ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಪ್ರೇರಣೆಯ `ಅನುಗ್ರಹ' ಸಂಗೀತ ಶಾಲೆ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಹಂಸಧ್ವನಿ ಮತ್ತು ಮೋಹನ ಎರಡೂ ಔಡವ ಸ್ವರ ಸಮೂಹಗಳನ್ನು ಹೊಂದಿರುವ ರಾಗಗಳೇ. ಹಂಸಧ್ವನಿಯಲ್ಲಿ ದೈವತ (ದ) ಸ್ವರ ವರ್ಜ್ಯವಾದರೆ, ಮೋಹನ ರಾಗದಲ್ಲಿ ನಿಷಾದ (ನಿ) ವರ್ಜ್ಯ. ಎರಡೂ ಜನ್ಯ ರಾಗಗಳೇ ಆಗಿದ್ದು, ಒಂದೇ ಮೇಳಕರ್ತ ರಾಗ ಶಂಕರಾಭರಣದಿಂದ ಹುಟ್ಟಿದ ರಾಗಗಳು..' ಕರ್ನಾಟಕ ಸಂಗೀತದ ಈ ಶಾಸ್ತ್ರ ಭಾಗವನ್ನು ಆ ಸಂಗೀತ ಶಿಕ್ಷಕ ಹತ್ತಾರು ಮಕ್ಕಳನ್ನು ಕೂರಿಸಿಕೊಂಡು ಹೇಳಿಕೊಡುತ್ತಿದ್ದರು. ಅವರೆಲ್ಲಾ ಸಂಗೀತದ ಜೂನಿಯರ್ ಹಂತದ ಮಕ್ಕಳು ಎಂಬುದು ತಿಳಿಯಿತು. ಅಲ್ಲಿಂದ ಮುಂದೆ `ಕಟಪಯಾದಿ ಸೂತ್ರ'ದ ವಿವರಣೆ ನೀಡುತ್ತಿದ್ದರು ಆ ಸಂಗೀತ ವಿದ್ವಾನ್. ಇದು ಗಣಿತದಂತೆಯೇ ಲೆಕ್ಕಾಚಾರದ ವಿಷಯ. `ಕಟಪಯಾದಿ ಸೂತ್ರ' ಕಲಿತುಕೊಂಡರೆ ಯಾವ ಸಂಪೂರ್ಣ ರಾಗ ಎಷ್ಟನೇ ಮೇಳಕರ್ತ ರಾಗವಾಗುತ್ತದೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಈ ಪಾಠವನ್ನು ವಿವರಿಸುತ್ತಿದ್ದರೆ ಮಕ್ಕಳು ಅಷ್ಟೇ ಉತ್ಸುಕರಾಗಿ ನೋಟ್ ಮಾಡಿಕೊಳ್ಳುತ್ತಿದ್ದರು.

ಇದು ಹನುಮಂತನಗರದಲ್ಲಿರುವ ಅನುಗ್ರಹ ಸಂಗೀತ ಶಾಲೆಯಲ್ಲಿ ಕಂಡುಬಂದ ದೃಶ್ಯ. ತಮ್ಮ ಗುರು ನಡೆಸುತ್ತಿದ್ದ `ಶ್ರೀ ಗುರುಗುಹ ಸಂಗೀತ ವಿದ್ಯಾಲಯ'ದಲ್ಲಿ ಹಲವಾರು ವರ್ಷ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ ಗುರುಗಳ ಪ್ರೇರಣೆ ಮತ್ತು ಅನುಗ್ರಹದಿಂದಲೇ ಕಳೆದ 10 ವರ್ಷಗಳ ಹಿಂದೆ `ಅನುಗ್ರಹ ಸಂಗೀತ ವಿದ್ಯಾಲಯ' ಆರಂಭಿಸಿದವರು ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರೂ ಆಗಿರುವ ಈ ಸಂಗೀತ ಶಿಕ್ಷಕ ಬೆಂಗಳೂರು ಮತ್ತು ತುಮಕೂರಿನಲ್ಲಿ ಎರಡು ಶಾಖೆಗಳಲ್ಲಿ ಸಂಗೀತ ಪಾಠ ಹೇಳಿಕೊಡುತ್ತಾರೆ. ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಶಾಸ್ತ್ರೀಯ ಸಂಗೀತದ ಜತೆಗೆ ದೇವರನಾಮ, ಭಾವಗೀತೆ, ವಚನ, ಸ್ತೋತ್ರ ಪಾಠಗಳೂ ಲಭ್ಯ. ವರ್ಷದಲ್ಲಿ ಎರಡು ತಿಂಗಳು ಉಚಿತ ದೇವರನಾಮ ಶಿಬಿರವನ್ನೂ ನಡೆಸಲಾಗುತ್ತದೆ.

ವಿದ್ವಾನ್ ಜೆ.ಎಸ್. ಶ್ರಿಕಂಠ ಭಟ್ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಸಂಸ್ಥಾಪಕರು, ಉತ್ತಮ ಸಂಗೀತ ಶಿಕ್ಷಕರು. ಮೇಲಾಗಿ ಸಿರಿಕಂಠದ ಗಾಯಕರೂ ಹೌದು.

ಈ ಸಂಗೀತ ಶಾಲೆಯಲ್ಲಿ ನಾಲ್ಕು ವರ್ಷದ ಪುಟಾಣಿಯಿಂದ ಹಿಡಿದು 70 ವರ್ಷದವರೆಗಿನ ಶಿಷ್ಯಂದಿರು ಸಂಗೀತ ಕಲಿಯುತ್ತಾರೆ. ವಾರದಲ್ಲಿ ಎರಡು ದಿನ ತರಗತಿಗಳಿದ್ದು, ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಪಾಠವಿರುತ್ತದೆ.

ವಾಗ್ಗೇಯಕಾರರ ಆರಾಧನೆ
`ಅನುಗ್ರಹ ಸಂಗೀತ ಶಾಲೆ ಪ್ರತಿವರ್ಷ ವಾಗ್ಗೇಯಕಾರರ ಆರಾಧನೆಯನ್ನು ಅದ್ದೂರಿಯಾಗಿ ನಡೆಸುತ್ತದೆ. ವಾಗ್ಗೇಯಕಾರರ ಜೀವನ, ಸಾಧನೆಯ ಪರಿಚಯ, ಇವರ ರಚನೆಯ ಸಂಗೀತ ಕೃತಿಗಳ ಪರಿಚಯ ಮಕ್ಕಳಿಗೆ ಆಗಲಿ ಎಂಬುದು ಇದರ ಉದ್ದೇಶ. ಪ್ರತಿವರ್ಷ ಡಿಸೆಂಬರ್‌ನಲ್ಲಿ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರ ಆರಾಧನೋತ್ಸವ ಮತ್ತು ಫೆಬ್ರುವರಿಯಲ್ಲಿ ತ್ಯಾಗರಾಜರು ಹಾಗೂ ಪುರಂದರ ದಾಸರ ಆರಾಧನೋತ್ಸವ ಆಚರಿಸಲಾಗುತ್ತದೆ. ಜತೆಗೆ ಪ್ರತಿ ವರ್ಷವೂ ಶಂಕರ ಜಯಂತಿ ಮತ್ತು ಗುರು ಪೂರ್ಣಿಮೆ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ. ಈ ಎಲ್ಲ ವಿಶೇಷ ಕಾರ್ಯಕ್ರಮಗಳಲ್ಲಿ ಇಲ್ಲಿ ಕಲಿಯುವ ಮಕ್ಕಳಿಗೆ ಸ್ವತಂತ್ರವಾಗಿ ಹಾಡುವ ಅವಕಾಶ ನೀಡಲಾಗುತ್ತದೆ' ಎನ್ನುತ್ತಾರೆ ವಿದ್ವಾನ್ ಶ್ರೀಕಂಠ ಭಟ್. 

ಪ್ರತಿವರ್ಷ ನಡೆಸುವ ದೇವರನಾಮ ಶಿಬಿರದಲ್ಲಿ ಇಲ್ಲಿ ಕಲಿಯುವ ಮಕ್ಕಳ ಜತೆಗೆ ನೂರಾರು ಮಹಿಳೆಯರು, ಪುರುಷರೂ ಭಾಗವಹಿಸುತ್ತಾರೆ. ಸಂಗೀತದ ಕುರಿತಾದ ಉಪನ್ಯಾಸ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಸೋದಾಹರಣ ಭಾಷಣಗಳನ್ನು ನಡೆಸಲಾಗುತ್ತದೆ. ಇದು ಮಕ್ಕಳ ಸಂಗೀತದ ಜ್ಞಾನವೃದ್ಧಿಗೆ ಸಹಕಾರಿ ಎಂಬುದು ಇವರ ಅಭಿಮತ.

`ಅನುಗ್ರಹ ಸಂಗೀತ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪುರಂದರ ದಾಸರ ನವರತ್ನ ಮಾಲಿಕೆ ಮತ್ತು ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳನ್ನು ರಾಗಬದ್ಧವಾಗಿ ಹಾಡುತ್ತಾರೆ. ಆದಿಶಂಕರಾಚಾರ್ಯರ 12 ಸ್ತೋತ್ರಗಳನ್ನು ಅಪರೂಪದ ರಾಗಗಳಲ್ಲಿ ಹಾಡಲು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದೇವೆ' ಎನ್ನುತ್ತಾರೆ ಈ ಸಂಗೀತ ಶಿಕ್ಷಕ. 

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಕಿರಿಯ, ಹಿರಿಯ ಮತ್ತು ವಿದ್ವತ್ ಹಂತದ ಪರೀಕ್ಷೆಯಲ್ಲಿ ಇಲ್ಲಿನ ಮಕ್ಕಳು ಅತಿ ಹೆಚ್ಚು ಅಂಕಗಳನ್ನು ಪಡೆದು ಸದ್ಯ ಸಂಗೀತ ಕಛೇರಿ ನೀಡುವಷ್ಟರ ಮಟ್ಟಿಗೆ ತಯಾರಾಗಿದ್ದಾರೆ. ವಿವಿಧ  ಸಂಘ ಸಂಸ್ಥೆಗಳು ನಡೆಸುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಇಲ್ಲಿನ ಮಕ್ಕಳು ಬಹುಮಾನವನ್ನೂ ಪಡೆದಿದ್ದಾರೆ.

ಸಮಾಜ ಸೇವೆ
ಅನುಗ್ರಹ ಸಂಗೀತ ಮಹಾವಿದ್ಯಾಲಯವು ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರಲ್ಲಿ ದಂತ ವೈದ್ಯರಿಂದ ತಪಾಸಣೆ, ಗಂಟಲು, ಕಿವಿ ಮೂಗು ವೈದ್ಯರಿಂದ ಉಚಿತ ತಪಾಸಣಾ ಶಿಬಿರಗಳನ್ನು ವ್ಯವಸ್ಥೆಗೊಳಿಸುತ್ತಿದೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅನೇಕ ಹಿರಿಯ ವಿದ್ವಾಂಸರುಗಳಿಗೆ `ಅನುಗ್ರಹ ಶ್ರಿ' ಎಂಬ ಬಿರುದಿನೊಂದಿಗೆ ಸನ್ಮಾನಿಸಲಾಗುತ್ತದೆ. ಇದೇ ಸಂಗೀತ ಶಾಲೆಯ ವತಿಯಿಂದ `ಸಂಗೀತ ಮಹಿಳಾ ಮಂಡಳಿ'ಯೂ ರಚನೆಯಾಗಿದೆ. ಇಲ್ಲಿ ಸಮಾನಾಸಕ್ತ ಮಹಿಳೆಯರು ಗುಂಪಿನಲ್ಲಿ ದೇವರನಾಮ ಕಲಿಯುತ್ತಾರೆ. ಇದನ್ನು ಹಬ್ಬ ಹರಿದಿನಗಳಲ್ಲಿ ವಿವಿಧ ದೇವಸ್ಥಾನಗಳಲ್ಲಿ, ಭಜನಾ ಮಂಡಳಿಗಳಲ್ಲಿ ಹಾಡುತ್ತಾರೆ.

ಓದಿದ್ದು ವಿಜ್ಞಾನ, ಒಲಿದದ್ದು ಸಂಗೀತ
ಹಾಗೆ ನೋಡಿದರೆ ವಿದ್ವಾನ್ ಶ್ರೀಕಂಠ ಭಟ್ ಓದಿದ್ದು ವಿಜ್ಞಾನ ಪದವಿ. ಜತೆಗೆ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಮುಗಿಸಿದವರು. ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರಲ್ಲಿ ಹೆಚ್ಚಿನ ಸಂಗೀತ ಕಲಿತರು. ಶಿವಮೊಗ್ಗದಲ್ಲಿರುವ ಶ್ರೀ ಗುರುಗುಹ ಸಂಗೀತ ವಿದ್ಯಾಲಯದಲ್ಲಿ 18 ವರ್ಷ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಬೆಂಗಳೂರಿಗೆ ಬಂದು `ಅನುಗ್ರಹ ಸಂಗೀತ ವಿದ್ಯಾಲಯ' ಎಂಬ ತಮ್ಮದೇ ಸಂಗೀತ ಸಂಸ್ಥೆ ಕಟ್ಟಿದರು. ಇದರ ಶಾಖೆಯನ್ನು ತುಮಕೂರಿನಲ್ಲೂ ತೆರೆದು ಅಲ್ಲೂ ಸಂಗೀತ ಕಲಿಸುತ್ತಿದ್ದಾರೆ. ಕಳೆದ ಸುಮಾರು 20 ವರ್ಷಗಳಿಂದ ಆಕಾಶವಾಣಿಯಲ್ಲಿ ಸತತವಾಗಿ ಸಂಗೀತ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಶಾಲಾ ದಿನಗಳಲ್ಲಿ ಕಾಲೇಜು, ಅಂತರ ಕಾಲೇಜು, ವಿಶ್ವವಿದ್ಯಾಲಯ ಮಟ್ಟದ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದವರು. ಹಲವಾರು ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಭಾಗವಹಿಸಿದ್ದಾರೆ. ಇವರ ಅನೇಕ ಕಛೇರಿಗಳು ಚಂದನ ಮತ್ತು ಇತರ ಖಾಸಗಿ ಟೀವಿ ವಾಹಿನಿಗಳಲ್ಲಿ ಪ್ರಸಾರವಾಗಿವೆ.

ಬೆಂಗಳೂರಿನಲ್ಲಿ ಅನೇಕ ಸಂಗೀತ ಕಛೇರಿ ನೀಡಿರುವ ಇವರು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ತುಮಕೂರು, ಉಡುಪಿ, ತಿರುಪತಿ, ಮುಂಬಯಿ ಮುಂತಾದ ಕಡೆಗಳಲ್ಲಿ ಗಾನಸುಧೆ ಹರಿಸಿ ಕೇಳುಗರ ಮೆಚ್ಚುಗೆ ಗಳಿಸಿದ್ದಾರೆ. `ಗಾಯನ ವಿಭೂಷಣ', `ಸಂಗೀತ ಸೇವಾ ಸಾಧಕ' ಇವರಿಗೆ ಸಂದಿರುವ ಬಿರುದು, ಸನ್ಮಾನಗಳು. 

ವಿಳಾಸ: ವಿದ್ವಾನ್ ಜೆ. ಎಸ್. ಶ್ರಿಕಂಠ ಭಟ್, ಅನುಗ್ರಹ ಸಂಗೀತ ಮಹಾವಿದ್ಯಾಲಯ , ನಂ. 5/6, ಹನುಮಂತನಗರ, ಬಿ.ಎಸ್.ಕೆ. ಮೊದಲನೇ ಹಂತ, 22ನೇ ಮುಖ್ಯ ರಸ್ತೆ,  2ನೇ ಬ್ಲಾಕ್, ಬೆಂಗಳೂರು-560 050. ಫೋನ್: 94485-33347 / 080 26698462.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT