ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಸ್ಮರಣೆಯಲ್ಲಿ ಶಿಷ್ಯರ ‘ಶ್ರೀಕಂಠಯಾನ’: ವೆಂಕಟಸುಬ್ಬಯ್ಯ

Last Updated 29 ಮೇ 2016, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಚರಿತ್ರೆ ಕಥೆಯಲ್ಲ, ಅದೊಂದು ವಿಜ್ಞಾನ. ವಿಜ್ಞಾನವನ್ನು ಅಭ್ಯಾಸ ಮಾಡಿದಂತೆಯೇ ಚರಿತ್ರೆಯನ್ನು ಅಧ್ಯಯನ ಮಾಡಬೇಕು ಎಂದು ಕನ್ನಡ ಆನರ್ಸ್‌ ಕಲಿಯುತ್ತಿದ್ದಾಗ ಗುರುಗಳಾದ ಶ್ರೀಕಂಠ ಶಾಸ್ತ್ರಿಗಳು ಮೊದಲ ತರಗತಿಯಲ್ಲೇ ಹೇಳಿದ್ದರು’ ಎಂದು ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ  ನೆನಪಿಸಿಕೊಂಡರು.

ಭಾನುವಾರ ನಗರದ ಮಿಥಿಕ್‌ ಸೊಸೈಟಿಯಲ್ಲಿ ಡಾ.ಎಸ್. ಶ್ರೀಕಂಠ ಶಾಸ್ತ್ರಿಗಳ ಸಮಗ್ರ ಇಂಗ್ಲಿಷ್ ಲೇಖನಗಳ ಸಂಕಲನ ‘ಶ್ರೀಕಂಠಯಾನ’ ಕೃತಿಯ ಎರಡು ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಹೈಸ್ಕೂಲ್‌ನಲ್ಲಿ  ನಮ್ಮ ಚರಿತ್ರೆಯ ಅಧ್ಯಾಪಕರು ಚರಿತ್ರೆ ಬಗ್ಗೆ ಹುಚ್ಚು ಹಿಡಿಸಿ ಬಿಟ್ಟಿದ್ದರು. ಎಂ.ಎ ಪದವಿಯನ್ನು ಚರಿತ್ರೆ ಇಲ್ಲವೆ ಇಂಗ್ಲಿಷ್‌ನಲ್ಲಿ ಮಾಡುವ ಮನಸ್ಸು ಇಟ್ಟುಕೊಂಡಿದ್ದೆ. ಆದರೆ, ಇಂಟರ್‌ ಮೀಡಿಯೆಟ್‌ನಲ್ಲಿ ತರ್ಕಶಾಸ್ತ್ರ, ಪ್ರಾಚೀನ ಚರಿತ್ರೆ ಹಾಗೂ ಸಂಸ್ಕೃತ ಅಭ್ಯಾಸ ಮಾಡಿದೆ. ಆಗ ವಿದ್ಯಾಭಾಸದಲ್ಲಿ ಲಾರ್ಡ್‌ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಯಲ್ಲಿತ್ತು.  ನಾನು ತೆಗೆದುಕೊಂಡಿದ್ದ ಚರಿತ್ರೆ ಭಾರತದ ಪ್ರಾಚೀನ ಚರಿತ್ರೆ ಆಗಿರಲಿಲ್ಲ. ಅದು ಗ್ರೀಕೊ–ರೋಮನ್ ಚರಿತ್ರೆಯಾಗಿತ್ತು. ಇದು ಬೇಸರ ತರಿಸಿತ್ತು’ ಎಂದರು.

‘ಆನರ್ಸ್‌ನಲ್ಲಿ  ಕರ್ನಾಟಕ ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆ ಬೋಧಿಸಲು ಶ್ರೀಕಂಠಶಾಸ್ತ್ರಿಗಳು  ಬರುವ ವಿಚಾರ ತಿಳಿಯಿತು. ಅವರ ಬಗ್ಗೆ ತುಂಬಾ ಕೇಳಿದ್ದೆವು. ಬೋಧಿಸಲು ಮೊದಲ ದಿನ ತರಗತಿ ಬಂದಾಗ ಅಷ್ಟೇನೂ ಆಕರ್ಷಕ ವ್ಯಕ್ತಿಯಾಗಿ ಕಾಣಲಿಲ್ಲ. ಆದರೆ,  ಸೊಗಸಾಗಿ ಪಾಠ ಮಾಡಿದರು. ಪಿರಿಯಡ್  ಮುಗಿಯುವಷ್ಟರಲ್ಲಿ ಜನರು ಅವರ ಬಗ್ಗೆ ಹೇಳಿದ್ದೆಲ್ಲವೂ ನಿಜ ಎನಿಸಿತು.  ಮುಂದಿನ ಎರಡು ವರ್ಷಗಳ ಕಾಲ  ಕಥೆಯ  ಹಾಗೆ ಚರಿತ್ರೆಯ ಪಾಠ ಮಾಡಿ  ಮನಸ್ಸು ಗೆದ್ದರು’ ಎಂದು  ಅವರು ಗುರುವನ್ನು ನೆನಪಿಸಿಕೊಂಡರು.

ಕೃತಿ ಕುರಿತು ಮಾತನಾಡಿದ ಪುರಾತತ್ವ ಶಾಸ್ತ್ರಜ್ಞರಾದ ಅ.ಸುಂದರ್, ‘ತಲಸ್ಪರ್ಶಿ ಅಧ್ಯಯನ, ಸಂಕ್ಷಿಪ್ತತೆ, ಕ್ರಮಬದ್ಧತೆ ಶ್ರೀಕಂಠಶಾಸ್ತ್ರಿ ಅವರ ಲೇಖನಗಳ  ಜೀವಾಳ.ಯಾವುದೇ ವಿಷಯವನ್ನು ಹೇಗೆ ಶುರು ಮಾಡಬೇಕು, ಹೇಗೆ ಹೇಳಬೇಕು, ಹೇಗೆ ಮುಗಿಸಬೇಕು ಎಂಬುದನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು’ ಎಂದರು.

‘ಯಾವುದೇ ಸಂಶೋಧನೆಗೆ ಅವರು ತಳಮಟ್ಟದಲ್ಲಿ ಅಧ್ಯಯನ ಮಾಡುತ್ತಿದ್ದರು.  ವಿದೇಶದ ಏಳು ಭಾಷೆ ಸೇರಿ ಒಟ್ಟು 14 ಭಾಷೆ ಅವರಿಗೆ ಬರುತ್ತಿತ್ತು. ಇದರಿಂದ ಅವರಿಗೆ  ಅದೆಲ್ಲ ಸಾಧ್ಯವಾಗಿತ್ತು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಚಿದಾನಂದಮೂರ್ತಿ ಅವರು, ‘ಶ್ರೀಕಂಠಶಾಸ್ತ್ರಿಗಳನ್ನು ನಾವೆಲ್ಲ ರಾಷ್ಟ್ರಮಟ್ಟದ ಸಂಶೋಧಕರು ಎಂದು ಆಶ್ಚರ್ಯದಿಂದ ನೋಡುತ್ತಿದ್ದೆವು.

ರಾಷ್ಟ್ರ, ನಾಡು ಕಂಡಂಥ ವಿಶ್ವಮಟ್ಟದ ಕೆಲವೇ ವಿದ್ವಾಂಸರಲ್ಲಿ ಅವರೂ ಒಬ್ಬರು. ಅವರಿಗೆ ಯಾವುದೇ ಹೊಸದು ಹೊಳೆದಾಗ ಅದನ್ನು ಹಂಚಿಕೊಳ್ಳುತ್ತಿದ್ದರು’ ಎಂದರು.

‘ಸದ್ಯ ನಾನು ಮಯೂರ ಶರ್ಮ ಚಿತ್ರದುರ್ಗದ ಚಂದ್ರವಳ್ಳಿ ಕಣಿವೆಯಲ್ಲಿ ಮಯೂರ ವರ್ಮನಾದ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ. ಇಂಥ ಒಂದು ಶೋಧನೆಯ ಮನಸ್ಥಿತಿ ಅವರಿಂದಾಗಿಯೇ ಬಂದಿದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT