ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಅನಿವಾರ್ಯತೆಯಲ್ಲಿ ಭಾರತ

ಮಹಿಳಾ ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಇಂದು ಸೆಣಸಾಟ
Last Updated 4 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ಹಿಂದಿನ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ ಮಂಗಳವಾರ ನಡೆಯಲಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಇಲ್ಲಿನ  ಬ್ರೆಬೋರ್ನ್ ಕ್ರೀಡಾಂಗಣದಲ್ಲಿ `ಎ' ಗುಂಪಿನ ಈ ಪಂದ್ಯ ನಡೆಯಲಿದೆ. ನಾಕೌಟ್ ಹಂತ ಪ್ರವೇಶಿಸುವ ಆಸೆ ಜೀವಂತವಾಗಿ ಉಳಿಯಬೇಕಾದರೆ ಮಿಥಾಲಿ ರಾಜ್ ನೇತೃತ್ವದ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕು. ಆತಿಥೇಯರು ಹಿಂದಿನ ಎರಡು ಪಂದ್ಯಗಳಿಂದ ಮಿಶ್ರ ಫಲಿತಾಂಶ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ಎದುರು 105 ರನ್‌ಗಳ ಗೆಲುವು ಸಾಧಿಸಿದ್ದರೆ, ಇಂಗ್ಲೆಂಡ್ ವಿರುದ್ಧ 32 ರನ್‌ಗಳ ಸೋಲು ಕಂಡಿದ್ದರು.

ಈ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗಿದ್ದ ಸಿಂಹಳೀಯರ ತಂಡವು ಎರಡನೇ ಪಂದ್ಯದಲ್ಲಿ ವಿಂಡೀಸ್ ಎದುರು ಸೋಲು ಕಂಡಿತ್ತು. ಒಂದೊಂದು ಗೆಲುವು ಸಾಧಿಸಿರುವ ಭಾರತ ಹಾಗೂ ಶ್ರೀಲಂಕಾ ತಂಡಗಳು ತಲಾ ಎರಡು ಪಾಯಿಂಟ್‌ಗಳನ್ನು ಹೊಂದಿವೆ. ನಾಕೌಟ್ ಹಂತ ಪ್ರವೇಶಿಸುವ ನಿಟ್ಟಿನಲ್ಲಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಎರಡೂ ತಂಡಗಳ ನಡುವಿನ ಅಂಕಿ ಅಂಶಗಳನ್ನು ನೋಡಿದರೆ ಆತಿಥೇಯ ತಂಡದ್ದೇ ಮೇಲುಗೈ. ಹಿಂದೆ 17 ಸಲ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಇನ್ನುಳಿದ 16 ಪಂದ್ಯಗಳಲ್ಲಿ ಭಾರತವೇ ಗೆಲುವು ಕಂಡಿದೆ. ಆದ್ದರಿಂದ ಈ ಪಂದ್ಯದಲ್ಲಿಯೂ ಭಾರತವೇ ಗೆಲುವು ಪಡೆಯುವ ನೆಚ್ಚಿನ ತಂಡ ಎನಿಸಿದೆ.

`ಸೂಪರ್ ಸಿಕ್ಸ್ ಹಂತ ಪ್ರವೇಶಿಸಬೇಕಾದರೆ ಗೆಲುವು ಅನಿವಾರ್ಯವಾಗಿದೆ. ಆದ್ದರಿಂದ ಎದುರಾಳಿ ಲಂಕಾ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಇಂಗ್ಲೆಂಡ್ ಎದುರು ಉತ್ತಮ ಹೋರಾಟ ತೋರಿದೆವು. ಅದರೂ, ಗೆಲುವು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಹೆಚ್ಚಿನ ಶ್ರಮ ವಹಿಸಿ ಸೂಪರ್ ಸಿಕ್ಸ್ ಪ್ರವೇಶಿಸುವ ಗುರಿಯನ್ನು ಈಡೇರಿಸಿಕೊಳ್ಳುತ್ತೇವೆ' ಎಂದು ಭಾರತ ತಂಡದ ನಾಯಕಿ ಮಿಥಾಲಿ ಸುದ್ದಿಗಾರರಿಗೆ ತಿಳಿಸಿದರು.

`ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದರೂ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡೆವು. ಜೂಲನ್ ಗೋಸ್ವಾಮಿ ಮೊದಲ ಸ್ಪೆಲ್‌ನಲ್ಲಿ ಸಮರ್ಥ ಬೌಲಿಂಗ್ ಮಾಡಿದರು. ಈ ಆಟಗಾರ್ತಿಗೆ ಉತ್ತಮ ಬೆಂಬಲ ನೀಡುವ ಇನ್ನೊಬ್ಬ ಬೌಲರ್ ಅಗತ್ಯವಿತ್ತು' ಎಂದೂ ಅವರು ಅಭಿಪ್ರಾಯ ಪಟ್ಟರು.

`ಎರಡೂ ತಂಡಗಳು ಉತ್ತಮ ರನ್‌ರೇಟ್ ಹಾಗೂ ಸಮನಾದ ಅಂಕಗಳನ್ನು ಹೊಂದಿರುವ ಕಾರಣ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಭಾರತ ವಿರುದ್ಧ ಒಗ್ಗಟ್ಟಿನ ಪ್ರದರ್ಶನ ತೋರುತ್ತೇವೆ' ಎಂದು ಶ್ರೀಲಂಕಾ ತಂಡದ ನಾಯಕಿ ಶಶಿಕಲಾ ಸಿರಿವರ್ಧನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂಡಗಳು ಇಂತಿವೆ:
ಭಾರತ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ಜೂಲನ್ ಗೋಸ್ವಾಮಿ, ಅಮಿತಾ ಶರ್ಮ, ಗೌಹಾರ್ ಸುಲ್ತಾನಾ, ಎಂ.ತಿರುಶ್ ಕಾಮಿನಿ, ಸುಲಕ್ಷಣಾ ನಾಯಕ್, ಎಕ್ತಾ ಬಿಸ್ತ್, ಮೋನಾ ಮೆಶ್ರಾಮ್, ರಸನರಾ ಪರ್ವೀನ್, ನಿರಂಜನಾ ನಾಗರಾಜನ್, ಪೂನಮ್ ರಾವುತ್, ರೀಮಾ ಮಲ್ಹೋತ್ರಾ, ಕರುಣಾ ಜೈನ್ ಹಾಗೂ ಶುಭಲಕ್ಷ್ಮಿ ಶರ್ಮ.

ಶ್ರೀಲಂಕಾ: ಶಶಿಕಲಾ ಸಿರಿವರ್ಧನೆ (ನಾಯಕಿ), ಡಿ. ಸಂದಮಾಲಿ, ಚಾಮರಿ ಅಟಪಟ್ಟು, ಈಶಾನಿ ಲೊಕುಸೂರಿಯಾ, ಲಸಂತಿ ಮಧುಶಾನಿ, ದಿಲಾನಿ ಮನೊದರಾ, ಯಶೋದಾ ಮೆಂಡಿಸ್, ಉದೇಶಿಕಾ ಪ್ರಭೋದಿನಿ, ಒಶಾದಿ ರಣಸಿಂಘೆ, ಇನೊಕಾ ರಾಣಾವೀರ್, ದೀಪಿಕಾ ರಸಂಗಿಕಾ, ಶೆರಿನಾ ರವಿಕುಮಾರ್, ಚಿಮಾನಿ ಸೇನಾವರತನೆ, ಪ್ರಸಾದಿನಿ ವೀರಾಕೊಬೆ ಹಾಗೂ ಶ್ರೀಪಾಲಿ ವೀರಾಕೊಬೆ
ಪಂದ್ಯ ಆರಂಭ: ಮಧ್ಯಾಹ್ನ 2.30 ಗಂಟೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT