ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ವಿಶ್ವಾಸದಲ್ಲಿ ಸೂಪರ್ ಕಿಂಗ್ಸ್

ಬ್ಯಾಟಿಂಗ್ ವೈಫಲ್ಯದ ಚಿಂತೆಯಲ್ಲಿ ಪುಣೆ ವಾರಿಯರ್ಸ್
Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಈ ಬಾರಿ ಚೊಚ್ಚಲ ಪಂದ್ಯದಲ್ಲಿಯೇ ಆಘಾತ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆ ಬಳಿಕ ಚೇತರಿಸಿಕೊಂಡು ಆಡುತ್ತಿರುವ ರೀತಿ ಅದ್ಭುತ. ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ನಾಲ್ಕು ಪಾಯಿಂಟ್ ಹೊಂದಿರುವ ಈ ತಂಡ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ದೋನಿ ಸಾರಥ್ಯದ ಈ ತಂಡದವರು ಸೋಮವಾರ ರಾತ್ರಿ ಇಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಪೈಪೋಟಿ ನಡೆಸಲಿದ್ದಾರೆ. ವಾರಿಯರ್ಸ್ ಈ ಬಾರಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ದಾಖಲಿಸಿದೆ. ರಾಜಸ್ತಾನ ರಾಯಲ್ಸ್ ಎದುರು ಆ ಗೆಲುವು ಬಂದಿತ್ತು. ವಿಶೇಷವೆಂದರೆ ಸತತ 11 ಸೋಲುಗಳು ಬಳಿಕ ಬಂದ ಮೊದಲ ಗೆಲುವದು. ಆದರೆ ಶನಿವಾರ ಮತ್ತೆ ಸೋಲು ಎದುರಾಗಿದೆ.

ವಾರಿಯರ್ಸ್ ತಂಡಕ್ಕೆ ಬ್ಯಾಟಿಂಗ್ ವೈಫಲ್ಯವೇ ದೊಡ್ಡ ಚಿಂತೆಯಾಗಿದೆ. ಸ್ಥಿರ ಪ್ರದರ್ಶನ ನೀಡಲು ಈ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗುತ್ತಿಲ್ಲ. ರಾಬಿನ್ ಉತ್ತಪ್ಪ, ರಾಸ್ ಟೇಲರ್, ಯವರಾಜ್ ಸಿಂಗ್ ಅವರಿಂದ ದೊಡ್ಡ ಮಟ್ಟದ ಆಟ ಮೂಡಿಬಂದಿಲ್ಲ. ಬೌಲರ್‌ಗಳು ಕೂಡ ಪದೇ ಪದೇ ಎಡವುತ್ತಿದ್ದಾರೆ.

ಹಾಗಾಗಿ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಈ ಹಣಾಹಣಿಯಲ್ಲಿ ಸೂಪರ್ ಕಿಂಗ್ಸ್ ನೆಚ್ಚಿನ ತಂಡ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಬಂದ ರೋಚಕ ಗೆಲುವಿನ ಖುಷಿಯಲ್ಲಿ ಬೀಗುತ್ತಿರುವ ಈ ತಂಡದವರ ವಿಶ್ವಾಸ ಮತ್ತಷ್ಟು ಹೆಚ್ಚಿದೆ. ಆರ್‌ಸಿಬಿ ಎದುರು ಕೊನೆಯ ಓವರ್‌ನಲ್ಲಿ 16 ರನ್ ಗಳಿಸಿ ಜಯ ಒಲಿಸಿಕೊಂಡಿದ್ದು ಉತ್ತಮ ಸಾಧನೆಯೇ ಸರಿ. ಅದರಲ್ಲೂ ರವೀಂದ್ರ ಜಡೇಜ ಆಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಮುಖವಾಗಿ ಈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮೈಕ್ ಹಸ್ಸಿ ಹಾಗೂ ಮುರಳಿ ವಿಜಯ್ ವಿಫಲವಾದರೂ ಕೊನೆಯ 10 ಓವರ್‌ಗಳಲ್ಲಿ ನೂರು ರನ್ ಗಳಿಸಿದ್ದು ಅದಕ್ಕೆ ಸಾಕ್ಷಿ. ಸುರೇಶ್ ರೈನಾ, ದೋನಿ, ಎಸ್.ಬದರೀನಾಥ್, ಜಡೇಜ ಅವರು ಈ ತಂಡದ ಆಧಾರಸ್ತಂಭ. ಜೊತೆಗೆ ಉತ್ತಮ ಆಲ್‌ರೌಂಡ್ ಆಟಗಾರರು ಕೂಡ ಇದ್ದಾರೆ.

ಆದರೆ ಎರಡು ಬಾರಿಯ ಚಾಂಪಿಯನ್ ಸೂಪರ್ ಕಿಂಗ್ಸ್ ತಂಡದವರು ಬೌಲಿಂಗ್ ವಿಭಾಗದಲ್ಲಿ ಸ್ವಲ್ಪ ಸಮಸ್ಯೆ ಎದುರಿಸುತ್ತಿದ್ದಾರೆ. ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಪುಣೆ ವಾರಿಯರ್ಸ್ ತಂಡದ ನಾಯಕ ಆ್ಯಂಜೆಲೊ ಮ್ಯಾಥ್ಯುಸ್ ಈ ಪಂದ್ಯದಲ್ಲಿಆಡುವಂತಿಲ್ಲ. ಏಕೆಂದರೆ ಮ್ಯಾಥ್ಯುಸ್ ಶ್ರೀಲಂಕಾದವರು. ಶ್ರೀಲಂಕಾ ಮೂಲದ ಆಟಗಾರರು ಚೆನ್ನೈನಲ್ಲಿ ಆಡುವುದನ್ನು ನಿರ್ಬಂಧಿಸ ಲಾಗಿದೆ. ಆದರೆ ಯಾರು ಈ ತಂಡ ಮುನ್ನಡೆಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT