ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗೆ ದಾರಿ ಯಾವುದಯ್ಯ?

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಯಾವಾಗ ಮೊದಲು ಗೆಲುವು ಸಿಗುತ್ತೆ? ಅದಕ್ಕಿರುವ ದಾರಿ ಯಾವುದು? ವೀರೇಂದ್ರ ಸೆಹ್ವಾಗ್ ಯಾವಾಗ ಸಿಡಿದು ನಿಲ್ಲುತ್ತಾರೆ? ನಾಯಕ ಮಹೇಂದ್ರ ಸಿಂಗ್ ದೋನಿ ಅವರ ತಂತ್ರ ಎಂದು ಯಶಸ್ಸು ಕಾಣುತ್ತೆ?

ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಗಳಿವು. ಆದರೆ ಸತತ ಸೋಲಿನ ಸಂಕೋಲೆಯಲ್ಲಿ ಸಿಲುಕಿರುವ ಭಾರತ ತಂಡದ ಪಾಲಿಗೆ ಗೆಲುವಿನ ಹಾದಿಗಳೆಲ್ಲಾ ಮುಚ್ಚಿ ಹೋಗಿರುವಂತೆ ಭಾಸವಾಗುತ್ತಿದೆ. ಟ್ವೆಂಟಿ-20ಯಲ್ಲಾದರೂ ಗೆಲ್ಲಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದೆ.

ಈಗಾಗಲೇ ನಾಲ್ಕು ಟೆಸ್ಟ್, ಒಂದು ಟ್ವೆಂಟಿ-20 ಪಂದ್ಯದಲ್ಲಿ ಶರಣಾಗಿರುವ ಭಾರತ ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ಎಂಸಿಜೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಾದರೂ ಗೆಲುವು ಒಲಿಯಬಹುದೇ ಎಂಬ ಕುತೂಹಲ ಭಾರತದ ಅಭಿಮಾನಿಗಳದ್ದು.

ಇಲ್ಲೂ ಸರಣಿ ಸೋಲಿನಿಂದ ಪಾರಾಗಬೇಕೆಂದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಮೊದಲ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ 1-0 ಮುನ್ನಡೆ ಹೊಂದಿದೆ. ಆದರೆ ಕಾಂಗರೂ ನಾಡಿನ ಈ ಪ್ರವಾಸದಲ್ಲಿ ಭಾರತ ತಂಡದಿಂದ ಉತ್ತಮ ಆರಂಭವೇ ಮೂಡಿ ಬರುತ್ತಿಲ್ಲ. ಒಂದೊಮ್ಮೆ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಎಂದು ಕರೆಸಿಕೊಂಡಿದ್ದ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಈಗ ಪರದಾಡುತ್ತಿದ್ದಾರೆ.

ಪ್ರಮುಖವಾಗಿ ಸೆಹ್ವಾಗ್ ಈಗ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಟೆಸ್ಟ್‌ನಲ್ಲಿಯೂ ವಿಫಲರಾದ ಅವರು ಟ್ವೆಂಟಿ-20ಯಲ್ಲೂ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗುತ್ತಿಲ್ಲ. ಐಪಿಎಲ್ `ರಾಜರು~ ಎನಿಸಿಕೊಂಡಿರುವ ಇವರೆಲ್ಲಾ ಚುಟುಕು ಕ್ರಿಕೆಟ್‌ನಲ್ಲೂ ಎಡವುತ್ತಿದ್ದಾರೆ.

ನಾಯಕ ದೋನಿ ಅವರ ಯಾವುದೇ ಪ್ರಯೋಗ, ತಂತ್ರಗಳು ಯಶಸ್ವಿಯಾಗುತ್ತಿಲ್ಲ. ಆದರೂ ಸೋತ ಮೇಲೊಂದು ಕಾರಣ ಹೇಳುತ್ತಲೇ ಮುನ್ನಡೆಯುತ್ತಿದ್ದಾರೆ. ಅದೃಷ್ಟ ನಮ್ಮ ಕಡೆ ಇಲ್ಲ ಎಂದು ಒಂದು ದಿನ ಹೇಳಿದರೆ, ಅವರು ನಮಗಿಂತ ಚೆನ್ನಾಗಿ ಆಡಿದರು ಎಂದು ಇನ್ನೊಂದು ದಿನ ನುಡಿಯುತ್ತಾರೆ. ಮತ್ತೊಂದು ದಿನ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಸೋಲಿಗೆ ಕಾರಣ ಎಂದರೆ ಇನ್ನೊಂದು ದಿನ ಮಳೆ ಕಾರಣ ಸ್ಪಿನ್ನರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ.

ಆದರೆ ಪದಾರ್ಪಣೆ ಪಂದ್ಯದಲ್ಲೇ ನಾಯಕರಾಗಿ ಗೆಲುವು ಒಲಿಸಿಕೊಂಡ ಕಾಂಗರೂ ಪಡೆಯ    ಜಾರ್ಜ್ ಬೈಲಿ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಬಹುತೇಕ ಹೊಸಮುಖಗಳನ್ನೇ ಹೊಂದಿರುವ ಈ ತಂಡದವರು ಮೊದಲ ಪಂದ್ಯದಲ್ಲಿ ಅನುಭವಿ ಹಾಗೂ ಟ್ವೆಂಟಿ-20 ಪರಿಣತ ಪ್ರವಾಸಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದ ರೀತಿ ಮೆಚ್ಚುವಂಥದ್ದು. ಗಂಭೀರ್, ವೀರೂ, ಕೊಹ್ಲಿ, ರೈನಾ, ರೋಹಿತ್ ಅವರಂತಹ ಆಟಗಾರರನ್ನು ನಿಯಂತ್ರಿಸಿದ್ದೇ ಅದಕ್ಕೆ ಸಾಕ್ಷಿ.

ಈಗಾಗಲೇ ಸೋತು ಹೈರಾಣಾಗಿರುವ ಭಾರತ ಈ ಪಂದ್ಯಕ್ಕೆ ಹೆಚ್ಚು ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದರೆ ಆಲ್‌ರೌಂಡರ್ ರವೀಂದ್ರ ಜಡೇಜಾ ಬದಲಿಗೆ ವೇಗಿ ಇರ್ಫಾನ್ ಪಠಾಣ್‌ಗೆ ಸ್ಥಾನ ನೀಡುವ ಸಂಭವವಿದೆ.
ಈ ಪಿಚ್ ವೇಗಿಗಳ ಸ್ನೇಹಿ ಎನಿಸಿದೆ. ಹಾಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಕೂಡ ಬದಲಾವಣೆ ನಿರೀಕ್ಷೆ ಇದೆ.

ಕ್ಸೇವಿಯರ್ ಡೋಹರ್ತಿ ಬದಲಿಗೆ ಕ್ಲಿಂಟ್ ಮೆಕ್‌ಕೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದಕ್ಕೆ ಡೇವಿಡ್ ಹಸ್ಸಿ ನೀಡಿರುವ ಸುಳಿವೇ ಸಾಕ್ಷಿ. `ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗಿ ಕ್ಲಿಂಟ್ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ಅವರು ಕಣಕ್ಕಿಳಿಯಬಹುದು~ ಎಂದು ಅವರು ಗುರುವಾರ ನುಡಿದರು.

ಈ ಪಂದ್ಯದಲ್ಲಿಯಾದರೂ ದೋನಿ ಬಳಗಕ್ಕೆ ಗೆಲುವು ಸಿಕ್ಕರೆ ಮುಂಬರುವ ತ್ರಿಕೋನಏಕದಿನ ಸರಣಿಗೆ ಸ್ಫೂರ್ತಿಯಾಗಬಹುದೇನೋ?

ತಂಡಗಳು ಇಂತಿವೆ: ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ರಾಹುಲ್ ಶರ್ಮ, ಜಹೀರ್ ಖಾನ್, ಆರ್.ಅಶ್ವಿನ್, ಉಮೇಶ್ ಯಾದವ್, ಪ್ರವೀಣ್ ಕುಮಾರ್, ಆರ್.ವಿನಯ್ ಕುಮಾರ್, ಇರ್ಫಾನ್ ಪಠಾಣ್, ರವೀಂದ್ರ ಜಡೇಜಾ ಹಾಗೂ ಮನೋಜ್ ತಿವಾರಿ.

ಆಸ್ಟ್ರೇಲಿಯಾ: ಜಾರ್ಜ್ ಬೈಲಿ (ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಬರ್ಟ್, ಡೇನಿಯಲ್ ಕ್ರಿಸ್ಟಿಯಾನ್, ಕ್ಸೇವಿಯರ್ ಡೋಹರ್ತಿ, ಜೇಮ್ಸ ಫಾಲ್ಕನರ್, ಆ್ಯರನ್ ಫಿಂಚ್, ಡೇವಿಡ್ ಹಸ್ಸಿ, ಬ್ರೆಟ್ ಲೀ, ಕ್ಲಿಂಟ್ ಮೆಕ್‌ಕೇ, ಮಿಷೆಲ್ ಮಾರ್ಷ್, ಶಾನ್ ಮಾರ್ಷ್, ಮ್ಯಾಥ್ಯೂ ವೇಡ್ ಹಾಗೂ ಬ್ರಾಡ್ ಹಾಗ್.

ಅಂಪೈರ್‌ಗಳು: ಬ್ರೂಸ್ ಆಕ್ಸೆನ್‌ಫೋರ್ಡ್ ಹಾಗೂ ಪಾಲ್ ರೀಫೆಲ್. ಮ್ಯಾಚ್ ರೆಫರಿ: ಆ್ಯಂಡಿ ಪೈಕ್ರಾಫ್ಟ್
ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 2.05ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT