ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಸಂಜೀವಿನಿ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಎರಡು ವಾರಗಳ ಹಿಂದಿನ ಮಾತು. ಭಾರತ ಕ್ರಿಕೆಟ್ ತಂಡದ ಬಗ್ಗೆ ಮಾತನಾಡಲು ಆರಂಭಿಸಿದವರೆಲ್ಲರೂ ಟೀಕೆ, ವ್ಯಂಗ್ಯಗಳ ಮಳೆಯನ್ನೇ ಸುರಿಸುತ್ತಿದ್ದರು.

ಅಲ್ಲಿ (ಇಂಗ್ಲೆಂಡ್) ಹೋಗಿ ಹೀನಾಯವಾಗಿ ಸೋತು ಬಂದಿದ್ದಾರೆ, ಈಗ ಇಲ್ಲಿ ಪ್ರಮುಖ ಆಟಗಾರರಿಲ್ಲದೇ ಹೇಗೆ ಗೆಲ್ತಾರೆ? ಅವರ ಕಡೆ ನೋಡಿ ಟ್ರಾಟ್, ಕುಕ್, ಪೀಟರ್ಸನ್, ಇಯಾನ್ ಬೆಲ್ ಅಂತಹ ಬಲಾಢ್ಯರಿದ್ದಾರೆ.
 
ನಮ್ಮ ಕಡೆ ಯಾರಿದ್ದಾರೆ ಎಂದು ಪ್ರಶ್ನಿಸಿದವರೆಲ್ಲ ಈಗ ಮಾತೇ ಬರದಂತಾಗಿದ್ದಾರೆ. `ಕೂಲ್ ಕ್ಯಾಪ್ಟನ್~ ಮಹೇಂದ್ರಸಿಂಗ್ ದೋನಿಯ ಯುವಪಡೆಯ ಸಾಹಸಕ್ಕೆ ತಲೆದೂಗುತ್ತಿದ್ದಾರೆ.

ಹನ್ನೊಂದು ದಿನಗಳಲ್ಲಿಯೇ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ  ಸರಣಿ ವಿಜಯವನ್ನು ಖಚಿತ ಪಡಿಸಿಕೊಂಡಿದೆ. ಅಲ್ಲದೇ ಟೀಂ ಇಂಡಿಯಾದ ಭವಿಷ್ಯವೂ ಗೋಚರಿಸಿದೆ.
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್‌ಸಿಂಗ್, ಹರಭಜನ್ ಸಿಂಗ್, ಜಹೀರ್‌ಖಾನ್ ನಂತರದ ಭಾರತ  ತಂಡದ ಭವಿಷ್ಯ ಸ್ಪಷ್ಟವಾಗಿದೆ.
 
ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ,  ಆರ್. ಅಶ್ವಿನ್, ಕನ್ನಡಿಗ ಆರ್. ವಿನಯಕುಮಾರ್ ಭರವಸೆಯ ಕಿರಣಗಳಾಗಿ ಮಿಂಚುತ್ತಿದ್ದಾರೆ. ಇದೆಲ್ಲದರ ಹಿಂದೆ ನಾಯಕ ದೋನಿ ಮತ್ತು ಹೊಸ ಕೋಚ್ ಡಂಕನ್ ಫ್ಲೆಚರ್ ಸಮರ್ಥ ಮಾರ್ಗದರ್ಶನದ ಕೆಲಸ ಮಾಡಿದೆ. 

ಹೈದರಾಬಾದಿನ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ದೋನಿ, ಭರ್ಜರಿ ಬ್ಯಾಟಿಂಗಿಗೆ ಒಲಿದ ಗೆಲುವು  ಇಡೀ ತಂಡಕ್ಕೇ ಸಂಜೀವಿನಿಯಾಯಿತು. ಎಲ್ಲ ಹುಡುಗರ ಮನದಲ್ಲಿ ಆತ್ಮವಿಶ್ವಾಸದ ಬುಗ್ಗೆಯನ್ನೇ ಚಿಮ್ಮಿಸಿತ್ತು. ಇದರ ಫಲವಾಗಿ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ತಮ್ಮ ಸ್ಪಿನ್ ಮೋಡಿಯಿಂದ ಭಾರತದ ಗೆಲುವನ್ನು ಸುಲಭಗೊಳಿಸಿದ್ದರು. ಉಪ್ಪಳದ ಅಂಗಳದಲ್ಲಿ ಭಾರತಕ್ಕೆ ಒಲಿದ ಮೊದಲ  ಜಯವದು.

ಮುಂದೆ ದೆಹಲಿಯ ಅಂಗಳದಲ್ಲಿ ತವರುಮನೆಯ ಹುಡುಗರಾದ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿಯ ಮಿಂಚಿನ ಬ್ಯಾಟಿಂಗ್ ಮುಂದೆ ಇಂಗ್ಲೆಂಡ್ ಬಸವಳಿದು ಹೋಯಿತು. ಈ ಪಂದ್ಯದಲ್ಲಿ `ದಾವಣಗೆರೆ ಎಕ್ಸ್‌ಪ್ರೆಸ್~ ಆರ್.ವಿನಯಕುಮಾರ್ ನಾಲ್ಕು ವಿಕೆಟ್ ಗಳಿಸಿ ಇಂಗ್ಲೆಂಡ್ ತಂಡದ ಸೋಲಿಗೆ ಪ್ರಮಖ ಕಾರಣರಾಗಿದ್ದರು.

ಮೊಹಾಲಿಯಲ್ಲಿ ಪ್ರವಾಸಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡಿಯೂ ಕೊನೆಯ ಹಂತದಲ್ಲಿ ಕೈಚೆಲ್ಲಿತು. ಅದರ ಲಾಭ ಪಡೆದ ದೋನಿ ಕೊನೆಗೂ ಜಯಮಾಲೆಯನ್ನು ತಮ್ಮ ಕೊರಳಿಗೇ ಹಾಕಿಕೊಂಡರು.

ಕುಕ್ ಬಳಗಕ್ಕೆ ಆಗಿದ್ದೇನು?:
ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ನೆಲದಲ್ಲಿ `ವಿಶ್ವಚಾಂಪಿಯನ್~ ಭಾರತಕ್ಕೆ ಹೀನಾಯ ಸೋಲಿನ ಕಹಿ ಉಣಿಸಿದ್ದ ಕುಕ್ ಬಳಗ ಆತ್ಮವಿಶ್ವಾಸದ ಗಂಟು ಹೊತ್ತುಕೊಂಡು ಬಂದಿತ್ತು. ಮೊದಲ ಎರಡು ಅಭ್ಯಾಸ ಪಂದ್ಯಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್ ಮೇಲ್ನೋಟಕ್ಕೆ ಬಲಾಢ್ಯವಾಗಿಯೂ ಕಂಡಿತ್ತು.

ಗಾಯಾಳುಗಳ ಸಮಸ್ಯೆಯಿರಲಿಲ್ಲ. ಕಾಯ್ದಿಟ್ಟ ಆಟಗಾರ ವೂಕರ್ ಗಾಯದ ಸಮಸ್ಯೆಯಿಂದ ತಾಯ್ನಾಡಿಗೆ ಮರಳಿದ್ದು ಬಿಟ್ಟರೆ ಬೇರೆ ಸಮಸ್ಯೆಯಿರಲಿಲ್ಲ.

ಸ್ವತಃ ನಾಯಕ ಅಲಿಸ್ಟರ್ ಕುಕ್, ಜೊನಾಥನ್ ಟ್ರಾಟ್,  ಕೆವಿನ್ ಪೀಟರ್ಸನ್, ಕ್ರೆಗ್ ಕೀಸ್‌ವೆಟ್ಟರ್, ರವಿ ಬೋಪಾರಾ, ಸಮಿತ್ ಪಟೇಲ್‌ರಂತಹ ಬ್ಯಾಟ್ಸ್‌ಮನ್‌ಗಳು, ಸ್ಟಿವನ್ ಫಿನ್, ಟಿಮ್ ಬ್ರೆಸ್ನನ್, ಜೇಡ್ ಡೆನ್‌ಬ್ಯಾಕ್, ಸ್ಪಿನ್ನರ್ ಗ್ರೆಮ್ ಸ್ವ್ಯಾನ್ ಅವರ ಬೌಲಿಂಗ್ ಪಡೆಯೂ ಇತ್ತು. ಭಾರತದ ಹೊಸ ಹುಡುಗರಿಗೆ ಹೋಲಿಸಿದರೆ ಇವರೆಲ್ಲ ಹೆಚ್ಚು ಅನುಭವಿಗಳಾಗಿದ್ದರು.
 
ಆದರೆ ಭಾರತದ ನೆಲದಲ್ಲಿ ಆಡಿದ ಅನುಭವ ಎಲ್ಲರಿಗೂ ಇರಲಿಲ್ಲ. ಅಲ್ಲದೇ ಪ್ರತಿಯೊಂದು ಪಂದ್ಯದಲ್ಲಿಯೂ ಪ್ರಮುಖ ಹಂತದಲ್ಲಿ ಮಾನಸಿಕವಾಗಿ ಕುಗ್ಗಿದ್ದು ಕುಕ್ ಬಳಗದ ಹಿನ್ನಡೆಗೆ ಕಾರಣವಾಯಿತು.

ಹೈದರಾಬಾದಿನಲ್ಲಿ ಮೊದಲ ಹಂತದಲ್ಲಿ ಮೇಲುಗೈ ಸಾಧಿಸಿದ್ದ ಬೌಲರ್‌ಗಳು ಮುಂದೆ ಅದೇ ಲಯವನ್ನು ಕಾಪಾಡಿಕೊಳ್ಳಲಿಲ್ಲ. ದೆಹಲಿಯಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ಮೊತ್ತ ಸೇರಿಸುವಲ್ಲಿ ವಿಫಲರಾದರು. ಸಾಧಾರಣ ಮೊತ್ತವನ್ನು ಉಳಿಸಿಕೊಳ್ಳುವ ಛಲ ಬೌಲರ್‌ಗಳಲ್ಲಿ ಕಂಡುಬಂತು. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಅಬ್ಬರಕ್ಕೆ ಎಲ್ಲರೂ ತಣ್ಣಗಾಗಿ ಬಿಟ್ಟರು.

ಎರಡೂ ಸೋಲಿನಿಂದ ಪಾಠ ಕಲಿತ ಕುಕ್ ಬಳಗ ಅನುಭವಿ ಬ್ಯಾಟ್ಸ್‌ಮನ್ ಇಯಾನ್ ಬೆಲ್‌ಗೆ ಅವಕಾಶ ಕೊಡುತ್ತದೆ ಎಂಬ ನಿರೀಕ್ಷೆಯೂ ಸುಳ್ಳಾಯಿತು.  ಮೊಹಾಲಿಯಲ್ಲಿ ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಸಮಿತ್ ಪಟೇಲ್ ಭರ್ಜರಿ ಬ್ಯಾಟಿಂಗ್‌ನಿಂದಾಗಿ 298 ರನ್ ಗಳಿಸಲು ಇಂಗ್ಲೆಂಡ್‌ಗೆ ಸಾಧ್ಯವಾಗಿತ್ತು.

ಭಾರತ ಬ್ಯಾಟಿಂಗ್ ಮಾಡುವಾಗ 47ನೇ ಓವರಿನವರೆಗೂ ಇಂಗ್ಲೆಂಡ್ ಹಿಡಿತದಲ್ಲಿಯೇ ಪಂದ್ಯ ಇತ್ತು. ಆದರೆ ನಾಟಕೀಯ ತಿರುವು ತೆಗೆದುಕೊಂಡಿದ್ದೂ ಇದೇ ಹಂತದಲ್ಲಿ. ಬೌಲರ್‌ಗಳು ಮತ್ತೊಮ್ಮೆ ಮಾನಸಿಕ ಒತ್ತಡಕ್ಕೆ ಮಣಿದರು. ಚೆಂಡಿನ ಮೇಲಿನ ಹಿಡಿತ ಕಳೆದುಕೊಂಡು, ಇತರೆ ರನ್ನುಗಳನ್ನು ಧಾರೆಯೆರೆಯುವ ಜೊತೆಗೆ ದೋನಿ ಮತ್ತು ಜಡೇಜಾಗೆ ಆಡುವ ಅವಕಾಶ ನೀಡಿಬಿಟ್ಟರು. 

ಮೂರು ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಅಡಿಪಾಯ ಹಾಕಲಿಲ್ಲ. ಇನ್ನೂ  ಫೀಲ್ಡಿಂಗ್‌ನಲ್ಲಿಯೂ ಹಲವು ಎಡವಟ್ಟುಗಳನ್ನು ಇಂಗ್ಲೆಂಡ್ ಮಾಡಿಕೊಂಡಿತು. ಬಿಟ್ಟ ಕ್ಯಾಚುಗಳು, ರನೌಟ್ ಅವಕಾಶಗಳನ್ನು ಕೈಚೆಲ್ಲಿದ್ದು ತುಟ್ಟಿಯಾದವು.

ಭಾರತದ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಸಲು ಆಗಾಗ ಬಿರುಸು ಮಾತಿನ ಅಸ್ತ್ರಗಳನ್ನು ಪ್ರಯೋಗಿಸುವಲ್ಲಿಯೂ ಇಂಗ್ಲೆಂಡ್ ತಂಡದ ಆಟಗಾರರು ಹಿಂದೆ ಬೀಳಲಿಲ್ಲ.
ಆದರೆ ಹಿಮಾಲಯದಂತೆ ತಣ್ಣಗೆ ಇರುವ ದೋನಿ ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ.
 
ತಮ್ಮ ಹುಡುಗರನ್ನು ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿ ಮಾಡಿದರು. ತಾವೂ ಆಡಿದರು, ಹುಡುಗರಿಗೂ ಕಲಿಸಿದರು. ಗೆಲುವಿನ ನಶೆಯ ಮುಂದೆ ಬೇರೆ ಯಾವುದೂ ಇಲ್ಲ  ಎಂಬುದನ್ನು ತೋರಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT