ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧನೆಗೆ ಗುರುವಿನ ನೆರಳು

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಯಾವುದೇ ಗುಣಮಟ್ಟದ ಕಾರ್ಯಾಚರಣೆಗೆ ಇಳಿಯುವ ಅಥವಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮುನ್ನ ಸೂಕ್ತ ತರಬೇತಿ ಹಾಗೂ ಪೂರ್ವ ಸಿದ್ಧತೆ ನಮಗೆ ಇರಬೇಕಾಗುತ್ತದೆ. ಈಜುವುದು ಹೇಗೆ ಎಂಬುದನ್ನು ಅರಿಯದೆ ಯಾರೂ ಒಮ್ಮೆಗೇ ಸಮುದ್ರಕ್ಕೆ ಜಿಗಿಯುವ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಅದು ವ್ಯವಹಾರವೇ ಆಗಿರಲಿ, ಸೇವೆಯೇ ಇರಲಿ ಅಥವಾ ಸನ್ಯಾಸಿಗಳ ಪ್ರಪಂಚವೇ ಆಗಿರಲಿ ಎಲ್ಲಕ್ಕೂ ತರಬೇತಿ ಇರಲೇಬೇಕಾಗುತ್ತದೆ. ಇಂತಹ ತರಬೇತಿಗೆ ಉತ್ತಮ ಮಾರ್ಗದರ್ಶನ ಮತ್ತು ಸಲಹೆಯನ್ನು ವಿದ್ಯಾರ್ಥಿಗಳಿಗೆ ನೀಡಬಲ್ಲ ಅರ್ಹ ವ್ಯಕ್ತಿಗಳ ಅಗತ್ಯ ಇರುತ್ತದೆ.

ಹೀಗೆ ಉತ್ತಮ ತರಬೇತಿ ಮತ್ತು ಒಳ್ಳೆಯ ಗುರುವಿನ ಮಾರ್ಗದರ್ಶನ ಸಿಕ್ಕಿದ್ದೇ ಆದರೆ, ತರಬೇತಿ ನಿರತರ ಗುಣಮಟ್ಟವೂ ಉತ್ತಮವೇ ಆಗಿರುತ್ತದೆ. ಯತಿಗಳು ಮತ್ತು ಸನ್ಯಾಸಿಗಳ ವಿಷಯಕ್ಕಂತೂ ಇದು ಹೆಚ್ಚು ಅನ್ವಯವಾಗುತ್ತದೆ. ಇಂತಹ ವಿಭಿನ್ನ ಬಗೆಯ ಜೀವನಕ್ಕಾಗಿ ಕಠಿಣ ತರಬೇತಿ ಪಡೆಯಲು ಗುರು ಮತ್ತು ಶಿಷ್ಯರಿಬ್ಬರೂ ಪೂರ್ವತಯಾರಿ ಮಾಡಿಕೊಂಡು ಸಿದ್ಧರಾಗಿ ಇರಬೇಕಾಗುತ್ತದೆ.

ನಿರಂತರ ವಿಚಾರಣೆ, ಬಡತನ ಎದುರಿಸುವ ಮನೋಬಲ, ಸಂಯಮ, ಏಕಚಿತ್ತದ ಆತ್ಮ ಶೋಧನೆ, ಜ್ಞಾನದ ಅನ್ವೇಷಣೆ, ಸರ್ವರಿಗೂ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸುವ ಮನೋಭಾವ ಎಲ್ಲವನ್ನೂ ಒಳಗೊಳ್ಳುವ ಜೀವನ ಅದಾಗಿರುತ್ತದೆ.
ಯುವ ನರೇಂದ್ರ ಅವರು ಪಡೆದ ತರಬೇತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

ರಾಮಕೃಷ್ಣರಂತಹ ಅಸಾಧಾರಣ ಗುರುವಿನ ವೈಯಕ್ತಿಕ ಮೇಲ್ವಿಚಾರಣೆಯು ನರೇಂದ್ರ ಅವರನ್ನು ವಿಶ್ವವಿಖ್ಯಾತ ಸ್ವಾಮಿ ವಿವೇಕಾನಂದರನ್ನಾಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರವನ್ನೇ ವಹಿಸಿತು. ಗುರುವಿನೊಟ್ಟಿಗೆ ವಾಸಿಸುತ್ತಿದ್ದುದೇ ಒಂದು ರೀತಿಯಲ್ಲಿ ತಪಶ್ಚರ‌್ಯ ಮತ್ತು ಆಧ್ಯಾತ್ಮಿಕ ಶಿಸ್ತನ್ನು ಅವರಲ್ಲಿ ಮೂಡಿಸಿತು.

ಇದರ ಜೊತೆಗೆ ಗುರುವಿನ ಚಿಂತನೆಗಳು ಮತ್ತು ಮಾತುಗಳನ್ನು ಅನುಸರಿಸಲು ಅಗತ್ಯವಾದ ಅತ್ಯುನ್ನತ ಏಕಾಗ್ರತೆ, ಉನ್ನತ ವ್ಯಕ್ತಿತ್ವವನ್ನು ಸಹ ಅದು ಬೇಡುತ್ತಿತ್ತು. ಭಾವಾವೇಶ ಮತ್ತು ಮಧುರ ಅನುಭೂತಿಗಳು ನರೇಂದ್ರರ ಒಳಗಿದ್ದ ವಿಚಾರವಾದಿಗೆ ನಿರಂತರವಾಗಿ ಸವಾಲೊಡ್ಡುತ್ತಿದ್ದವು. ಗುರುಗಳು ಎಷ್ಟು ಮೃದುವಾಗಿ ಮತ್ತು ಸಲುಗೆಯಿಂದ ವರ್ತಿಸುತ್ತಿದ್ದರೋ ತಮ್ಮ ನೆಚ್ಚಿನ ಶಿಷ್ಯನಿಂದ ವಿಶೇಷ ಪ್ರಯತ್ನಗಳನ್ನೂ ನಿರೀಕ್ಷಿಸುತ್ತಿದ್ದರು.

ಅವರಿಬ್ಬರ ನಡುವಿನ ಸಂಬಂಧ ತಂದೆ ಮಗನ ರೀತಿಯದ್ದಾಗಿತ್ತು, ಸಹಜವಾಗಿತ್ತು, ಮಾನವೀಯ ನೆಲೆಯಲ್ಲಿತ್ತು ಮತ್ತು ಅಹಂನಿಂದ ಮುಕ್ತವಾಗಿತ್ತು. ಆ ದಿನಗಳನ್ನು ಸ್ಮರಿಸುತ್ತಾ ನರೇನ್ ಹೀಗೆ ಹೇಳುತ್ತಿದ್ದರು: `ಗುರುಗಳ ಸಮ್ಮುಖದಲ್ಲಿ ನಾವು ಅನುಭವಿಸುತ್ತಿದ್ದ ಸಂತಸವನ್ನು ಇತರರಿಗೆ ಬಿಡಿಸಿಹೇಳುವುದು ಅಸಾಧ್ಯದ ಮಾತು. ವಿನೋದ ಮತ್ತು ಆಟದ ಮೂಲಕ ನಮ್ಮ ಗಮನಕ್ಕೇ ಬಾರದಂತೆ ಅವರು ನಮ್ಮನ್ನು ತರಬೇತುಗೊಳಿಸುತ್ತಿದ್ದ ರೀತಿಯು ನಮ್ಮ ಗ್ರಹಿಕೆಯನ್ನೂ ಮೀರಿದ್ದಾಗಿತ್ತು ಮತ್ತು ಅದು ನಮ್ಮ ಆಧ್ಯಾತ್ಮಿಕ ಬದುಕನ್ನು ರೂಪಿಸಿತು.

ಒಬ್ಬ ಜಟ್ಟಿ ಗುರುವು ಆಗಷ್ಟೇ ಕಲಿಯಲು ಬಂದ ತನ್ನ ಶಿಷ್ಯನಿಗೆ ಎಷ್ಟು ಕಾಳಜಿಯಿಂದ ನಿರ್ಬಂಧಗಳನ್ನು ವಿಧಿಸಿ ಅವನ ಹೋರಾಟಕ್ಕೆ ಬಲ ತುಂಬುತ್ತಾನೋ, ಸ್ವತಃ ಸೋಲುಣ್ಣುವ ಮೂಲಕ ಶಿಷ್ಯನಲ್ಲಿ ಆತ್ಮವಿಶ್ವಾಸ ತುಂಬಲು ಕಾರಣನಾಗುತ್ತಾನೋ ಅದೇ ಮಾದರಿಯಲ್ಲಿ ಶ್ರೀ ರಾಮಕೃಷ್ಣರು ನಮ್ಮನ್ನೂ ನಿರ್ವಹಿಸಿದರು.

ಪ್ರತಿ ವ್ಯಕ್ತಿಯಲ್ಲೂ ಅಪರಿಮಿತ ಶಕ್ತಿಯ ಮೂಲವಾದ ಆತ್ಮ ಇದ್ದೇ ಇರುತ್ತದೆ ಎಂದು ತಿಳಿದಿದ್ದ ಅವರು, ಅದನ್ನು ಆಧಾರವಾಗಿಟ್ಟು ಅತ್ಯುನ್ನತವಾದುದನ್ನೇ ನಮಗೆ ಬೋಧಿಸುತ್ತಿದ್ದರು ಮತ್ತು ನಮ್ಮನ್ನು ಹುರಿದುಂಬಿಸುತ್ತಿದ್ದರು. ಇದರ ಜೊತೆಗೆ, ಲೌಕಿಕ ಆಕಾಂಕ್ಷೆಗಳಿಗೆ ಮನಸೋತರೆ ಭವಿಷ್ಯದ ಗುರಿ ಸಾಧನೆಗೆ ಅಡ್ಡಿ ಉಂಟಾಗಬಹುದು ಎಂದು ಸಹ ನಮ್ಮನ್ನು ಎಚ್ಚರಿಸುತ್ತಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜೀವನದ ಪ್ರತಿ ಕ್ಷಣದ ಬಗ್ಗೆಯೂ ವಿವರ ಪಡೆಯುತ್ತಾ ಅತ್ಯಂತ ಎಚ್ಚರದಿಂದ ನಮ್ಮನ್ನು ನಿಯಂತ್ರಿಸುತ್ತಿದ್ದರು. ಇದೆಲ್ಲವನ್ನೂ ನಿಶ್ಶಬ್ದವಾಗಿ ಮತ್ತು ಅಗೋಚರವಾಗಿ ಅವರು ಮಾಡುತ್ತಿದ್ದರು. ಅದೇ ಶಿಷ್ಯರಿಗೆ ಅವರು ನೀಡುತ್ತಿದ್ದ ತರಬೇತಿ ಮತ್ತು ಅವರ ಬದುಕನ್ನು ರೂಪಿಸಿದ ರಹಸ್ಯ~.

ಇಂತಹ ತರಬೇತಿ ಪಡೆಯಲು ನರೇಂದ್ರ ತಮ್ಮ ಹುಡುಗಾಟಿಕೆ ಮನೋಭಾವವನ್ನಾಗಲೀ ಅಥವಾ ಧೈರ್ಯೋತ್ಸಾಹವನ್ನಾಗಲೀ ಬಿಡಬೇಕಾಗಿ ಇರಲಿಲ್ಲ. ಸಲುಗೆಯಿಂದ ಪೋಷಿಸುವ ತಂದೆ ತಾಯಿಯರ ಬಳಿ ಮುಕ್ತವಾಗಿ ವರ್ತಿಸುವ ಮಗುವಿನ ರೀತಿಯಲ್ಲಿ ಅವರು ಇರುತ್ತಿದ್ದರು. ಅವರು ತಮ್ಮ ಗುರುಗಳ ಬಗ್ಗೆ ಅತ್ಯುನ್ನತ ಗೌರವ ಇಟ್ಟಿದ್ದರಾದರೂ ತಮ್ಮನ್ನು ಅನುಮಾನಿಸಲು ರಾಮಕೃಷ್ಣರೇ ಶಿಷ್ಯಂದಿರಿಗೆ ಅವಕಾಶ ಒದಗಿಸಿಕೊಡುತ್ತಿದ್ದರು.

ರಾಮಕೃಷ್ಣರು ಆಗಾಗ ಹೀಗೆ ಹೇಳುತ್ತಿದ್ದರು. `ನಾನು ಹೇಳಿದೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಪ್ಪಿಕೊಂಡು ಬಿಡಬೇಡಿ. ಸ್ವತಃ ಪರೀಕ್ಷಿಸಿ ನೋಡಿ. ಸಮ್ಮತಿ ಅಥವಾ ಅಸಮ್ಮತಿಯ ಮೂಲಕ ಗುರಿ ಸಾಧನೆ ಮುಖ್ಯವಾಗಬಾರದು, ಅದೇನಿದ್ದರೂ ನೈಜ ಮತ್ತು ನಿರ್ದಿಷ್ಟ ಸಾಧನೆಯಾಗಿರಬೇಕು~.

ಬಹುಶಃ ಗುರುವಿನ ಮಹತ್ವದ ಆಳ ತಿಳಿದ, ಸರಿಯಾಗಿ ಅದನ್ನು ಅರ್ಥ ಮಾಡಿಕೊಂಡ, ಅದೇ ವೇಳೆ ಗುರು ಮತ್ತು ಅವರ ಆಲೋಚನೆಗಳಿಗೆ ಸವಾಲೆಸೆಯುತ್ತಿದ್ದ ಏಕೈಕ ಶಿಷ್ಯ ನರೇನ್ ಅವರೇ ಇರಬೇಕು. ಗುರು- ಶಿಷ್ಯರ ಈ ಸಂಬಂಧದಲ್ಲಿ, ಉನ್ನತ ವ್ಯಕ್ತಿ ಸ್ವಾತಂತ್ರ್ಯ ಹೊಂದಿದ ಸುಶಿಕ್ಷಿತ ವ್ಯಕ್ತಿಯನ್ನು ಸಹ ಪ್ರೀತಿ, ಅನುಭವದ ಶಕ್ತಿ ಮತ್ತು ನಿಶ್ಚಿತ ಅಭಿಪ್ರಾಯಗಳ ಮೂಲಕ ಸಾಮಾನ್ಯ ಚಿಂತನೆಗಳಿಂದ ಹೇಗೆ ಪರಿವರ್ತಿಸಬಹುದು ಎಂಬುದು ನಮಗೆ ತಿಳಿಯುತ್ತದೆ.

ಇಂತಹ ವಿಶೇಷ ಸಂಬಂಧದ ಅನುಭವವೇ ಮುಂದೆ ನರೇಂದ್ರ ಅವರು ಅಸಾಧಾರಣ ಬೋಧಕರಾಗಲು, ತಮ್ಮಿಂದ ಮತ್ತು ತಮ್ಮ ಕಾರ್ಯಗಳಿಂದ ಸ್ಫೂರ್ತಿಗೊಂಡ ಲಕ್ಷಾಂತರ ಜನರ ಚಿಂತನೆಗಳನ್ನು ರೂಪಿಸಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT