಯೆ ನಂತರ ಬರುವ ಗುರುವಾರದವರೆಗೆ ನಿತ್ಯಪೂಜೆ, ಭಜನೆ, ವಿಶೇಷ ಅಲಂಕಾರಗಳನ್ನು ಮಾಡಿ ಗುರುವಾರದಂದು ಗೌರಿ ಜಾತ್ರೆ ನಡೆಸಿ ಗೌರಿಗೆ ಮಡಿಲಕ್ಕಿ ತುಂಬಿ ತವರು ಮನೆಯಿಂದ ಕೈಲಾಸಕ್ಕೆ ಕಳುಹಿಸಿಕೊಡುವಂತೆ ಜಾತ್ರೆಯ ನಂತರ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು.

ಶಿಥಿಲವಾಗಿದ್ದ ಗೌರಮ್ಮನ ಗುಡಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಗೌರಿ ಹಾಗೂ ಗಣೇಶನ ಮೂರ್ತಿಗಳನ್ನು ಶಾಶ್ವತವಾಗಿ ಪ್ರತಿಷ್ಠಾಪಿಸುವ ಬಗ್ಗೆ ಅಷ್ಟಮಂಗಲ ಪ್ರಶ್ನೆ ಮಾಡಿದಾಗ ಒಪ್ಪಿಗೆ ದೊರೆಯಲಿಲ್ಲ ಎನ್ನಲಾಗಿದೆ. ಗೌರಿ ಶಾಶ್ವತವಾಗಿ ಇಲ್ಲಿರುವುದಿಲ್ಲ, ವರ್ಷದಲ್ಲಿ ಒಮ್ಮೆ ತವರಿಗೆ ಬರುವಂತೆ ಬರುತ್ತಾಳೆ ಎಂದು ಹೇಳಲಾಗಿ ಈ ವಿಷಯವನ್ನು ಕೈಬಿಡಲಾಗಿದೆ. ಹಾಗಾಗಿ ದೇವಾಲಯದಲ್ಲಿ ವರ್ಷದಲ್ಲಿ ಗೌರಿ ಹಬ್ಬದ ಮಾಸದಲ್ಲಿ ಮಾತ್ರ ಪೂಜೆ ಇರುತ್ತದೆ. ತಿಂಗಳಿಡೀ ನಿತ್ಯ ನೂರಾರು ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿ ಮಡಿಲಕ್ಕಿ ಅರ್ಪಿಸುತ್ತಾರೆ.

ಶನಿವಾರ-ಭಾನುವಾರ ಹಾಗೂ ರಜಾ ದಿನಗಳು ದೇವಾಲಯ ಭಕ್ತರಿಂದ ಕಿಕ್ಕಿರಿಯುತ್ತದೆ. ಆನೇಕಲ್, ಬೆಂಗಳೂರು, ಕನಕಪುರ, ರಾಮನಗರ ಸೇರಿದಂತೆ ತಮಿಳುನಾಡಿನ ವಿವಿಧ ಪಟ್ಟಣಗಳಿಂದ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಜಾತ್ರೆಯದಿನ ವೈಭವದ ತೇರು ಉತ್ಸವ ನಡೆಯುತ್ತದೆ.

ಆನೇಕಲ್ ಸಮೀಪದ ತಮಿಳುನಾಡು ಗಡಿಯಲ್ಲಿರುವ ಗುಮ್ಮಳಾಪುರವು ಪುರಾಣ ಪ್ರಸಿದ್ಧ ಗ್ರಾಮವಾಗಿದೆ. 101 ಕೆರೆ, 101 ದೇವಾಲಯಗಳು, 101 ಗವಿಗಳು ಇದ್ದುದಾಗಿ ಪ್ರತೀತಿ ಇದೆ. ಆದರೆ ಇತ್ತೀಚೆಗೆ ಶಿಥಿಲವಾಗಿ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಉರಿಸಿಂಗನ ಗವಿ, ಗೌರಮ್ಮನ ಗವಿ, ಮಾರ್ಕಂಡೇಯನ ಗವಿ, ಚನ್ನವೀರಭದ್ರನ ಗವಿಗಳು ಇಂದಿಗೂ ಇವೆ. ಚನ್ನಬಸಪ್ಪನ ಕರೆ, ಹೊಸಕೆರೆ, ಮೇಲೂರು ಕೆರೆ, ಕೋಗಿಲೆ ಕೆರೆ, ಶಂಕರಯ್ಯನ ಕೆರೆ, ಶೆಟ್ಟರ ಕೆರೆ ಸೇರಿದಂತೆ ಹಲವಾರು ಕೆರೆಗಳಿವೆ. ಈ ವರ್ಷ ಉತ್ತಮ ಮಳೆಯಿಂದಾಗಿ ಎಲ್ಲಾ ಕೆರೆಗಳು ತುಂಬಿದ್ದು, ಸುತ್ತಮುತ್ತಲ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದ್ದು ಆಕರ್ಷಕವಾಗಿದೆ.

ಕ್ರಿ.ಶ.1408ಕ್ಕೆ ಸೇರಿದ ವಿನಾಯಕನ ದೇವಾಲಯದ ಬಳಿಯಿರುವ ಶಾಸನ ಸೇರಿದಂತೆ ಹಳೇವೂರಿನ ಮಲ್ಲೇಶ್ವರದ ಶಾಸನ, ಗೌರಮ್ಮನ ಗುಡಿ ಬಳಿಯ ಶಾಸನ, ಹಲವಾರು ಶಾಸನಗಳನ್ನು ಇಂದಿಗೂ ಕಾಣಬಹುದಾಗಿದೆ. 15ನೇ ಶತಮಾನದಲ್ಲಿ ಪ್ರಸಿದ್ಧ ವೀರಶೈವ ಕೇಂದ್ರವಾಗಿದ್ದ ಗುಮ್ಮಳಾಪುರದ ಬಗ್ಗೆ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ ಉಲ್ಲೇಖವಿದೆ.

ಹಲವಾರು ಕವಿಗಳು ಇಲ್ಲಿದ್ದ ಬಗ್ಗೆ ಮಾಹಿತಿ ಇದೆ. ಗುಮ್ಮಣ್ಣ, ಪೆಮ್ಮಣ್ಣ, ನಂಜುಂಡದೇವ, ಬಿಟ್ಟಮುಂಡೆಪ್ರಭು, ಗುಮ್ಮಳಾಪುರದ ಶಾಂತೇಶ, ಶೂನ್ಯ ಸಂಪಾದನೆಯ ಸಂಕಲನ ಮಾಡಿದ ಶಿವಗಣ ಪ್ರಸಾದಿ ಮಹದೇವಯ್ಯ, ಗುಮ್ಮಳಾಪುರದ ಸಿದ್ದಲಿಂಗ ಯತಿಗಳು ಸೇರಿದಂತೆ ಹಲವಾರು ಕವಿಗಳ ಬಗ್ಗೆ ಉಲ್ಲೇಖಗಳಿವೆ. 14ನೇ ಶತಮಾನಕ್ಕೆ ಸೇರಿದ ಹಿರೇಮಠದಲ್ಲಿ ಇಂದಿಗೂ ಗುರು ಪರಂಪರೆ ನಡೆದುಬಂದಿದೆ.
ಹಿರೇಮಠವು ವಿಶಾಲವಾದ ಬಯಲಿನಲ್ಲಿದ್ದು, ಮಠದಲ್ಲಿ ಹದಿನಾರು ಕಂಬಗಳಿವೆ. ಪ್ರತೀ ಕಂಬದಲ್ಲೂ ಪೌರಾಣಿಕ ಹಿನ್ನೆಲೆಯ ಶಿಲ್ಪಕಲೆಯನ್ನು ಕೆತ್ತಲಾಗಿದೆ.

ಜಾತ್ರೆ: ಗೌರಮ್ಮನ ಜಾತ್ರೆ ಸೆಪ್ಟೆಂಬರ್ 29ರಂದು ನಡೆಯಲಿದ್ದು, ಜಾತ್ರೆಯ ಅಂಗವಾಗಿ ಸೆ.26 ಬಸವನ ಜಾತ್ರೆ, 27ರಂದು ಅಗ್ನಿಗೊಂಡ, 28ರಂದು ಪಲ್ಲಕ್ಕಿ ಉತ್ಸವಗಳು ನಡೆಯಲಿವೆ ಎಂದು ಗುಮ್ಮಳಾಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT