ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ನಮನ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಮಾತೃ ದೇವೋ ಭವ; ಪಿತೃ ದೇವೋ ಭವ; ಆಚಾರ್ಯ ದೇವೋ ಭವ... ಅತಿಥಿ ದೇವೋ ಭವ~~ ಎನ್ನುತ್ತದೆ ನಮ್ಮ ಸಂಸ್ಕೃತಿ. ತಾಯಿ ತಂದೆಯ ನಂತರ ಗುರುವೇ ಮುಖ್ಯ ಎಂಬ ಶ್ರದ್ಧಾಪೂರ್ವಕ ನಂಬಿಕೆ ನಮ್ಮದು. ಬದುಕಿನ ಪ್ರಮುಖ ಘಟ್ಟಗಳಲ್ಲಂತೂ ಮಾರ್ಗದರ್ಶಕರಾಗಿ ಗುರುವಿನ ಸಹಾಯ ಬೇಕೇ ಬೇಕು.

ಗುರುವಿನ ಪಾತ್ರ
`ಗುರುವಿನ ಗುಲಾಮನಾಗದ ತನಕ ದೊರಕದ ಅಣ್ಣ ಮುಕ್ತಿ..~, `ಎತ್ತಾಗಿ ತೊತ್ತಾಗಿ ಹಿತ್ತಲದ ಗಿಡವಾಗಿ ಮತ್ತೆ ಪಾದಕ್ಕೆ ಕೆರವಾಗಿ ಗುರುವಿನ ಹತ್ತಿರಿರು...~ ಅನ್ನುತ್ತವೆ ಸದಾಶಯದ ವಚನಗಳು. ನಾವು ಜೀವನದಲ್ಲಿ ಎಷ್ಟೇ ಮುಂದುವರಿದರೂ ಅದರ ಹಿಂದೆ ಗುರುವಿನ ಪಾತ್ರ ಇದೇ ಇರುತ್ತದೆ.

ಬಾಲ್ಯದಲ್ಲಿ ತುಂಟತನ, ಅಜ್ಞಾನ, ಆಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಲಿಸುವ ಎಲ್ಲ ಗುರುಗಳಿಗೂ ನಮನ. ಅವರ ತಾಳ್ಮೆ ಇರದೇ ಹೋಗಿದ್ದರೆ ನಮಗೆ ವಿದ್ಯೆಯ ಗಂಧವೇ ಇರುತ್ತಿರಲಿಲ್ಲ, ಸಭ್ಯತೆ, ಸಂಸ್ಕೃತಿ ಜೀವನದ ಭಾಗವಾಗುತ್ತಿರಲಿಲ್ಲ... ಅಲ್ಲವೆ.

ಆದರೆ ಇಂದು ಕಾಲ ಬದಲಾಗಿದೆ. ಜನರ ಮನೋಭಾವವೂ ಬದಲಾಗಿದೆ. ವಿದ್ಯೆ ಕಲಿಸುವ ಗುರು ತರಗತಿಯಲ್ಲಿ  ಒಂದೇಟು ಹೊಡೆದರೆ ದೊಡ್ಡ ಕೋಲಾಹಲವೇ ನಡೆಯುತ್ತದೆ. ಆದರೆ ಒಂದು ಸುಂದರ ಶಿಲ್ಪ ಸಿದ್ಧವಾಗಲು, ಶಿಲ್ಪಿಯ ಉಳಿ-ಸುತ್ತಿಗೆಯ ಹಲವು ಪೆಟ್ಟುಗಳು ಬೀಳಲೇ ಬೇಕು ಅಲ್ಲವೆ.

ಸೆಪ್ಟೆಂಬರ್ 5 ಗುರುಗಳನ್ನು ಸ್ಮರಿಸುವ ದಿನ. ನಮ್ಮನ್ನು ನಾವಾಗಿಸಿದ, ಜ್ಞಾನದ ಪರಿಚಯ ಮಾಡಿಸಿದ, ಬದುಕು ಕಂಡುಕೊಳ್ಳಲು ನೆರವಾದ ಗುರುವರ್ಯರಿಗೆ ನಮನ ಸಲ್ಲಿಸುವ ಮೂಲಕ ಗುರುವಿನ ಋಣವನ್ನು ಕಿಂಚಿತ್ತಾದರೂ ತೀರಿಸುವ ಸುದಿನ. ಅಂದು ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞ  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಅದೇ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ಕಾಟಾಚಾರ
ಹಿಂದೆಲ್ಲಾ ಶಾಲೆಗಳಲ್ಲಿ ಬೋರ್ಡ್ ಮೇಲೆ ಸೆ. 5ರಂದು `ಹ್ಯಾಪಿ ಟೀಚರ್ಸ್‌ ಡೇ~ ಬರಹಗಳು ರಾರಾಜಿಸುತ್ತಿದ್ದವು. ಆ ದಿನ ವಿದ್ಯಾರ್ಥಿಗಳೇ ಮಾಸ್ತರ್ ಆಗಿ ಪಾಠ ಮಾಡುತ್ತಿದ್ದರು, ಮೇಷ್ಟ್ರು ವಿದ್ಯಾರ್ಥಿಗಳಾಗಿ ಉಳಿದ ವಿದ್ಯಾರ್ಥಿಗಳೊಂದಿಗೆ ಕುಳಿತಿರುತ್ತಿದ್ದರು. ಅದೊಂದು ವಿಶಿಷ್ಟ ಅನುಭವ. ಮಕ್ಕಳಿಗೂ ಖುಷಿ.

 ತಮ್ಮ ನೆಚ್ಚಿನ ಗುರುಗಳಿಗೆ ಉಡುಗೊರೆ ಕೊಡಲು ವಿದ್ಯಾರ್ಥಿಗಳ ಮಾತುಕತೆ, ಚಂದಾ ಸಂಗ್ರಹ, ಗುರುಗಳಿಗೆ ಇಷ್ಟವಾಗುವ ಗಿಫ್ಟ್ ಕೊಡಲು ಅಂಗಡಿಗಳೆಲ್ಲ ಸುತ್ತಾಟ, ಇಷ್ಟವಾಗಿದ್ದು ಸಿಕ್ಕಿದರೂ ಚೌಕಾಸಿ ಮಾಡುವ ವಿದ್ಯಾರ್ಥಿಗಳು ಇತ್ಯಾದಿ. ಅದನ್ನೆಲ್ಲ ನೆನೆಸಿಕೊಂಡರೇ ಖುಷಿಯಾಗುತ್ತದೆ.

ಆದರೆ ಇಂದು ಎಲ್ಲವೂ ಯಾಂತ್ರಿಕ ಬದುಕಿನ ಭಾಗವಾಗಿದೆ. ಇಂದು ಉದ್ಯೋಗದಲ್ಲಿದ್ದರೂ, ಬದುಕು ಕಂಡುಕೊಂಡಿದ್ದರೂ ತಮಗೆ ವಿದ್ಯೆ ಹೇಳಿ ಕೊಟ್ಟ ಗುರುಗಳನ್ನು ನೆನೆಯಲೂ ಕೂಡ ಹಲವರಿಗೆ ಸಮಯವಿಲ್ಲ. ಭಾವನಾತ್ಮಕ ಆತ್ಮೀಯತೆ ಮಾಯವಾಗಿದೆ.

ಕೇವಲ ಶಾಲೆಯಲ್ಲಿ ವಿದ್ಯೆ ಹೇಳಿ ಕೊಟ್ಟ ಗುರುಗಳು ಮಾತ್ರವಲ್ಲ, ಇದರೊಂದಿಗೆ ವೃತ್ತಿಯಲ್ಲಿ ನಿಮಗೆ ಮಾರ್ಗದರ್ಶನ ಮಾಡುವವರು ಕೂಡ ಗುರು. `ಒಂದಕ್ಷರ ಕಲಿಸಿದರೂ ಗುರು~ ಎನ್ನುತ್ತದೆ ಸುಭಾಷಿತ.

ಇಷ್ಟಾದರೂ ಇರಲಿ
ಯಾವ ಗುರುವೂ ಕೂಡ ನೀವು ಉಡುಗೊರೆ ಕೊಡಲಿ ಎಂದು ವಿದ್ಯೆ ಹೇಳಿಕೊಟ್ಟಿರುವುದಿಲ್ಲ. ನಿಸ್ವಾರ್ಥವಾಗಿ ವಿದ್ಯಾದಾನ ಮಾಡಿದ ಗುರುಗಳನ್ನು ನೆನೆಸಿಕೊಳ್ಳಿ.  ಕೊನೇಪಕ್ಷ ಒಂದು ಎಸ್‌ಎಂಎಸ್ ಆದರೂ ಮಾಡಿ. ಆದರೆ ಹತ್ತಿರವಿದ್ದರೆ ಖಂಡಿತ ಅವರನ್ನು ಭೇಟಿ ಅವರ ಯೋಗಕ್ಷೇಮ ವಿಚಾರಿಸಿ. ಅವರೂ ಖುಷಿ ಪಡುತ್ತಾರೆ, ನಿಮ್ಮಲ್ಲೂ ಧನ್ಯತೆ ನೆಲೆಸಬಹದು. ಇಷ್ಟೆಲ್ಲ ನೀವು ಖಂಡಿತಾ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT