ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಪ್ರವೇಶಕ್ಕೆ ನೃತ್ಯಪರಿಣಿತರ ರಂಗು

Last Updated 22 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾರ್ಯಕ್ರಮ ಗೃಹಪ್ರವೇಶ; ಅರ್ಥಾತ್ ವಸತಿ ಸಮುಚ್ಚಯವೊಂದರ ಉದ್ಘಾಟನಾ ಸಮಾರಂಭ. ಮಧ್ಯಾಹ್ನದ ಈ ಕಾರ್ಯಕ್ರಮಕ್ಕೆ ಬೆಳಿಗ್ಗೆಯಿಂದ ನಾಟ್ಯದ ರಂಗು, ರಾಗ-ತಾಳ-ಭಾವಗಳ ಸೊಬಗು.
ಇಂಥ ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆಯಾದದ್ದು ನಗರದ ಅಕ್ಷಯ ಕಾಲೊನಿಯಲ್ಲಿ ನಿರ್ಮಿಸಿದ ಯಶಸ್ವಿ ಅಪಾರ್ಟ್‌ಮೆಂಟ್.


ಸಾಗರದಿಂದ ಬಂದ ಪರಿಣಿತಿ ಕಲಾಕೇಂದ್ರದ ಕಲಾವಿದರು ಪ್ರದರ್ಶಿಸಿದ ವಿವಿಧ ಬಗೆಯ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ, ಬಿರುಬಿಸಿಲಿನ ನಡುವೆಯೂ ತಂಪು ವಾತಾವರಣವನ್ನು ಸೃಷ್ಟಿಸಿತು, ಕಾರ್ಯಕ್ರಮಕ್ಕೆ ಆಗಮಿಸಿದವರ ಮನಕ್ಕೆ ಮುದ ನೀಡಿತು.

ವಿಘ್ನೇಶ್ವರ ಸ್ತುತಿಯ ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ವಿದ್ವಾನ್ ಎಂ.ಗೋಪಾಲ ತಂಡದ 16 ಮಹಿಳೆಯರು ಹಾಗೂ ಒಬ್ಬರು ಪುರುಷ ನೃತ್ಯಪಟು ಶಿವನ ಶ್ಲೋಕ, ಗಣಪತಿಯ ಕುರಿತ ನೃತ್ಯ, ಅಕ್ಕಮಹಾದೇವಿಯ ವಚನ,  ದುರ್ಗೆಯ ಸ್ತುತಿ, ಅಡಿಗರ ಯಾವ ಮೋಹನ ಮುರಳಿ ಕರೆಯಿತು ಕವನಕ್ಕೆ ಹೆಜ್ಜೆ ಹಾಕಿ ರಂಜಿಸಿದರು. ರಾಜಸ್ತಾನಿ ಸುಪುಡು, ಗುಜರಾತಿನ ಕರಂ, ಪಂಜಾಬ್‌ನ ಬಾಂಗ್ಡಾ ಇತ್ಯಾದಿ ನೃತ್ಯ ಪ್ರಕಾರಗಳು ಕಾರ್ಯಕ್ರಮಕ್ಕೆ ಜಾನಪದ ಸ್ಪರ್ಶ ನೀಡಿತು.

ಕೊಳಚೆ ಪ್ರದೇಶ ಮತ್ತು ಅಪಾರ್ಟ್‌ಮೆಂಟ್...: ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮೇಯರ್ ಡಾ.ಪಾಂಡುರಂಗ ಪಾಟೀಲ, ಅಪಾರ್ಟ್‌ಮೆಂಟ್ ಹಾಗೂ ಸಮುದಾಯ ಭವನಗಳಿಂದಾಗಿ ಕೆಲವು ಸಂದರ್ಭದಲ್ಲಿ ಕಸ ವಿಲೇವಾರಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಕೊಳಚೆ ಪ್ರದೇಶಗಳಿಗಿಂತ ದೊಡ್ಡ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅಪಾರ್ಟ್‌ಮೆಂಟ್ ನಿರ್ಮಿಸುವವರು ಹಾಗೂ ನಿವಾಸಿಗಳು ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

ಯಶಸ್ವಿ ಡೆವಲಪರ್ಸ್‌ನ ಹೊಸ ಯೋಜನೆಯನ್ನು ಅನಾವರಣಗೊಳಿಸಿದ ಸಂಸದ ಪ್ರಹ್ಲಾದ ಜೋಶಿ ಭೂ ಅಭಿವೃದ್ಧಿ ನೀತಿ ಜಾರಿಗೆ ತರುವುದಕ್ಕೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿದ್ದು ಇಂಥ ನೀತಿ ಜಾರಿಗೆ ಬಂದರೆ ನಗರೀಕರಣಕ್ಕೆ ಸರಿಯಾದ ದಿಶೆ ತೋರಿಸಲು ಸಹಕಾರಿಯಾಗಲಿದೆ ಎಂದರು.

ಸುರೇಶ್ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಸುರೇಶ ಶೇಜವಾಡಕರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಕೆ.ವಿ.ಜಿ.ಬ್ಯಾಂಕ್ ಅಧ್ಯಕ್ಷ ಸಿ.ಸಾಂಬಶಿವ ರೆಡ್ಡಿ, ಉದ್ಯಮಿಗಳಾದ ವಿಕ್ರಂ ಶಿರೂರ, ಎಂ.ಎಸ್.ಬಡಸಾರಿಯಾ, ವಿ.ಎಸ್.ವಿ. ಪ್ರಸಾದ, ಹಿರಿಯರಾದ ಡಾ.ಡಿ.ಆರ್.ವಾಲಿ, ಗಂಗಣ್ಣ ಎಸ್. ಮಹಾಜನಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT