ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗ: ಕಾಂಗ್ರೆಸ್‌–ಬಿಜೆಪಿ ಪೈಪೋಟಿ

Last Updated 8 ಏಪ್ರಿಲ್ 2014, 8:51 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಲ್ಬರ್ಗ ಲೋಕಸಭಾ ಕ್ಷೇತ್ರವು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಅಖಾಡವಾಗಿದೆ.  ಎರಡೂ ಪಕ್ಷಗಳು 2009ರಲ್ಲಿ ಚಲಾವಣೆಯಾದ 7,59,385ಮತಗಳ ಪೈಕಿ ಶೇ 89.17 ಅನ್ನು ಪಡೆದಿರುವುದು ಇದಕ್ಕೆ ನಿದರ್ಶನ. ಆಗ ಹತ್ತು ಅಭ್ಯರ್ಥಿಗಳು ಕಣದಲ್ಲಿದ್ದರೂ ಖರ್ಗೆ ಶೇ 45.47 ಹಾಗೂ ಬೆಳಮಗಿ ಶೇ 43.70 ಮತ ಪಡೆದಿದ್ದರು. ಉಳಿದ ಹತ್ತು ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವುದೂ ಕಷ್ಟವಾಗಿತ್ತು.

ಭಾರತೀಯ ಜನತಾ ಪಕ್ಷವು 1991ರಲ್ಲಿ (ಬಸವರಾಜ ಪಾಟೀಲ ಸೇಡಂ) ಗುಲ್ಬರ್ಗದಲ್ಲಿ ಸ್ಪರ್ಧಿಸಿತ್ತು.  ಪ್ರಥಮ ಚುನಾವಣೆಯಲ್ಲೇ ಶೇ 28.98 ಮತ ಪಡೆದಿತ್ತು. ಆ ಬಳಿಕ ನಡೆದ ಆರು ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಿತ್ತು. 1998ರಲ್ಲಿ (ಬಸವರಾಜ ಪಾಟೀಲ ಸೇಡಂ) ಗೆಲುವು ಕಂಡಿತ್ತು.

1996ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಖಮರುಲ್‌ ಇಸ್ಲಾಂ ಆಯ್ಕೆ ಹೊರತು ಪಡಿಸಿದರೆ, ಬಿಜೆಪಿ ಸ್ಪರ್ಧೆ ಬಳಿಕ ನಾಲ್ಕು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. (1991–ಬಿ.ಜಿ. ಜವಳಿ, 1999 ಮತ್ತು 2004 – ಇಕ್ಬಾಲ್ ಅಹ್ಮದ್‌ ಸರಡಗಿ, 2009– ಮಲ್ಲಿಕಾರ್ಜುನ ಖರ್ಗೆ) ಪ್ರತಿ ಬಾರಿಯೂ ಬಿಜೆಪಿ ಎರಡನೇ ಸ್ಥಾನ ಪಡೆದಿದೆ. ಆದರೆ 2009ರಲ್ಲಿ ಖರ್ಗೆ ಹಾಗೂ ಬೆಳಮಗಿ ಸ್ಪರ್ಧೆಯಿಂದ ಎರಡೂ ಪಕ್ಷಗಳು ತಲಾ ಶೇ 40ಕ್ಕಿಂತಲೂ ಹೆಚ್ಚು ಮತ ಗಳಿಸಿದ್ದವು.

ಅಂದು: ಕ್ಷೇತ್ರ ವಿಂಗಡಣೆ ಬಳಿಕ ಗುಲ್ಬರ್ಗ ಮೀಸಲು ಕ್ಷೇತ್ರವಾಯಿತು. ಆಗ ವಿಧಾನಸಭೆಯ ಮೀಸಲು ಕ್ಷೇತ್ರದಲ್ಲಿ ಗೆದ್ದಿದ್ದ ಖರ್ಗೆ (ಚಿತ್ತಾಪುರ) ಹಾಗೂ ಬೆಳಮಗಿ (ಗುಲ್ಬರ್ಗ ಗ್ರಾಮೀಣ) ಮುಖಾಮುಖಿ­ಯಾಗಿದ್ದರು. ಇಬ್ಬರು ಶಾಸಕರು ವಯಸ್ಸಿನಲ್ಲೂ ಸಮಕಾಲೀನ ರಾಗಿದ್ದರು. ಇಬ್ಬರಿಗೂ ಲೋಕಸಭೆ ಮೊದಲ ಚುನಾವಣೆಯಾಗಿತ್ತು. 

ಅಂದು ಬೆಳಮಗಿ ರಾಜ್ಯದಲ್ಲಿ ಸಚಿವರಾಗಿದ್ದರೆ, ಮಲ್ಲಿಕಾರ್ಜು ಖರ್ಗೆ ಮಾಜಿ ಸಚಿವರಾಗಿದ್ದರು. ಇಬ್ಬರೂ ಅಲ್ಲಿ ತನಕ ಶಾಸಕರಾಗಿ ಸೋಲು ಕಂಡಿರಲಿಲ್ಲ. ಖರ್ಗೆ 9 ಬಾರಿ (ಗುರುಮಠಕಲ್‌–8, ಚಿತ್ತಾಪುರ–1) ಗೆದ್ದಿದ್ದರೆ, ಬೆಳಮಗಿ ಸತತ 4 ಬಾರಿ (ಕಮಲಾಪುರ–3, ಗುಲ್ಬರ್ಗ ಗ್ರಾಮೀಣ–1) ಗೆಲುವು ಕಂಡಿದ್ದರು. ರಾಜ್ಯದಲ್ಲಿ ಬಿಜೆಪಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು. 

ಇಂದು: ಈಗ ಖರ್ಗೆ ಕೇಂದ್ರದಲ್ಲಿ ಸಚಿವರಾಗಿದ್ದರೆ, ಬೆಳಮಗಿ ಮಾಜಿ ಸಚಿವರು. ಕಾಂಗ್ರೆಸ್‌ ಮೂವರು ಸಚಿವರನ್ನು (ಖಮರುಲ್‌, ಶರಣಪ್ರಕಾಶ್‌ ಪಾಟೀಲ್‌, ಬಾಬು ರಾವ ಚಿಂಚನಸೂರ) ಹೊಂದಿದೆ. ಬಿಜೆಪಿ ಪೈಕಿ ಯಾರೂ ಪ್ರಮುಖ ಹುದ್ದೆಗಳಲ್ಲಿ ಇಲ್ಲ. ಆದರೆ ಇಬ್ಬರೂ ಜಿಲ್ಲೆಯ ಉಸ್ತುವಾರಿ ಸಚಿವ ರಾಗಿದ್ದರು. ಒಂದು ಬಾರಿ ಸಂಸದರಾಗಿದ್ದ ಖಮರುಲ್‌ ಇಸ್ಲಾಂ ಈಗ ಉಸ್ತುವಾರಿ ಸಚಿವರಾಗಿದ್ದಾರೆ ಎಂಬುದು ವಿಶೇಷ.

ವ್ಯಾಪ್ತಿಯೊಳಗೆ: ಅಂದು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಐದು ಕಾಂಗ್ರೆಸ್‌ ಹಾಗೂ ಮೂರು ಬಿಜೆಪಿ ಶಾಸಕರನ್ನು ಹೊಂದಿತ್ತು. ಉಪಚುನಾವಣೆಯಿಂದ ಬಿಜೆಪಿ ನಾಲ್ಕು ಶಾಸಕರನ್ನು ಹೊಂದಿದ್ದರೆ, ಜೆಡಿಎಸ್‌ ಖಾತೆ ತೆರೆಯಿತು. ಕಾಂಗ್ರೆಸ್‌ ಮೂರಕ್ಕೆ ಕುಸಿದಿತ್ತು. ಆದರೆ 2013 ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿದ್ದು, ಈಗ ಏಳು ಕಾಂಗ್ರೆಸ್‌ ಹಾಗೂ ಒಂದು ಬಿಜೆಪಿ ಶಾಸಕ ಸ್ಥಾನ ಹೊಂದಿವೆ.

ಸೋಲು: ಖರ್ಗೆ ಗೆಲುವಿನಿಂದ ತೆರವಾಗಿದ್ದ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಕಂಡರೆ, ಬೆಳಮಗಿ  2013ರ ಉಪಚುನಾವಣೆಯಲ್ಲಿ ಗುಲ್ಬರ್ಗ ಗ್ರಾಮೀಣ ಕ್ಷೇತ್ರದಲ್ಲಿ ಸೋತಿದ್ದಾರೆ. ಆದರೆ ಖರ್ಗೆ ವೈಯಕ್ತಿಕವಾಗಿ ಈ ತನಕ ಸೋಲು ಕಂಡಿಲ್ಲ.

ಹೊಸ ಮತ: ಅಂದು ಒಟ್ಟು 15,43,479 ಮತದಾರರಿದ್ದು, ಶೇ 49.18 ಮಂದಿ ಮತ ಚಲಾಯಿ ಸಿದ್ದರು. ಈಗ ಒಟ್ಟು ಮತದಾರರ ಸಂಖ್ಯೆ 17,21,666. ಈ ಬಾರಿ 1,78,187 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಜೊತೆ ಇತರ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ನಾಲ್ಕು ಮಂದಿ ಕಳೆದ ಬಾರಿ ಸ್ಪರ್ಧಿಸಿದ್ದರು. ನಾಲ್ವರು ಹೊಸಬ್ಬರು. ಪ್ರಬಲ ಹೋರಾಟದಿಂದ ಮತ್ತೆ ಅಖಾಡ ರಂಗೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT