ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗದಲ್ಲಿ ಇಂದು ಸಚಿವ ಸಂಪುಟ ಸಭೆ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಲ್ಬರ್ಗದಲ್ಲಿ ಈ ಹಿಂದೆ ನಡೆದ ಸಚಿವ ಸಂಪುಟದಲ್ಲಿ ಕೈಗೊಂಡಿದ್ದ ನಿರ್ಧಾರಗಳೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ ಎನ್ನುವ ಆರೋಪಗಳ ನಡುವೆಯೇ ಎರಡು ವರ್ಷಗಳ ತರುವಾಯ ಗುರುವಾರ  ನಡೆಯುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಗೆ ಇಲ್ಲಿಯ ಮಿನಿ ವಿಧಾನ ಸೌಧ ಸಜ್ಜಾಗಿದೆ.
ಹೈದರಾಬಾದ್ ಕರ್ನಾಟಕ (ಹೈಕ) ಪ್ರದೇಶಕ್ಕೆ `ಕಲ್ಯಾಣ ಕರ್ನಾಟಕ~ ಎಂದು ಮರು ನಾಮಕರಣ ಮಾಡುವ ಪ್ರಸ್ತಾವವೂ ಸರ್ಕಾರದ ಮುಂದಿದೆ ಎಂದು ತಿಳಿದು ಬಂದಿದೆ.

ತೊಗರಿ ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನೀಡುವುದು ಸೇರಿದಂತೆ ಈ ಭಾಗದ ಜ್ವಲಂತ ಸಮಸ್ಯೆಗಳನ್ನು ಹೊಗಲಾಡಿಸುವ ಬಗ್ಗೆ ಸರ್ಕಾರವು ಸಂಪುಟ ಸಭೆಯಲ್ಲಿ ಘೋಷಿಸಿತ್ತು. ವಾಸ್ತವದಲ್ಲಿ ತೊಗರಿ ಮಂಡಳಿಯು `ಹಲ್ಲಿಲ್ಲದ ಹಾವಿನಂತೆ~ ಉಳಿದುಕೊಂಡಿದೆ. ಸಂಪುಟ ಸಭೆಯಲ್ಲಿ  ರಾಜ್ಯ ಸರ್ಕಾರವು ಯಾವ ಹೊಸ ನಿರ್ಧಾರ ಪ್ರಕಟಿಸಬಹುದು. ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಅನುಷ್ಠಾನಕ್ಕೆ ಬರಬಹುದೇ ಎನ್ನುವ ಕುತೂಹಲ ಮೂಡಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಇರಾದೆ ವ್ಯಕ್ತಪಡಿಸಿದ್ದರು. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಅದು ಈಡೇರಲಿಲ್ಲ. ಈಗ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧಿಕಾರಾವಧಿಯಲ್ಲಿ  ಈ  ಸಂಪುಟ ಸಭೆ ನಡೆಯುತ್ತಿದೆ.

ಹೈ.ಕ. ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 371ನೇ ವಿಧಿ ಜಾರಿಗೆ ಹೆಜ್ಜೆ ಇಟ್ಟಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಈಗಲಾದರೂ ಈ ಭಾಗದ ಅಭಿವೃದ್ಧಿಗೆ ಪೂರಕವಾಗಲು ವಿಶೇಷ ಅನುದಾನ ನೀಡು ವ ನಿರೀಕ್ಷೆ ಇದೆ.
ದು  ಮತ್ತು ತೊಗರಿ ಮಂಡಳಿ ಬಲವರ್ಧನೆಗೆ ಬಜೆಟ್‌ನಲ್ಲಿ ಮೀಸಲಾಗಿಟ್ಟ ಹಣದ ವಿನಿಯೋಗಕ್ಕಾಗಿ ಮತ್ತೊಮ್ಮೆ ನಿರ್ಧಾರ ಪ್ರಕಟಿಸಬಹುದು ಎನ್ನುವ ನಿರೀಕ್ಷೆ ಇದೆ.

ಗುಲ್ಬರ್ಗದಲ್ಲಿ (2010) ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಜವಳಿ ಪಾರ್ಕ್, ವಿಮಾನ ನಿಲ್ದಾಣ, ಜೇವರ್ಗಿಯ ಫುಡ್ ಪಾರ್ಕ್, ಮಲ್ಲಾಬಾದ್ ಹಾಗೂ ಸರಡಗಿ ಏತ ನೀರಾವರಿ ಯೋಜನೆಗಳ ಕಾಮಗಾರಿ ತೆವಳುತ್ತ ಸಾಗಿವೆ. ಕೊಪ್ಪಳದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಗುವುದು ಎನ್ನುವ ನಿರ್ಣಯ ಸೇರಿದಂತೆ ಹಲವು ನಿರ್ಧಾರಗಳು ಮರೀಚಿಕೆಯಾಗಿಯೇ ಉಳಿದಿವೆ.

ಗುಲ್ಬರ್ಗ ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಸಂಚಾರ ರಸ್ತೆಗಳು ಹದಗೆಟ್ಟಿದ್ದು, ಇವುಗಳನ್ನು ಅಭಿವೃದ್ಧಿ ಪಡಿಸುವುದು, ಸ್ಥಳೀಯ ಪೌರಾಡಳಿತ ಸಂಸ್ಥೆಗಳಿಗೆ ದಕ್ಷ ಅಧಿಕಾರಿಗಳನ್ನು ನೇಮಿಸುವುದು, ಶುದ್ಧ ಕುಡಿಯುವ ನೀರು ಪೂರೈಸುವುದು ಹಾಗೂ ಈ ಭಾಗದಲ್ಲಿರುವ ವಿವಿಧ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸುವುದು ಹೈ.ಕ. ಭಾಗದ ಜನರ ಜ್ವಲಂತ ಬೇಡಿಕೆಗಳಾಗಿವೆ.

ಕಳೆದ ಸಂಪುಟದ ನಿರ್ಧಾರ
- ವಿಮಾನ ನಿಲ್ದಾಣ ಸ್ಥಾಪನೆ
- ರೂ 100 ಕೋಟಿ ಅನುದಾನ
- ಜವಳಿ ಪಾರ್ಕ್ ಸ್ಥಾಪನೆ
- ತೊಗರಿ ಮಂಡಳಿ ಬಲವರ್ಧನೆ
- ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೌಕರ್ಯ

ಇಂದಿನ ಸ್ಥಿತಿಗತಿ
- ಕಾಮಗಾರಿ ವಿಳಂಬ
- ಬಳಕೆಯಾಗದ ರೂ 100 ಕೋಟಿ
- ಆರಂಭವಾಗದ ಕಾಮಗಾರಿ
- ವಿಶೇಷ ಅನುದಾನ ನೀಡಿಲ್ಲ
- ಕಟ್ಟಡ ಸಿದ್ಧ: ಸಿಬ್ಬಂದಿ ಕೊರತೆ
 

ಹಿಂದಿನ ಸಭೆಗಳು
ವರ್ಷ ಮುಖ್ಯಮಂತ್ರಿ
1982 ಗುಂಡುರಾವ್
2008 ಬಿಎಸ್‌ವೈ
2010 ಬಿಎಸ್‌ವೈ
2012 ಶೆಟ್ಟರ್
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT