ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿನ ಹೆಸರಿನಲ್ಲಿ...

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಮದುವೆ ಮನೆ ಕಳೆ ಅಲ್ಲಿತ್ತು. ಹಸಿರು ತೋರಣ. ಹೂ ಮಾಲೆಗಳ ಸಿಂಗಾರ. ರಾಯರ ಭಾವಚಿತ್ರದ ರಂಗವಲ್ಲಿ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ `ಗುರು ರಾಘವೇಂದ್ರ ವೈಭವ~ ಧಾರಾವಾಹಿಗೆ 260ನೇ ಸಂಚಿಕೆ ಪೂರ್ಣಗೊಳಿಸಿದ ಸಡಗರ ಅಂದು. ಅದಕ್ಕಾಗಿ ಯಶಸ್ಸಿಗೆ ಕಾರಣರಾದ ತಂತ್ರಜ್ಞರು ಮತ್ತು ಕಲಾವಿದರನ್ನು ಅಭಿನಂದಿಸುವ ಸಮಾರಂಭ ನಡೆದಿತ್ತು.

`ಅಪ್ಪಾಜಿ ಅಭಿನಯಿಸಿದ್ದ ರಾಯರ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಳ್ಳುವುದು ಸುಲಭವಲ್ಲ. ಅಂಥ ಸಾಹಸ ಮಾಡಿದ ನಿಮ್ಮ ಬಗ್ಗೆ ಗೌರವ ಹುಟ್ಟುತ್ತಿದೆ~ ಎನ್ನುತ್ತಾ ಮುಖ್ಯ ಅತಿಥಿಯಾಗಿ ಬಂದಿದ್ದ ಶಿವರಾಜ್‌ಕುಮಾರ್ ಧಾರಾವಾಹಿಯ ರಾಯರ ಪಾತ್ರಧಾರಿ, ಇಪ್ಪತ್ತೆರಡರ ಹರೆಯದ ಪರೀಕ್ಷಿತ್ ಪಾದಕ್ಕೆ ಕೈ ಹಾಕಿದಾಗ ಸಭೆ ಕೊಂಚ ಸಮಯ ಮಂತ್ರಮುಗ್ಧ. ಶಿವರಾಜ್ ಕುಮಾರ್ ಧಾರಾವಾಹಿಯ ತಂಡವನ್ನು ಪ್ರಶಂಸಿಸಿ, ಸ್ಮರಣಫಲಕ ವಿತರಿಸಿದರು.

ನಿರ್ದೇಶಕ ಬ.ಲ.ಸುರೇಶ್ ಅವರಿಗೆ ತಮ್ಮ ಧಾರಾವಾಹಿ ಗೆದ್ದ ಬಗ್ಗೆ ಖುಷಿಯಿತ್ತು. `ಯಾವುದೇ ಧಾರಾವಾಹಿಯ ಹಿಂದೆ ಏಕವ್ಯಕ್ತಿ ಇರಲು ಸಾಧ್ಯವಿಲ್ಲ. ಸರ್ವರ ಸಹಕಾರದ ಅಗತ್ಯ ಇದೆ. ಪೌರಾಣಿಕ, ಐತಿಹಾಸಿಕ ಧಾರಾವಾಹಿ ಪ್ರಸಾರ ಮಾಡಲು ಧೈರ್ಯ ಬೇಕು. ಆರಂಭದಲ್ಲಿ ಒಂದು ವರ್ಗಕ್ಕೆ ಈ ಧಾರಾವಾಹಿ ಸೀಮಿತವಾಗಬಹುದು ಎಂಬ ಭಯ ಇತ್ತು.

ಈ ಮಟ್ಟಕ್ಕೆ ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ರಾಯರ ಬದುಕು ಮತ್ತು ಸಾಮಾಜಿಕ ಸ್ಥಿತಿಗತಿ ಸಮೀಕರಿಸಿ ಚಿತ್ರಕತೆ ರೂಪಿಸಿದ್ದು ಸಹಾಯವಾಯಿತು. ಇನ್ನೂ ಇನ್ನೂರು ಎಪಿಸೋಡುಗಳಲ್ಲಿ ಕಥೆ ಮುಗಿಸುವೆವು~ ಎಂದರು. ತೆಲುಗಿನಲ್ಲಿ ತಮ್ಮ ಧಾರಾವಾಹಿಯದೇ ಡಬ್ಬಿಂಗ್ ಆವೃತ್ತಿ ಪ್ರಸಾರವಾಗುತ್ತಿರುವ ವಿಷಯ ತಿಳಿಸಿದರು.

`ಆರಂಭದ ಸಂಚಿಕೆಯಿಂದಲೂ ಪ್ರೇಕ್ಷಕರು ಸಂಪ್ರದಾಯ ಮತ್ತು ಸಂಸ್ಕಾರ ಹುಡುಕುವ ಹಾಗೂ ತಪ್ಪು ಗುರುತಿಸುವ, ಆಚಾರ ವಿಚಾರ ಸರಿಯಿಲ್ಲ ಎಂದು ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. ತಿದ್ದಿಕೊಳ್ಳುವ ಅವಕಾಶ ಸಿಕ್ಕಿದೆ. ನಮಗೆ ಸಲಹೆ ಸೂಚನೆ ನೀಡಿದ ಪ್ರೇಕ್ಷಕರು ಮತ್ತು ವಿದ್ವಾಂಸರಿಗೆ ವಂದನೆಗಳು. ಅಂದಹಾಗೆ ಧಾರಾವಾಹಿಗೆ ಮಠದಿಂದಲೂ ಪ್ರಶಂಸೆ ಸಿಗುತ್ತಿದೆ~ ಎಂದವರು ಸಂತಸಗೊಂಡರು.

ನಿರ್ಮಾಪಕ ಪಟ್ಟಾಭಿರಾಮ್ ತಮ್ಮ ಕನಸಿನಲ್ಲಿ ರಾಯರು ಬಂದ ದಿನವೇ ಅನೂಪ್ ಚಂದ್ರಶೇಖರ್ ಧಾರಾವಾಹಿ ಬಗ್ಗೆ ಮಾತನಾಡಿದ್ದು ದಿಗ್ಭ್ರಮೆ, ಆಶ್ಚರ್ಯ, ಭಯ ಹುಟ್ಟಿಸಿತು ಎಂದರು. `ಈ ಮೊದಲು `ಗಂಡುಗಲಿ ಕುಮಾರರಾಮ~ ಸಿನಿಮಾ ನಿರ್ಮಿಸಿ ಕುದಿಯೋ ಹಾಲಿಗೆ ಬಾಯಿ ಹಾಕಿದ ಬೆಕ್ಕು ತಣ್ಣನೆ ಹಾಲು ಮುಟ್ಟಲು ಹೆದರುವಂತೆ ಆಗಿದ್ದೆ. ಚಿಕ್ಕ ಪರದೆಗೂ ದೊಡ್ಡ ಪರದೆಗೂ ಬಹಳ ವ್ಯತ್ಯಾಸ ಇದೆ ಎಂದು ಸುರೇಶ್ ಧೈರ್ಯ ತುಂಬಿದರು.
 
ಧಾರಾವಾಹಿ ನಿರ್ದೇಶನ ಮಾಡಬೇಕಿದ್ದ ರೇಣುಕಾ ಶರ್ಮ ಅವರ ಆರೋಗ್ಯ ಹದಗೆಟ್ಟಿತು. ಸುರೇಶ್‌ಗೆ ಹೊಣೆ ಹೊರಿಸಿದೆ. ಇದೀಗ ಎಲ್ಲವೂ ಸರಾಗವಾಗಿದೆ~ ಎಂದರು.

`ಈ ಮೊದಲು ರಾತ್ರಿ 10 ಗಂಟೆಗೆ ಧಾರಾವಾಹಿ ಪ್ರಸಾರ ಮಾಡಲು ಮನಸ್ಸು ಅಳುಕುತಿತ್ತು. ಇದೀಗ ಕ್ರೈಮ್ ಕಾರ್ಯಕ್ರಮಗಳಿಂದ ರಾಯರ ಕಡೆಗೆ ಜನರ ಮನಸ್ಥಿತಿ ಪಲ್ಲಟವಾಗಿದೆ~ ಎಂದು ಪಟ್ಟಾಭಿರಾಮ್ ಖಷಿಪಟ್ಟರು.

ರಾಯರ ಪಾತ್ರದಿಂದ ತಮ್ಮ ವ್ಯಕ್ತಿತ್ವ ದಿನದಿಂದ ದಿನಕ್ಕೆ ಬದಲಾಗುತ್ತಿರುವುದಾಗಿ ಹೇಳಿದವರು ಪರೀಕ್ಷಿತ್. `ಏನೇ ಅವಘಡ ಸಂಭವಿಸಿದರೂ `ಹರಿ ಇಚ್ಛೆ~ ಎಂದು ಹೇಳಲು ಆರಂಭಿಸಿದ್ದೇನೆ.

ಜನ ಹೆಲ್ಮೆಟ್ ಒಳಗಿನ ನನ್ನ ಕಣ್ಣು ನೋಡಿ ಗುರುತು ಹಿಡಿಯುತ್ತಿದ್ದಾರೆ. ನನ್ನ ದನಿ ಕೇಳಲು ಅಂಧರೊಬ್ಬರು ಧಾರಾವಾಹಿ ಬರುವಾಗ ಟೀವಿ ಮುಂದೆ ಕೂರುತ್ತಿದ್ದಾರೆ. ಇದಕ್ಕಿಂತ ಅದೃಷ್ಟ ಇನ್ನಿಲ್ಲ~ ಎಂದ ಅವರಿಗೆ ಇಪ್ಪತ್ತೆರಡು ವರ್ಷದ ತಮ್ಮನ್ನು, `ಆಶೀರ್ವಾದ ಮಾಡಿ~ ಎಂದು ಹುಡುಗಿಯರು ಕೇಳುವುದು ಮಾತ್ರ ಮುಜುಗರ ತರಿಸಿದೆ.

ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಅಭಿಜ್ಞಾ ಒಂಬತ್ತನೇ ತರಗತಿ ಓದುತ್ತಿರುವ ಹುಡುಗಿ. ಈ ಮೊದಲು `ಕನ್ಯಾದಾನ~ ಧಾರಾವಾಹಿಯಲ್ಲಿ ನಟಿಸ್ದ್ದಿದ ಆಕೆಗೆ `ಇಲ್ಲಿ ಎಲ್ಲವೂ ಚೆನ್ನಾಗಿದೆ~ ಎನ್ನಿಸಿದೆ.

ಸಮಾರಂಭದಲ್ಲಿ ಕಾರ್ಯಕಾರಿ ನಿರ್ಮಾಪಕ ರಘುನಂದನ್ ಮತ್ತು ನಿರ್ಮಾಪಕಿ ಅನಿತಾ ಪಟ್ಟಾಭಿರಾಮ್ ಹಾಜರಿದ್ದರು.                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT