ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜೆಟೆಡ್ ನೌಕರಿಯಲ್ಲೂ ವಂಶಪಾರಂಪರ್ಯ!

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ರಾಜಕಾರಣದಲ್ಲಿ ವಂಶಪಾರಂಪರ್ಯ ಇರುವ ಹಾಗೆಯೇ ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ನಡೆಸುವ ಗೆಜೆಟೆಡ್ ಅಧಿಕಾರಿ ಸ್ಥಾನಗಳೂ ವಂಶಪಾರಂಪರ್ಯವಾಗಿವೆ ಎಂಬ ಸಂಗತಿಯನ್ನು ಕೆಪಿಎಸ್‌ಸಿ ಮೂಲಗಳೇ ತಿಳಿಸುತ್ತವೆ.

`ಈ ಬಾರಿ ನಡೆದ 362 ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ಸಂಬಂಧಿಗಳು, ಕೆಪಿಎಸ್‌ಸಿ ಕಚೇರಿಯ ಅಧಿಕಾರಿಗಳ ಮಕ್ಕಳು, ರಾಜ್ಯದ ಹಿರಿಯ ಐಪಿಎಸ್, ಐಎಎಸ್ ಅಧಿಕಾರಿಗಳ ಮತ್ತು ರಾಜಕಾರಣಿಗಳ ಸಂಬಂಧಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಇದಲ್ಲದೆ ರಾಜಕಾರಣಿಗಳೂ ವಿವಿಧ ಅಭ್ಯರ್ಥಿಗಳ ಪರ ಶಿಫಾರಸು ಮಾಡಿದ್ದಾರೆ' ಎಂದು ಈ ಮೂಲಗಳು ಹೇಳುತ್ತಿವೆ.

ಐಪಿಎಸ್, ಐಎಎಸ್ ಅಧಿಕಾರಿಗಳ ಮಕ್ಕಳ, ಸಂಬಂಧಿಗಳು ಮತ್ತು ರಾಜಕಾರಣಿಗಳ ಸಂಬಂಧಿಗಳು ಕೆಎಎಸ್ ಅಧಿಕಾರಿಗಳಾಗಬಾರದೇ ಎಂದು ಪ್ರಶ್ನೆ ಮಾಡಿದರೆ `ಪ್ರತಿಭಾವಂತರು ಯಾರಿದ್ದರೂ ಆಯ್ಕೆಯಾಗಬಹುದು. ಆದರೆ, ಇಲ್ಲಿ ಪ್ರತಿಭಾವಂತರನ್ನು ಹಿಂದೆ ತಳ್ಳಿ ಸಂಬಂಧಿಕರಿಗೆ ಉದ್ಯೋಗ ನೀಡುವ ಪ್ರಯತ್ನ ನಡೆಯುತ್ತಿದೆ' ಎಂಬುದು ಇವುಗಳ ಆರೋಪ.
ದಾವಣಗೆರೆಯ ಬಡ ಕುಟುಂಬದಿಂದ ಬಂದ ಯುವತಿಯೊಬ್ಬರು ಈ ಬಾರಿ ಮುಖ್ಯ ಪರೀಕ್ಷೆಯಲ್ಲಿ 1065 ಅಂಕ ಪಡೆದಿದ್ದರು.

ಸಂದರ್ಶನದಲ್ಲಿ ಅವರಿಗೆ ಸೂಕ್ತ ಅಂಕ ನೀಡಿದ್ದರೆ ಅವರು ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾಗುತ್ತಿದ್ದರು. ಉತ್ತರ ಕರ್ನಾಟಕದ ಜಿಲ್ಲೆಯೊಂದರ ಉಪ ವಿಭಾಗಾಧಿಕಾರಿ ಪತ್ನಿಗೆ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಲಾಗಿದೆ. ಬಡ ಯುವತಿಗೆ ಸಂದರ್ಶನದಲ್ಲಿ 50 ಅಂಕ, ಮುಖ್ಯ ಪರೀಕ್ಷೆಯಲ್ಲಿ ಅವರಿಗಿಂತ ಕಡಿಮೆ ಅಂಕ ಪಡೆದ ಉಪ ವಿಭಾಗಾಧಿಕಾರಿ ಪತ್ನಿಗೆ 150 ಅಂಕ. ಈ ಉಪವಿಭಾಗಾಧಿಕಾರಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಹತ್ತಿರದ ಸಂಬಂಧಿ ಎಂಬುದು ಈ ಮೂಲಗಳು ನೀಡುವ ಮಾಹಿತಿ.

ಅದೇ ರೀತಿ ಐಪಿಎಸ್ ಅಧಿಕಾರಿಯೊಬ್ಬರ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಡಿವೈಎಸ್‌ಪಿ ಹುದ್ದೆಗೆ ಇನ್ನೊಬ್ಬರನ್ನು ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಹಿಂದಿನ ಅಧ್ಯಕ್ಷರ ಅಕ್ಕನ ಮಗನನ್ನು ಡಿವೈಎಸ್‌ಪಿ ಹುದ್ದೆಗೆ, ಕೆಪಿಎಸ್‌ಸಿಯ ಮಹಿಳಾ ಅಧಿಕಾರಿಯೊಬ್ಬರ ಪುತ್ರನನ್ನು ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ದಕ್ಷಿಣ ಕನ್ನಡದ ಒಂದೇ ಕುಟುಂಬದ ಮೂವರಿಗೆ ಉದ್ಯೋಗ ನೀಡಲಾಗಿದೆ. ಇವರು ಒಂದೇ ಕುಟುಂಬದವರಾಗಿದ್ದರೂ ಬೇರೆ ಬೇರೆ ವಿಳಾಸವನ್ನು ನೀಡಿದ್ದಾರೆ. ಪತಿ, ಪತ್ನಿ ಕೂಡ ಬೇರೆ ಬೇರೆ ವಿಳಾಸ ನೀಡಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ. ಬೆಂಗಳೂರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬನನ್ನೂ ಈ ಬಾರಿ ಆಯ್ಕೆ ಮಾಡಲಾಗಿದೆ.

ಆರೋಪಿಗಳ ತೀರ್ಥಯಾತ್ರೆ: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಬೆನ್ನುಹತ್ತಿರುವ ಸಿಐಡಿ ಪೊಲೀಸರಿಗೆ, `ಅವರು ತೀರ್ಥಯಾತ್ರೆಗೆ ಹೋಗಿದ್ದಾರೆ' ಎಂಬ ಉತ್ತರ ಅವರ ಕುಟುಂಬದ ಸದಸ್ಯರಿಂದ ದೊರೆಯುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನೀಡಿದ ದೂರನ್ನು ಆಧರಿಸಿ ಎಂಟು ಮಂದಿ ಆರೋಪಿಗಳ ವಿರುದ್ಧ ವಿಧಾನಸೌಧ ಠಾಣೆಯ ಪೊಲೀಸರು ಜೂನ್ 25ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು. ಬಳಿಕ ಪ್ರಕರಣದ ತನಿಖೆ ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು.

ಕರ್ನಾಟಕ ಲೋಕಸೇವಾ ಆಯೋಗದ  ಹಿಂದಿನ ಅಧ್ಯಕ್ಷ ಗೋನಾಳ ಭೀಮಪ್ಪ, ಆಯೋಗದ ಪೀಠಾಧಿಕಾರಿ ಅರುಣಾಚಲಂ, ಕಾರ್ಯದರ್ಶಿ ಕೆ.ಆರ್. ಸುಂದರ್, ಸದಸ್ಯೆ ಡಾ.ಮಂಗಳಾ ಶ್ರೀಧರ್, ಅವರ ಆಪ್ತ ಸಹಾಯಕ ಅಶೋಕ್ ಕುಮಾರ್, ಬೆಂಗಳೂರು ಜಲಮಂಡಳಿ ಎಂಜಿನಿಯರ್ ಸುಧೀರ್ ಅಲಿಯಾಸ್ ಶ್ರೀಧರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮನಾಥ್ ಅಲಿಯಾಸ್ ಸೋಮೇಶ್ ಹಾಗೂ ರಾಜ್ಯ ಸರ್ಕಾರದ ಸಚಿವಾಲಯದ ನೌಕರ ರಾಜಶೇಖರ್ ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು.

ಭೀಮಪ್ಪ ಅವರಿಗೆ ಹತ್ತು ದಿನಗಳ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಆದೇಶಿಸಿದೆ. ಸೋಮನಾಥ್ ಮತ್ತು ಸುಧೀರ್ ಅವರನ್ನು ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಐದು ಆರೋಪಿಗಳು ಈವರೆಗೂ ತನಿಖಾ ತಂಡದ ಎದುರು ಹಾಜರಾಗಿಲ್ಲ.

`ಸಿಐಡಿ ಡಿಐಜಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ಐವರು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಲಿಲ್ಲ. ಆರೋಪಿಗಳನ್ನು ಹುಡುಕಿಕೊಂಡು ಅವರ ಮನೆಗಳಿಗೆ ತೆರಳಿ ವಿಚಾರಿಸಿದರೆ, ತೀರ್ಥಯಾತ್ರೆಗೆ ಹೋಗಿದ್ದಾರೆ ಎಂಬ ಉತ್ತರ ಬರುತ್ತಿದೆ' ಎಂದು ಸಿಐಡಿ ಮೂಲಗಳು ತಿಳಿಸಿವೆ.

ಆರೋಪಿಗಳ ಮೊಬೈಲ್ ದೂರವಾಣಿಗಳು `ಸ್ವಿಚ್ ಆಫ್' ಆಗಿವೆ. ಸೋಮನಾಥ್ ಮತ್ತು ಸುಧೀರ್ ಅವರಂತೆ ಇತರೆ ಆರೋಪಿಗಳೂ ಹೊರರಾಜ್ಯಗಳಿಗೆ ತೆರಳಿ ತಲೆಮರೆಸಿಕೊಂಡಿರಬಹುದು ಎಂಬ ಶಂಕೆ ತನಿಖಾ ತಂಡಕ್ಕಿದೆ.  ಸಿಐಡಿ ಡಿವೈಎಸ್‌ಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಹಲವು ತಂಡಗಳನ್ನು ಆರೋಪಿಗಳ ಪತ್ತೆಗಾಗಿ ನಿಯೋಜಿಸಲಾಗಿದೆ. ಹೊರ ರಾಜ್ಯಗಳಿಗೂ ಕೆಲವು ತಂಡಗಳನ್ನು ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT