ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತಿನ ಚೀಟಿ ನೋಂದಣಿಗೆ ಚಾಲನೆ

ಕಟ್ಟಡ ಕಾರ್ಮಿಕರ ಅರಿವು–-ನೆರವು
Last Updated 12 ಸೆಪ್ಟೆಂಬರ್ 2013, 4:50 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಳೆಯುತ್ತಿರುವ ಬೆಂಗಳೂರಿನಂಥ ಮಹಾನಗರಗಳಲ್ಲಿ ಕಟ್ಟಡ ನಿರ್ಮಾಣ ಕೆಲಸ ಸಮೃದ್ಧವಾಗಿ ಸಾಗುತ್ತಿದೆ. ಗ್ರಾಮಾಂತರ ಪ್ರದೇಶದ ಜನ ಇಡೀ ವರ್ಷ ದುಡಿದರೂ ಕೃಷಿಯ ಬದುಕಿನಲ್ಲಿ ಖುಷಿ ಕಾಣದೆ ಕಟ್ಟಡಗಾಮಗಾರಿ ಕೆಲಸಗಳಿಗೆ  ಮುಗಿಬಿದ್ದಿದ್ದಾರೆ ಎಂದು ತಾಲ್ಲೂಕು ಕಾರ್ಮಿಕ ಅಧಿಕಾರಿ ವೆಂಕಟೇಶ್‌ ಹೇಳಿದರು.

ಕೊಂಗಾಡಿಯಪ್ಪ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದಿಂದ ಏರ್ಪಡಿಸಿದ್ದ ಅಸಂಘಟಿತ ಕಟ್ಟಡ ಕಾರ್ಮಿಕರ ಅರಿವು–-ನೆರವು  ಮತ್ತು ಗುರುತಿನ ಚೀಟಿ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಬೇಧ-ಭಾವ ಇಲ್ಲದೆ ದೇಶದ ಕೋಟ್ಯಾಂತರ ಮಂದಿಗೆ ಈ ಕಾಮಗಾರಿ ಉದ್ಯಮ ಉದ್ಯೋಗವಕಾಶ ಸೃಷ್ಟಿಸಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸುಮಾರು ೨೦ ದಶಲಕ್ಷ ಮಂದಿ ನೇರವಾಗಿ ಮತ್ತು ೧೫ ದಶಲಕ್ಷ ಮಂದಿ ಪರೋಕ್ಷವಾಗಿ ಉದ್ಯೋಗ ಪಡೆದಿದ್ದಾರೆ ಎಂದು ವಿವರಿಸಿದರು.

ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿ ಯೊಬ್ಬರಿಗೂ   ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯವರು   ಗುರುತಿನ ಚೀಟಿ ಕೊಡುವುದರ ಮೂಲಕ ಅವರ ಬದುಕಿಗೆ ಆಶಾಕಿರಣವಾಗಿದೆ. 
ಆದರೆ ಸರಿಯಾದ ತಿಳಿವಳಿಕೆ ಇಲ್ಲದೆ ತಮ್ಮ ಗುರುತಿನ ಚೀಟಿ ಪಡೆಯಲು ವಿಫಲರಾಗಿದ್ದಾರೆ’ ಎಂದರು.

ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಟ್ಟಡ ಕರ್ಮಿಕರಿಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘ ನೀಯವಾದುದು. ಗುರುತಿನ ಚೀಟಿಯನ್ನು ಪಡೆದ ಕಾರ್ಮಿಕರು  ವೈದ್ಯಕೀಯ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿವೇತನ, 50 ವರ್ಷಗಳಾದ ಮಹಿಳೆಯರಿಗೆ ಮತ್ತು 55 ವರ್ಷವಾದ ಪುರುಷರಿಗೆ, ಅಂಗವಿಕಲರಿಗೆ ಮಾಸಿಕ ಪಿಂಚಿಣಿ ಇನ್ನೂ ಮುಂತಾದ ಗುರುತರವಾದ ಸೌಲಭ್ಯಗಳು  ದೊರೆಯಲಿವೆ.

ಕಾರ್ಮಿಕರು ಗುರುತಿನ ಚೀಟಿ ಪಡೆಯಲು ವಾಸದ ದೃಢೀಕರಣ, ವಯಸ್ಸಿನ ಪ್ರಮಾಣ ಪತ್ರ, ಮೂರು ಭಾವ ಚಿತ್ರಗಳು, ಮುಂತಾದ ದಾಖಲಾತಿಗಳನ್ನೊಳಗೊಂಡಂತೆ ೧೨೫ರೂಪಾಯಿ  ನೋಂದಣಿ ಶುಲ್ಕ ಸೇರಿ ೧೭೫ ರೂಗಳನ್ನು ಕೊಟ್ಟು ಇಲಾಖೆ ಗೊತ್ತು ಪಡಿಸಿರುವ ಅರ್ಜಿ ನಮೂನೆ ಭರ್ತಿ ಮಾಡಿಕೊಟ್ಟರೆ ಮೂರು ವರ್ಷಗಳಿಗೆ ನೋಂದಣಿ ಮಾಡಿಸಿಕೊಂಡು ಗರುತಿನ ಚೀಟಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.   

ತಾಲ್ಲೂಕಿನಾದ್ಯಂತ  ಕಟ್ಟಡ ಕಾಮಗಾರಿಯಲ್ಲಿ ಬದುಕನ್ನು ಕಟ್ಟಿ ಕೊಂಡಿರುವ  ಕಾರ್ಮಿಕರ ಗುರುತಿನ ಚೀಟಿಯ ನೋಂದಣಿಗೆ ಅನುಕೂಲ ಮಾಡಿಕೊಡಲು ಎನ್.ಎಸ್.ಎಸ್. ವಿದ್ಯಾರ್ಥಿಗಳು ನೆರವಾಗಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಸಾಕಷ್ಟು ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಎನ್.ಎಸ್.ಎಸ್. ವಿದ್ಯಾರ್ಥಿಗಳ ನೆರವಿನಿಂದ ಕಲ್ಪಿಸಿ ಕೊಡಲಾಗುತ್ತಿದೆ  ಎಂದು ಎನ್. ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪ್ರೊ.ಚಂದ್ರಪ್ಪ ಹೇಳಿದರು.
ಇದೇ ಸಂದರ್ಭದಲ್ಲಿ  ಕಟ್ಟಡ ಕೂಲಿ ಕಾರ್ಮಿಕರಿಂದ ಅರ್ಜಿಗಳನ್ನು ಪರಿ ಶೀಲಿಸಿ ಗುರುತಿನ ಚೀಟಿಗೆ ನೋಂದಣಿ ಮಾಡಿಸಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವರಾಜ ಅರಸು ವ್ಯವಹಾರ ನಿರ್ವಹಣಾ ಕಾಲೇಜು, ಕೊಂಗಾಡಿಯಪ್ಪ ಕಾಲೇಜಿನ ಎನ್.ಎಸ್.ಎಸ್. ಘಟಕಗಳಿಂದ ಆಯೋಜಿಸಲಾಗಿತ್ತು.

ವಿದ್ಯಾಸಂಸ್ಥೆಯ ಖಜಾಂಚಿ ಪ್ರಭು ದೇವ್, ನಿರ್ದೇಶಕ ರಾಜಶೇಖರ್,  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಆರ್. ರವಿಕಿರಣ್, ಕಾರ್ಯ ಕ್ರಮಾಧಿಕಾರಿ ಚಿಕ್ಕಣ್ಣ, ಜಿ.ಶ್ರೀನಿವಾಸ್, ಕಾರ್ಮಿಕ ಮುಖಂಡ ಹಾಡೋನಹಳ್ಳಿ ಗೋವಿಂದರಾಜು, ಸಹಾಯಕ ಅಧಿಕಾರಿ ಡಾ.ಬಿ.ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT