ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಅಂತರ: ಕೆ.ಮಲ್ಲಣ್ಣ ದಾಖಲೆ ಮತ

Last Updated 28 ಮಾರ್ಚ್ 2014, 8:22 IST
ಅಕ್ಷರ ಗಾತ್ರ

ತುಮಕೂರು: 1969ರಲ್ಲಿ ಕಾಂಗ್ರೆಸ್ ಒಡೆದ ಮನೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎರಡು ಭಾಗವಾಯಿತು. ಸೈದ್ಧಾಂತಿಕ ಸಂಘರ್ಷ ಮುಗಿಲು ಮುಟ್ಟಿದ್ದ ಕಾಲ. ರಾಜ್ಯದಲ್ಲಿ ಎಸ್‌.ನಿಜಲಿಂಗಪ್ಪ ಸಾರಥ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಪ್ರಭಾವಶಾಲಿಯಾಗಿತ್ತು.

ಈ ಸಮಯದಲ್ಲೇ ಲೋಕಸಭೆಗೆ (1971) ಐದನೇ ಮಹಾ ಚುನಾವಣೆ ಘೋಷಣೆಯಾಯಿತು. ಮಧುಗಿರಿ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ನಲ್ಲಿ ಹುಡುಕಾಟ. ರಾಜ್ಯ ಕಾಂಗ್ರೆಸ್‌ನ ಪ್ರಮುಖ, ಹಿಂದುಳಿದ ವರ್ಗಗಳ ನೇತಾರ ದೇವರಾಜ ಅರಸು ಕಣ್ಣಿಗೆ ಬಿದ್ದಿದ್ದು ಕಾರ್ಮಿಕ ಮುಖಂಡ ಕೆ.ಮಲ್ಲಣ್ಣ.

ಜಿಲ್ಲೆಯಲ್ಲಿ ಕಾರ್ಮಿಕರನ್ನು ಸಂಘಟಿಸಿ, ಆ ಹಿನ್ನೆಲೆಯಲ್ಲೆ ತುಮಕೂರು ಪುರಸಭೆಗೆ ಮೂರು ಬಾರಿ ಸದಸ್ಯರಾಗಿದ್ದರು. ತುಮಕೂರು ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಕಮ್ಯುನಿಸ್ಟರ ಸಹಕಾರ ಪಡೆದು ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು.

ಮೂಲತಃ ವಕೀಲ. ಬಡವರು, ಕಾರ್ಮಿಕರು, ನೊಂದವರ ಪ್ರಕರಣಗಳನ್ನು ಉಚಿತವಾಗಿ ನಡೆಸಿಕೊಡುತ್ತಿದ್ದರು. ಈ ಸೇವೆ ಮಲ್ಲಣ್ಣ ಅವರ ವರ್ಚಸ್ಸನ್ನು ಎಲ್ಲೆಡೆ ಪಸರಿಸಿತ್ತು. ಕಾಂಗ್ರೆಸ್‌ ಪಕ್ಷಕ್ಕೂ ಜನ ನಾಯಕರ ಅಗತ್ಯವಿತ್ತು. 1969ರ ಸಂಕಷ್ಟ ಕಾಲದಲ್ಲಿ ಮಲ್ಲಣ್ಣ ಅವರನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ಸೆಳೆಯಿತು.

ತುಮಕೂರು ಜಿಲ್ಲಾ ಕಾಂಗ್ರೆಸ್‌ ಸಂಚಾಲಕರಾಗಿ ನೇಮಿಸಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿತು. ಕಾರ್ಯದಕ್ಷತೆಯಿಂದ ಮಲ್ಲಣ್ಣ ಜಿಲ್ಲಾ ಘಟಕದ ಅಧ್ಯಕ್ಷರಾದರು. ಸಂಘಟನೆ ಚತುರತೆ, ಜನರ ಒಡನಾಟವೇ ಅವರಿಗೇ ಮಧುಗಿರಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ದೊರಕಿಸಿಕೊಟ್ಟಿತು.

ಕಾಂಗ್ರೆಸ್‌ ಆರಂಭದಲ್ಲಿ ಶಿರಾ ಶಾಸಕರಾಗಿದ್ದ ಬಿ.ಆರ್.ರಾಮೇಗೌಡ ಅವರನ್ನು ಮಧುಗಿರಿ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತಿಸಿತ್ತು. ಟಿಕೆಟ್‌ ಸಹ ಘೋಷಿಸಿತ್ತು. ಕೊನೆ ಕ್ಷಣದಲ್ಲಿ ರಾಮೇಗೌಡ ಕಾಂಗ್ರೆಸ್‌ ಟಿಕೆಟ್‌ ತಿರಸ್ಕರಿಸಿ, ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ಸಾಥ್‌ ನೀಡಿದರು.

ರಾಮೇಗೌಡರು 1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕೆಂಗಲ್‌ ಹನುಮಂತಯ್ಯ ಸಹಪಾಠಿ ಕಾಂಗ್ರೆಸ್‌ನ ತಾರೇಗೌಡರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯದಲ್ಲಿ ಸುದ್ದಿ ಮಾಡಿದವರು. ನಂತರ ಸೋಲು ಕಂಡರೂ 1967ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಪ್ರಥಮ ಅಧ್ಯಕ್ಷರು.

ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ 1970–71ರಲ್ಲಿ ತೀವ್ರ ಕ್ಷಾಮಕ್ಕೆ ತುತ್ತಾಯಿತು. ಜನರಿಗೆ ಹೊತ್ತಿನ ತುತ್ತು ಕಷ್ಟ ಎನಿಸುವಂಥ ಬರ ಎದುರಾಯಿತು. ಕೇಂದ್ರ ಸರ್ಕಾರ ನೆರವಿಗೆ ಧಾವಿಸದಿದ್ದರೆ ಬದುಕು ಅಯೋಮಯ ಎನಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಬರ ಪರಿಹಾರ ಯೋಜನೆಯಡಿ ಎಲ್ಲೆಡೆ ಕೆಂಪುಜೋಳ ವಿತರಿಸಲಾಯಿತು. ಉಚಿತವಾಗಿ ಗೋಧಿ ನೀಡಲಾಯಿತು. ಜನ ಸಾಮಾನ್ಯರಲ್ಲಿ ಈ ಬರ ‘ಕೆಂಪು ಜೋಳ’ದ  ಬರ ಎಂದೇ ಹೆಸರಾಯಿತು.

ಕೆ.ಮಲ್ಲಣ್ಣ, ಬಿ.ಎನ್‌.ರಾಮೇಗೌಡ ಇಬ್ಬರು ಶಿರಾ ತಾಲ್ಲೂಕಿನವರು. ಕಾಂಗ್ರೆಸ್‌ ಸೋಲಿಗೆ ಸಂಸ್ಥಾ ಕಾಂಗ್ರೆಸ್‌ ಮುಖಂಡರು ಹಗಲಿರುಳು ಶ್ರಮಿಸಿದರು. ಆದರೆ ಕೆಂಪು ಜೋಳದ ಬರದ ಅಲೆ ಕಾಂಗ್ರೆಸ್‌ ಅಭ್ಯರ್ಥಿಗೆ ಅತ್ಯಧಿಕ ಮತಗಳ ಅಂತರದ ಗೆಲುವು ನೀಡಿತು. ಈ ಗೆಲುವು ರಾಷ್ಟ್ರದಲ್ಲೇ ಚಾರಿತ್ರಿಕ ಗೆಲುವಾಯಿತು. ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಣ್ಣ 247907 (ಶೇ 83.93) ಮತ ಪಡೆದರೆ, ಪ್ರತಿಸ್ಪರ್ಧಿ ಶಾಸಕರಾಗಿದ್ದ ಬಿ.ಎನ್‌.ರಾಮೇಗೌಡ ಕೇವಲ 36914 (ಶೇ 12.50) ಮತ ಪಡೆದರು. ಗೆಲುವಿನ ಅಂತರ 210993 ಮತಗಳಾಗಿತ್ತು.

ಇದೇ ಮಧುಗಿರಿ ಲೋಕಸಭಾ ಕ್ಷೇತ್ರದ ಕೊನೆ ಚುನಾವಣೆ. ನಂತರದ ಚುನಾವಣೆಗಳಲ್ಲಿ ತುಮಕೂರು ಎರಡು ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಾನ ಹೊಂದಿದ್ದ ಹೆಗ್ಗಳಿಕೆಗೂ ಇತಿಶ್ರೀ ಬೀಳುತ್ತದೆ. ಜೆಲ್ಲೆಯ ಕೆಲ ಕ್ಷೇತ್ರಗಳು ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಹಂಚಲ್ಪಡುತ್ತವೆ.

ಮಲ್ಲಣ್ಣ ಯುಗಾರಂಭ
ಅತ್ಯಧಿಕ ಮತಗಳ ಅಂತರದಿಂದ ಸಂಸದರಾಗಿ ಚುನಾಯಿತರಾದ ಕೆ.ಮಲ್ಲಣ್ಣ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟರು. ಇಂದಿರಾ ಗಾಂಧಿ ಆಪ್ತ ವಲಯಕ್ಕೆ ಸೇರಿದರು. ರಾಜ್ಯ ಕಾಂಗ್ರೆಸ್‌ನ ಪ್ರಮುಖರಾದರು. ಯುವಕರನ್ನು ಗುರುತಿಸಿ ಬೆಳೆಸಿದರು.

ಮಧುಗಿರಿ ಲೋಕಸಭಾ ಕ್ಷೇತ್ರ ಇತರ ಕ್ಷೇತ್ರಗಳಲ್ಲಿ ವಿಲೀನವಾದ ನಂತರ ಮಲ್ಲಣ್ಣ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ 1977, 1980ರ ಚುನಾವಣೆಯಲ್ಲಿ ಸ್ಪರ್ಧಿಸಿ ಸತತ ಮೂರು ಬಾರಿ ವಿಜೇತರಾಗುವ ಮೂಲಕ ಹ್ಯಾಟ್ರಿಕ್‌ ನಗೆ ಬೀರಿದರು.

ಕೆಪಿಸಿಸಿ ಅಧ್ಯಕ್ಷರಾಗಿ (1982–83) ಆಯ್ಕೆಯಾದ ಜಿಲ್ಲೆಯ ಮೊದಲಿಗರು ಕೆ.ಮಲ್ಲಣ್ಣ. ಇವರ ನೇತೃತ್ವದಲ್ಲೇ ರಾಜ್ಯ ವಿಧಾನಸಭೆಗೆ ಏಳನೇ ಮಹಾ ಚುನಾವಣೆ ನಡೆಯುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ 85 ಸ್ಥಾನ ಗಳಿಸಿ ಅಧಿಕಾರದಿಂದ ಕೆಳಗಿಳಿಯುತ್ತದೆ. ಜನತಾಪಕ್ಷದ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸೋತಿದ್ದರಿಂದ ಮಲ್ಲಣ್ಣ ಅವರಿಗೆ 1984ರ ಲೋಕಸಭಾ ಚುನಾವಣೆಯ ಟಿಕೆಟ್‌ ಕೈ ತಪ್ಪುತ್ತದೆ. ನಂತರ 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ಕಾಂಗ್ರೆಸ್‌ ಟಿಕೆಟ್‌ ನೀಡಲ್ಲ. 1989ರಲ್ಲಿ ರಾಜ್ಯ ವಿಧಾನಸಭೆಗೆ 9ನೇ ಮಹಾಚುನಾವಣೆ ನಡೆಯುತ್ತದೆ. ಈ ಅವಧಿಯಲ್ಲಿ ಮತ್ತೆ ಪಕ್ಷದಲ್ಲಿ ಪ್ರಭಾವಿಯಾಗಿದ್ದ ಕೆ.ಮಲ್ಲಣ್ಣ ಕಳ್ಳಂಬೆಳ್ಳ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಜತೆಗೆ ಮುಖ್ಯಮಂತ್ರಿ ಗಾದಿಯ ಪ್ರಬಲ ಆಕಾಂಕ್ಷಿ.

ಮಲ್ಲಣ್ಣ ಪ್ರಭಾವ ಗೊತ್ತಿದ್ದ ಇತರ ಮುಖ್ಯಮಂತ್ರಿ ಆಕಾಂಕ್ಷಿಗಳು, ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಸಚಿವ ಟಿ.ಬಿ.ಜಯಚಂದ್ರ ಅವರನ್ನು ಪಕ್ಷೇತರರನ್ನಾಗಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತಾರೆ. ಇದು ಮಲ್ಲಣ್ಣ ಅವರಿಗೆ ಸಾಕಷ್ಟು ನೋವುಂಟು ಮಾಡುತ್ತದೆ. ಪಿ.ವಿ.ನರಸಿಂಹರಾವ್‌ ಪ್ರಧಾನಮಂತ್ರಿಗಳಾಗಿದ್ದ ಅವಧಿಯಲ್ಲಿ ಮಲ್ಲಣ್ಣ ಅವರನ್ನು ಗೋವಾ ಅಥವಾ ಪಾಂಡಿಚೇರಿಗೆ ರಾಜ್ಯಪಾಲರನ್ನಾಗಿ ನೇಮಿಸುವ ಪ್ರಸ್ತಾವ ಕೇಂದ್ರ ಸರ್ಕಾರದ್ದಾಗಿರುತ್ತದೆ. ಆಗ ನಡೆದ ಲಾಬಿ ರಾಜ್ಯಪಾಲ ಹುದ್ದೆ ತಪ್ಪಿಸುತ್ತದೆ.

1994ರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಶಾಸಕರ ಚುನಾವಣೆಗೆ ಟಿಕೆಟ್‌ ನೀಡುತ್ತದೆ. ಮಲ್ಲಣ್ಣ ಅವರಿಗೆ ಪಕ್ಷ 19 ಓಟು ನಿಗದಿ ಪಡಿಸಿದ್ದರೂ; 21 ಓಟು ಪಡೆದು ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಸದಸ್ಯತ್ವದ ಅವಧಿಯಲ್ಲೇ ತಮ್ಮ 77ನೇ ವಯಸ್ಸಿನಲ್ಲಿ (2000ದಲ್ಲಿ) ಮಲ್ಲಣ್ಣ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT