ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ರಾಕ್ ಗಾರ್ಡನ್ ಆಕರ್ಷಣೆ

Last Updated 7 ಮೇ 2012, 5:50 IST
ಅಕ್ಷರ ಗಾತ್ರ

ಹಾಸನ: ನಗರದ ಹೊರಭಾಗದಲ್ಲಿರುವ ಗೆಂಡೆಕಟ್ಟೆ ಅರಣ್ಯಧಾಮ ಈಗ ನಿಧಾನಕ್ಕೆ ಅರಳುತ್ತಿದೆ. ಅರಣ್ಯ ಇಲಾಖೆಗೆ ಸೇರಿದ ಪ್ರವಾಸಿ ಮಂದಿರ ಹಾಗೂ ಜಿಂಕೆಗಳ ಧಾಮ ಇದ್ದರೂ ಹಲವು ವರ್ಷಗಳಿಂದ ಒಣ ಭೂಮಿಯಂತಿದ್ದ ಈ ಅರಣ್ಯಧಾಮದಲ್ಲಿ ಈಗ ನಿಧಾನಕ್ಕೆ ಹೂವುಗಳು ಅರಳುತ್ತಿವೆ.

ಹಾಗೆ ನೋಡಿದರೆ ವರ್ಷದ ಹಿಂದೆಯೇ ಇಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭ ವಾಗಿದ್ದವು. ಆರ್ಥಿಕ ಮುಗ್ಗಟ್ಟೋ ಅಥವಾ ಉತ್ಸಾಹದ ಕೊರತೆಯೋ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂಬ ಕೊರಗೂ ಇದೆ. ಅರಣ್ಯ ಇಲಾಖೆ ಮನಸ್ಸಿಟ್ಟು ಅಭಿವೃದ್ಧಿ ಮಾಡಿದರೆ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಈ ಧಾಮಕ್ಕೆ ಇದೆ.

ಹಾಸನ ಜಿಲ್ಲೆಗೆ ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಜಿಲ್ಲಾ ಕೇಂದ್ರದಲ್ಲಿ ವೀಕ್ಷಿಸಬಹುದಾದ ಒಂದೇ ಒಂದು ತಾಣವಿಲ್ಲ. ಗೆಂಡೆಕಟ್ಟೆ ಅರಣ್ಯಧಾಮವನ್ನು ಆ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳೇ ಒಪ್ಪುತ್ತಾರೆ.

ಜಿಲ್ಲೆಗೆ ಬರುವ ಪ್ರವಾಸಿಗರು ಅರಣ್ಯ ಧಾಮಕ್ಕೆ ಭೇಟಿ ನೀಡುವ ಸಾಧ್ಯತೆ ಒಂದೆಡೆ ಯಾದರೆ, ಈ ಅರಣ್ಯಧಾಮ ಬೆಂಗಳೂರು ಮಂಗಳೂರು ಹೆದ್ದಾರಿ ಪಕ್ಕದಲ್ಲೇ ಇದೆ. ಸ್ವಲ್ಪ ಪ್ರಚಾರ ನೀಡಿದರೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಬಹುದು ಎಂಬುದು ಇನ್ನೊಂದು ಅಂಶ.

ಹಲವು ದಶಕಗಳಿಂದ ಈ ಪ್ರದೇಶ ಅಭಿವೃದ್ಧಿ ಕಾಣದೆ ಬಿದ್ದಿದ್ದರಿಂದ ಸಹಜವಾಗಿ ಇಲ್ಲಿ ಅಕ್ರಮ ಚಟುವಟಿಕೆಗಳು ಆರಂಭವಾಗಿದ್ದವು. ಅರಣ್ಯಧಾಮದೊಳಗೆ ಜಿಂಕೆಗಳಿವೆ ಸುಮಾರು ಒಂದು ವರ್ಷದ ಹಿಂದೆ ಸಣ್ಣ ಹೊಂಡ ನಿರ್ಮಿಸಿ ಬಾತುಕೋಳಿಗಳನ್ನು ತಂದು ಬಿಡಲಾಗಿದೆ.

ಕೆಲವು ಪಕ್ಷಿಗಳನ್ನೂ ತಂದು ಬಿಡಲಾಗಿತ್ತು. ಮಕ್ಕಳನ್ನು ಆಕರ್ಷಿಸಲು ಇಷ್ಟೇ ಸಾಕಾಗ ಬಹುದು. ಜತೆಗೆ ಮಕ್ಕಳಿಗೆ ಆಟವಾಡಲು ಒಂದಿಷ್ಟು ಜೋಕಾಲಿ, ಜಾರುಬಂಡಿಗಳು ಇವೆ. ಹಲವು ವರ್ಷದ ಹಿಂದೆ ನಿರ್ಮಿಸಿದ್ದ ಈ ಆಟದ ಸಾಮಾನುಗಳೆಲ್ಲ ಹಾಳಾಗುವ  ಸ್ಥಿತಿಗೆ ಬಂದಿದ್ದವು. ಈಗ ಸ್ವಲ್ಪ ಸುಧಾರಣೆಯಾಗಿದೆ.

ತಲೆಯೆತ್ತಿದೆ ರಾಕ್ ಗಾರ್ಡನ್: ಅರಣ್ಯ ಇಲಾಖೆಯವರು ಕಳೆದ ವರ್ಷ ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಹಿಂದೆ ಪಾಳು ಭೂಮಿ ಯಂತಿದ್ದ ಜಾಗದಲ್ಲೆಗ ಆಕರ್ಷಕ ರಾಕ್ ಗಾರ್ಡನ್  ತಲೆಯೆತ್ತಿದೆ. ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಆದರೆ ಇಗಲೇ ಪ್ರವಾಸಿಗರನ್ನು ಆಕರ್ಷಿಸುವಂತಿದೆ.

ವಿವಿಧ ಹೂವಿನ ಗಿಡಗಳು, ಲಾನ್, ಸುತ್ತ ಮಕ್ಕಳ ಆಟಕ್ಕೆ ಜೋಕಾಲಿ ಹಾಗೂ ಇತರ ಸೌಲಭ್ಯಗಳು ಸಿದ್ಧವಾಗಿವೆ. ಗಾರ್ಡನ್ ಮಾತ್ರ ವಲ್ಲ ಅರಣ್ಯ ಪ್ರದೇಶದಲ್ಲಿ ಜನರು ಓಡಾಡುವ ಜಾಗಗಳಲ್ಲಿ ಆಕರ್ಷಕವಾದ ಫಲಕಗಳನ್ನೂ ಅಳವಡಿಸಲಾಗಿದೆ. ಪ್ಲಾಸ್ಟಿಕ್  ನಿಷೇಧಿತ ಪ್ರದೇಶವೂ ಇದೆ.

ಬಹುಶಃ ಈ ಮಳೆಗಾಲ ಮುಗಿದರೆ ರಾಕ್ ಗಾರ್ಡನ್ ಗೆಂಡೆಕಟ್ಟೆ ಅರಣ್ಯಧಾಮದ ಆಕರ್ಷಣೆಗಳಲ್ಲಿ ಒಂದಾಗಲಿದೆ. ಆದರೆ ಈ ರಾಕ್ ಗಾರ್ಡನ್‌ನ ವಿಸ್ತೀರ್ಣ ಕಡಿಮೆಯಾಗಿದೆ ಎಂಬುದೊಂದೇ ಬೇಸರದ ವಿಚಾರ.  ವಿಶಾಲವಾದ ಗೆಂಡೆಕಟ್ಟೆ ಅರಣ್ಯದಲ್ಲಿ ಕನಿಷ್ಠ ಐದಾರು ಎಕರೆ ಜಾಗದಲ್ಲಾದರೂ ಗಾರ್ಡನ್ ನಿರ್ಮಿಸಬಹುದಿತ್ತು ಎಂದು ಇಲ್ಲಿಗೆ ಭೇಟಿನೀಡುವವರು ಅಭಿಪ್ರಾಯಪಡುತ್ತಾರೆ.

ನಗರದಿಂದ ಹೊರಭಾಗದಲ್ಲಿರುವುದು ಮತ್ತು ಹೋಗಿ ಬರಲು ಸೂಕ್ತ ವಾಹನ ವ್ಯವಸ್ಥೆ ಇಲ್ಲದಿರುವುದು ಗೆಂಡೆಕಟ್ಟೆ ಅರಣ್ಯಧಾಮದ ದೊಡ್ಡ ಸಮಸ್ಯೆ. ಇಲ್ಲಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಜತೆಗೆ ಇಲ್ಲಿ ಭದ್ರತೆಯ ಸಮಸ್ಯೆಯೂ ಇದೆ. ಪ್ರಸಕ್ತ ಗೆಂಡೆಕಟ್ಟೆಗೆ ಭೇಟಿ ನೀಡುವವರ ಸಂಖ್ಯೆ ಅತಿ ವಿರಳ ಎನ್ನಬಹುದು. ಯಾವುದಾದರೂ ಇಲಾಖೆಯವರು ಅಥವಾ ಸಂಘ ಸಂಸ್ಥೆಗಳವರು ಗುಂಪಿನಲ್ಲಿ ಹೋಗಿ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳುವು ದನ್ನು ಬಿಟ್ಟರೆ ಜನಸಾಮಾನ್ಯರು ಕುಟುಂಬ ಸಹಿತ ಹೋಗಿ ಬರುವುದು ವಿರಳ. ಸ್ವಲ್ಪ ಅಪಾಯಕಾರಿಯೂ ಹೌದು.

ಮೊದಲು ಇಲ್ಲಿ ಭದ್ರತೆಯ ವ್ಯವಸ್ಥೆ ಮಾಡಬೇಕು ಬಳಿಕ ಸಾರಿಗೆ ವ್ಯವಸ್ಥೆ ಮಾಡಬೇಕು. ಇಷ್ಟಾದರೆ ವಾರಾಂತ್ಯ ದಲ್ಲಿ ಹಾಸನದ ಜನರು ಒಂದು ಒಳ್ಳೆಯ ತಾಣದಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯಲು ಅನುಕೂಲ ಕಲ್ಪಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT