ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳಿಹಟ್ಟಿ ಶೇಖರ್ ಹೊರಕ್ಕೆ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ಉದ್ದೇಶಿಸಿ ಅವಹೇಳನಕಾರಿಯಾದ ಪದ ಬಳಸಿದರು ಎಂಬ ಕಾರಣಕ್ಕೆ ಪಕ್ಷೇತರ ಸದಸ್ಯ ಗೂಳಿಹಟ್ಟಿ ಶೇಖರ್ ಅವರನ್ನು ಶುಕ್ರವಾರ ವಿಧಾನಸಭೆಯ ಕಲಾಪದಿಂದ ಹೊರಗೆ ಕಳುಹಿಸಲಾಯಿತು.

ಶೂನ್ಯ ವೇಳೆಯಲ್ಲಿ ತಮ್ಮ ಕ್ಷೇತ್ರದಲ್ಲಿನ ಸಮಸ್ಯೆ ಕುರಿತು ಪ್ರಸ್ತಾಪಿಸಲು ಗೂಳಿಹಟ್ಟಿ ಶೇಖರ್ ಅವರಿಗೆ ಸ್ಪೀಕರ್ ಬೋಪಯ್ಯ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ಮಾತು ಆರಂಭಿಸಿದ ಶೇಖರ್ ಅವರು `ಮಾನ್ಯರೇ ನಿಮ್ಮನ್ನು ಯಾವ ಪದ ಬಳಸಿ ಗೌರವದಿಂದ ಕರೆಯಬೇಕೆಂಬುದು ನನಗೆ ಗೊತ್ತಾಗುತ್ತಿಲ್ಲ~ ಎಂದು ಅವಹೇಳನಕಾರಿಯಾದ ಪದ ಬಳಸಿದರು. ಅದನ್ನು ಕೇಳಿಸಿಕೊಂಡ ಸಚಿವ ಸುರೇಶ್‌ಕುಮಾರ್, ಸದಸ್ಯರಾದ ಜೀವರಾಜ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಇತರರು ಆಕ್ಷೇಪ ಎತ್ತಿದರು.

`ತಕ್ಷಣವೇ ಶೇಖರ್ ಅವರನ್ನು ಸದನದಿಂದ ಹೊರಗೆ ಕಳುಹಿಸಿ~ ಎಂದು ಆಗ್ರಹಪಡಿಸಿದರು. ಇದಕ್ಕೆ ಸ್ಪಂದಿಸಿದ ಸ್ಪೀಕರ್ ಬೋಪಯ್ಯ `ನಿಯಮ 347ರ ಪ್ರಕಾರ ಶೇಖರ್ ಅವರು ಈ ದಿನದ ಉಳಿದ ಅವಧಿಗೆ ಸಭೆಯಿಂದ ಹೊರಹೋಗಬೇಕು~ ಎಂದು ಆದೇಶ ನೀಡಿಯೇ ಬಿಟ್ಟರು.

ಅದರ ನಂತರ ಮಾರ್ಷಲ್‌ಗಳು ಶೇಖರ್ ಅವರನ್ನು ಬಲವಂತದಿಂದ ಹೊರಗೆ ಕಳುಹಿಸಿದರು. ಈ ಸಂದರ್ಭದಲ್ಲಿ ಶೇಖರ್ ಕಪ್ಪುಪಟ್ಟಿ ಪ್ರದರ್ಶಿಸಿ ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿದರು.

ಪಕ್ಷೇತರರ ಪೈಕಿ ವೆಂಕಟರಮಣಪ್ಪ ಮಾತ್ರ ಈ ಸಂದರ್ಭದಲ್ಲಿ ಸದನದಲ್ಲಿ ಇದ್ದರು. ಸ್ಪೀಕರ್ ತೀರ್ಮಾನವನ್ನು ಅವರು ಖಂಡಿಸಿದರು.

`ಒಬ್ಬ ಚುನಾಯಿತ ಸದಸ್ಯರನ್ನು ಈ ರೀತಿ ಹೊರ ಕಳುಹಿಸುವುದು ಸರಿಯಲ್ಲ~ ಎಂದು ಆಕ್ಷೇಪ ಎತ್ತಿದರು. ಕಾಂಗ್ರೆಸ್‌ನ ಕೆಲ ಸದಸ್ಯರು ಕೂಡ ಇದಕ್ಕೆ ಬೆಂಬಲ ಸೂಚಿಸಿದರು.

ಸಭೆಯಿಂದ ಹೊರಬಂದ ನಂತರ ಸುದ್ದಿಗಾರರ ಜತೆ ಮಾತನಾಡಿದ ಶೇಖರ್ `ಸುಪ್ರೀಂಕೋರ್ಟ್ ಸ್ಪೀಕರ್ ಅವರಿಗೆ ಛೀಮಾರಿ ಹಾಕಿದೆ. ಈ ಕಾರಣಕ್ಕೆ ಅವರು ಆ ಸ್ಥಾನದಲ್ಲಿ ಕೂರುವ ಅರ್ಹತೆ ಕಳೆದುಕೊಂಡಿದ್ದಾರೆ.

ಹೀಗಾಗಿ ನಾನು ಅವರನ್ನು ಉದ್ದೇಶಿಸಿ `ನಿಮ್ಮನ್ನು ಮಾನ್ಯ ಕಳಂಕಿತ ಅಧ್ಯಕ್ಷರೇ~ ಎಂದು ಕರೆಯಬಹುದೇ ಎಂದು ಕೇಳಿದೆ. ಇಷ್ಟು ಮಾಡಿದ್ದಕ್ಕೆ ನನ್ನನ್ನು ಸದನದಿಂದ ಹೊರಹಾಕಿ ದಲಿತರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ~ ಎಂದು ದೂರಿದರು.

`ಗುರುವಾರ ಸ್ಪೀಕರ್ ಕೊಠಡಿಯಲ್ಲೂ ಬೋಪಯ್ಯ ಅಪಮಾನ ಮಾಡಿದ್ದಾರೆ. ದಲಿತರ ಶೋಷಣೆ ವಿಧಾನಸಭೆಯಲ್ಲೇ ನಡೆಯುತ್ತಿದೆ~ ಎಂದು ಅವರು ಉದ್ವೇಗದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT