ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ತೋರಿದ ಗುರುವಿಗೆ ಎಲ್ಲೆಡೆ ನಮನ

*ಸರ್ಕಾರಿ ಸೌಲಭ್ಯಗಳು ಮಕ್ಕಳಿಗೆ ತಲುಪಲಿ *ಚಿಂತಾಮಣಿಯಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ
Last Updated 6 ಸೆಪ್ಟೆಂಬರ್ 2013, 8:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಜಾರಿ ತರುತ್ತಿರುವು ಯೋಜನೆಗಳನ್ನು  ಪರಿಣಾಮಕಾರಿ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಸಿಬ್ಬಂದಿ ಮತ್ತು ಶಿಕ್ಷಕರು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ನಗರದ ಒಕ್ಕಲಿಗರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹನ್ನೆರಡು ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, `ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಜಾರಿಯಾದಲ್ಲಿ, ಶಿಕ್ಷಣ ಇಲಾಖೆ ಸುಧಾರಿಸುತ್ತದೆಯಲ್ಲದೇ ಮಕ್ಕಳಿಗೂ ಉತಮ ಶಿಕ್ಷಣ ದೊರೆಯುತ್ತದೆ' ಎಂದರು.

ಮಕ್ಕಳಲ್ಲಿ ಪೌಷ್ಟಿಕಾಂಶದ ಪ್ರಮಾಣ ವೃದ್ಧಿಸುವ ಉದ್ದೇಶದಿಂದ ಶಾಲೆಗಳಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ಸಹ ವಿತರಿಸಲಾಗುತ್ತಿದೆ. ಇನ್ನಷ್ಟು ಉಪಯುಕ್ತ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಶಿಕ್ಷಕರಿಗೆ ಕಾರ್ಯಒತ್ತಡವಲ್ಲದೇ ಬೇರೆ ಬೇರೆ ರೀತಿಯ ಒತ್ತಡದಲ್ಲಿರುವುದು ಗಮನದಲ್ಲಿದೆ. ಒತ್ತಡಗಳ ನಡುವೆಯೂ ಶಿಕ್ಷಕರು ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಯೋಜನೆಯ ಸೌಲಭ್ಯಗಳು ಮಕ್ಕಳಿಗೆ ತಲುಪಬೇಕು ಮತ್ತು ಅದರಿಂದ ಅವರಿಗೆ ಪ್ರಯೋಜನವೂ ಆಗಬೇಕು ಎಂದು ಅವರು ತಿಳಿಸಿದರು.

ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ,  ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಎಸ್.ಪಿ.ಪದ್ಮಪ್ರಸಾದ್ ವಿಶೇಷ ಉಪನ್ಯಾಸ ನೀಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಒಟ್ಟು 12 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಿವೃತ್ತರಾದ 24 ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. `ಶಾಲೆಯಿಂದ ಬಿಟ್ಟು ಹೋದ ಮಕ್ಕಳ' ಕುರಿತ  ಸಾಕ್ಷ್ಯಚಿತ್ರದ ಸಿ.ಡಿಯನ್ನು  ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಎಸ್. ಚಿನ್ನಪ್ಪ,  ಮುಖ್ಯಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇಶಕ ಅಜಿತ್ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಡಿವೈಎಸ್‌ಪಿ ಎ.ಬಿ.ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.

`ತಪಸ್ಸಿನ ಥರ ಶಿಕ್ಷಕ ವೃತ್ತಿ'
ಬಾಗೇಪಲ್ಲಿ: ಗುರು ಅಥವಾ ಶಿಕ್ಷಕ ವೃತ್ತಿಯನ್ನು ಒಂದು ತಪಸ್ಸು ಎಂದಾಗಿ ಸ್ವೀಕರಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ನಂಜುಂಡಗೌಡ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ ಜೀವನದಲ್ಲಿ ಆದರ್ಶ ಮೌಲ್ಯ ಹಾಗೂ ತತ್ವಗಳು ರೂಪಿಸುವವನೇ ನಿಜವಾದ ಗುರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಟಿ.ವಿ.ನಾಗರಾಜ್, ಡಾ.ಕೆ.ಎಂ.ನಯಾಜ್‌ಅಹಮದ್, ಡಾ.ನಾಗರಾಜ್, ಅಶ್ವತ್ಥನಾರಾಯಣ, ಮಹೋನ್, ವಿನೋದ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗೆ ಉಡುಗೂರೆ ನೀಡಿ ಗೌರವಿಸಿದರು.
ದೇಶದ ಪ್ರಗತಿಗೆ ಶಿಕ್ಷಕರ ಪಾತ್ರ ಪ್ರಮುಖ: ಅಭಿಮತ

ಗೌರಿಬಿದನೂರು: ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಪ್ರಾಧ್ಯಾಪಕ ಡಾ.ಎನ್.ಶಿವರಾಮರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಅಮೆರಿಕಾ, ಇಂಗ್ಲೆಡ್ ದೇಶಗಳಿಗೆ ಹೋಲಿಸಿದರೆ ನಮ್ಮ ಶಿಕ್ಷಕರ ಕರ್ತವ್ಯ ಸಮರ್ಪಣೆ ತೃಪ್ತಿಕರವಾಗಿಲ್ಲ ಎಂದು ವಿಷಾದಿಸಿದರು.

ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಶಿಕ್ಷಕರ ಭವನಕ್ಕೆ ನಿವೇಶನ ಈಗಾಗಲೇ ನೀಡಲಾಗಿದೆ. ನಿರ್ಮಾಣಕ್ಕೆ ತ್ವರಿತ ಅನುದಾನವನ್ನು ನೀಡಲಾಗುವುದು ಎಂದರು.

ನಿವೃತ್ತರಾದ 41 ಪ್ರಾಥಮಿಕ ಶಿಕ್ಷಕರನ್ನು ಹಾಗೂ ಈಚೆಗೆ ನಿಧನರಾದ 6 ಮಂದಿ ಶಿಕ್ಷಕರ ಸಂಬಂಧಿಕರನ್ನು ಸನ್ಮಾನಿಸಲಾಯಿತು. ನಿವೃತ್ತಿಗೊಂಡ  ಪ್ರೌಢಶಾಲಾ ವಿಭಾಗದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಸದಸ್ಯರಾದ ಕೇಶವರೆಡ್ಡಿ, ರಜನಿ ವೇಣುಗೋಪಾಲರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ನಿರಂಜನ್, ಉಪಾಧ್ಯಕ್ಷೆ ಜಲಜಾ, ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ, ತಹಶೀಲ್ದಾರ್ ಡಾ.ಎನ್.ಭಾಸ್ಕರ್, ಕ್ಷೇತ್ರ ಶಿಕ್ಷಕರಾದ ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದರಾಮಯ್ಯ, ಜಿಲ್ಲಾ ಉಪಾಧ್ಯಕ್ಷ ಡಿ.ಲಿಂಗಪ್ಪ, ಸದಸ್ಯರಾದ ರಾಮ್‌ಬಾಬು, ಬಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕರಿಗೆ ಸನ್ಮಾನ
ಚಿಕ್ಕಬಳ್ಳಾಪುರ:  ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರತಿ ವರ್ಷವೂ ಪ್ರಾಥಮಿಕ ಶಾಲೆಯ ಆರು ಶಿಕ್ಷಕರಿಗೆ ಮತ್ತು ಪ್ರೌಢಶಾಲೆಯ ಐದು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಒಕ್ಕಲಿಗರ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಲಾ ಆರು ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ವಿಭಾಗ: ಚಿಕ್ಕಬಳ್ಳಾಪುರ ತಾಲ್ಲೂಕಿನ ಬಚ್ಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವೆಂಕಟೇಶ್, ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಎ.ರಾಮಕೃಷ್ಣಪ್ಪ, ಚಿಂತಾಮಣಿ ತಾಲ್ಲೂಕಿನ ಮೋಟಮಾಕಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿ.ಆರ್.ಪ್ರಭಾವತಮ್ಮ, ಗೌರಿಬಿದನೂರು ತಾಲ್ಲೂಕಿನ ಚಿಂಚಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎನ್.ನರಸಿಂಹಮೂರ್ತಿ, ಬಾಗೇಪಲ್ಲಿ ತಾಲ್ಲೂಕಿನ ಪಾತಬಾಗೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಮುನಿಯಪ್ಪ ಮತ್ತು ಗುಡಿಬಂಡೆ ತಾಲ್ಲೂಕಿನ ಮುದ್ದರೆಡ್ಡಿಪಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಟಿ.ಭಾಗ್ಯಮ್ಮ.

ಪ್ರೌಢಶಾಲಾ ವಿಭಾಗ: ಬಾಗೇಪಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಬಿ.ಎಸ್.ವಿಜಯಲಕ್ಷ್ಮಿ, ಗುಡಿಬಂಡೆ ತಾಲ್ಲೂಕಿನ ಚೆಂಡೂರು ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮಿನರಸಿಂಹಗೌಡ, ಚಿಂತಾಮಣಿ ತಾಲ್ಲೂಕಿನ ತಳಗವಾರ ಸರ್ಕಾರಿ ಪ್ರೌಢಶಾಲೆಯ ಎಂ.ದೇವರಾಜ್, ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ ಸರ್ಕಾರಿ ಪ್ರೌಢಶಾಲೆಯ ಎ.ಎಚ್.ಕೃಷ್ಣಮೂರ್ತಿ, ಶಿಡ್ಲಘಟ್ಟ ತಾಲ್ಲೂಕಿನ ಕದಿರಿನಾಯಕನಹಳ್ಳಿ ಎಸ್‌ಆರ್‌ಇಟಿ ಪ್ರೌಢಶಾಲೆಯ ಎನ್.ರಾಜಣ್ಣ ಮತ್ತು ಗೌರಿಬಿದನೂರು ತಾಲ್ಲೂಕಿನ ಹಳೇಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸದಾಶಿವ ಅವರನ್ನು ಸನ್ಮಾನಿಸಲಾಯಿತು.

`ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿಯಲ್ಲಿ ಸದಾಶಿವ ಅವರ ಹೆಸರು ಇರಲಿಲ್ಲ. ಪ್ರತಿ ವರ್ಷ ಪ್ರೌಢಶಾಲೆ ವಿಭಾಗಕ್ಕೆ ಐದು ಶಿಕ್ಷಕರನ್ನು ಮಾತ್ರವೇ ಸನ್ಮಾನಿಸಲಾಗುತಿತ್ತು. ಆದರೆ ಈ ಬಾರಿ ಆರನೇ ಪ್ರಶಸ್ತಿ ನೀಡಲು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಸಿ.ರೆಡ್ಡಪ್ಪ ಹೆಚ್ಚಿನ ಆಸಕ್ತಿ ತೋರಿದರು. ಅಧಿಕೃತ ಪಟ್ಟಿಯಲ್ಲಿ ಇರದಿದ್ದರೇನಂತೆ ತಾವು ಸೂಚಿಸಿದ ಶಿಕ್ಷಕರಿಗೆ ಪ್ರಶಸ್ತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೇರಿದರು. ಹೀಗಾಗಿ ಕೊನೆಯ ಕ್ಷಣಗಳಲ್ಲಿ ಸದಾಶಿವ ಅವರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸಲಾಯಿತು' ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT