ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ತಲುಪದ ಉದ್ಯೋಗ ಖಾತ್ರಿ: ಸಿಎಜಿ ಟೀಕೆ

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಿಧಿಗಳ ವರ್ಗಾವಣೆ ಮತ್ತಿತರ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್‌ಆರ್‌ಇಜಿಎ) ದೋಷಪೂರಿತವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಟೀಕಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯ ಕಳೆದ 2006ರಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಯೋಜನೆ ಅನುಷ್ಠಾನಗೊಂಡ ಒಂದರಿಂದ ಐದು ವರ್ಷಗಳವರೆಗೆ ಸುಮಾರು 4,070 ಕೋಟಿ ಮೊತ್ತದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಈ ಸಂಬಂಧ ಲೆಕ್ಕಪರಿಶೋಧನೆ ಕೈಗೊಂಡ ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ. ಮಂಗಳವಾರ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು.

ಸದರಿ ಯೋಜನೆಯಡಿ 2009-10ರ ಅವಧಿಯಲ್ಲಿ ರೂ 283.53 ಕೋಟಿ ಮೊತ್ತದ ಮಾನವ ದಿನಗಳನ್ನು ಸೃಷ್ಟಿಸಲಾಗಿದ್ದರೆ ಇದು 2011-12ರ ಅವಧಿಯಲ್ಲಿ ರೂ 216.34 ಕೋಟಿಗೆ ಇಳಿಯಿತು. ಇದೇ ಅವಧಿಯಲ್ಲಿ ಪೂರ್ಣಗೊಳಿಸಲಾದ ಕಾಮಗಾರಿಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ.

ಕಾಮಗಾರಿ ಇಲ್ಲವೆ ಹಣ ಮಂಜೂರಾತಿ ವಿಷಯದಲ್ಲಿ ಸಚಿವಾಲಯ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ಬೇಡಿಕೆಗಿಂತಲೂ ಅಧಿಕ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿದೆ. ಸರಿಯಾದ ಹಣಕಾಸು ದಾಖಲೆಗಳನ್ನು ಪರಿಶೀಲಿಸದೆಯೇ 2011ರ ಮಾರ್ಚ್ ತಿಂಗಳಿನಲ್ಲಿ ರೂ 1,960 ಕೋಟಿ ಬಿಡುಗಡೆಮಾಡಲಾಗಿದೆ. ಹಾಗಾಗಿ ಅಕ್ರಮಗಳನ್ನು ತಡೆಯಲು ಯೋಜನೆಯ ಸಮರ್ಪಕ ಅನುಷ್ಠಾನದ ವಿಷಯದಲ್ಲಿ ಸಮರ್ಪಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವರದಿ ಸಲಹೆ ನೀಡಿದೆ.

ಈ ಸಂಬಂಧ ದೇಶದ 25 ರಾಜ್ಯಗಳ 3,848 ಗ್ರಾಮ ಪಂಚಾಯಿತಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಕ್ಕಪರಿಶೋಧನೆ ಕೈಗೊಳ್ಳಲಾಗಿದ್ದು ರೂ 2,252.43 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾದ 1,02,100 ಕಾಮಗಾರಿಗಳು `ಸ್ವೀಕಾರಾರ್ಹವಲ್ಲದ ಕಾಮಗಾರಿ' ಎನಿಸಿಕೊಂಡಿವೆ ಎಂದು ವರದಿ ತಿಳಿಸಿದೆ.

`ಸ್ವೀಕಾರಾರ್ಹವಲ್ಲದ ಕಾಮಗಾರಿ'ಗಳ ಪಟ್ಟಿಯಲ್ಲಿ ಕಚ್ಚಾ ರಸ್ತೆಗಳ ನಿರ್ಮಾಣ, ಸಿಮೆಂಟ್ ಕಾಂಕ್ರೀಟ್ ರಸ್ತೆಗಳು, ದನಕರುಗಳ ಕೊಟ್ಟಿಗೆ ನಿರ್ಮಾಣ ಸೇರಿವೆ. 2007ರ ಏಪ್ರಿಲ್‌ನಿಂದ ಮಾರ್ಚ್ 2012ರ ಅವಧಿಯಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.

ಯೋಜನೆ ಜಾರಿಗೊಂಡು ಆರು ವರ್ಷಗಳ ನಂತರವೂ ಕೇಂದ್ರದ ಮಟ್ಟದಲ್ಲಿ ಇದರ ನಿರ್ವಹಣೆ ತೃಪ್ತಿಕರವಾಗಿಲ್ಲ, ಕಾಮಗಾರಿಗಳ ಕುರಿತು ಸಂಗ್ರಹಿಸಲಾದ ಅಂಕಿಸಂಖ್ಯೆಗಳು ಗಣಕಿಕೃತ ವ್ಯವಸ್ಥೆ ಹಾಗೂ ವಾಸ್ತವ ದಾಖಲೆಗಳಲ್ಲಿ ಬೇರೆ ಬೇರೆಯಾಗಿದ್ದು ರಾಜ್ಯಗಳು ಇವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಟೀಕಿಸಲಾಗಿದೆ.

ಗ್ರಾಮೀಣ ಗೃಹ ಉದ್ಯೋಗ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿದ್ದು 2009-10 ರಲ್ಲಿ ಈ ಪ್ರಮಾಣ 54 ದಿನಗಳಿದ್ದರೆ 2011-12ರಲ್ಲಿ ಈ ಪ್ರಮಾಣ ಬರಿ 43 ಮಾತ್ರ ಎಂದು ದಾಖಲಾಗಿದೆ.

2011-12ರಲ್ಲಿ ಪೂರ್ಣಗೊಳಿಸಲಾದ ಕಾಮಗಾರಿಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು ಮುಖ್ಯವಾಗಿ ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಇದು ಕಂಡುಬಂದಿದೆ. ಈ ರಾಜ್ಯಗಳಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಶೇ 20ರಷ್ಟು ಅನುದಾನ ಮಾತ್ರ ಬಳಕೆಯಾಗಿದೆ ಎಂದು ಸಿಎಜಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT