ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿಗೆ ಕೋಟಿ ಕೋಟಿ ನಮನ

Last Updated 6 ಸೆಪ್ಟೆಂಬರ್ 2013, 6:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ನಾನಾ ಕಾರಣಗಳಿಂದಾಗಿ ಶಿಕ್ಷಕರು ತಮ್ಮ ಘನತೆ, ಗೌರವವನ್ನು ಸಮಾಜದಲ್ಲಿ ಕಳೆದುಕೊಳ್ಳುವಂತಾಗಿದ್ದು ಮರಳಿ ಅವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ' ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹುಬ್ಬಳ್ಳಿ ತಾಲ್ಲೂಕು ಶಿಕ್ಷಕ ದಿನೋತ್ಸವ ಸಮಿತಿ ವತಿಯಿಂದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆಲ್ಲ ಸಮಾಜದಲ್ಲಿ ಶಿಕ್ಷಕರಿಗೆ ನೀಡುವಷ್ಟು ಗೌರವವನ್ನು ಇನ್ಯಾರಿಗೂ ನೀಡುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರ ಘನತೆ ಕಡಿಮೆಯಾಗುತ್ತಿದೆ. ಅವರನ್ನು ಅಲಕ್ಷ್ಯದಿಂದ ಕಾಣಲಾಗುತ್ತಿದೆ. ಹೀಗಾಗಿ ಮರಳಿ ಶಿಕ್ಷಕರ ಘನತೆ ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದರು.

ರಾಷ್ಟ್ರದ ಸೃಷ್ಟಿಕರ್ತರಿದ್ದರೆ ಅವರು ಶಿಕ್ಷಕರು. ಎಂಜಿನಿಯರ್, ವೈದ್ಯರು, ಕಲಾವಿದರು, ಕ್ರಿಡಾಪಟುಗಳು, ರಾಜಕಾರಣಿಗಳು, ಉದ್ಯಮಿಗಳು ಯಾರೇ ಇರಲಿ, ಯಶಸ್ವಿ ವ್ಯಕ್ತಿಗಳ ಹಿಂದೊಬ್ಬ ಶಿಕ್ಷಕ ಇದ್ದೇ ಇರುತ್ತಾನೆ. ವಿದ್ಯಾರ್ಥಿಗಳು ಏನೇ ಕಾಣಿಕೆ ನೀಡಿದರೂ ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ದೇಶವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರಿಯಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

`ಶಿಕ್ಷಕರು ಮಾದರಿಯಾಗಿ ನಡೆದುಕೊಳ್ಳಲಿ'
ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ರಾಜಕಾರಣಿಗಳು ಭ್ರಷ್ಟಾಚಾರ, ಹಗರಣಗಳನ್ನು ಮಾಡಿದರೆ ನ್ಯಾಯಾಲಯಕ್ಕೆ ಹೋಗಿ ಬಗೆ ಹರಿಸಿಕೊಳ್ಳುತ್ತಾರೆ ಬಿಡಿ ಎಂದು ಯಾರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ಶಿಕ್ಷಕರು ಹಗರಣ ಮಾಡಿಕೊಂಡರೆ ಸಮಾಜದ ಪ್ರತಿಯೊಬ್ಬರೂ ಕೂಡ ಅದರ ಬಗ್ಗೆಯೇ ದಿನವಿಡೀ ಮಾತನಾಡುತ್ತಾರೆ, ಗೌರವವನ್ನು ಕಳೆಯುತ್ತಾರೆ. ಹೀಗಾಗಿ ಶಿಕ್ಷಕರು ಸಮಾಜದಲ್ಲಿ ಎಲ್ಲರಿಗಿಂತ ಹೆಚ್ಚು ಮಾದರಿಯಾಗಿ ನಡೆದುಕೊಳ್ಳಬೇಕಾಗಿದೆ ಎಂದರು.

ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಶಿಕ್ಷಕರೆಂದರೆ ಕೇವಲ ಕಪ್ಪು ಹಲಗೆ, ಚಾಕ್‌ಪೀಸ್ ಹಿಡಿದು ಪಾಠ ಮಾಡುವುದಷ್ಟೇ ಕೆಲಸವಲ್ಲ. ಬದಲಿಗೆ ಮಕ್ಕಳ ವ್ಯಕ್ತಿತ್ವ ರೂಪಿಸುವುದು ಕೂಡ ಶಿಕ್ಷಕರ ಜವಾಬ್ದಾರಿಯಾಗಿದೆ. ನಮ್ಮ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಆದರೆ ಏನಾದರೂ ವಿಶ್ವಾಸಾರ್ಹ ಪಡುವ ಕ್ಷೇತ್ರವಿದ್ದರೆ ಅದು ಶೈಕ್ಷಣಿಕ ಕ್ಷೇತ್ರ ಮಾತ್ರ ಎಂದರು.

ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಮಾತನಾಡಿ, ಶಿಕ್ಷಕರು ಸಮಾಜದ ದಾರಿದೀಪ. ಶಾಲೆಯೆಂದರೆ ವಿದ್ಯಾರ್ಥಿಗಳನ್ನು ರೂಪಿಸುವ ದೇವಾಲಯವಿದ್ದಂತೆ, ಶಿಕ್ಷಕರ ಪ್ರೇರಣೆ ಇಲ್ಲದಿದ್ದರೆ ಯಾವುದೇ ವ್ಯಕ್ತಿ ಉನ್ನತ ಹುದ್ದೆಗೇರುವುದು ಅಸಾಧ್ಯ ಎಂದರು.

ಶಿಕ್ಷಕರಿಗೆ ಸನ್ಮಾನ
ವಿವಿಧ ಶಾಲೆಗಳ ಉತ್ತಮ ಸೇವಾ ನಿರತ ಶಿಕ್ಷಕರಿಗೆ ಸನ್ಮಾನ ಹಾಗೂ ನಿವೃತ್ತ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹುಬ್ಬಳ್ಳಿ ಆದರ್ಶ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಲ್.ಪೊಲೀಸ ಪಾಟೀಲರು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕರಿಗೆ ಆಶೀರ್ವಚನ ನೀಡಿದರು.
ತಹಶೀಲ್ದಾರ ಎಚ್.ಡಿ.ನಾಗಾವಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹೊಸಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಫ್.ಚುಳಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನಕುಮಾರ  ಎಲ್. ಹಂಚಾಟೆ, ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ಬಾಲಣ್ಣವರ, ಸದಸ್ಯ ಮಹಾಬಲೇಶ್ವರ ಅಣ್ಣೀಗೇರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ದಾಕ್ಷಾಯಿಣಿ ನ.ಕಲಾಲ, ಸದಸ್ಯ ಯಲ್ಲಪ್ಪ  ಸವಾಸಿ, ಸಿಇಒ ಗಂಗಾಧರ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಮತ್ತಿತರರು ಉಪಸ್ಥಿತರಿದ್ದರು.

`್ಯಕ್ತಿತ್ವ ನಿರ್ಮಾತೃ'
`ರಾಜ ಮಹಾರಾಜರೇ ಇರಲಿ, ಇತರ ಯಾವುದೇ ದೊಡ್ಡ ವ್ಯಕ್ತಿತ್ವಗಳಿರಲಿ, ಅವರ ಹಿಂದೆ ಶಿಕ್ಷಕರ ಶ್ರಮ ಇರುತ್ತದೆ. ಹೀಗಾಗಿ ಶಿಕ್ಷಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು' ಎಂದು ಸೂಡಿಯ ಜುಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ನಗರದ ಪಟ್ಟಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಕರ ಸನ್ಮಾನ ಸಮಿತಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಾರ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು.

`ಶಿಕ್ಷಕರಲ್ಲಿ ಅದ್ಭುತ ಶಕ್ತಿ ಇದೆ. ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡಿದರೆ ಅವರು ಉತ್ತಮ ಸೇವೆ ಸಲ್ಲಿಸುವ ಅವಕಾಶವನ್ನು ಸ್ವತಃ ಗಳಿಸಿಕೊಂಡಂತಾಗುತ್ತದೆ. ಸಂಸ್ಕೃತಿ, ಆಚಾರ, ಶೀಲ ವೃದ್ಧಿಸಿ ಸುಸಂಸ್ಕೃತ ಸಮಾಜ ನಿರ್ಮಿಸುವುದು ಅವರ ಪ್ರಮುಖ ಕೆಲಸ ಆಗಬೇಕು' ಎಂದು ಅವರು ಹೇಳಿದರು.

`ಶಿಕ್ಷಕರು ಮಕ್ಕಳ ಜೊತೆ ಬೆರೆತು ಕಲಿಸುವ ಗುಣವನ್ನು ರೂಢಿಸಿಕೊಳ್ಳಬೇಕು. ಶಾಲೆಯಲ್ಲಿ ಕಲಿತದ್ದನ್ನು ಮಕ್ಕಳು ಎಂದಿಗೂ ಮರೆಯುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಮೇಲೆ ಇರಿಸಿರುವ ಭರವಸೆಯನ್ನು ಉಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು' ಎಂದು ಅವರು ಸಲಹೆ ನೀಡಿದರು.

ನಿವೃತ್ತರಾದ 60 ಮಂದಿ ಶಿಕ್ಷಕರು ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಶಿಕ್ಷಕರ ಸನ್ಮಾನ ಸಮಿತಿ ಅಧ್ಯಕ್ಷ ಜಿ.ಎಂ.ಚಿಕ್ಕಮಠ, ಕಾರ್ಯದರ್ಶಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಮಣಕೂರ, ಉಪಾಧ್ಯಕ್ಷ ಸಿ.ಎಸ್.ಮುಳ್ಳಳ್ಳಿ, ಆಜೀವ ಸದಸ್ಯ ಹುಚ್ಚಪ್ಪ ರೂಗಿ, ಸರ್ಕಾರಿ ನೌಕರರ ಸಂಘದ ನಗರ ಘಟಕದ ಅಧ್ಯಕ್ಷ ಎಸ್.ಬಿ.ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಆರ್.ಶಿರೂರ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎಂ.ತಟ್ಟಿಮನಿ, ಕಾರ್ಯದರ್ಶಿ ಎ.ಎಚ್.ಜಂಗಲಿ, ಉದ್ಯಮಿ ಈಶ್ವರ ಠಕ್ಕರ್ ಉಪಸ್ಥಿತರಿದ್ದರು.ಎಚ್.ಎಲ್.ತುಪ್ಪದ ನಿರೂಪಿಸಿದರು.

ಜೆ.ಕೆ.ಶಾಲೆಯ ಮಕ್ಕಳು ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು. ನಾಗಶೆಟ್ಟಿಕೊಪ್ಪ ಸರ್ಕಾರಿ ಶಾಲೆಯ ಮಕ್ಕಳು ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT