ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗ ವಿವಿ ಘಟಿಕೋತ್ಸವ:ಗಣ್ಯರ ಗೈರು

Last Updated 17 ಫೆಬ್ರುವರಿ 2011, 18:25 IST
ಅಕ್ಷರ ಗಾತ್ರ

ಗುಲ್ಬರ್ಗ: ಸಮಾರಂಭದ ಅಧ್ಯಕ್ಷರು, ಘಟಿಕೋತ್ಸವ ಭಾಷಣಕಾರರು ಹಾಗೂ ಸಹ ಕುಲಾಧಿಪತಿಗಳ ಗೈರುಹಾಜರಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ 29ನೇ ಘಟಿಕೋತ್ಸವವು ವಿ.ವಿ. ಆವರಣದ ಬಯಲು ರಂಗಮಂದಿರದಲ್ಲಿ ಗುರುವಾರ ನಡೆಯಿತು.

ಕುಲಾಧಿಪತಿಗಳಾದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಘಟಿಕೋತ್ಸವ ಭಾಷಣ ಮಾಡಬೇಕಾಗಿದ್ದ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕೆ. ಕಸ್ತೂರಿರಂಗನ್ ಹಾಗೂ ಸಹ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. 

ಗಣ್ಯರ ಅನುಪಸ್ಥಿತಿಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಬಸವರಾಜ ಪಾಟೀಲ ಸೇಡಂ, ಸಂತ ರಾಮರಾವ ಮಹಾರಾಜ, ಎಸ್.ಎಸ್.ಪಾಟೀಲ, ಧ್ಯಾನ್‌ರಾಜ್ ಮಾಣಿಕ್ ಪ್ರಭು ಮಹಾರಾಜ್, ಶಂಕರಗೌಡ ಬೆಟ್ಟದೂರ, ಡಾ.ಮಹೇಶ ಜೋಷಿ ಮತ್ತು ಗಣಪತಿ ಭೀಮಪ್ಪ ಸಜ್ಜನ ಅವರು ಕುಲಪತಿ ಈ.ಟಿ.ಪುಟ್ಟಯ್ಯ ಅವರಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಅವರೊಂದಿಗೆ ವಿವಿಧ ನಿಕಾಯಗಳಲ್ಲಿ ಮಂಡಿಸಿದ ಪ್ರೌಢ ಪ್ರಬಂಧಕ್ಕೆ 133 ಮಂದಿ ಡಾಕ್ಟರೇಟ್ ಪಡೆದರು.

ಗುಲ್ಬರ್ಗ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಆಡಳಿತ ನಿರ್ವಹಣಾ ಕಾಲೇಜಿನ ವಿದ್ಯಾರ್ಥಿನಿ ರೂಪಾಶ್ರೀ ಚನ್ನಬಸಪ್ಪ ವಾಲಿ ಒಟ್ಟು ಎಂಟು ಚಿನ್ನದ ಪದಕ ಪಡೆದರು. ವಿವಿಯ ಸ್ನಾತಕೋತ್ತರ ವಿಭಾಗದ ರಾಧಿಕಾ ಮಲ್ಲೇಶಪ್ಪ ಪೂಜಾರಿ (ಕಂಪ್ಯೂಟರ್), ಬೀಬೀ ಆಸಮಾ (ಗಣಿತ) ಮತ್ತು ಪದವಿ ವಿದ್ಯಾರ್ಥಿನಿ ಶ್ವೇತಾ ಕನಕರಾಯ ಪಾಟೀಲ (ಕಾನೂನು) ತಲಾ ಆರು ಚಿನ್ನದ ಪದಕ ಪಡೆದರು. ಒಟ್ಟು 142 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.  

ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಡಾ.ಟಿ.ಕೆ. ಅಲೆಕ್ಸ್ ಘಟಿಕೋತ್ಸವ ಭಾಷಣ ಮಾಡಿದರು. ಬೇರೆ ಗ್ರಹಗಳಿಗೆ ಮನುಷ್ಯನ ವಾಸಸ್ಥಾನವನ್ನು ವರ್ಗಾಯಿಸುವ ಬಗ್ಗೆ ಬಾಹ್ಯಾಕಾಶ ಸಂಶೋಧನೆಗಳು ನಡೆಯುತ್ತಿವೆ. ಚಂದ್ರನ ಮೇಲೆ ನೀರಿನ ಶೋಧ ಮತ್ತು ಮುಂದಿನ ಶತಮಾನಗಳಲ್ಲಿ ಇತರ ಗ್ರಹ, ಕ್ಷುದ್ರಗ್ರಹ, ಧೂಮಕೇತುಗಳು ಭೂಮಿ ಮೆಲೆ ದಾಳಿ ಮಾಡಬಹುದು ಎಂಬ ವಿಚಾರಗಳು ಮನುಷ್ಯನ ವಾಸಸ್ಥಾನ ಬದಲಾವಣೆ ಕುರಿತ ಸಂಶೋಧನೆಗೆ ಪ್ರೇರಣೆಯಾಗಿವೆ ಎಂದರು.

ಚಂದ್ರಗ್ರಹದ ಮೇಲಿರುವ ಮೂರು ಬಗೆಯ ಮಹತ್ವದ ಸ್ಥಳಗಳ ನಕ್ಷೆಗಳನ್ನು ಗುರುತಿಸಿದ್ದು,  ಚಂದ್ರಗ್ರಹದಲ್ಲಿ ಭಾರತದ ಧ್ವಜವನ್ನು ಸ್ಥಾಪಿಸಿದ್ದು ಹಾಗೂ ಚಂದ್ರನ ಮೇಲೆ ನೀರಿನ ಶೋಧವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಶತಮಾನದ ದೊಡ್ಡ ಸಂಶೋಧನೆ ಮತ್ತು ಸಾಧನೆ ಎಂದು ಅವರು ಬಣ್ಣಿಸಿದರು.
ಕುಲಸಚಿವ ಎಸ್.ಎಲ್. ಹಿರೇಮಠ, ಕುಲಸಚಿವ (ಪರೀಕ್ಷಾಂಗ) ಡಿ.ಬಿ.ನಾಯಕ್ ಹಾಗೂ ವಿವಿಧ ನಿಕಾಯಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT