ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೆ ಬಂದ ಮಕ್ಕಳಿಗೆ `ಟೆಂಟ್ ಶಾಲೆ'

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸಾಲಿಗ್ರಾಮ: `ನೀವು ಕೂಲಿ ಕೆಲಸಕ್ಕೆ ಹೋಗಿ ನಾವು ಬೇಡ ಅನ್ನುವುದಿಲ್ಲ. ಆದರೆ, ನಿಮ್ಮ ಮಕ್ಕಳನ್ನು ಅಕ್ಷರ ಕಲಿಯಲು ಶಾಲೆಗೆ ಕಳುಹಿಸಿ. ಬಟ್ಟೆ, ಬಿಸಿಯೂಟ ನೀಡುತ್ತೇವೆ. ನಿಮ್ಮ ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಿರಲಿ. ನೀವು ನೆಲೆಸಿರುವ ಟೆಂಟ್ ಪಕ್ಕದಲ್ಲೇ `ಟೆಂಟ್ ಶಾಲೆ' ಆರಂಭಿಸುತ್ತೇವೆ'

ಬಳ್ಳಾರಿ ಜಿಲ್ಲೆಯಿಂದ ಕೂಲಿ ಕೆಲಸಕ್ಕೆ ಕೆ.ಆರ್. ನಗರ ತಾಲ್ಲೂಕಿನ ಮಿರ್ಲೆ ಗ್ರಾಮಕ್ಕೆ ವಲಸೆ ಬಂದಿರುವ ಸುಮಾರು 50 ಕುಟುಂಬಗಳ ಸದಸ್ಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜವರೇಗೌಡ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಸಿ. ದೊಡ್ಡೇಗೌಡ ಅವರು ಸೋಮವಾರ ಮನವಿ ಮಾಡಿದ ಪರಿ ಇದು.

ಗಣಿ ನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಗ್ರಾಮದ ಸುತ್ತಮುತ್ತಲಿನ ಕೇರಿತಾಂಡ, ಕಲ್ಲಹಳ್ಳಿತಾಂಡ ಮತ್ತು ಎಂಗ್‌ಗೇರಿ ತಾಂಡಗಳಿಂದ ಪ್ರತಿ ವರ್ಷ ಕೂಲಿಗಾಗಿ ಗ್ರಾಮಕ್ಕೆ ಸುಮಾರು 50ಕ್ಕೂ ಅಧಿಕ ಕುಟುಂಬಗಳು ಬರುತ್ತವೆ. ತಮ್ಮಂದಿಗೆ ಮಕ್ಕಳನ್ನು ಶಾಲೆ ಬಿಡಿಸಿ ಕರೆ ತರುತ್ತಾರೆ. ಈ ವರ್ಷವೂ ಈ ತಾಂಡದ ಮಂದಿ ಇಲ್ಲಿಗೆ ಬಂದಿಳಿದಿದ್ದಾರೆ.

ವಿಷಯ ತಿಳಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಅಧಿಕಾರಿಗಳು ಬಂದಿರುವ ಮಾಹಿತಿ ತಿಳಿದ ಮಕ್ಕಳು ಕಬ್ಬಿನ ಬೆಳೆ ನಡುವೆ ಅಡಗಿ ಕುಳಿತರು. ಇದನ್ನು ಗಮನಿಸಿದ ಅಧಿಕಾರಿಗಳು `ಮಕ್ಕಳೇ ನಿಮಗೆ ಅಕ್ಷರ ಕಲಿಸಲು ನಾವು ಬಂದಿದ್ದೇವೆ. ಹೆದರಬೇಡಿ ಹೊರಗೆ ಬನ್ನಿ' ಎಂದು ತಿಳಿ ಹೇಳಿದರು. 10ಕ್ಕೂ ಹೆಚ್ಚು ಮಕ್ಕಳು ಹೊರಗೆ ಓಡಿ ಬಂದು ತಾವು ಓದುತ್ತಿದ್ದ ಶಾಲೆ ಮತ್ತು ತರಗತಿ ವಿವರ ನೀಡಿದರು. ಬಳಿಕ ಕಾರ್ಮಿಕ ಕುಟುಂಬಗಳು ವಾಸ್ತವ್ಯ ಹೂಡಿರುವ ಟೆಂಟ್‌ಗಳಿಗೆ ಭೇಟಿ ನೀಡಿದಾಗ ಅಲ್ಲಿಯೂ ಶಾಲೆಯಿಂದ ಹೊರಗುಳಿದ 20ಕ್ಕೂ ಹೆಚ್ಚು ಮಕ್ಕಳು ಪತ್ತೆಯಾದರು.

`ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯಬಾರದು. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಅವರ ವಿರುದ್ಧ  ಕಾನೂನು ಕ್ರಮ ಜರುಗಿಸಲಾಗುತ್ತದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಎಚ್ಚರಿಕೆ ನೀಡಿದರು.

`ಕೂಲಿ ಅರಸಿ ಬಂದವರೊಂದಿಗೆ ಇರುವ 30ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಕಂಡು ಬಂದಿದೆ. ಇವರಿಗಾಗಿ ಮಕ್ಕಳ ವಾಸ ಸ್ಥಳದಲ್ಲೇ `ಟೆಂಟ್‌ಶಾಲೆ' ತೆರೆಯಲಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಈ ಮಕ್ಕಳಿಗೆ ನೀಡಲಾಗುತ್ತದೆ' ಎಂದು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ ಅವರು `ಪ್ರಜಾವಾಣಿ' ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT