ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿನ ನೆನಪಲ್ಲಿ ಕಲಾ ಧಾರೆ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಕಲಾಪ

ಘಟ್ಟದ ಮಗ್ಗುಲಿನಲ್ಲಿ ಸುರಿವ ಮುಂಗಾರಿನ ಮುಸಲಧಾರೆಗೆ ಆ ಮಳೆಯೇ ಸಾಟಿ, ಶರತ್ಕಾಲದ ಮೋಡಕ್ಕೆ ಆ ಮೋಡವೇ ಬಿಳುಪು. ಸುತ್ತ ಹಸಿರುಗಟ್ಟಿ ನಿಂತಿರುವ ನಿಸರ್ಗಕ್ಕೆ ಪ್ರಕೃತಿಯೇ ಬೆರಗು. ಇವುಗಳಲ್ಲಿ ಒಂದೊಂದು ಚೆಂದವೆ. ಇವೆಲ್ಲವೂ ಕಲಾವಿದನ ಕಲೆಗೆ  ಸ್ಫೂರ್ತಿ ನೀಡುವಂತಹುವು. ಕಲೆ ಕಲಾವಿದನಿಗೆ ಆತ್ಮ ಸಂತೋಷವನ್ನು ಒದಗಿಸಿದರೆ, ಕಲೆಯನ್ನು ಆಸ್ವಾದಿಸುವ ಕಲಾ ರಸಿಕನಿಗೆ ಅವು ಮುದ ನೀಡುತ್ತದೆ.

ಖ್ಯಾತ ಕಲಾವಿದರಾದ ಅಜಯ್ ಕುಮಾರ್, ವಿ.ಜಿ.ಅಂದಾನಿ, ಎಚ್.ಎ.ಅನಿಲ್ ಕುಮಾರ್, ಅಂಜನಿ ರೆಡ್ಡಿ, ಎ.ಎಲ್.ಅಪರಾಜಿತನ್, ವಿ.ಆರ್.ಸಿ.ಶೇಖರ್, ನಾಗಪ್ಪ, ಕೆ.ಎಸ್.ಅಪ್ಪಾಜಯ್ಯ, ಅರ್ಪಣ್ ಮುಖರ್ಜಿ, ಬಾಬು, ಬಸವರಾಜ್ ಮುಸವಲಂಗಿ, ದೀಪಕ್ ಜಾನ್ ಮ್ಯಾಥ್ಯು, ಗೌತಮ್ ದಾಸ್, ಗಾಯತ್ರಿ ಎಂ.ದೇಸಾಯಿ, ಟಿ.ಎಂ.ವಿ.ಗೌಡ, ಹನುಮಾನ್ ಕಂಬ್ಲಿ ಸೇರಿದಂತೆ ಒಟ್ಟು 48 ಕಲಾವಿದರ ಕುಂಚದಲ್ಲಿ ನಿಸರ್ಗದ ಚೆಲುವು, ಪರಿಸರ ಕಾಳಜಿ, ಗುರುಸ್ಮರಣೆ ಹೀಗೆ ನಾನಾ ವಿಚಾರಧಾರೆಗಳು ಬಣ್ಣದಲ್ಲಿ ಮೈದಳೆದು ನಿಂತಿವೆ.

ದೇಶದ ವಿವಿಧೆಡೆಯಿಂದ ಆಗಮಿಸಿರುವ ಕಲಾ ಶಿಕ್ಷಕರು ಹಾಗೂ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಈ ಪ್ರದರ್ಶನ ಏರ್ಪಡಿಸಲಾಗಿದೆ. ಖ್ಯಾತ ಕವಿಗೆ ಕಲೆಯ ಮೂಲಕ ಗುರು ನಮನ ಸಲ್ಲಿಸುವುದು ಈ ಪ್ರದರ್ಶನದ ಹಿಂದಿರುವ ಉದ್ದೇಶ. ಅದಕ್ಕೆಂದೇ ಈ ಪ್ರದರ್ಶನಕ್ಕೆ `ಹೋಮೇಜ್ ಟು ಗುರುದೇವ್~ (ಗುರು ಸ್ಮರಣೆ) ಎಂಬ ಹೆಸರು ನೀಡಿದ್ದಾರೆ.

ಕಲಾವಿದ ಜೈ ಜರೊಟಿಯಾ ಅವರ ಕಲಾಕೃತಿಗಳು ಹೆಣ್ಣು-ಗಂಡು, ಪುರುಷ-ಪ್ರಕೃತಿಗೆ ಸಂಬಂಧಿಸಿದವು. ಇವರು ತಮ್ಮ ಕಲಾಕೃತಿಯಲ್ಲಿ ಹೆಣ್ಣು ಹಾಗೂ ಗಂಡಿನ ನಡುವಿನ ಪ್ರೀತಿ, ಪ್ರೇಮ, ಪ್ರಣಯ ಮೊದಲಾದ ಭಾವನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಪರಸ್ಪರ ವೈರುಧ್ಯಗಳ ನಡುವೆ ಏರ್ಪಡುವ ಆಕರ್ಷಣೆಯಿಂದಾಗಿಯೇ ಹುಟ್ಟು-ಸಾವಿನ ಚಕ್ರ ನಿರಂತರವಾಗಿ ನಡೆಯುತ್ತಿದೆ ಎಂಬುದು ಇವರ ಚಿತ್ರಕಲಾಕೃತಿಗಳ ಸಂದೇಶ. 

ಕಲಾವಿದ ಶ್ರೀನಿವಾಸ ರೆಡ್ಡಿ ಅವರ ಕಲಾಕೃತಿಗಳು ಆಧ್ಯಾತ್ಮಕ್ಕೆ ಸಂಬಂಧಿಸಿದವು. ಭಾರತದ ಮಣ್ಣಿನಲ್ಲಿ ಅಧ್ಯಾತ್ಮದ ಸೆಲೆಯಿದೆ. ಇಲ್ಲಿನ ಜನರು ಆತ್ಮ, ಪರಮಾತ್ಮ, ಮೋಕ್ಷ ಎಂಬುದೆಲ್ಲವನ್ನು ಬಹುವಾಗಿ ನಂಬುತ್ತಾರೆ. ಶಕಪುರುಷರು, ತತ್ವಜ್ಞಾನಿಗಳು, ವೀರ ಸನ್ಯಾಸಿಗಳು ಈ ಕುರಿತು ಸಾಕಷ್ಟು ಪ್ರಚಾರ ಹಾಗೂ ಸಾಹಿತ್ಯ ರಚನೆ ಮಾಡಿದ್ದಾರೆ.
 
ಜನ ಮಾನಸದಲ್ಲಿ ಸ್ಥಾಯಿಯಾಗಿರುವ ಈ ಅಧ್ಯಾತ್ಮದ ಕಲ್ಪನೆಯನ್ನು ದೃಶ್ಯ ರೂಪಕ್ಕೆ ಇಳಿಸಿರುವುದು ಇವರ ಅಗ್ಗಳಿಕೆ. ಮನುಷ್ಯ ತನ್ನೊಳಗಿರುವ `ಅಹಂ~ ಬಿಟ್ಟು ಅದರಾಚೆಗೆ ತೆರೆದುಕೊಂಡಾಗ ಮಾತ್ರ ಅವನೊಳಗಿರುವ ಆತ್ಮ  ಪರಮಾತ್ಮನನ್ನು ಸಂಧಿಸಲು ಸಾಧ್ಯ ಎಂಬುದನ್ನು ಇವರ ಕಲಾಕೃತಿಗಳು ಸಾರುತ್ತದೆ.

ಕಲಾವಿದ ನಾಗಪ್ಪ ಅವರ `ಟ್ರೀ ವಿದ್ ಲೇಡಿ~ ಕಲಾಕೃತಿ ಪರಿಸರ ಕಾಳಜಿ ಬಿಂಬಿಸುತ್ತದೆ. ನಗರೀಕರಣದಿಂದಾಗಿ ಧರೆಗೆ ಉರುಳುತ್ತಿರುವ ಮರಗಳು, ಅರಣ್ಯ ನಾಶದಿಂದ ಪರಿಸರ ಮೇಲೆ ಆಗುವ ದುಷ್ಪರಿಣಾಮವನ್ನು ಈ ಶಿಲ್ಪ ಬಿಂಬಿಸುತ್ತದೆ. ನಾಗಪ್ಪ ಅವರು ಫೈಬರ್ ಗ್ಲಾಸ್ ಹಾಗೂ ಮೆಟಲ್ ಶೀಟ್‌ಗಳನ್ನು ಉಪಯೋಗಿಸಿ ಆರು ಅಡಿ ಎತ್ತರದ ಕಲಾಕೃತಿ ನಿರ್ಮಿಸಿದ್ದಾರೆ.

ವಿ.ಆರ್.ಸಿ.ಶೇಖರ್ ಅವರ ಕುಂಚದಲ್ಲಿ ನಿಸರ್ಗ ಝರಿಯಾಗಿ ಹರಿದಿದೆ. ಶೃಂಗೇರಿಯಲ್ಲಿ ಅವರಿಗೆ ಆದ ಮಧುರ ನೆನಪುಗಳನ್ನು ಕುಂಚದಲ್ಲಿ ಸೆರೆಹಿಡಿದು ತಮ್ಮ ನೆನಪನ್ನು ಚಿರಸ್ಥಾಯಿಯಾಗಿಸಿಕೊಂಡಿದ್ದಾರೆ. ಕಲಾವಿದೆ ಅಂಜಲಿ ರೆಡ್ಡಿ ಅವರು ಸಮುದಾಯವನ್ನು ತಮ್ಮ ಕಲಾಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು ಹೆಣ್ಣು ಮಕ್ಕಳ ನವಿರು ಭಾವನೆಗಳನ್ನು ಚಿತ್ರಿಸಿದ್ದಾರೆ. ಕಲಾವಿದ ರಘುರಾಮ ಅವರು ಹೆಣ್ಣಿನ ಮನಸ್ಸನ್ನು ಮೀನಿನೊಂದಿಗೆ ಸಾದೃಶ್ಯಗೊಳಿಸಿ ಚಿತ್ರಿಸಿದ್ದಾರೆ.

ಜತೆಗೆ ಇಲ್ಲಿ ಅನಾವರಣಗೊಂಡಿರುವ ಇತರೆ ಕಲಾವಿದರ ಚಿತ್ರಕಲಾಕೃತಿಗಳು, ಗ್ರಾಫಿಕ್ ವರ್ಕ್, ಶಿಲ್ಪಗಳು, ಮಲ್ಟಿಮೀಡಿಯಾ ಮತ್ತು ಪ್ರಿಂಟ್ ವರ್ಕ್‌ಗಳು ಮನಸೆಳೆಯುತ್ತವೆ. ಇವರ ಈ ಅಪರೂಪದ ಕಲಾಕೃತಿಗಳು ಚಿತ್ರಕಲಾಪರಿಷತ್‌ನಲ್ಲಿ ಶನಿವಾರದವರೆಗೆ ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT