ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಡ್ಡೆಗೆಣಸು ವೈವಿಧ್ಯತೆ ಅನಾವರಣ

Last Updated 11 ಜನವರಿ 2014, 6:19 IST
ಅಕ್ಷರ ಗಾತ್ರ

ಶಿರಸಿ: ಮಣ್ಣಿನ ಸತ್ವವನ್ನೆಲ್ಲ ಹೀರಿ ನೆಲದೊಳಗೆ ಸೊಂಪಾಗಿ ಬೆಳೆದಿದ್ದ ವೈವಿಧ್ಯಮಯ ಗೆಡ್ಡೆಗೆಣಸುಗಳ ವಿಶಿಷ್ಟ ಮೇಳ ಶುಕ್ರವಾರ ಇಲ್ಲಿ ನಡೆಯಿತು.

ಕಂಬಕೆಸು, ಚಿಪ್ಪುಕೆಸು, ನೇಗಲಗೊನ್ನೆ, ಸಾಂಬ್ರಾಣಿ, ಪಚ್ಚಡಿಕೆಸು, ತುಪ್ಪಗೆಣಸು, ನರೆಗೆಡ್ಡೆ, ಕಚ್ಚೂರದ ಗೆಡ್ಡೆ, ಕಪ್ಪರಿಸಿಣ, ಗ್ಲೂಕೋಸ್‌ ಗೆಡ್ಡೆ, ಗೂಟಗೆಣಸಿನ ಗೆಡ್ಡೆ, ಹಾಲಗೆಸ, ಶತಾವರಿ, ಅಶ್ವಗಂಧಿ, ಮೊಟ್ಟೆಕೆಸ, ಪಂಜರಗಡ್ಡೆ, ಕುರಿಮಲೆ ಹೀಗೆ 60ಕ್ಕೂ ಅಧಿಕ ಜಾತಿ ಗೆಡ್ಡೆಗಳನ್ನು ಮಹಿಳೆಯರು ಮೇಳಕ್ಕೆ ತಂದಿದ್ದರು.

‘ಮಡಿಕೆಸು, ಚಿರಕಾಂಡೆ, ಬೊಂಬಾಯಿ ಕೆಸು ಸೇರಿದಂತೆ ಸುಮಾರು ಒಂಬತ್ತು ಜಾತಿಯ ಗೆಡ್ಡೆಗಳನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುತ್ತೇವೆ. ಯಲ್ಲಾಪುರ ಪೇಟೆಯಲ್ಲಿ ಇದಕ್ಕೆ ಒಳ್ಳೆಯ ಬೇಡಿಕೆ ಇದ್ದು ವರ್ಷಕ್ಕೆ ₨ 4,000 ದೊರೆಯುತ್ತಿದೆ. ಹತ್ತಾರು ಹೆಂಗಳೆಯರು ಟೀಡ್‌ ಸಂಸ್ಥೆಯಿಂದ ತರಬೇತಿ ಪಡೆದು ಒಂದು ದಶಕದಿಂದ ಈ ಕೃಷಿ ಕೈಗೊಂಡು ಹಣ ಗಳಿಸುತ್ತಿದ್ದೇವೆ’ ಎಂದು ಯಲ್ಲಾಪುರದ ಲಕ್ಷ್ಮಿ ಗಾವಡೆ ಹೇಳಿದರು.

ಕಾಡುಗೆಣಸು, ಕರಪೂರ ಅರಿಸಿನ, ರೋಮನ್‌ ಅರಿಸಿನ ಗೆಡ್ಡೆ ಸೇರಿದಂತೆ 28 ವಿವಿಧ ಬಗೆಯ ಗೆಡ್ಡೆಗಳನ್ನು ಪುತ್ತೂರು ಪಾದೆ ಫಾರ್ಮ್‌ನಿಂದ ಬಂದಿದ್ದ ಗಣೇಶ ಕಡಬ ಪ್ರದರ್ಶಿಸಿದರು.

ನೆಲಕಚೋರ, ಮಸಳೆ, ಆರತಿಕುಂಡಿಗೆ ಗೆಡ್ಡೆ, ನೆಲತೆಂಗು ಇನ್ನಿತರ ಔಷಧಿ ಗೆಡ್ಡೆಗಳನ್ನು ತಂದಿದ್ದರು. ವನಸ್ತ್ರೀ ಸಂಘಟನೆಯ ಸೋಂದಾ ಗುಂಪಿನ ಮಹಿಳೆಯರು ತಂದಿದ್ದ 49 ವಿಧದ ಗೆಡ್ಡೆಗಳನ್ನು ಕಾರವಾರದ ಭರತಕುಮಾರ್‌ ಪರಿಚಯಿಸಿದರು.

ಮೇಳಕ್ಕೆ ಬಂದಿದ್ದ ಜನರು ಮಧ್ಯಾಹ್ನ ಊಟದಲ್ಲಿ ಗೆಡ್ಡೆಗೆಣಸಿನಿಂದ ಸಿದ್ಧಪಡಿಸಿದ ಸಾಂಬಾರು, ಪಲ್ಯ, ಸಿಹಿ ತಿನಿಸು, ಕೆಸುವಿನ ಎಲೆಯ ಬೋಂಡಾ, ಗೆಣಸಿನ ಎಲೆಯ ಬಜ್ಜಿ ಸವಿದರು.

ವನಸ್ತ್ರೀ ಸಂಘಟನೆಯು ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮೇಳವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ಸತೀಶ ಹೆಗಡೆ, ನಾಗಾರ್ಜುನ ಗೌಡ ಉದ್ಘಾಟಿಸಿದರು. ವನಸ್ತ್ರೀ ಸಂಘಟನೆಯ ಟ್ರಸ್ಟಿ ಶೈಲಜಾ ಗೋರ್ನಮನೆ ಅಧ್ಯಕ್ಷತೆ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವನಸ್ತ್ರೀ ಸಂಘಟನೆಯ ಮುಖ್ಯಸ್ಥೆ ಸುನೀತಾರಾವ್‌, ಗೆಡ್ಡೆ ಗೆಣಸಿನಲ್ಲಿರುವ ಪೌಷ್ಟಿಕ ಅಂಶಗಳ ಕುರಿತು ಜನರಲ್ಲಿ ಅರಿವು ಮೂಡಿಸುವ, ಆರ್ಥಿಕ ಮೂಲವಾಗಿ ಇವುಗಳನ್ನು ಬೆಳೆಯಲು ಪ್ರೇರೇಪಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದ್ದು, ರಾಜ್ಯವಲ್ಲದೇ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಪ್ರತಿಕ್ರಿಯೆ ಬಂದಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಬಾಲಚಂದ್ರ ಸಾಯಿಮನೆ, ಗಣೇಶ ಕಡಬ ಮಾಹಿತಿ ನೀಡಿದರು. ಮನೋರಮಾ ಜೋಶಿ ಸ್ವಾಗತಿಸಿದರು. ರಾಜಲಕ್ಷ್ಮಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಯುವಜನ ಮೇಳ ಇಂದಿನಿಂದ
ಸಿದ್ದಾಪುರ:
ತಾಲ್ಲೂಕು ಮಟ್ಟದ ಯುವಜನ ಮೇಳವು ಬಿದ್ರಕಾನದ ಎಂಜಿಸಿಎಂ ಪ್ರೌಢಶಾಲೆಯಲ್ಲಿ ಇದೇ 11 ಮತ್ತು 12ರಂದು ನಡೆಯಲಿದೆ.


11ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸುವರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಾದೇವಿ ಗೌಡ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT