ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಮಂತ್ರಿಗೆ ಬಿಜೆಪಿ ತರಾಟೆ

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರ ವಿವಾದಾತ್ಮಕ ಹೇಳಿಕೆಗಳನ್ನು ಭಾರತ ಖಂಡಿಸಿಲ್ಲ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಸೋಮವಾರ ಸಂಸತ್ತಿನಲ್ಲಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ರಾಜ್ಯಸಭೆಯಲ್ಲಿ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕರು, ರೆಹಮಾನ್ ಮಲಿಕ್ ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿಲ್ಲ ಎಂದು ಸರ್ಕಾರವನ್ನು ಖಂಡಿಸಿದರು.

`ಹಫೀಜ್ ಸಯೀದ್‌ಗೆ ಪಾಕಿಸ್ತಾನ ಸರ್ಕಾರದ ರಕ್ಷಣೆಯಿದೆ. ಉದ್ದೇಶಪೂರ್ವಕವಾಗಿ ಪಾಕ್ ಸರ್ಕಾರ ಆತನ ವಿರುದ್ಧ ಕ್ರಮ ಜರುಗಿಸಿಲ್ಲ. ಇದು ನಿಜಕ್ಕೂ ಕಳವಳಕಾರಿ' ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಉಪನಾಯಕನಾಗಿರುವ ರವಿ ಶಂಕರ್ ಪ್ರಸಾದ್ ಖಂಡಿಸಿದರು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ಹಲವು ವಿವಾದಾತ್ಮಕ ವಿಚಾರಗಳನ್ನು ಮಲಿಕ್ ಪ್ರಸ್ತಾಪಿಸಿದ್ದಾರೆ. ಆ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ್ದಾರೆ. ಅವರು ಹೀಗೆ ವರ್ತಿಸುವುದಾದಲ್ಲಿ ಅವರನ್ನು ಇಲ್ಲಿಗೆ ಏಕೆ ಕರೆಯಿಸಬೇಕಿತ್ತು ಎಂದು ರವಿ ಶಂಕರ್ ಪ್ರಸಾದ್ ಪ್ರಶ್ನಿಸಿದರು.
ಈ ಕುರಿತು ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ರಾಜ್ಯಸಭಾ ಸದಸ್ಯರು ಆಗ್ರಹಿಸಿದರು. ರಾಜ್ಯಸಭೆಯ ಉಪಾಧ್ಯಕ್ಷ ಪಿ.ಜೆ. ಕುರಿಯನ್ ಚರ್ಚೆಗೆ ಅನುಮತಿ ನೀಡಿದರು.

ಲೋಕಸಭೆಯಲ್ಲಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ, ಮುಂಬೈ ದಾಳಿಗೆ ಕಾರಣರಾದ ದುಷ್ಕರ್ಮಿಗಳು ಹಾಗೂ ದಾಳಿಯ ಸಂಚುಕೋರ ಹಫೀಜ್ ಸಯೀದ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವವರೆಗೆ ಪಾಕಿಸ್ತಾನದ ಜತೆ ಮಾತುಕತೆ ನಡೆಸಬಾರದು ಎಂದು ಆಗ್ರಹಿಸಿದರು.

ರೆಹಮಾನ್ ಮಲಿಕ್ ತಮ್ಮ ಭೇಟಿಯ ಸಂದರ್ಭದಲ್ಲಿ ನೀಡಿದ ಹೇಳಿಕೆಗಳಿಂದ ಭಾರತದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದ ಸಿನ್ಹಾ, ತಮ್ಮ  ಸಹವರ್ತಿ ಮಲಿಕ್ ಹೇಳಿಕೆಯನ್ನು ಖಂಡಿಸದೇ ಗೃಹ ಸಚಿವ ಶಿಂಧೆ ಮೌನ ವಹಿಸಿದ್ದರು ಎಂದು ಟೀಕಿಸಿದರು.

ಡಿ. 25ರಿಂದ ಆರಂಭವಾಗಲಿರುವ ಭಾರತ-ಪಾಕ್ ಕ್ರಿಕೆಟ್ ಸರಣಿಯನ್ನು ರದ್ದುಗೊಳಿಸಬೇಕು. ಮಲಿಕ್ ಭೇಟಿ ನಂತರವೂ ಕ್ರಿಕೆಟ್ ಆಡುವ ಮೂಲಕ ಸೌಹಾರ್ದ ಕಾಪಾಡಲು ಸಾಧ್ಯವೇ ಎಂದೂ ಸಿನ್ಹಾ ಪ್ರಶ್ನಿಸಿದರು.

ಶಿಂಧೆ ಹೇಳಿಕೆ: ಇದಕ್ಕೂ ಮುನ್ನ ರೆಹಮಾನ್ ಮಲಿಕ್ ಭೇಟಿ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಗೃಹ ಸಚಿವ ಶಿಂಧೆ ಹೇಳಿಕೆ ನೀಡಿದರು. 
ಮುಂಬೈ ದಾಳಿ ತನಿಖೆಯ ವಿಚಾರದಲ್ಲಿ ಪಾಕಿಸ್ತಾನ ಭಾರತವನ್ನು ವಂಚಿಸುತ್ತಿದೆ ಎಂದು ಹೇಳಿದ ಶಿಂಧೆ, ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಮುಂಬೈ ದಾಳಿಯ ಸಂಚು ರೂಪಿಸಿರುವ ಕಾರಣಕ್ಕಾಗಿ ಬಂಧಿಸಿಲ್ಲ. ಆತನನ್ನು ಬೇರೆಯದೇ ಆದ ಕಾರಣಗಳಿಗಾಗಿ ಬಂಧಿಸಲಾಗಿದೆ ಎಂದು ತಿಳಿಸಿದರು.

`ಪಾಕಿಸ್ತಾನ ನಮಗೆ ನೀಡಿರುವ ದಾಖಲೆಗಳ ಪ್ರಕಾರ ಹಫೀಜ್ ಸಯೀದ್‌ನನ್ನು ಮುಂಬೈ ದಾಳಿಯ ಸಂಚು ರೂಪಿಸಿರುವ ಕಾರಣಕ್ಕಾಗಿ ಬಂಧಿಸಿಲ್ಲ. ಆತನನ್ನು ಬೇರೆಯದೇ ಆದ ಕಾರಣಕ್ಕಾಗಿ ಬಂಧಿಸಲಾಗಿದೆ. ಭಾರತಕ್ಕೆ ಬಂದಿದ್ದ ಪಾಕ್‌ನ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರಲ್ಲಿ ಈ ಕುರಿತು ಸರಿಯಾದ ಮಾಹಿತಿ ಇದ್ದಂತೆ ಕಾಣಲಿಲ್ಲ' ಎಂದೂ ಶಿಂಧೆ ಹೇಳಿದರು.

`ಸಯೀದ್‌ನನ್ನು ಮೂರು ಸಲ ಬಂಧಿಸಲಾಗಿತ್ತು ಎಂದು ರೆಹಮಾನ್ ಮಲಿಕ್ ಪದೇಪದೇ ಹೇಳುತ್ತಿದ್ದರು. ಆದರೆ, ಪ್ರತಿ ಸಲವೂ ಸಾಕ್ಷ್ಯಗಳ ಕೊರತೆಯ ಕಾರಣದಿಂದ ಕೋರ್ಟ್‌ಗಳು ಆತನನ್ನು ಖುಲಾಸೆ ಮಾಡಿದವು ಎಂದೂ ರೆಹಮಾನ್ ತಿಳಿಸಿದರು. ಹಿಂಸಾಚಾರ ಮತ್ತು ಭಯೋತ್ಪಾದನಾ ಮುಕ್ತ ವಾತಾವರಣದಲ್ಲಿ ಭಾರತ-ಪಾಕ್ ಶಾಂತಿ ಪ್ರಕ್ರಿಯೆಯನ್ನು ಮುಂದುವರಿಸಲು ಮುಂಬೈ ದಾಳಿಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಲೇಬೇಕು ಎಂದು ಭಾರತ ಪಾಕ್‌ಗೆ ಸ್ಪಷ್ಟವಾಗಿ ಹೇಳಿದೆ' ಎಂದೂ ಶಿಂಧೆ ಸಂಸತ್ತಿಗೆ ತಿಳಿಸಿದರು.

ಕಾಲಿಯಾ ಸಾವು: ಪಾಕ್ ಅಸ್ಪಷ್ಟ ನಿಲುವು
ನವದೆಹಲಿ (ಪಿಟಿಐ): ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿ ಸ್ತಾನಕ್ಕೆ ಸೆರೆಸಿಕ್ಕ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರಿಗೆ ಹಿಂಸೆ ನೀಡಿದ ವಿಚಾರವನ್ನು ಭಾರತ ಏಕಾಏಕಿ ಪ್ರಸ್ತಾಪಿಸಿದ್ದರಿಂದ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರಿಗೆ ಅಚ್ಚರಿ ಯಾ ಯಿತು ಎಂದು ಪಾಕಿಸ್ತಾನ ಹೇಳಿದೆ.

ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್ ಆಗಿರುವ ಸಲ್ಮಾನ್ ಬಷಿರ್ ಈ ಕುರಿತು ಹೇಳಿಕೆ ನೀಡಿದ್ದು, ಕ್ಯಾಪ್ಟನ್ ಕಾಲಿಯಾ ವಿಚಾರದ ಕುರಿತು ಪಾಕಿಸ್ತಾನ ಇನ್ನೂ ಸ್ಪಷ್ಟ ನಿಲುವು ತಳೆದಿಲ್ಲ ಎಂದು ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಮಸೂದೆಗೆ ಒಪ್ಪಿಗೆ
ನವದೆಹಲಿ (ಐಎಎನ್‌ಎಸ್):
ಅಕ್ರಮ ಹಣ ವರ್ಗಾವಣೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿರುವ ಅಕ್ರಮ ಹಣ ವರ್ಗಾವಣೆ ತಡೆ (ತಿದ್ದುಪಡಿ) ಮಸೂದೆ 2011ಕ್ಕೆ ರಾಜ್ಯಸಭೆ ಸೋಮವಾರ ಒಪ್ಪಿಗೆ ನೀಡಿತು.

ಕಳೆದ ನವೆಂಬರ್ 29ರಂದು ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ದೊರಕಿತ್ತು. ಅಕ್ರಮವಾಗಿ ವರ್ಗಾವಣೆಯಾದ ಹಣವನ್ನು ಅಪರಾಧ ಚಟುವಟಿಕೆಗಳಿಗೆ ಬಳಸಿದ್ದು ಸಾಬಿತಾದರೆ ಕಠಿಣ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ.

ಅಕ್ರಮ ಹಣ ವರ್ಗಾವಣೆಯ ಬಗ್ಗೆ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ಇಂತಹ ಸೇವೆಯಲ್ಲಿ ನಿರತರಾದ ವ್ಯಕ್ತಿಗಳು ಮಾಹಿತಿ ನಿಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಅಕ್ರಮವಾಗಿ ವರ್ಗಾವಣೆಯಾದ ಹಣವನ್ನು ಗೋಪ್ಯವಾಗಿ ಇಟ್ಟುಕೊಳ್ಳುವುದು ಮತ್ತು ಬಳಸುವುದನ್ನೂ ಅಪರಾಧವೆಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT